ಪ್ರಚಾರಕ್ಕೆ ಸೀಮಿತವಾದ ಯೋಜನೆಗಳು, ತಮ್ಮದಲ್ಲದ ತಪ್ಪಿಗೆ ಸಾಯುತ್ತಿವೆ ಆನೆಗಳು!

ಎಚ್ ಡಿ ಕೋಟೆ ಬೊಮ್ಮಲಾಪುರದಲ್ಲಿ ಹಂತಕರ ಗುಂಡಿಗೆ ಬಲಿಯಾಗಿರುವ ಆನೆ

ಡಿಜಿಟಲ್ ಕನ್ನಡ ಟೀಮ್

ಸರಕಾರದ ಯೋಜನೆಗಳು ಬರೀ ಪ್ರಚಾರಕ್ಕೆ ಮಾತ್ರ ಸೀಮಿತವಾದರೆ ಎಂಥ ಅನಾಹುತಗಳು ಆಗುತ್ತವೆ ಎಂಬುದಕ್ಕೆ ಮೈಸೂರಿನ ಎಚ್.ಡಿ. ಕೋಟೆಯಲ್ಲಿ ಕೇವಲ ಹದಿನೈದು ದಿನದೊಳಗೆ ಮೂರು ಆನೆಗಳು ಬಲಿ ಆಗಿರುವುದು ಸಾಕ್ಷಿ.

ಆಹಾರ ಅರಸಿ ಕಾಡಂಚಿಗೆ ಬಂದ ಹನ್ನೆರಡು ಹಾಗೂ ಒಂಬತ್ತು ವರ್ಷದ ಗಂಡಾನೆ ಬಂಡೀಪುರ ಅರಣ್ಯವಲಯದ ಹಾದನೂರು ಗ್ರಾಮ ಸಮೀಪ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರೆ, ಬೊಮ್ಮಲಾಪುರದಲ್ಲಿ ಗುಂಡಿಕ್ಕಿ ಇಪ್ಪತ್ತೈದು ವರ್ಷದ ಆನೆಯನ್ನು ಕೊಲ್ಲಲಾಗಿದೆ. ಇದು ಹದಿನೈದು ದಿನದ ಮಾತು. ಈ ವರ್ಷ ಕರ್ನಾಟಕದಲ್ಲಿ ಒಟ್ಟು 16 ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, 2 ಆನೆಗಳು ಗುಂಡಿಗೆ ಬಲಿಯಾಗಿವೆ. ಇಂಥ ಪ್ರಕರಣಗಳು ಮೇಲಿಂದ ಮೇಲೆ ಮರುಕಳಿಸುತ್ತಿದ್ದು, ತಾನೇ ಹಾಕಿಕೊಂಡ ಯೋಜನೆಗಳಿಂದ ಸರಕಾರ ವಿಮುಖ ಆಗಿರುವುದೇ ಇದಕ್ಕೆ ಕಾರಣ.

ಆಹಾರ ಕೊರತೆಯಿಂದ ಆನೆಗಳು ಕಾಡಂಚಿನ ಜಮೀನುಗಳಿಗೆ ನುಗ್ಗುವುದು ಸಾಮಾನ್ಯ. ಇದನ್ನು ತಡೆಯಲು ಸರಕಾರ ಕಾಡಿನ ಸುತ್ತ ಆಳ ಕಂದಕಗಳನ್ನು ತೋಡುವ ಯೋಜನೆಯನ್ನು ಅದೆಷ್ಟು ಬಾರಿ ಕೈಗೆತ್ತಿಕೊಂಡಿದೆ ಎಂಬುದು ಅದಕ್ಕೇ ಮರೆತು ಹೋಗಿದೆ. ಒಂದೇ ಯೋಜನೆ ಹಲವಾರು ಬಾರಿ ಚಾಲ್ತಿಗೆ ಬರುತ್ತದೆ ಅಂದರೆ ಅದು ಮುಗಿದಿಲ್ಲ, ಮುಗಿಯುವುದಿಲ್ಲ ಅಂತಲೇ ಅರ್ಥ. ಎಲ್ಲಕ್ಕಿಂತ ಮಿಗಿಲಾಗಿ ಹಳ್ಳಿ ಜನ ಕಾಡಿಂದ ಉರುವಲು ತರಲು ಕಂದಕಗಳಿಗೆ ಅಲ್ಲಲ್ಲಿ ಮರಗಳನ್ನು ಅಡ್ಡಲಾಗಿಟ್ಟು ಮಾಡಿದ ದಾರಿಗಳು ಆನೆಗಳಿಗೂ ರಾಜಮಾರ್ಗವಾಗಿ ಪರಿಣಮಿಸಿವೆ. ಈ ಅಡ್ಡದಾರಿ ನಿಯಂತ್ರಣ ಕೆಲಸಕ್ಕೆ ಅರಣ್ಯ ಇಲಾಖೆ ನಿಗಾ ಸಾಲುತ್ತಿಲ್ಲ.

ವರ್ಷದ ಹಿಂದೆ ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ರೈಲು ಹಳಿಗಳನ್ನು ಬೇಲಿ ಸ್ವರೂಪದಲ್ಲಿ ಅಳವಡಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ಕೊಟ್ಟರು. ಪ್ರಚಾರವೂ ಆಯಿತು. ಯೋಜನೆ ಅಲ್ಲಿಗೆ ಮುಗಿಯಿತು. ನಾಮ್-ಕೆ-ವಾಸ್ತೆಗೆ ಕೆಲ ಕಿ.ಮೀ. ಅಳವಡಿಸಿ ಕೈ ತೊಳೆದುಕೊಳ್ಳಲಾಯಿತು.

ಈಗ ಆನೆಗಳು ಯಥಾಪ್ರಕಾರ ಆಹಾರ ಆರಸಿ ಕಾಡಿನ ಅಕ್ಕಪಕ್ಕದ ಜಮೀನುಗಳಿಗೆ ದಾಳಿ ಇಡುತ್ತವೆ. ರೈತರು ಹಾರಿಸುವ ಗುಂಡಿಗೋ, ಬೇಲಿಗೆ ಅಳವಡಿಸಿರುವ ವಿದ್ಯುತ್ ತಂತಿಗೋ ತಗುಲಿಕೊಂಡು ಸಾಯುತ್ತಿವೆ.

ಹಾಗೆ ನೋಡಿದರೆ ಬೇಲಿಗೆ ಸೋಲಾರ್ ವಿದ್ಯುತ್ ತಂತಿಗಳನ್ನು ಅಳವಡಿಸಬೇಕು ಎಂಬುದು ನಿಯಮ. ಆದರೆ ಬಹುತೇಕ ರೈತರು ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಅವಲಂಬಿಸಿದ್ದಾರೆ. ಇಂಥ ಸಂಪರ್ಕದಿಂದ  ಹೆಚ್ಚು ವೋಲ್ಟೇಜ್ ವಿದ್ಯುತ್ ಪ್ರವಹಿಸಿ ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗುತ್ತಿದೆ. ಈ ಅಕ್ರಮ ವಿದ್ಯುತ್ ಸಂಪರ್ಕಗಳ ತೆರವು ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಲ್ಲದೇ, ಪರವಾನಗಿ ಇಲ್ಲದೇ ಬಂದೂಕುಗಳನ್ನು ಹೊಂದಿರುವವರ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ. ಹೀಗಾಗಿ ಬೇಕಿದ್ದವರು, ಬೇಡದಿದ್ದವರ ಬಳಿಯೆಲ್ಲ ಬಂದೂಕುಗಳಿವೆ. ಬೊಮ್ಮಲಾಪುರದಲ್ಲಿ ಆನೆಯನ್ನು ಗುಂಡಿಕ್ಕಿ ಕೊಂದವರನ್ನು ಮೂರು ದಿನ ಕಳೆದರೂ ಪತ್ತೆ ಹಚ್ಚಲಾಗಿಲ್ಲ. ಹೀಗೆ ವ್ಯವಸ್ಥೆಯಲ್ಲಿನ ಸಾಲು, ಸಾಲು ಲೋಪಗಳು ಅಮಾಯಕ ಆನೆಗಳ ಪ್ರಾಣ ಹರಣ ಮಾಡುತ್ತಿವೆ.

Leave a Reply