ಬಿಜೆಪಿ ಯುವ ಮೋರ್ಚಾ ಅಸಹಿಷ್ಣುತೆಗೆ ಪುರಾವೆ ಕೊಡೋಕೆ ಹೊರಟಿದೆಯಾ?

ಡಿಜಿಟಲ್ ಕನ್ನಡ ಟೀಮ್

ಶಾರುಖ್ ಖಾನ್ ಅವರ ದಿಲ್ವಾಲೆ ಚಿತ್ರಕ್ಕೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಿಂದ ಪ್ರತಿರೋಧ ಎದುರಾಗಿದೆ. ಚಿತ್ರ ಪ್ರದರ್ಶನವಾಗುತ್ತಿದ್ದ ಸಿನಿಮಾ ಮಂದಿರಕ್ಕೆ ನುಗ್ಗಿ ಪೋಸ್ಟರ್ ಗಳನ್ನು ಹರಿದುಹಾಕಿ ಬಿಜೆಪಿ ಯುವ ಮೋರ್ಚಾ ದಾಂದಲೆ ಎಬ್ಬಿಸಿದೆ.

ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ನಟ ಶಾರುಖ್ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಅವರು ಆ ಬಗ್ಗೆ ಕ್ಷಮೆಯನ್ನೂ ಕೇಳಿದ್ದರು. ಶಾರುಖ್ ಅವರ ಮಾತನ್ನು ವಿರೋಧಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪೋಸ್ಟರ್ ಹರಿದುಹಾಕಿ, ಭಯದ ವಾತಾವರಣ ಸೃಷ್ಟಿಸಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡುವುದು ‘ಅಸಹಿಷ್ಣುತೆ’ ನಿಜಕ್ಕೂ ಇರುವುದು ಹೌದು ಎಂದು ಸಾಬೀತುಪಡಿಸಿದಂತೆ ಆಗುತ್ತದೆಯಷ್ಟೆ.

ಅದು ಬಿಜೆಪಿ ಆಗಿರಲಿ, ಸಾಮಾನ್ಯ ವ್ಯಕ್ತಿಯೇ ಆಗಿರಲಿ ಶಾರುಖ್ ಖಾನ್ ಹೇಳಿಕೆಗೆ ಅಸಮ್ಮತಿ- ಆಕ್ರೋಶ ಇದ್ದರೆ ಅವರ ಚಿತ್ರಗಳನ್ನು ನೋಡದೇ ಇರುವ ಆಯ್ಕೆ ಇದ್ದೇ ಇದೆ. ಯಾವುದೇ ಬಾಲಿವುಡ್ ನಟರು ಭಾರತದ ಸಹಿಷ್ಣುತೆಗೆ ಪ್ರಮಾಣಪತ್ರ ಕೊಡುವುದಾಗಲೀ, ಒಂದೆರಡು ಘಟನೆಗಳನ್ನು ಇಟ್ಟುಕೊಂಡು ಇಡೀ ಭಾರತವನ್ನೇ ಅಸಹಿಷ್ಣು ಎಂದು ಚಿತ್ರಿಸುವುದಾಗಲೀ ಅಭಿಮಾನಿಗಳಿಗೂ ಸಿಟ್ಟು ತರುವಂಥದ್ದೇ. ಅದಕ್ಕೆ ಪ್ರತಿಭಟನೆ ಸಲ್ಲಿಸುವುದಕ್ಕೆ ಪ್ರಜಾಪ್ರಭುತ್ವದ ಮಾರ್ಗಗಳು ಇದ್ದೇ ಇವೆ. ಹೀಗೆ ಬೇಜವಾಬ್ದಾರಿ ಹೇಳಿಕೆ ನೀಡುವವರು ರಾಯಭಾರತ್ವ ವಹಿಸುವ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂತಲೋ, ಇವರ ಸಿನಿಮಾಗಳನ್ನು ನೋಡುವುದಿಲ್ಲ ಎಂದೋ ಬಿಸಿ ಮುಟ್ಟಿಸುವ ಆಯ್ಕೆ ಇದ್ದೇ ಇದೆ. ಹೇಗೆ ಹೇಳಿಕೆ ನೀಡುವ ಸ್ವಾತಂತ್ರ್ಯ ಸೆಲೆಬ್ರಿಟಿಗಳಿಗಿದೆಯೋ, ಸಿನಿಮಾ ನೋಡದಿರುವ ಸ್ವಾತಂತ್ರ್ಯ ನೋಡುಗನಿಗೆ- ಗ್ರಾಹಕನಿಗೆ ಇದ್ದೇ ಇದೆ.

ಅತ್ತ, ಪುಣೆಯಲ್ಲೂ ಶುಕ್ರವಾರ ಬಿಡುಗಡೆಯಾಗಿರುವ ಇನ್ನೊಂದು ಚಿತ್ರ ಬಾಜಿರಾವ್ ಮಸ್ತಾನಿಗೆ ಪ್ರತಿರೋಧ ಎದುರಾಗಿದೆ. ಈ ಚಿತ್ರದಲ್ಲಿ ಪೇಶ್ವೆಯನ್ನು ಸರಿಯಾಗಿ ಚಿತ್ರಿಸಿಲ್ಲ ಎಂಬುದು ಪ್ರತಿರೋಧ ವ್ಯಕ್ತಪಡಿಸಿ, ಚಿತ್ರ ಪ್ರದರ್ಶನ ನಿಲ್ಲುವಂತೆ ಮಾಡಿರುವ ಸಂಘಟನೆಗಳ ಪ್ರತಿಪಾದನೆ. ಖಂಡಿತವಾಗಿಯೂ ಇತಿಹಾಸ ಪುರುಷರನ್ನು ತಪ್ಪಾಗಿ ಚಿತ್ರಿಸಿರುವುದಕ್ಕೆ ಪ್ರತಿಭಟಿಸುವ ಹಕ್ಕು ಇದ್ದೇ ಇದೆ. ಆದರೆ ಅದು ಸೃಜನಾತ್ಮಕ ವಾದ-ಪ್ರತಿವಾದ, ಚರ್ಚೆಗಳ ರೂಪದಲ್ಲಿರಬೇಕೇ ಹೊರತು ಚಿತ್ರ ಪ್ರದರ್ಶನಕ್ಕೇ ಅಡ್ಡಿ ಮಾಡುವುದಲ್ಲ. ಹಾಗಾದರೆ, ಚಿತ್ರವೊಂದು ಬಿಡುಗಡೆ ಆಗುವುದಕ್ಕೆ ಮುಂಚೆ ಯಾವೆಲ್ಲ ಸಂಘಟನೆಗಳ ಪ್ರಮಾಣಪತ್ರ ಪಡೆದುಕೊಂಡಿರಬೇಕು ಎಂಬ ಪಟ್ಟಿ ತಯಾರಿಸೋಕೇ ಸಾಧ್ಯವೇ? ಯಾವುದು ಇತಿಹಾಸ- ಯಾವುದು ಮಿಥ್ಯೆ ಅಂತೆಲ್ಲ ಸರ್ಟಿಫಿಕೇಟ್ ಕೊಡೋರ್ಯಾರು? ಇಲ್ಲೆಲ್ಲ ಚರ್ಚೆ- ಪ್ರತಿವಾದಗಳಷ್ಟೇ ದಾರಿದೀಪವಾಗಬಲ್ಲವು.

ಚಿತ್ರ ಯಾವುದೇ ಇರಲಿ, ವ್ಯಕ್ತಿಗಳು ಯಾರೇ ಇರಲಿ ಅವನ್ನು ನೋಡದೇ ಇರುವ, ವ್ಯಾವಹಾರಿಕವಾಗಿ ಪ್ರೋತ್ಸಾಹಿಸದೇ ಇರುವ ಪ್ರಜಾಪ್ರಭುತ್ವ ರೀತಿಯ ಆಯ್ಕೆ ಪ್ರತಿರೋಧ ವ್ಯಕ್ತಕ್ಕೆ ಬಳಕೆಯಾಗಬೇಕೇ ಹೊರತು ಪೋಸ್ಚರ್ ಹರಿಯುವ, ಪ್ರದರ್ಶನಕ್ಕೆ ಅಡ್ಡಿ ಮಾಡುವ ಕಾನೂನು ವಿರೋಧಿ ಕ್ರಮಗಳಲ್ಲ.

ಹೀಗೆ ಮಾಡುವವರು ಅಸಹಿಷ್ಣುತೆ ಇದೆ ಎಂಬುದಕ್ಕೆ ಪುರಾವೆ ಒದಗಿಸುತ್ತಾರೆಯೇ ಹೊರತು ಮತ್ತೇನನ್ನೂ ಸಾಧಿಸರು.

Leave a Reply