ಜ್ಯೋತಿಸಿಂಗ್ ಅತ್ಯಾಚಾರಿ ಇನ್ನು ‘ನಿರ್ಭಯ’, ಆದರೆ ಸಮಾಜಕ್ಕೆ ಮಾತ್ರ ಸಿಕ್ಕಾಪಟ್ಟೆ ಭಯ

 

 

ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿ ಭಾನುವಾರ ಬಿಡುಗಡೆಯಾಗಲಿದ್ದಾನೆ. ಬಾಲಾಪರಾಧಿಗಳ ಪುನರ್ವಸತಿ ಶಿಬಿರದಲ್ಲಿಯೇ ಈತ ಇನ್ನೆರಡು ವರ್ಷಗಳ ಕಾಲ ಮುಂದುವರಿಯಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ವಯಸ್ಕ ಹಂತಕ್ಕೆ ದಾಟುತ್ತಿರುವ ಹುಡುಗನನ್ನು ಇನ್ನೂ ಪುನರ್ವಸತಿ ಕೇಂದ್ರದಲ್ಲಿ ಇರಿಸಿಕೊಳ್ಳುವುದಕ್ಕೆ ಕಾಯ್ದೆಯಲ್ಲಿ ಅವಕಾಶ ಇಲ್ಲದಿರುವುದರಿಂದ ತಾನು ಪುನರ್ವಸತಿ ಕೇಂದ್ರಕ್ಕೆ ಅಂಥ ನಿರ್ದೇಶನವನ್ನು ಕೊಡಲು ಆಗದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ನಿರ್ಭಯಾಳ ಅತ್ಯಾಚಾರಿ ಬಿಡುಗಡೆ ಆಗುತ್ತಿರುವುದು ಜನರಲ್ಲಿ ಅಸಮಾಧಾನ ತಂದಿದೆ. ನಿರ್ಭಯಾ ಪಾಲಕರಂತೂ ‘ಅಪರಾಧವೇ ಗೆದ್ದಿದೆ, ನಾವು ಸೋತೆವು’ ಎಂದು ಹತಾಶರಾಗಿ ಪ್ರತಿಕ್ರಿಯಿಸಿದ್ದಾರೆ.

ಆದರೆ, ಬಾಲಾಪರಾಧಿ ಬಿಡುಗಡೆಗೆ ತಡೆ ನೀಡಬೇಕೆಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಸುಬ್ರಮಣಿಯನ್ ಸ್ವಾಮಿಯವರು ಮಾತ್ರ ಇದನ್ನು ಸಂಪೂರ್ಣ ಹಿನ್ನಡೆ ಎಂದು ಪರಿಗಣಿಸುವುದಕ್ಕೆ ಸಿದ್ಧರಿಲ್ಲ. ಅವರು ಹೈಕೋರ್ಟ್ ಆದೇಶವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ-

ಇದು ಬಿಡುಗಡೆ ಅಲ್ಲ. ಪುನರ್ವಸತಿ ಕೇಂದ್ರದಿಂದ ಹೊರಬರುತ್ತಲೇ ಆತನು ಮ್ಯಾನೇಜ್ ಮೆಂಟ್ ಸಮಿತಿಯೊಂದರ ನಿಗಾಕ್ಕೆ ಒಳಪಡುತ್ತಾನೆ. ಆತ ಮಾನಸಿಕವಾಗಿ ಸರಿ ಇದ್ದಾನೆ, ಸಮಾಜದಲ್ಲಿ ಅನುಕೂಲಕರ ವ್ಯಕ್ತಿಯಾಗಿ ಮಾರ್ಪಡುತ್ತಾನೆ ಎಂಬ ಬಗ್ಗೆ ಪ್ರಮಾಣಪತ್ರ ಸಿಗಬೇಕು. ಮ್ಯಾನೇಜ್ಮೆಂಟ್ ಸಮಿತಿ ಈ ನಿಟ್ಟಿನಲ್ಲಿ ವಿಫಲವಾಗಿದೆ. ಆತ ಹೊರಬಂದರೂ ಎರಡು ವರ್ಷಗಳ ನಿಗಾ ಇರುತ್ತದೆ. ಅಷ್ಟರಲ್ಲಿ ನಾವು ಸೂಕ್ತ ಕಾನೂನು ತರುತ್ತೇವೆ.

ಆದೇಶ ಬರುವ ಸಂದರ್ಭದಲ್ಲಿ ನಿರ್ಭಯಾ ಪಾಲಕರು ನ್ಯಾಯಾಲಯದಲ್ಲಿ ಹಾಜರಿದ್ದರಲ್ಲದೇ ಹಲವು ಖಾಸಗಿ ವಾಹಿನಿಗಳಿಗೆ ಸಂದರ್ಶನವನ್ನೂ ನೀಡಿದರು. ಅಲ್ಲೆಲ್ಲ ಅವರ ಆಕ್ರೋಶದ ಕಟ್ಟೆ ಒಡೆದಿತ್ತು.

‘ಬಾಲಾಪರಾಧಿಯ ಸುಧಾರಣೆ ಹಕ್ಕಿನ ಬಗ್ಗೆ ಮಾತನಾಡುವವರು ನನ್ನ ಮಗಳ ಭೀಕರ ಹತ್ಯೆ ಬಗ್ಗೆ ಮಿಡಿಯುವುದಿಲ್ಲವೇಕೆ? ಅವಳ ಹಕ್ಕಿನ ಕತೆ ಏನು? ನಮ್ಮ ಮಗಳನ್ನು ನಿರ್ಭಯಾ ಎಂಬ ಹೆಸರಿಂದ ಗುರುತಿಸಬೇಕಿಲ್ಲ. ಜ್ಯೋತಿ ಸಿಂಗ್ ಎಂದು ಅವಳ ಗುರುತು ಬಹಿರಂಗಗೊಳಿಸುವಲ್ಲಿ ನಮಗೇನೂ ಮುಜುಗರವಿಲ್ಲ. ಮುಜುಗರ ಪಡಬೇಕಾದ ಜಾಗದಲ್ಲಿ ನಾವಿಲ್ಲವೂ ಇಲ್ಲ’

ಎಂದೆಲ್ಲ ಅವರು ಅಸಮಾಧಾನ ಹೊರಹಾಕಿದ್ದಾರೆ.

ನಿಗಾ ಸಮಿತಿಯ ಪಾತ್ರ ಇನ್ನು ಮುಂದೆ ಮಹತ್ವದ್ದು. ಏಕೆಂದರೆ, ಬೇರೆ ಪ್ರಕರಣಗಳಲ್ಲಿ ಅಪರಾಧಿ ಬಿಡುಗಡೆ ಆದಮೇಲೂ ಆತನ ಗುರುತು ಬಹಿರಂಗವಾಗಿರುತ್ತದೆ. ಆದರೆ ಬಾಲಾಪರಾಧಿ ಗುರುತನ್ನು ಹೊರಗೆಡುವುವಂತಿಲ್ಲ. ಹೀಗಾಗಿ ಆತ ಜನರ ಪಕ್ಕದಲ್ಲೇ ಬೆರೆತರೂ ಎಚ್ಚರದಿಂದ ಇರುವುದು ಸಾಧ್ಯವಾಗುವುದಿಲ್ಲ.

ಕ್ವಿಂಟ್ ಜಾಲತಾಣವು ಕೆಲದಿನಗಳ ಹಿಂದೆ ಈ ಬಾಲಾಪರಾಧಿಗೆ ಆಪ್ತಸಲಹೆಯ ಚಿಕಿತ್ಸೆ ನೀಡುತ್ತಿದ್ದ ಮನೋವೈದ್ಯರನ್ನು ಮಾತನಾಡಿಸಿತ್ತು. ಅವರು ಹೇಳಿರುವ ಪ್ರಕಾರ ಈತನಿಗೆ ತನ್ನ ಕೃತ್ಯದ ಬಗ್ಗೆ ಯಾವ ಪಶ್ಚಾತಾಪವೂ ಮೂಡಿಲ್ಲ!

Leave a Reply