ಜಾಮೀನು ನಮ್ಮ ಜಯ: ಕಾಂಗ್ರೆಸ್, ಈಗಷ್ಟೇ ಆರಂಭ ಅಧ್ಯಾಯ: ಸ್ವಾಮಿ

 

ಡಿಜಿಟಲ್ ಕನ್ನಡ ಟೀಮ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾಗಿ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ- ಸೋನಿಯಾ ಗಾಂಧಿ ಮೂರೇ ನಿಮಿಷದಲ್ಲಿ ಷರತ್ತುರಹಿತ ಜಾಮೀನು ಪಡೆದಿದ್ದಾರೆ.

ಸಹಜವಾಗಿಯೇ ಇದನ್ನು ಕಾಂಗ್ರೆಸ್ ತನ್ನ ವಿಜಯವೆಂಬಂತೆ ಬಿಂಬಿಸಿಕೊಂಡಿದೆ. ವಾಸ್ತವದಲ್ಲಿ ಇದೊಂದು ಪ್ರಕ್ರಿಯೆ ಅಷ್ಟೇ ಆಗಿದ್ದು, ಜಾಮೀನು ಸಿಗುವ ಬಗ್ಗೆ ಮೊದಲಿನಿಂದಲೂ ಯಾವುದೇ ಅನುಮಾನಗಳಿರಲಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಸಹ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪವನ್ನೇನೂ ಸಲ್ಲಿಸಿರಲಿಲ್ಲ. ಆದರೆ ರಾಹುಲ್ ಮತ್ತು ಸೋನಿಯಾ ಅವರಿಗೆ ವಿದೇಶ ಪ್ರವಾಸ ನಿರ್ಬಂಧಿಸಿ ಅವರ ಪಾಸ್ ಪೋರ್ಟ್ ಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಸ್ವಾಮಿಯವರ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ರಾಹುಲ್ ಗಾಂಧಿ ಅವರಿಗೆ ಪ್ರಿಯಾಂಕಾ ಗಾಂಧಿಯವರು ಹಾಗೂ ಸೋನಿಯಾ ಗಾಂಧಿಯವರಿಗೆ ಮನಮೋಹನ್ ಸಿಂಗ್ ಅವರು ತಲಾ 50 ಸಾವಿರ ರುಪಾಯಿಗಳ ಭದ್ರತೆ ಒದಗಿಸಿದ ನಂತರ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿತು. ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ.

ನ್ಯಾಯಾಲಯವು ಬೇಷರತ್ತು ಜಾಮೀನು ನೀಡಿರುವುದು ಹಾಗೂ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಸ್ಯಾಮ್ ಪಿತ್ರೋಡಾ ಅವರಿಗೆ ಅನಾರೋಗ್ಯ ಕಾರಣವನ್ನು ಮನ್ನಿಸಿ ಖುದ್ದು ಹಾಜರಾತಿಯಿಂದ ವಿನಾಯತಿ ನೀಡಿರುವುದನ್ನು ಕಾಂಗ್ರೆಸ್ ತನ್ನ ಗೆಲುವೆಂಬಂತೆ ಬಿಂಬಿಸಿಕೊಂಡಿದೆ.

ಆದರೆ ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಮಾತ್ರ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಂತೃಪ್ತಿಯ ಬೇರೆ ವ್ಯಾಖ್ಯಾನವನ್ನೇ ನೀಡಿದ್ದಾರೆ. ಅವರು ಹೇಳಿದ್ದಿಷ್ಟು-

‘ಗಾಂಧಿ ಕುಟುಂಬವನ್ನು ನ್ಯಾಯಾಲಯದಲ್ಲಿ ಆರೋಪಿಗಳನ್ನಾಗಿಸಿ ನಿಲ್ಲಿಸಿದ್ದಕ್ಕೆ ಇಡೀ ದೇಶ ಖುಷಿಪಟ್ಟಿದೆ. ನಾನು ಆರೋಪಿಗಳಿಗೆ ಜಾಮೀನು ಕೊಡುವುದನ್ನು ಪ್ರಶ್ನಿಸಿಯೇ ಇಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಿರುವ ವಿದ್ಯಮಾನವು ಪ್ರಕರಣಕ್ಕೆ ಹಿನ್ನಡೆ ಎಂಬ ಪ್ರಶ್ನೆಯೇ ಇಲ್ಲ. ಪಾಸ್ ಪೋರ್ಟ್ ವಶದಲ್ಲಿಟ್ಟುಕೊಳ್ಳುವ ಕೋರಿಕೆಯನ್ನು ಮಾತ್ರ ಸದ್ಯಕ್ಕೆ ನ್ಯಾಯಾಲಯ ಮನ್ನಿಸಲಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಮತ್ತೆ ಕೋರಿಕೆ ಸಲ್ಲಿಸುವೆ. ಕಾಂಗ್ರೆಸ್ ನ ನ್ಯಾಯವಾದಿಗಳು ಸೋನಿಯಾ ಮತ್ತು ರಾಹುಲ್ ಅವರಿಗೆ ಮುಂದಿನ ಬಾರಿಯಿಂದ ಖುದ್ದು ಹಾಜರಾತಿಗೆ ವಿನಾಯತಿ ಕೇಳಿದ್ದರು. ಆದರೆ ಕೋರ್ಟ್ ಅದನ್ನು ಪುರಸ್ಕರಿಸಲಿಲ್ಲ.’ ಎಂದು ಸ್ವಾಮಿ ವಿವರಿಸಿದ್ದಾರೆ.

ಶನಿವಾರ ಬೆಳಗ್ಗೆಯಿಂದಲೇ ಈ ಪ್ರಕರಣದ ಕಾವು ದೇಶವನ್ನು ಆವರಿಸಿಕೊಂಡಿತ್ತು. ಬೆಂಗಳೂರೂ ಸೇರಿದಂತೆ ಹಲವೆಡೆ ಕಾಂಗ್ರೆಸಿಗರು ಮೆರವಣಿಗೆಗಳನ್ನು ನಡೆಸಿ, ‘ಇದು ತಮ್ಮ ನಾಯಕರ ವಿರುದ್ಧ ಕೇಂದ್ರದ ದ್ವೇಷನೀತಿ’ ಎಂದು ಕೂಗೆಬ್ಬಿಸಿದರು. ರಾಷ್ಟ್ರೀಯ ವಾಹಿನಿಗಳು ಬೆಳಗಿನಿಂದ ಇದೊಂದೇ ವಿದ್ಯಮಾನದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದವು. ಟ್ವಿಟರ್ ನಲ್ಲಿ ಸಹ ‘ಸೋನಿಯಾ ರಾಹುಲ್ ಹಾಜಿರ್ ಹೊ’ ಎಂಬ ಸಂಗತಿ ದಿನದ ಅಗ್ರ ಟ್ರೆಂಡ್ ಆಗಿ ಕಾಣಿಸಿಕೊಂಡಿತು.

Leave a Reply