ಗಂಡು ಹೆತ್ತ ಅಮ್ಮಂದಿರೆಲ್ಲ ನೋಡ್ಲೇಬೇಕಾದ ಒಂದೇ ನಿಮಿಷದ ವಿಡಿಯೋ!

ಡಿಜಿಟಲ್ ಕನ್ನಡ ಟೀಮ್

ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಧಿಯ ಖುಲಾಸೆ ಆಗುತ್ತಿರುವಂತೆ ಸಮಾಜ ಆತಂಕ ಆಕ್ರೋಶದಿಂದ ಪ್ರತಿಕ್ರಿಯಿಸಿದೆ. ಈತ ಹೊರಗೆ ಬಂದ ನಂತರವೂ ಅಪಾಯಕಾರಿ ಆಗುವುದಿಲ್ಲ ಎಂಬುದಕ್ಕೆ ಏನು ಆಧಾರ ಎಂಬ ಪ್ರಶ್ನೆ ಎಲ್ಲರ ಬಾಯಲ್ಲಿ.

ಹೌದು, ಆ ಹುಡುಗ ಬಾಲರಾಕ್ಷಸನಾಗಿ ರೂಪುಗೊಳ್ಳುವುದಕ್ಕೆ ಪ್ರೇರೇಪಣೆಗಳು ಏನಿದ್ದಿರಬಹುದು? ಸುತ್ತಲಿನ ಬಳಗ, ತಿದ್ದದ ಪಾಲಕರು…? ಏನೆಲ್ಲ ಕಾರಣಗಳಿದ್ದಿರಬಹುದು.

ದೇಶ ಇದೇ ವಿಷಯದ ಗುಂಗಿನಲ್ಲಿರುವಾಗ, ಈ ವಾರಾಂತ್ಯ ಸಮಯದಲ್ಲಿ ಎರಡು ವಿಡಿಯೋಗಳನ್ನು ನಮ್ಮ ಮನಸಿಗೆ ಇಳಿಸಿಕೊಳ್ಳುವ ಸಂದರ್ಭ ಬಂದಿದೆ. ಅದು ಅತ್ಯಾಚಾರವಿರಬಹುದು, ಲೈಂಗಿಕ ದೌರ್ಜನ್ಯ, ಮಹಿಳೆಯರ ಚುಡಾಯಿಸುವಿಕೆ ಹೀಗೆ ಬೇರೆ ಬೇರೆ ಆಯಾಮಗಳಿದ್ದಿರಬಹುದು… ಅಲ್ಲೆಲ್ಲ ಹೆಚ್ಚಿನದಾಗಿ ಒಂದು ಮನಸ್ಥಿತಿ ಕೆಲಸ ಮಾಡುತ್ತದೆ. ಅದೆಂದರೆ, ಮೇಲ್ ಇಗೊ. ಪುರುಷಾಹಂಕಾರ. ಸಮಾಜವೂ ಗಂಡೆಂದರೆ ಆಕ್ರಮಣದ ರೋಷಾವೇಶ ಹೊಂದಿರಬೇಕು ಅಂತಲೇ ತಿಳಿವಳಿಕೆ ಮೂಡಿಸಿಬಿಟ್ಟಿರುತ್ತದೆ. ಈ ಧೋರಣೆ ಅಲುಗಾಡಿಸಿದಾಗ ಒಂದಿಷ್ಟು ಬದಲಾವಣೆಗಳಾಗಬಹುದೇನೋ. ಈ ನಿಟ್ಟಿನಲ್ಲಿ ತಿಂಗಳ ಹಿಂದೆ ಯೂಟ್ಯೂಬ್ ನಲ್ಲಿ ಓಡಾಡ್ತಿರೋ ಎರಡು ವಿಡಿಯೋಗಳು ಕೇವಲ ಐವತ್ತೇಳು ಸೆಕೆಂಡುಗಳಲ್ಲಿ ಭಾವನೆಗಳನ್ನು ಮೀಟುವ ಗಟ್ಟಿ ಸಂದೇಶವನ್ನು ನೀಡುತ್ತಿವೆ.

ಬ್ರೇಕ್ ಥ್ರೂ ಟಿವಿ ಎಂಬ ಯೂಟ್ಯೂಬ್ ಚಾನೆಲ್ ನಿರ್ಮಿಸಿರುವ ದೃಶ್ಯ ತುಣುಕುಗಳು ಹೇಳುವುದಿಷ್ಟು: ತಾಯಂದಿರೇ ನಿಮ್ಮ ಗಂಡು ಮಕ್ಕಳೊಂದಿಗೆ ನಿಮ್ಮ ದೈನಂದಿನದ ಅನುಭವವನ್ನು ಹಂಚಿಕೊಳ್ಳಿ. ಆ ಮೂಲಕ ಅವರನ್ನು ಮಹಿಳೆಯರ ಕುರಿತು ಸಂವೇದನಾಶೀಲರನ್ನಾಗಿಸಿ. ತಾನು ಹುಡುಗಿಯೊಬ್ಬಳಿಗೆ ಗೋಳು ಹುಯ್ದುಕೊಳ್ಳುತ್ತಿರುವ ಸನ್ನಿವೇಶ ತನ್ನ ಅಮ್ಮನಿಗೂ ಬೇರೆ ಪುರುಷರಿಂದ ಆಗಿದೆ ಎಂದಾದಾಗ ಆತನ ದೃಷ್ಟಿಕೋನ ಬದಲಾಗುವುದಕ್ಕೆ ಸಾಧ್ಯತೆಗಳಿವೆ ಎಂಬುದನ್ನು ಎರಡು ವಿಡಿಯೋಗಳು ಅನನ್ಯವಾಗಿ ಸಾರಿವೆ.

ಒಂದನೇ ವಿಡಿಯೋದಲ್ಲಿ, ಬಾಲ್ಕನಿಯಲ್ಲಿ ನಿಂತ ಹುಡುಗ ಕೆಳಗೆ ಹೋಗುತ್ತಿರುವ ಹುಡುಗಿಯ ಮೇಲೆ ಹೂವು ಚೆಲ್ಲಿ ಶಾಕ್ ಕೊಡುತ್ತಾನೆ. ಅಷ್ಟರಲ್ಲಿ ಅವನಮ್ಮ ಬಾಲ್ಕನಿಗೆ ಬಟ್ಟೆ ಒಣಗಿಸಲು ಬರುತ್ತಾಳೆ. ಈತ ಲಘುಬಗೆಯಿಂದ ಸುಮ್ಮನಾಗಿದ್ದನ್ನು ಆಕೆ ಗಮನಿಸುತ್ತಾಳೆ. ಬಟ್ಟೆ ಒಣಗಿಸುತ್ತ ಮಾತು ಶುರು ಮಾಡುತ್ತಾಳೆ- ‘ನಿನ್ನೆ ಆಫೀಸಿಗೆ ಹೋಗುವಾಗ ಏನಾಯ್ತು ಗೊತ್ತಾ? ನನ್ನ ಮೇಲ್ಯಾರೋ ಪಾಪ್ ಕಾರ್ನ್ ಚೆಲ್ಲಿದರು. ತಿರುಗಿ ನೋಡಿದಾಗ ಬೈಕಲ್ಲಿ ಹೋಗ್ತಿದ್ದ ಹುಡುಗರು…’

‘ಆಮೇಲೇನಾಯ್ತು..?’ ಆತಂಕದಿಂದ ವಿಚಾರಿಸ್ತಾನೆ ಹುಡುಗ.

‘ಅವರು ಛೇಡಿಸಲಿಕ್ಕೆ ಶುರು ಮಾಡಿದ್ರು. ಮೇಡಂ ನಿಮ್ಮ ಕೂದ್ಲಲ್ಲಿ ನಮ್ಮ ಪಾಪ್ ಕಾರ್ನ್ ಬಿದ್ ಬಿಡ್ತು. ಸ್ವಲ್ಪ ಕೊಡ್ತೀರಾ ಅಂತ ಕೇಳಿ ನಗಾಡಿದ್ರು. ಏನ್ ಮಾಡೋದು? ಎಷ್ಟ್ ಮಂದಿಗೇ ಅಂತ ತಿಳಿವಳಿಕೆ ಹೇಳೋದು’ ಅಂತ ಹೇಳಿ ಒಳಗೆ ಹೋಗಿಬಿಡ್ತಾಳೆ ಅಮ್ಮ.

ಮಗನಲ್ಲಿ ಮೂಡುತ್ತಿದ್ದ ಪಶ್ಚಾತಾಪ ಭಾವ ಪದಗಳಿಗೆ ಸಿಗದ್ದು…

ಮತ್ತೊಂದು ವಿಡಿಯೋದಲ್ಲಿ, ಅಡುಗೆ ಮನೆಯಲ್ಲಿರುವ ಅಮ್ಮನಿಗೆ ಮಗನ ಸೆಲ್ ಫೋನ್ ನ ಮೆಸೇಜ್ ಧ್ವನಿಸೂಚಕ ಇನ್ನಿಲ್ಲದ ಕಿರಿಕಿರಿ ಕೊಡುತ್ತಿರುತ್ತೆ. ಕೊನೆಗೊಮ್ಮೆ ಮಗನ ಬಳಿ ಹೋಗಿ, ‘ಇದ್ನ ಬದಲಾಯಿಸು’ ಅಂತ ಹೇಳ್ದಾಗ, ಮಗ ಉಡಾಫೆಯಿಂದ ‘ಯಾಕಮ್ಮ’ ಅಂತಾನೆ.

ಆಗ ಆ ತಾಯಿ ಹೇಳ್ತಾಳೆ- ‘ಯಾಕಂದ್ರೆ ದಿನಾ ನಾನು ಆಫೀಸಿಗೆ ಹೋಗುವ ಹಾದಿಯಲ್ಲಿ ನನ್ನ ನೋಡಿ ಕೆಲವರು ಇದೇ ರೀತಿ ಸೀಟಿ ಹೊಡಿತಾರೆ. ಈ ಶಿಳ್ಳೆಗಳನ್ನು ಕೇಳಿ ಸುಸ್ತಾಗಿಹೋಗಿದೆ ನಂಗೆ..’

ಲೈಂಗಿಕ ದೌರ್ಜನ್ಯದಂಥ ವಿಷಯದ ಬಗ್ಗೆ ಹುಡುಗರನ್ನು ಹೇಗೆ ಚಿಂತನೆಗೆ ಹಚ್ಚಬೇಕು ಅಂತ ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳೋದಕ್ಕೇ ಸಾಧ್ಯವಿಲ್ಲವೇನೋ?

1 COMMENT

Leave a Reply to K R LAKSHMINARAYANA Cancel reply