ಜನತಾ ಪರಿವಾರ ಒಂದಾಗುವುದಿರಲಿ, ಇನ್ನಷ್ಟು ಛಿದ್ರ ಆಗದಿದ್ದರೆ ಅದೇ ಪುಣ್ಯ!

ಚಿತ್ರ- ಬಸವರಾಜ ಹೊರಟ್ಟಿ, ಮಹಿಮಾ ಪಟೇಲ್, ಎಂ. ಸಿ. ನಾಣಯ್ಯ

ಪಿ. ತ್ಯಾಗರಾಜ್

ಜನತಾ ಪರಿವಾರವನ್ನು ಒಗ್ಗೂಡಿಸುವ ನೂರ ಒಂದನೇ ಪ್ರಯತ್ನ ಶುರುವಾಗಿದೆ!

ಪಕ್ಷಕ್ಕೆ ವೋಟು ತಂದು ಕೊಡುವುದಿರಲಿ, ನೇರ ಚುನಾವಣೆಯಲ್ಲಿ ತಮಗೇ ವೋಟು ತಂದುಕೊಂಡು ಗೆಲ್ಲುವ ವಿಶ್ವಾಸವಿರದ ಒಂದಷ್ಟು ನಾಯಕರು ಸೇರಿಕೊಂಡು ಈ ಪ್ರಕ್ರಿಯೆ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್  ಪುತ್ರ ಮಹಿಮಾ ಪಟೇಲ್ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನಾಯಕರಲ್ಲಿ ಬಹುತೇಕರು ಹಿಂಬಾಗಿಲ ರಾಜಕೀಯ ಮಾಡಿಕೊಂಡೇ ಬಂದವರು. ಒಂದಲ್ಲ ಒಂದು ಕಾರಣಕ್ಕೆ ಹಿರಿಯ ನಾಯಕರಿಂದ ಉಪೇಕ್ಷೆಗೆ ಒಳಗಾಗಿರುವವರು. ಒಡೆದಿರುವ ಪಕ್ಷಗಳನ್ನು ಸೇರಿಸುವುದು ಪಕ್ಕಕ್ಕಿರಲಿ, ಪಕ್ಷದೊಳಗೇ ಮುರಿದಿರುವ ಮನಸುಗಳನ್ನು ಒಂದು ಮಾಡುವುದೇ ಇವರಿಗೆ ದೊಡ್ಡ ಸವಾಲಾಗಿದೆ.

ಮೊತ್ತ ಮೊದಲಿಗೆ, ‘ಸನ್ಯಾಸಿ ಜೀವನ’ ನಡೆಸುತ್ತಿರುವ ಮಹಿಮಾ ಪಟೇಲ್ ಮನೆಯಲ್ಲಿ ಈ ಸಭೆ ಏಕೆ ನಡೆಯಿತು ಎಂಬುದೇ ಅರ್ಥ ಆಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಫರ್ಧಿಸುವಂತೆ ದೇವೇಗೌಡರು ಕೊಟ್ಟ ಆಹ್ವಾನವನ್ನು ಮಹಿಮಾ ನಯವಾಗಿಯೇ ತಿರಸ್ಕರಿಸಿದ್ದರು. ಅದಕ್ಕೆ ಅವರು ಕೊಟ್ಟ ಕಾರಣ ಏನು ಗೊತ್ತೇ..? ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ನನಗೆ ರಾಜಕೀಯ ಬೇಕಿಲ್ಲ.’ ಈಗ ಅವರ ಮನೆಯಲ್ಲೇ ಸಭೆ ನಡೆದಿರುವ ಔಚಿತ್ಯವೇ ಅರ್ಥವಾಗುತ್ತಿಲ್ಲ.

ಇರಲಿ, ಭಾಗವಹಿಸಿದ್ದವರ ಕತೆಯನ್ನು ಒಂದೊಂದಾಗಿ ನೋಡೋಣ. ಮಾಜಿ ಸಚಿವ ಎಂ.ಸಿ. ನಾಣಯ್ಯನವರು ದೇವೇಗೌಡರ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿ ಮೇಲ್ಮನೆಗೆ ಮರುನಾಮಕರಣದ ಅವಕಾಶದಿಂದ ವಂಚಿತರಾದವರು. ಇದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಹೊಂದಿರುವ ಮೃದುಧೋರಣೆ. ಇದರ ಜತೆಗೆ ‘ಧನಕನಕ’ ಕಾರಣವೂ ಸೇರಿ ಇವರ ಜಾಗವನ್ನು ಚಿನ್ನಾಭರಣ ವ್ಯಾಪಾರಿ ಶರವಣ ಭರ್ತಿ ಮಾಡಿದ್ದಾರೆ. ಸಿದ್ದರಾಮಯ್ಯನವರು ಅನುಕಂಪದ ಆಧಾರದ ಮೇರೆಗೆ ನಾಣಯ್ಯ ಅವರನ್ನು ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಿಯಂತ್ರಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಆದರೆ ಅಲ್ಲೂ ಗೌಡರ ವಕ್ರದೃಷ್ಟಿಗೆ ಬಿದ್ದ ನಾಣಯ್ಯನವರು ಸಮಿತಿಗೆ ರಾಜೀನಾಮೆ ನೀಡಿ ಹೊರಬಂದು, ಜೆಡಿಎಸ್ ನಲ್ಲಿ ಮೂಲೆಗುಂಪಾಗಿದ್ದಾರೆ.

ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿಯವರು ಪದವೀಧರ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕೆ ಇಳಿಸಿದ್ದ ಸಂದರ್ಭದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನೇ ಪಕ್ಕಕ್ಕಿಟ್ಟಿದ್ದರು. ಗೌಡರು ಮತ್ತು ಅವರ ಮಕ್ಕಳ ಫೋಟೋ ಹಾಕಿಕೊಂಡು ಚುನಾವಣೆ ಎದುರಿಸುವ ದರ್ದು ತಮಗೇನೂ ಇಲ್ಲ ಅಂತಲೂ ತೊಡೆ ತಟ್ಟಿ ಹೇಳಿದ್ದರು. ಚುನಾವಣೆಯಲ್ಲಿ ಅವರ ಮಗ ಸೋತದ್ದು ಬೇರೆ ವಿಚಾರ. ಆದರೆ ಅವತ್ತು ಮುರಿದು ಹೋದ ಉಭಯತ್ರರ ಸಂಬಂಧ ಇನ್ನೂ ಮುಳ್ಳಿನ ಮೊನೆಯಂತೆಯೇ ಇದೆ.

ಇನ್ನು ತಿಪ್ಪಣ್ಣನವರ ಸಮಾಚಾರ. ಗೌಡರು ತಮ್ಮನ್ನು ಮತ್ತೆ ಎಂಎಲ್ಸಿ ಮಾಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ತೊರೆದು ಬಿಜೆಪಿಗೆ ಹೋಗಿರುವ ತಿಪ್ಪಣ್ಣನವರು, ಆ ಪಕ್ಷದಲ್ಲಿದ್ದುಕೊಂಡೇ ಪರಿವಾರದ ಬಾಗಿಲು ಬಡಿಯುತ್ತಿರುವ ಪರಿ ಏನೆಂಬುದೇ ತಿಳಿಯುತ್ತಿಲ್ಲ. ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸೇರಿ ಸರಕಾರ ಮಾಡಿದಾಗ ಕುಮಾರಸ್ವಾಮಿ ಪರ ನಿಂತು ದೇವೇಗೌಡರ ವಿರೋಧ ಕಟ್ಟಿಕೊಂಡಿದ್ದರು. ಮುಂದೆ ಅಪ್ಪ-ಮಗ ಸರಿ ಹೋದರು. ಅದರೆ ತಿಪ್ಪಣ್ಣ ಮತ್ತು ಗೌಡರ ಮನಸ್ಸು ಮಾತ್ರ ಇನ್ನೂ ಉತ್ತರ-ದಕ್ಷಿಣವಾಗಿದೆ.

ಎಂ.ಪಿ. ನಾಡಗೌಡರ ಕತೆ ಭಿನ್ನವಾಗೇನೂ ಇಲ್ಲ. ಮೊದಲಿಂದಲೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಂಗಿಯ ಚುಂಗು ಹಿಡಿದೇ ರಾಜಕೀಯ ಮಾಡುತ್ತಾ ಬಂದ ಹಿಂಬಾಗಿಲ ರಾಜಕಾರಣಿ ನಾಡಗೌಡರು, ‘ಈ ದೇವೇಗೌಡರು ನಾಯಕತ್ವ ಬಿಟ್ಟುಕೊಡುವವರೆಗೂ ಜನತಾ ಪರಿವಾರ ಒಂದಾಗುವುದಿಲ್ಲ’ ಅಂತ ಭವಿಷ್ಯ ನುಡಿದಿರುವವರು. ಈಗ ಅವರ ಭವಿಷ್ಯವನ್ನು ಅವರೇ ಸುಳ್ಳು ಮಾಡಲು ಹೊರಟಿದ್ದಾರೆ. ಇನ್ನು ಏಕಾಂತಯ್ಯ, ಬಿ.ಆರ್. ಪಾಟೀಲ್, ಎಂ. ಶ್ರೀನಿವಾಸ್ ಅವರ ಮಾತನ್ನು ಅವರೇ ಕೇಳುನ ಸ್ಥಿತಿಯಲ್ಲಿ ಇಲ್ಲ. ಇನ್ನು ಬೇರೆ ನಾಯಕರು ಇವರ ಮಾತಿಗೆ ಕಿವಿಯಾಗುತ್ತಾರೆಯೇ..? ಶಾಂತಂ, ಪಾಪಂ..!

ಎಲ್ಲಕ್ಕಿಂತ ಮಿಗಿಲಾಗಿ ಪರಿವಾರ ಒಂದುಗೂಡಿಸುವ ಪ್ರಕ್ರಿಯೆಯ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ಕೊಡಬೇಕೋ, ಬೇಡವೋ ಎಂಬುದರ ಬಗ್ಗೆ ಅವರಿಗೆ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಆ ವಿಚಾರವನ್ನೇ ಮುಂದಕ್ಕೆ ಹಾಕಿದ್ದಾರೆ.

ಇಲ್ಲಿ ಜನತಾ ಪರಿವಾರ ಒಂದಾಗುವುದು, ಆ ಪ್ರಕ್ರಿಯೆ ನಡೆಯುವುದು ಬೇರೆ ವಿಚಾರ. ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಮುರಿದ ಮನಸುಗಳು ಒಂದಾಗದೇ, ಪರಿವಾರ ಒಂದು ಮಾಡಬೇಕೆನ್ನುವ ಮನಸುಗಳಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಅದೊಂದು ವ್ಯರ್ಥ ಪ್ರಯತ್ನ ಆಗುತ್ತದೆ ಎಂಬುದಷ್ಟೇ ಗಮನಿಸಬೇಕಾದ ವಿಚಾರ. ಏಕೆಂದರೆ ಇಂಥ ಪ್ರಯತ್ನಗಳು ಹಿಂದೆಯೂ ಅನೇಕ ಬಾರಿ ನಡೆದಿವೆ. ಅವುಗಳ ಫಲಿತಾಂಶದ ಆಧಾರದ ಮೇಲೆ ಈ ಅಭಿಪ್ರಾಯ.

ವಿಭಜನೆ ಅನ್ನುವುದು ಜನತಾ ಪರಿವಾರದ ಹುಟ್ಟುಗುಣ. ಒಗ್ಗಟ್ಟು ಮತ್ತು ಛಿದ್ರ ಅದರ ಪಾಲಿಗೆ ಸಯಾಮಿ ಸದೃಶ. ಅದು ಮೂರು ಬಾರಿ ಅಧಿಕಾರಕ್ಕೆ ಬರುವಷ್ಟರಲ್ಲಿ ಮೂವತ್ತಾರು ಬಾರಿ ಚೂರಾಗಿರುವುದಕ್ಕೆ ನಾಡು ಸಾಕ್ಷಿಯಾಗಿದೆ. ಈಗ ದೇವೇಗೌಡರ ಕ್ಯಾಂಪಿನಲ್ಲಿ ಚಲುವರಾಯಸ್ವಾಮಿ ನೇತೃತ್ವದ ಪ್ರತ್ಯೇಕ ತಂಡ ನಾಯಕರ ವಿರುದ್ಧ ಕಬಡ್ಡಿಗೆ ನಿಂತಿದೆ. ತಕ್ಕಡಿಯಲ್ಲಿನ ಕಪ್ಪೆಗಳು, ಒಂದರ ಕಾಲನ್ನು ಮತ್ತೊಂದು ಎಳೆಯುವ ಏಡಿಗಳ ಪ್ರತಿರೂಪ ನಾಯಕರಿಂದ ತುಂಬಿ ತುಳುಕುತ್ತಿರಿವ ಜನತಾ ಪರಿವಾರದ ಒಂದಾಗುವುದಿರಲಿ, ಮತ್ತಷ್ಟು ಛಿದ್ರ ಆಗದಿದ್ದರೆ ಅದೇ ಅದರ ಪುಣ್ಯ!

6 COMMENTS

  1. ಪ್ರೀತಿಯ ತ್ಯಾಗರಾಜ್ ಮೊದಲ ಬಾರಿಗೆ ನಿಮ್ಮ ಲೇಖನ ಓದಿದೆ. ಅದೇ ಮೊನಚು ಅದೇ ಶೈಲಿ. ಯಶಸ್ಸು ನಿಮ್ಮದಾಗಲಿ.

Leave a Reply