ಐದು ರುಪಾಯಿ ಇಳಿಯಬೇಕಿದ್ದ ಪೆಟ್ರೋಲ್ ಐವತ್ತೆ ಪೈಸೆ ಇಳಿಯಿತೇಕೆ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿದ ತೈಲ ಬೆಲೆಯನ್ನು ಪೂರ್ಣವಾಗಿ ಜನ ಸಾಮಾನ್ಯನಿಗೆ ವರ್ಗಾಯಿಸಿದ್ದರೆ ಪೆಟ್ರೋಲ್ ಬೆಲೆ ಐದು ರುಪಾಯಿ ಇಪ್ಪತ್ತೆರಡು ಪೈಸೆ ಹಾಗೂ ಡಿಸೇಲ್ ಬೆಲೆ  ಎರಡು ರುಪಾಯಿ ಎಂಬತ್ತನಾಲ್ಕು ಪೈಸೆ  ಇಳಿಕೆ ಆಗಬೇಕಿತ್ತು. ಆದರೆ ಪೆಟ್ರೋಲ್ ಬೆಲೆ ಇಳಿದದ್ದು ಕೇವಲ ಐವತ್ತು ಪೈಸೆ!  ಡಿಸೇಲ್ ನಲ್ವತ್ತಾರು ಪೈಸೆ. ಯಾಕೆ ಗೊತ್ತಾ? ಏಕೆಂದರೆ 2014 ನವೆಂಬರ್ ನಿಂದ ನಿನ್ನೆಯ ತನಕ ಮೋದಿ ಸರಕಾರ ಅಬಕಾರಿ ಸುಂಕವನ್ನು (excise duty) ಆರು ಸಲ ಏರಿಸಿದೆ.

ಹೀಗೆ ಕಚ್ಚಾತೈಲ ದರದ ಇಳಿಕೆಯಲ್ಲಾಗಿರುವ ಲಾಭವನ್ನು ಜನರಿಗೆ ತಲುಪಿಸುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆಕ್ಷೇಪ ಸಹಜ. ಆದರೆ ಮೋದಿ ಸರಕಾರ ಅಬಕಾರಿ ಸುಂಕ ಏಕೆ ಹೆಚ್ಚಿಸುತ್ತಿದೆ ಗೊತ್ತೇ? ಒಂದು ಉದಾಹರಣೆ ನೋಡಿ, ಭಾರತ್ ಪೆಟ್ರೋಲಿಯಂ ಸಾವಿರ ರುಪಾಯಿ ತೈಲ ಖರೀದಿಸಿ ತನ್ನ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಸರಬರಾಜು ಮಾಡುತ್ತೆ. ಇದು ಕೊಂಡ ನಂತರ ತೈಲ ಬೆಲೆ ಕುಸಿಯುತ್ತದೆ. ಸಾವಿರ ರುಪಾಯಿ ತೈಲದ ಮಾರ್ಕೆಟ್ ವ್ಯಾಲ್ಯೂ ಇಂದು ಒಂಬೈನೂರು ರುಪಾಯಿ. ಏನೂ ಮಾಡದೇ ತನ್ನದಲ್ಲದ ತಪ್ಪಿಗೆ ಆದ ನೂರು ರುಪಾಯಿ ನಷ್ಟ ತುಂಬಿ ಕೊಡುವರು ಯಾರು? ಇದನ್ನ ನೀವು ಕೋಟಿಗಳಲ್ಲಿ ಲೆಕ್ಕ ಹಾಕಿ. ಪೆಟ್ರೋಲಿಯಂ ಕಂಪನಿಗಳಿಗೆ ಆದ ನಷ್ಟ ನಲವತ್ತು ಸಾವಿರ ಕೋಟಿ ರುಪಾಯಿ. ಏರಿದ ಅಬಕಾರಿ ಸುಂಕದ ಒಂದಷ್ಟು ಭಾಗ ಈ ನಷ್ಟವನ್ನು ತುಂಬಲು ಬಳಸಲಾಗುತ್ತೆ.
ಅಲ್ಲದೆ ತೈಲ ಕೊಳ್ಳುವುದು ಡಾಲರ್ ಲೆಕ್ಕದಲ್ಲಿ. ನಿತ್ಯ ರುಪಾಯಿ- ಡಾಲರ್ ನಲ್ಲಿ ಆಗುವ ವಿನಿಮಯ ವ್ಯತ್ಯಾಸ ಬೇರೆ ಸರಿ ತೂಗಿಸಬೇಕು. ಎಲ್ಲಕ್ಕಿಂತ ಮುಖ್ಯ ಅಮೆರಿಕ ತನ್ನ ಬಡ್ಡಿ ದರ ಹೆಚ್ಜಿಸಿದರಿಂದ ಹೂಡಿಕೆಯ ಲೆಕ್ಕಾಚಾರಗಳು ಬದಲಾಗಿ ಹೂಡಿಕೆದಾರರ ಕೊರತೆ ಇರುವುದರಿಂದ ಕುಂಟುವ ಅಭಿವೃದ್ಧಿ ಯೋಜನೆಗಳಿಗೆ ಹಣ ಬರುವುದಾದರೂ ಎಲ್ಲಿಂದ? ಜನ ಸಾಮಾನ್ಯನಿಗೆ ಪೂರ್ಣ ತೈಲ ಇಳಿಕೆಯ ಲಾಭ ವರ್ಗಾಯಿಸಿಲ್ಲ ಎಂದು ಅರಚುವ ಕಾಂಗ್ರೆಸ್ ಅಥವಾ ಇತರ ಪಕ್ಷಗಳು ಅಧಿಕಾರದಲ್ಲಿದ್ದರೆ ಖಂಡಿತಾ ಅವರಿಗೂ ಅಬಕಾರಿ ಸುಂಕ ಹೆಚ್ಚಿಸದೇ ಅನ್ಯ ಮಾರ್ಗ ಇರುತ್ತಿರಲಿಲ್ಲ.
ಹಿಂದೆ ಯುದ್ಧದ ಸಮಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಒಪ್ಪತ್ತು ಊಟ ಬಿಡುವಂತೆ ಕರೆ ನೀಡಿದ್ದರು. ಅದಕ್ಕೆ ಕೋಟ್ಯಂತರ ಭಾರತೀಯರು ದನಿಯಾಗಿದ್ದರು. ಇಂದು ಯುದ್ಧವಿಲ್ಲ. ಹಾಗೆಂದು ಇದು ಮೋಜಿನ ಸಮಯವೂ ಅಲ್ಲ. ಇದು ಪರೀಕ್ಷೆಯ ಸಮಯ. ದೇಶದ ಜನರೆಲ್ಲ ಒಂದಾಗಿ  ನಾನು-ನೀನು ಎಂದು ಕಚ್ಚಾಡದೆ ದೇಶವ ಮುನ್ನೆಡೆಸುವುದರಲ್ಲಿ ಎಲ್ಲರ ಕ್ಷೇಮ ಅಡಗಿದೆ.

Leave a Reply