ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಕ್ಕೆ ಎಳ್ಳುನೀರು ಬಿಟ್ಟ ಗೌಡರು!

 

ಸಂಯುಕ್ತ ಜನತಾದಳದೊಂದಿಗೆ (ಜೆಡಿಯು) ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಕ್ಕೆ ಆರಂಭದಲ್ಲೇ ಎಳ್ಳುನೀರು ಬಿಟ್ಟಿದ್ದಾರೆ.

ಈಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಚುನಾವಣೆ ನಡೆಯುತ್ತಿದೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮೈತ್ರಿಗೆ ಮುಂದಾಗಿರುವವರು ಶ್ರಮಿಸಲಿ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮುಗಿಯುವವರೆಗೂ ಮೈತ್ರಿ ವಿಚಾರ ಪ್ರಸ್ತಾಪಕ್ಕೆ ಆಸ್ಪದ ಇಲ್ಲ. ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಬೇಡ ಎಂದು ಪರಿವಾರ ಒಗ್ಗೂಡಿಸಲು ಮುಂದಾಗಿರುವ ತಮ್ಮ ಪಕ್ಷದ ಮುಖಂಡರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪರಿವಾರ ಒಗ್ಗೂಡಿಸುವ ಉದ್ದೇಶದಿಂದ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಜೆಡಿಎಸ್ ನಾಯಕರಾದ ಬಸವರಾಜ ಹೊರಟ್ಟಿ, ಎಂ.ಸಿ. ನಾಣಯ್ಯ, ಶ್ರೀನಿವಾಸ್ ಭಾಗವಹಿಸಿದ್ದರು. ಜೆಡಿಯು ಕಡೆಯಿಂದ ಡಾ. ಎಂ.ಪಿ. ನಾಡಗೌಡ, ಬಿ.ಆರ್. ಪಾಟೀಲ್ ಮತ್ತು ಬಿಜೆಪಿಯ ತಿಪ್ಪಣ್ಣ ಸಭೆಯಲ್ಲಿದ್ದರು.

ಜನತಾ ಪರಿವಾರ ಒಂದಾಗುವುದಿರಲಿ, ಇನ್ನಷ್ಟು ಛಿದ್ರ ಆಗದಿದ್ದರೆ ಅದೇ ಪುಣ್ಯ! ಎಂಬ ತಲೆಬರಹದಡಿ ಡಿಜಿಟಲ್ ಕನ್ನಡ ಶುಕ್ರವಾರವೇ ವಿಶ್ಲೇಷಣೆ ಪ್ರಕಟಿಸಿತ್ತು.

ಜನವರಿ ಮೊದಲ ವಾರ ಪಂಚಾಯಿತಿ ಚುನಾವಣೆ ಅಧಿಸೂಚನೆ ಹೊರಬೀಳಲಿದೆ. ಫೆಬ್ರವರಿ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ ತರಾತುರಿಯಲ್ಲಿ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಲಿ ಅಥವಾ ಮೈತ್ರಿಯಾಗಲಿ ಸಾಧ್ಯವಿಲ್ಲ. ಆದರೆ ಚುನಾವಣೆಯಲ್ಲಿ ಎಡಪಂಥೀಯ ಪಕ್ಷಗಳಾದ ಸಿಪಿಐ ಹಾಗೂ ಸಿಪಿಎಂನೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ. ಜೆಡಿಯು ಜತೆ ಅದೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಜನತಾ ಪರಿವಾರವನ್ನು ಒಂದುಗೂಡಿಸುವ ಪ್ರಯತ್ನ ಎರಡು ವರ್ಷಗಳಿಂದ ನಡೆಯುತ್ತಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಹೆಗಲಿಗೆ ಇದರ ಹೊಣೆ ವಹಿಸಲಾಗಿತ್ತು.

ಆದರೆ ಬಿಹಾರ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಲಾಯಮ್ ಅವರು ಈ ಪ್ರಸ್ತಾಪದಿಂದ ಹಿಂದೆ ಸರಿದಿದ್ದರಿಂದ ಅದು ನೆನೆಗುದಿಗೆ ಬಿದ್ದಿದೆ. ರಾಷ್ಟ್ರಮಟ್ಟದಲ್ಲಿ ನಾಯಕರು ಸಭೆ ನಡೆಸಿ, ವಿಲೀನ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವರು ಅಲ್ಲಿಯವರೆಗೂ ತಾಳ್ಮೆ ವಹಿಸುವುದು ಸೂಕ್ತ ಎಂದು ಹೇಳುವ ಮೂಲಕ ಇದರಲ್ಲಿ ರಾಜ್ಯ ನಾಯಕರ ಪಾತ್ರ ಏನೂ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Leave a Reply