ಡಿಜಿಟಲ್ ಕನ್ನಡ ಟೀಮ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಡಿನೋಟಿಫಿಕೇಷನ್ ಪ್ರಕರಣಗಳ ಸಂಬಂಧ ಮಹಾ ಲೇಖಪಾಲರ (ಸಿಎಜಿ) ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಥಮ ತನಿಖಾ ವರದಿಗಳನ್ನು (ಎಫ್ಐಆರ್) ರದ್ದುಪಡಿಸುವಂತೆ ಕೋರಿ ಈ ಇಬ್ಬರು ನಾಯಕರು ಸಲ್ಲಿಸಿದ್ದ ಅರ್ಜಿ ಮೇರೆಗೆ ಹೈಕೋರ್ಟ್ ಏಕ ಸದಸ್ಯಪೀಠದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಈ ಆದೇಶ ಹೊರಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ದಿ ಸಚಿವರಾಗಿದ್ದಾಗ ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರ ಹೋಬಳಿ ಬೆನ್ನಿಗಾನಹಳ್ಳಿಯ ಸರ್ವೆ ನಂ.50/2 ರಲ್ಲಿನ 4 ಎಕರೆ 20 ಗುಂಟೆ ಜಮೀನನ್ನು ಖರೀದಿಸಿದ್ದರು. ನಂತರ ತಮ್ಮ ಅಧಿಕಾರ ಬಳಸಿ ಎಲ್ಲ ದಾಖಲೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಂದ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ಶಿವಕುಮಾರ್ ಅವರ ಮನವಿ ಮೇರೆಗೆ ಈ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿಸಿದ್ದಾರೆ ಎಂದು ಆರೋಪಿಸಿ ಟಿ.ಜೆ. ಅಬ್ರಾಹಾಂ ಮತ್ತು ಕಬ್ಬಾಳೆಗೌಡ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ 15 ಎಫ್ಐಆರ್ ದಾಖಲಿಸಿದ್ದರು. ಈ ಹಿಂದೆ ಯಡಿಯೂರಪ್ಪ ಅವರ ಅರ್ಜಿ ಮೇರೆಗೆ ಹೈಕೋರ್ಟ್ ಮೂರು ಎಫ್ಐಆರ್ ಗಳಿಗೆ ಮಧ್ಯಂತರ ತಡೆ ನೀಡಿತ್ತು. ನಂತರ 12 ಎಫ್ಐಆರ್ ರದ್ದು ಕೋರಿ ಯಡಿಯೂರಪ್ಪನವರು ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
ಇತ್ತೀಚೆಗೆ ಯಡಿಯೂರಪ್ಪ ವಿರುದ್ಧದ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ನಾಲ್ಕು ದೂರುಗಳನ್ನು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಪೀಠ ರದ್ದುಗೊಳಿಸಿತ್ತು.
1986ರಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 4.20 ಎಕ್ರೆ ಜಮೀನನ್ನು ಬಿಡಿಎ ಭೂ ಸ್ವಾಧೀನ ಮಾಡಿತ್ತು. 2004ರಲ್ಲಿ ಬಿ.ಕೆ.ಶ್ರೀನಿವಾಸ್ ಎಂಬುವರು ಡಿನೋಟಿಫಿಕೇಶನ್ಗಾಗಿ ಅರ್ಜಿ ಸಲ್ಲಿಸಿದ್ದರು. ಆನಂತರ ಶಿವಕುಮಾರ್ ಈ ಜಾಗ ಖರೀದಿಸಿದ್ದರು.