ತೆರೆಸಾ ಅವರಿಗೆ ಸಂತ ಪದವಿ ಕೊಡುವುದನ್ನು ದಾಭೋಲ್ಕರ್ ವಿರೋಧಿಸಿದ್ದರು ಗೊತ್ತಾ..?

 

ಚೈತನ್ಯ ಹೆಗಡೆ

ದಿವಂಗತ ಮದರ್ ತೆರೆಸಾ ಅವರಿಗೆ ಸಂತ ಪದವಿ ಸಿಗುವುದು ಬಹುತೇಕ ಖಾತ್ರಿಯಾಗಿದೆ.

ಈಗ ನಾವೆಲ್ಲ ಹತ್ಯೆಯಾದ ಮಹಾರಾಷ್ಟ್ರ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ನೆನಪಿಸಿಕೊಳ್ಳಬೇಕಿದೆ. ಏಕೆ ಗೊತ್ತಾ…?

ಪವಾಡಗಳ ಆಧಾರದಲ್ಲಿ ಮದರ್ ತೆರೆಸಾ ಅವರಿಗೆ ಸಂತ ಪದವಿ ಕೊಡುವುದನ್ನು ಪ್ರಖರವಾಗಿ ವಿರೋಧಿಸಿದ್ದವರಲ್ಲಿ ಧಾಬೋಲ್ಕರ್ ಪ್ರಮುಖರು. ದಾಭೋಲ್ಕರ್ ಅವರ ಸಂಘಟನೆ, ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ ತೆರೆಸಾ ಅವರಿಗೆ ಹೀಗೆ ಸಂತಪದವಿ ನೀಡುವ ಪ್ರಕ್ರಿಯೆ ಆರಂಭಿಸಿರುವುದನ್ನು ವಿರೋಧಿಸಿ ಪೋಪ್ ರಿಗೆ ಪತ್ರವನ್ನೂ ಬರೆದಿತ್ತು. ಹಾಗಂತ ಮದರ್ ತೆರೆಸಾ ಅವರು ಮಾನವತೆಗೆ ಸಲ್ಲಿಸಿರುವ ಸೇವೆಯ ಬಗ್ಗೆ ಗೌರವವನ್ನೇ ಹೊಂದಿತ್ತು ಈ ಸಂಸ್ಥೆ. ಆದರೆ ದಾಭೋಲ್ಕರ್ ಮತ್ತವರ ಸಂಸ್ಥೆಯ ಮೌಢ್ಯ ವಿರೋಧಿ ಚಟುವಟಿಕೆಗಳು, ಬಹುತೇಕರು ನಂಬಿಕೊಂಡುಬಿಟ್ಟಿರುವಂತೆ ಹಿಂದು ಸಂಪ್ರದಾಯಗಳ ವಿರುದ್ಧ ಮಾತ್ರ ಆಗಿರಲಿಲ್ಲ. ಅವರ ವಿಚಾರವಾದ ಇತರ ಮತಗಳ ಕಟ್ಟರ್ ವಾದಿಗಳಿಗೂ ಬಿಸಿ ಮುಟ್ಟಿಸಿತ್ತು.

ದಾಭೋಲ್ಕರ್ ಹತ್ಯೆಯಾಗಿ ಎರಡೂವರೆ ವರ್ಷಗಳೇ ಕಳೆದಿದ್ದರೂ ಅವರನ್ನು ಕೊಂದಿದ್ದು ಯಾರು ಎಂಬ ಬಗ್ಗೆ ನಿಖರ ಸುಳಿವುಗಳು ಸಿಕ್ಕುತ್ತಿಲ್ಲ. ಆದರೆ, ಒಟ್ಟಾರೆ ಸಾರ್ವಜನಿಕ ಸಂವಾದದಲ್ಲಿ ಕೇಳಿಬರುತ್ತಿರುವ ಧ್ವನಿಗಳು ಅದಾಗಲೇ ತೀರ್ಪನ್ನು ಬರೆದಂತಿವೆ. ‘ಹಿಂದೂ ಮೂಲಭೂತವಾದಿಗಳೇ ದಾಭೋಲ್ಕರ್, ಪನ್ಸಾರೆ ಇವರಂಥ ವಿಚಾರವಾದಿಗಳನ್ನು ಕೊಲೆ ಮಾಡಿದ್ದಾರೆ’ ಎಂಬ ಕೂಗು ಪ್ರಗತಿಪರರದ್ದು. ಅಷ್ಟೇ ಅಲ್ಲದೇ 2013ರಲ್ಲಿ ಮಹಾರಾಷ್ಟ್ರದಲ್ಲಾಗಲೀ, ಕೇಂದ್ರದಲ್ಲಾಗಲೀ ಬಿಜೆಪಿ ಅಧಿಕಾರದಲ್ಲಿ ಇರದಿದ್ದರೂ ಈಗಿನ ‘ಅಸಹಿಷ್ಣುತೆ ಚರ್ಚೆ’ಯಲ್ಲಿ ದಾಭೋಲ್ಕರ್ ಹತ್ಯೆ ಪ್ರಕರಣವನ್ನೂ ಸೇರಿಸಿಕೊಂಡು ಬಲಪಂಥವನ್ನಷ್ಟೇ ಅನುಮಾನಿಸುವ ಕಾರ್ಯ ಭರದಿಂದ ನಡೆದಿದೆ.

ಖಂಡಿತ ಮೂಲಭೂತವಾದಿ ಮನಸ್ಥಿತಿಗಳು ಎಲ್ಲ ಪಂಥಗಳಲ್ಲೂ ಇರುತ್ತವೆ. ಹಿಂದುತ್ವದ ನಶೆ ಏರಿಸಿಕೊಂಡವರಷ್ಟೇ ಅಲ್ಲ, ಯಾವ ಸಿದ್ಧಾಂತದ ಪಂಥಕ್ಕೂ ನಿಲುಕದ, ನಿಧಿಯಾಸೆಗೆ ಮಾಟ-ಮಂತ್ರ- ಬಲಿಯಲ್ಲಿ ತೊಡಗಿಸಿಕೊಂಡಿದ್ದವರೂ ದಾಭೋಲ್ಕರ್ ಹತ್ಯೆ ಮಾಡಿದ್ದಿರಬಹುದು. ಏಕೆಂದರೆ ದಾಭೋಲ್ಕರ್ ಇಂಥ ಎಲ್ಲ ಪದ್ಧತಿಗಳ ವಿರುದ್ಧವೂ ಸಮರ ಸಾರಿದ್ದರು. ಆದರೆ ಹೀಗೆಲ್ಲ ಸಾಧ್ಯತೆಗಳನ್ನು ಹರವಿಡುವಾಗ, ಕ್ರೈಸ್ತ ಮೂಲಭೂತವಾದಿಗಳೂ ದಾಭೋಲ್ಕರ್ ಹತ್ಯೆ ಮಾಡಿದ್ದಿರಬಹುದಾದ ಸಾಧ್ಯತೆಯನ್ನು ಅದೇಕೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ?

ತೆರೆಸಾರಿಗೆ ಪವಾಡಗಳ ಆಧಾರದಲ್ಲಿ ಸಂತ ಪದವಿ ಕೊಡುವ ಪ್ರಕ್ರಿಯೆ ಶುರುವಾಗಲಿದೆ ಎಂಬ ಸುದ್ದಿಗಳಿನ್ನೂ ಶುರುವಾಗುವ ಹಂತದಲ್ಲೇ, 1999ರ ಸುಮಾರಿಗೆ ದಾಭೋಲ್ಕರರ ಸಂಘಟನೆ ಇದನ್ನು ಪ್ರಶ್ನಿಸಿತ್ತು ಎಂಬುದು ವಿಶ್ಲೇಷಣಾಕಾರರ ಗಮನದಲ್ಲಿರಬೇಕಾಗುತ್ತದೆ. ಬಹುಶಃ ಈಗ ಅವರಿದ್ದರೆ ಮುಂಚೂಣಿಯಲ್ಲಿ ನಿಂತು ಪ್ರತಿರೋಧ ತೋರುತ್ತಿದ್ದರೇನೋ? ನಮ್ಮಲ್ಲಿ ಮಾಟ-ಮಂತ್ರ- ಮೌಢ್ಯಗಳು ಪ್ರಾದೇಶಿಕವಾಗಿ ಹೇಗೆ ಪ್ರಾಬಲ್ಯ ಹೊಂದಿವೆಯೋ ಅದಕ್ಕಿಂತ ಹೆಚ್ಚಿನ ತಾಕತ್ತು ಜಾಗತಿಕವಾಗಿ ಕ್ರೈಸ್ತ ಲಾಬಿಗೆ ಇದೆ ಎಂಬಂಶ ಯಾರೂ ಒಪ್ಪಿಕೊಳ್ಳಬಹುದಾದಂಥದ್ದು. ಹೀಗಿರುವಾಗ, ವಿಚಾರವಾದಿಗಳ ಹತ್ಯೆ ಪ್ರಕರಣದ ಕುರಿತ ಈವರೆಗಿನ ಅಭಿಪ್ರಾಯ ಮಂಡನೆಗಳಲ್ಲಿ ಯಾರೊಬ್ಬರೂ ಇಲ್ಲಿ ಕ್ರೈಸ್ತ ಮೂಲಭೂತವಾದಿಗಳ ಕೈವಾಡದ ಸಾಧ್ಯತೆಯನ್ನು ಪರಿಶೀಲಿಸಲೇ ಇಲ್ಲ. ‘ನ್ಯೂಸ್ ಲಾಂಡ್ರಿ’ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘ ಲೇಖನ ಬರೆದ ಆನಂದ ರಂಗನಾಥನ್ ಅವರ ಹೊರತಾಗಿ.

ಇಷ್ಟೇ ಅಲ್ಲ. ಕ್ರೈಸ್ತ ಮತದ ಕಟ್ಟರ್ ವಾದಿಗಳ ಪ್ರತಿರೋಧ ಮತ್ತು ಧರ್ಮನಿಂದೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸನಲ್ ಎಡಮರಕು ಎಂಬ ವಿಚಾರವಾದಿ 2012ರಿಂದ ಫಿನ್ಲೆಂಡ್ ನಲ್ಲಿ ವಾಸಿಸುತ್ತಿದ್ದಾರೆ. ಮುಂಬೈನಲ್ಲಿ 2012ರಲ್ಲಿ ಜೀಸಸ್ ಪ್ರತಿಮೆಯ ಕಾಲಿನಿಂದ ಪವಿತ್ರ ಜಲ ಬರುತ್ತಿದೆ ಎಂಬ ವಿದ್ಯಮಾನ ತೆರೆದುಕೊಂಡಿತು. ಎಲ್ಲರೂ ಅದನ್ನು ಪವಾಡವೆಂದು ಪ್ರತಿಪಾದಿಸುತ್ತಿದ್ದಾಗ, ಪ್ರತಿಮೆಯನ್ನು ಪರೀಕ್ಷೆಗೆ ಒಳಪಡಿಸಿದ ಎಡಮರಕು ಅವರು ಇಲ್ಲಿ ಯಾವ ದೈವ ಪವಾಡವೂ ಇಲ್ಲ ಎಂದು ಅದರ ರಾಸಾಯನಿಕ ಪ್ರಕ್ರಿಯೆಯನ್ನು ವಿವರಿಸಿದರು. ಇದನ್ನೇ ಟಿವಿ ವಾಹಿನಿಗಳಲ್ಲಿ ಕುಳಿತು ಪ್ರತಿಪಾದಿಸುತ್ತಿದ್ದಾಗ ಮಾರಕಾಸ್ತ್ರಗಳನ್ನು ಹಿಡಿದು ಕಚೇರಿ ಎದುರು ಕೆಲವರು ಗುಂಪುಗೂಡಿದರು. ಕ್ಯಾಥೊಲಿಕ್ ಸೆಕ್ಯುಲರ್ ಫೋರಂ ಇವರ ವಿರುದ್ಧ ಧರ್ಮನಿಂದೆ ಕೇಸು ಹಾಕಿತು. ಎಡಮರಕು ಅವರಿಗೆ ನಿರೀಕ್ಷಣಾ ಜಾಮೀನು ಸಿಗಲೇ ಇಲ್ಲ. ಕೊಲ್ಲಲೆಂದೇ ಕಾದಿರುವವರು ಮತ್ತು ಕಾನೂನು ಸಮರ ಇವೆರಡನ್ನೂ ನಿಭಾಯಿಸಲಾಗದೇ ಎಡಮರಕು ದೇಶಾಂತರ ಹೋಗಬೇಕಾಯಿತು.

ಇಂಥ ಎಡಮರಕು ಅವರನ್ನು ಮತ್ತೆ ದೇಶಕ್ಕೆ ಕರೆತರಬೇಕೆಂಬ ಅಭಿಪ್ರಾಯ ರೂಪಿಸುವುದರಲ್ಲಿ ದಾಭೋಲ್ಕರ್ ಮುಂಚೂಣಿಯಲ್ಲಿದ್ದರು. ಅಲ್ಲದೇ ಎಡಮರಕು ಸಹ ಮದರ್ ತೆರೆಸಾ ಅವರ ಟೀಕಾಕಾರರಾಗಿದ್ದರು.

ಈಗ ಹೇಳಿ. ಮದರ್ ತೆರೆಸಾಗಿ ಸಂತ ಪದವಿ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ದಾಭೋಲ್ಕರ್ ಅವರ ನಿಲುವನ್ನು ಸ್ಮರಿಸಿಕೊಂಡಾಗ, ಒಟ್ಟಾರೆ ವಿಚಾರವಾದಿಗಳ ಹತ್ಯೆಗೆ ಇನ್ನೊಂದು ಅನುಮಾನದ ಆಯಾಮವೂ ಸಾಧ್ಯ ಅಂತನಿಸುವುದಿಲ್ಲವಾ?

1 COMMENT

  1. ಅಬ್ಬೋ…ಎಂಥ ವಿಶ್ಲೇಷಣೆ ಮಾರ್ರೆ. ಇಂತದೆಲ್ಲಾ ಹತ್ತು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಬರೆದಿದ್ರೆ, ಜನ ಉಘೇ-ಉಘೇ ಅಂತಿದ್ರು. ನೀವಿನ್ನೂ ಆ ಹ್ಯಾಂಗೋವರ್ನಿಂದ ಹೊರಬಂದ ಹಾಗಿಲ್ಲ. ಸ್ವಾಮಿ, ಇದು ಆನ್ಲೈನ್ ಮೀಡಿಯಾ. ಇಲ್ಲಿ ಓದುವವರು, ನಿಮ್ಮ ತರದ ಸಾವಿರಾರು ಪೋರ್ಟಲ್ಗಳನ್ನು ಪ್ರತಿದಿನ ತಡಕಾಡುತ್ತಾರೆ. ನಿಮಗಿಂತ ಹೆಚ್ಚು ಮಾಹಿತಿ ಇಟ್ಟುಕೊಂಡಿರುತ್ತಾರೆ.
    ನೀವು ಸಂಘಪರಿವಾರದ ಅಜೆಂಡಾವನ್ನು ಹರಡಲು ನಿಮ್ಮ ಪ್ರತಿಭೆ, ಬರವಣಿಗೆ ಬಳಸುತ್ತೀರಿ ಅಂತಾದರೆ, ಅದನ್ನು ಹೇಳಿಕೊಳ್ಳಿ. ಪಿ. ತ್ಯಾಗರಾಜ್ ಅಂತಹ ಹಿರಿಯ ಪತ್ರಕರ್ತರ ಜತೆ ಇರುವಾಗ ಅವೆಲ್ಲಾ ಮೂಟೆ ಕಟ್ಟಿಡಿ. ಇಲ್ಲದಿದ್ದರೆ, ನಿಮ್ಮಂದಾಗಿ ಅವರ ಇಮೇಜ್ ಕೂಡ ಹಾಳಾಗುತ್ತೆ..

    ಅಂದಾಗೆ, ಇದೊಂದು ಒಳ್ಳೆಯ ಪ್ರಯತ್ನ. ಅಜೆಂಡಾ ಪಕ್ಕಕ್ಕಿಟ್ಟು, ಪತ್ರಿಕೋದ್ಯಮ ಮಾಡಿ ಸಾಕು..

Leave a Reply