ಸುದ್ದಿಸಂತೆ@ 9.45: ಆಪ್- ಜೇಟ್ಲಿ ಆರೋಪ ಸಮರ; ಕೇಂದ್ರದ ನೆರವು ಕೋರಲಿರುವ ರಾಜ್ಯ; ಸೆನ್ಸೆಕ್ಸ್ ಜಿಗಿತ

ದೆಹಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಹಿಂದೆ ಅದರ ನೇತೃತ್ವ ವಹಿಸಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಈ ಪ್ರಕರಣದ ಆಳಕ್ಕಿಳಿಯುವ ಸೂಚನೆ ಸಿಗುತ್ತಿದ್ದಂತೆ ಕೇಂದ್ರ ಸರ್ಕಾರ ಸಿಬಿಐ ದಾಳಿ ಮಾಡಿಸಿತು ಎಂಬುದು ಆಪ್ ನ ಆರೋಪ.

ಇದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಫೇಸ್ ಬುಕ್ ಪುಟದಲ್ಲಿ ದೀರ್ಘ ಉತ್ತರ ಕೊಟ್ಟಿದ್ದಾರೆ. ಜೇಟ್ಲಿ ಮರು ಉತ್ತರದ ಸಾರಾಂಶ ಹೀಗಿದೆ- ‘ಕಟಕಟೆಯಲ್ಲಿರುವ ಆಪ್ ತನ್ನ ಮೇಲಿನ ಗಮನ ಬೇರೆಡೆ ತಿರುಗಿಸುವುದಕ್ಕೆ ಇಂಥ ಆರೋಪಕ್ಕೆ ಇಳಿದಿದೆ. 2013ರಲ್ಲೇ ಕ್ರಿಕೆಟ್ ಉಸ್ತುವಾರಿಯಿಂದ ದೂರ ಉಳಿದಿದ್ದೇನೆ. ಡಿಡಿಸಿಎ ಬಗ್ಗೆ ಕೇಳಿಬಂದ ಅಪಸ್ವರಗಳ ಬಗ್ಗೆ ಯುಪಿಎ ಸರ್ಕಾರವಿದ್ದಾಗಲೇ ವರದಿ ಸಲ್ಲಿಕೆಯಾಗಿತ್ತು. ಡಿಡಿಸಿಎದಲ್ಲಿ ಕೆಲವು ಲೋಪದೋಷಗಳಾಗಿದ್ದರೂ ಹಣಕಾಸು ಅವ್ಯವಹಾರವೆಂದು ಕರೆಸಿಕೊಳ್ಳುವ ಯಾವುದೇ ಅಂಶ ಕಂಡುಬಂದಿಲ್ಲ ಎಂದೇ ವರದಿಯಲ್ಲಿ ಹೇಳಲಾಗಿದೆ.

ಕೆಲವು ಕಾಮಗಾರಿಗಳಿಗೆ ಹೆಚ್ಚು ಹಣ ಖರ್ಚಾಗಿರುವುದರಲ್ಲಿ ಹಗರಣವಾಗಿದೆ ಎಂದು ಸುಳ್ಳು ಆರೋಪ ಹೊರಿಸಲಾಗುತ್ತಿದೆ. ವಾಸ್ತವ ಏನೆಂದರೆ 42 ಸಾವಿರ ಮಂದಿ ಕೂರುವ ಕ್ರೀಡಾಂಗಣವನ್ನು 114 ಕೋಟಿ ರುಪಾಯಿಗಳ ವೆಚ್ಚದಲ್ಲಿ ಮಾಡಲಾಗಿದೆ. ಆದರೆ ಅದೇ ಅವಧಿಯಲ್ಲಿ ಯುಪಿಎ ಸರ್ಕಾರ ಜವಾಹರಲಾಲ್ ನೆಹರು ಕ್ರೀಡಾಂಗಣದ ನವೀಕರಣ ಮಾತ್ರಕ್ಕೆ 900 ಕೋಟಿ ರುಪಾಯಿಗಳನ್ನು ಹಾಗೂ ಧ್ಯಾನ್ ಚಂದ್ ಕ್ರೀಡಾಂಗಣದ ನವೀಕರಣಕ್ಕೆ 600 ಕೋಟಿ ರುಪಾಯಿಗಳನ್ನು ವ್ಯಯಿಸಿತ್ತು’  ಅನ್ನೋದು ಜೇಟ್ಲಿ ನೀಡಿರುವ ಸಮರ್ಥನೆ.

 

ಬರ ಪರಿಹಾರ: ಕೇಂದ್ರದ ನೆರವು ಕೋರಿಕೆಗೆ ನಿರ್ಧಾರ

ಅಕಾಲಿಕ ಮಳೆ ಹಾಗೂ ಬರದಿಂದ ಮತ್ತೆ 7000 ಕೋಟಿ ರು.ಗಳಷ್ಟು ಬೆಳೆ ನಷ್ಟುವುಂಟಾಗಿದೆ ಎಂದು ಅಂದಾಜಿಸಿರುವ ರಾಜ್ಯ ಸಚಿವ ಸಂಪುಟವು, ಬರ ಪರಿಹಾರ ಮತ್ತು ಕಾಮಗಾರಿಗಳಿಗೆ ಹೆಚ್ಚುವರಿ 10 ಸಾವಿರ ಕೋಟಿ ರುಪಾಯಿಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರ ತೆಗೆದುಕೊಂಡಿದೆ.

ಮುಂಗಾರು ಮಳೆ ವಿಫಲವಾಗಿ ಹದಿಮೂರುವರೆ ಸಾವಿರ ಕೋಟಿ ರು.ಗಳಷ್ಟು ನಷ್ಟವಾಗಿದೆ. ಹಿಂಗಾರು ಮಳೆಯ ಹಾನಿಯಿಂದ ಏಳು ಸಾವಿರ ಕೋಟಿ ರು ನಷ್ಟ ಎಂದು ಅಂದಾಜಿಸಲಾಗಿದೆ..

ಮುಂಗಾರು ಮಳೆಯ ವೈಫಲ್ಯದ ಹಿನ್ನೆಲೆಯಲ್ಲಿ 16500 ಕೋಟಿ ರೂ ನಷ್ಟವಾಗಿದ್ದು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರ 3850 ಕೋಟಿ ರೂ ನೀಡಬೇಕು ಎಂದು ಕೇಂದ್ರದ ಅಧ್ಯಯನ ತಂಡವೇ ಶಿಫಾರಸು ಮಾಡಿತ್ತು.

ಕೇಂದ್ರ ಸರ್ಕಾರ ಇದುವರೆಗೆ 1540 ಕೋಟಿ ರು ಮಂಜೂರು ಮಾಡಿದ್ದು, ಹಣ ಇನ್ನಷ್ಟೇ ರಾಜ್ಯಕ್ಕೆ ಬರಬೇಕಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತ್ವರಿತವಾಗಿ ಹಣ ಬಿಡುಗಡೆಗೂ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಅಮೆರಿಕ ಕ್ರಮದಿಂದ ಚಿಗಿತ ಸೆನ್ಸೆಕ್ಸ್

ಅಮೆರಿಕಾದ ಫೆಡರಲ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ದರವನ್ನು ಶೇ 0.25 ರಿಂದ 0.50 ಕ್ಕೆ ಹೆಚ್ಚಿಸಿರುವುದು ಭಾರತದ ಷೇರು ಮಾರುಕಟ್ಟೆಗೂ ಚೇತರಿಕೆ ತುಂಬಿದೆ. ಸೆನ್ಸೆಕ್ಸ್ ಸೂಚ್ಯಂಕ 309 ಅಂಶಗಳ ಏರಿಕೆಯಾಗಿ 25803 ಕ್ಕೆ ಕೊನೆಗೊಳ್ಳುವ ಮೂಲಕ ತಿಂಗಳೊಂದರ ದಿನದಲ್ಲಿ ಹೆಚ್ಚು ಅಂಶಗಳ ಏರಿಕೆ ದಾಖಲೆ ಮಾಡಿದೆ.

10 ವರ್ಷಗಳಲ್ಲಿ ಫೆಡರಲ್ ಬ್ಯಾಂಕ್ ಮೊದಲ ಬಾರಿಗೆ ಬಡ್ಡಿದರ ದರವನ್ನು ಶೇ 0.25 ರಷ್ಟು ಏರಿಸಿರುವುದರ ಫಲವಾಗಿ ಮುಂದಿನ ದಿನಗಳಲ್ಲಿ ಷೇರು ಪೇಟೆಯಲ್ಲಿ ವಹಿವಾಟು ಮತ್ತಷ್ಟು ಚಟುವಟಿಕೆ ಪಡೆಯುವ ನಿರೀಕ್ಷೆ ಇದೆ. ನಿಪ್ಟಿಯು ಸಹ ಈ ಹಿಂದಿನ 7800 ಅಂಶಗಳ ಗಡಿ ದಾಟಿ 7844 ರಲ್ಲಿ ಅಂತ್ಯಕಂಡಿದೆ.

Leave a Reply