ತೆರೆಸಾರಿಗೆ ಸಂತ ಪದವಿ: ಸಂಭ್ರಮವೋ, ಮೌಢ್ಯದ ವಿಜೃಂಭಣೆಯೋ?

ಡಿಜಿಟಲ್ ಕನ್ನಡ ಟೀಮ್

ಸೆಪ್ಟೆಂಬರ್ 2016ರ ವೇಳೆಗೆ ದಿವಂಗತ ಮದರ್ ತೆರೆಸಾ ಅವರಿಗೆ ರೋಮನ್ ಕೆಥೊಲಿಕ್ ಚರ್ಚ್ ಸಂತ ಪದವಿಯನ್ನು ನೀಡಲಿದೆ ಎಂದು ವ್ಯಾಟಿಕನ್ ಗೆ ನಿಕಟವಾಗಿರುವ ಇಟಲಿಯ ಪತ್ರಿಕೆ ವರದಿ ಮಾಡಿದೆ. ಅಧಿಕೃತವಾಗಿ ವ್ಯಾಟಿಕನ್ ಈ ಬಗ್ಗೆ ಪ್ರಕಟಣೆ ನೀಡಿಲ್ಲವಾದರೂ ವರದಿ ಮಾಡಿರುವ ಅವೈನರ್ ಪತ್ರಿಕೆಯು ಇಟಲಿಯ ಕೆಥೊಲಿಕ್ ಬಿಷಪ್ ಕಾನ್ಫರೆನ್ಸ್ ಅನ್ನು ಪ್ರತಿನಿಧಿಸುತ್ತದೆ. ತೆರೆಸಾರನ್ನು ಸಂತ ಪಟ್ಟಕ್ಕೇರಿಸುವ ಕೊನೆಯ ಅಂಶ ಅಂದರೆ ಪವಾಡ ಆಗಿರುವುದನ್ನು ಪೋಪ್ ಫ್ರಾನ್ಸಿಸ್ ಅವರು ಖಚಿತಪಡಿಸುವುದು. ಅವರು ಈ ವಿಷಯದಲ್ಲಿ ಹಸಿರು ನಿಶಾನೆ ತೋರಿರುವುದರಿಂದ ತೆರೆಸಾ ಸಂತಪದವಿ ಪಕ್ಕಾ ಆಗಲಿದೆ ಎಂದು ಅವೈನರ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿಕೊಂಡಿದೆ.

ಇಲ್ಲಿಯೇ ಇರೋದು ಸ್ವಾರಸ್ಯ. ವ್ಯಾಟಿಕನ್ ಸಂತ ಪದವಿಗೆ ಏರಬೇಕು ಅಂತಾದರೆ ಆ ವ್ಯಕ್ತಿಯ ಬದುಕಿನಲ್ಲಿ ಎರಡು ಪವಾಡಗಳು ಆಗಿರಬೇಕು. ಮದರ್ ತೆರೆಸಾ ಅವರದ್ದು ಸೇವೆಯ ಬದುಕೋ ಅಥವಾ ಅವರ ಕಾರ್ಯಗಳೆಲ್ಲ ಮತಾಂತರವನ್ನಷ್ಟೇ ಉದ್ದೇಶವಾಗಿರಿಸಿಕೊಂಡಿದ್ದವೋ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಸಧ್ಯಕ್ಕೆ ಚರ್ಚೆ ಆಗಬೇಕಿರುವ ವಿಷಯ ಅದಲ್ಲ. ಸಂತ ಪದವಿಗೆ ಸೇವೆ ಎಂಬುದು ಒಂದು ಅಂಶವಾಗಿ ಪರಿಗಣನೆ ಆಗಬಹುದೇ ಹೊರತು, ಈ ಪದವಿಗೆ ಏರಬೇಕಾದವರು ಪವಾಡಗಳನ್ನು ಮಾಡಿರಬೇಕಾದದ್ದು ಕಡ್ಡಾಯ. ತೆರೆಸಾ ಮರಣಾನಂತರ 2003ರಲ್ಲಿ ಅವರನ್ನು ಸಂತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭವಾಯಿತು. ಬಿಟಿಫಿಕೇಷನ್ ಎಂಬುದು ಅದರ ಮೊದಲ ಹೆಜ್ಜೆ. ಆ ಹಂತದಲ್ಲೇ ಮೊದಲ ಪವಾಡವೊಂದು ಆಗಿರಬೇಕಾಗಿದ್ದನ್ನು ವ್ಯಾಟಿಕನ್ ಪರಿಗಣಿಸುತ್ತದೆ. ಆಗ ಪೋಪ್ ಆಗಿದ್ದ ಜಾನ್ ಪೌಲ್, ಥೆರೇಸಾ ಬದುಕಲ್ಲಿ ಒಂದು ಪವಾಡವಾಗಿರುವುದಕ್ಕೆ ಸಮ್ಮತಿ ಮುದ್ರೆ ಒತ್ತುವುದರೊಂದಿಗೆ ಶುರುವಾದ ಪ್ರಕ್ರಿಯೆ ಇಲ್ಲಿಯವರೆಗೆ ಸಾಗಿಬಂದಿದೆ. ಈಗ ಉಳಿದಿರುವ ಕೊನೆ ಪ್ರಕ್ರಿಯೆ ಅಂತಂದ್ರೆ ಕ್ಯಾನನೈಸೇಷನ್. ಮೃತವ್ಯಕ್ತಿಯನ್ನು ಸಂತರ ಯಾದಿಯಲ್ಲಿ ಸೇರಿಸುವುದು. ಇಲ್ಲೂ ಒಂದು ಮಹಾಪವಾಡ ಜರುಗಲೇಬೇಕು. ಮರಣ ಶಯ್ಯೆಯಲ್ಲಿರುವ ವ್ಯಕ್ತಿಯೊಬ್ಬನ ಪರ ಪ್ರಾರ್ಥಿಸಿ ಆತನನ್ನು ಬದುಕಿಸುವ ಪವಾಡ ಆಗಿರಬೇಕು. ಅದನ್ನು ಪವಾಡ ಅಂತ ಅಧಿಕೃತ ಮುದ್ರೆ ಒತ್ತಬೇಕಾದವರು ಪೋಪ್ ಪಟ್ಟದಲ್ಲಿರುವವರು.

ಈಗ ಸಿಗುತ್ತಿರುವ ಮಾಹಿತಿ ಎಂದರೆ ಥೆರೇಸಾರಿಗೆ ಸಂತ ಪದವಿ ನೀಡಲು ಮನ್ನಣೆಗಾಗಿ ಕಾದಿದ್ದ ಎರಡನೇ ಪವಾಡ ಘಟನೆಗೂ ಪೋಪ್ ಅವರ ಮುದ್ರೆ ಬಿದ್ದಿದೆ. ಭಯಾನಕ ಮಿದುಳು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಪರವಾಗಿ ಪ್ರಾರ್ಥಿಸುವಂತೆ ಆತನ ಕುಟುಂಬ ತೆರೆಸಾ ಅವರನ್ನು ಕೇಳಿಕೊಂಡಿತ್ತಂತೆ. ಥೆರೇಸಾ ಪ್ರಾರ್ಥಿಸುತ್ತಲೇ ಆತ ಹುಷಾರಾದನಂತೆ. ವೈದ್ಯರಿಗೆ ಇದನ್ನು ವಿವರಿಸುವುದಕ್ಕೇ ಆಗಲಿಲ್ಲವಂತೆ!

ಅಂದಹಾಗೆ, ಮೊದಲನೇ ಪವಾಡದಲ್ಲಿ ಉದರದ ಹುಣ್ಣಿನಿಂದ ನರಳುತ್ತಿದ್ದ ಬಂಗಾಳದ ಬುಡಕಟ್ಟು ಮಹಿಳೆ ಮೋನಿಕಾ ಬೆಸ್ರಾರನ್ನು ಪವಾಡದ ಮೂಲಕ ತೆರೆಸಾ ಗುಣಪಡಿಸಿದ್ದರು ಎಂಬುದನ್ನು ವ್ಯಾಟಿಕನ್ ಪರಿಗಣಿಸಿತ್ತು.

ನಾಳೆ ಈ ಸುದ್ದಿ ದೃಢಪಡುತ್ತಿದ್ದಂತೆ ಭಾರತ ಸಂಭ್ರಮಿಸಲಿಕ್ಕಿದೆ. ತೆರೆಸಾ ಸಂತ ಪದವಿಗೆ ಏರುವುದರೊಂದಿಗೆ ಭಾರತದ ಸೆಕ್ಯುಲರ್ ಮೌಲ್ಯ ಜಾಗತಿಕವಾಗಿ ಬೆಳಗಿತು ಅಂತೆಲ್ಲ ಬುದ್ಧಿಜೀವಿ- ಚಿಂತಕರು ಹೊಗಳಿದರೆ ಅಚ್ಚರಿ ಇಲ್ಲ.

ಮದರ್ ತೆರೆಸಾ ವ್ಯಕ್ತಿತ್ವ ಸಂತರಂತಿತ್ತೋ, ಉದ್ದೇಶ ಮಾನವತೆಯ ಸೇವೆಯೇ ಹೌದಿತ್ತೋ ಎಂಬುದೆಲ್ಲ ಭಿನ್ನ ಚರ್ಚೆಗಳು. ಆದರೆ ಸಂತ ಪದವಿಗೆ ಏರಿಸುವ ದೀರ್ಘ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಪರಿಗಣಿಸುತ್ತಿರುವ ಅಂಶವೇ ಅವೈಜ್ಞಾನಿಕ ಮತ್ತು ಮೌಢ್ಯದ ಮೇರು ಮಾದರಿ ಎಂಬಂತಿರುವ ಪವಾಡ ಶಕ್ತಿ. ರಾಜ್ಯದ ಮಟ್ಟಿಗಂತೂ ಮೌಢ್ಯ ವಿರೋಧಿ ಕಾನೂನು ಬರಬೇಕೆಂಬ ಧ್ವನಿ ಪ್ರಗತಿಪರ ಸಮುದಾಯದಿಂದ ಗಟ್ಟಿಯಾಗಿದೆ. ಹೀಗಿರುವಾಗ ಮದರ್ ತೆರೆಸಾರನ್ನು ಸಂತ ಪದವಿಗೇರಿಸಲು ಮೂಢನಂಬಿಕೆ ಏಣಿಯನ್ನೇ ಆಧಾರವಾಗಿರಿಸಿಕೊಂಡಿರುವುದರ ಬಗ್ಗೆ ಚರ್ಚೆ ಆಗಬೇಡವೇ? ಈ ವಿಷಯದಲ್ಲಿ ರಾಜ್ಯದ ಬುದ್ಧಿಜೀವಿ- ಪ್ರಗತಿಪರರೆಲ್ಲ ಮುಂಚೂಣಿಯಲ್ಲಿ ನಿಂತು ಅರಿವು ಮೂಡಿಸುವ ಹೊಣೆ ಹೊರಬೇಕಿದೆಯಲ್ಲವೇ?

1 COMMENT

  1. ತೆರೆಸಾರ so called “ಸೇವೆ’ ಕೇವಲ ಸ್ವಪ್ರಚಾರ ಹಾಗೂ ಮತಪ್ರಚಾರಕ್ಕೆ ಸೀಮಿತವಾಗಿತ್ತು ಅನ್ನೋದರ ಚಿತ್ರಣವನ್ನ ಕರಣಂ ಪವನ್ ಪ್ರಸಾದ್ “ನನ್ನಿ ‘ಯಲ್ಲಿ ಚೆನಾಗಿ ಕಟ್ಟಿಕೊಟ್ಟಿದಾರೆ. ಇಷ್ಟಕ್ಕೂ ಮೌಢ್ಯ ಹಾಗೂ ಅದರ ವಿಜ್ರಂಭಣೆ ಕೇವಲ ಪೂರ್ವ ದೇಶಗಳ ಸ್ವತ್ತಲ್ಲ ಬಿಡಿ …

Leave a Reply