
ಎರಡು ತಿಂಗಳ ಹಿಂದೆ ಪಾಕಿಸ್ತಾನದಿಂದ ತನ್ನ ಕುಟುಂಬವನ್ನು ಹುಡುಕಿಕೊಂಡು ಗೀತಾ ಭಾರತಕ್ಕೆ ಬಂದಾಗ ಭಾರೀ ಸುದ್ದಿಯಾಗಿತ್ತು. ಉಭಯ ದೇಶಗಳ ನಡುವಿನ ಸಾಮರಸ್ಯದ ಕತೆಯಾಗಿಯೂ ಇದನ್ನು ನೋಡಲಾಗಿತ್ತು.
ಆದರೆ ಹಾಗೆ ಭಾರತಕ್ಕೆ ಆಗಮಿಸಿದ ಗೀತಾರಿಗೆ ಇಲ್ಲಿಯವರೆಗೂ ತನ್ನ ನಿಜವಾದ ಪೋಷಕರು ಸಿಕ್ಕಿಲ್ಲ. ಪ್ರಾರಂಭದಲ್ಲಿ ಗೀತಾ ತಮ್ಮ ಮಗಳೇ ಎಂದು ಮುಂದೆ ಬಂದಿದ್ದ ಕುಟುಂಬದ ವಂಶವಾಹಿ ಪರೀಕ್ಷಿಸಿದಾಗ ಸರಿಹೊಂದಲಿಲ್ಲ. ಈಗ ಮತ್ತೊಮ್ಮೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗೀತಾಳ ಕುಟುಂಬವನ್ನು ಹುಡುಕಲು ಪ್ರಾರಂಭಿಸಿದೆ.
ಬಿಹಾರದಲ್ಲಿ ತನ್ನ ಕುಟುಂಬ ತನ್ನನ್ನು ಸ್ವಾಗತಿಸಲು ಕಾಯುತ್ತಿದೆ ಎಂದು ಅಕ್ಟೋಬರ್ 26 ರಂದು ಪಾಕಿಸ್ತಾನದಿಂದ ಬಂದ ಗೀತಾಗೆ ತನ್ನ 13 ನೇ ವಯಸ್ಸಿನಲ್ಲಿ ಬೇರ್ಪಟ್ಟ ಕುಟುಂಬನ್ನು ಕಂಡು ಕೆಂಡು ಹಿಡಿಯಲು ತುಂಬ ಕಷ್ಟವಾಗುತ್ತಿದೆ.ಆಕೆಯ ಇತ್ತೀಚಿನ ಭಾವಚಿತ್ರವನ್ನು ಹಲವು ಬಾರಿ ಪ್ರಕಟಿಸಿದರು ಸಹ ಕುಟುಂಬವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಗೀತಾಳಿಗೆ ಶ್ರವಣ ಮತ್ತು ಮಾತಿನ ಸಮಸ್ಯೆಯೂ ಇದೆ.
ಭಾರತಕ್ಕೆ ಬರುವವರೆಗೆ ಗೀತಾಳನ್ನು ಸಲಹಿದ್ದ ಪಾಕಿಸ್ತಾನದ ಕರಾಚಿಯ ಈದಿ ಫೌಂಡೇಶನ್ ನವರನ್ನು ಸಂಪರ್ಕಿಸಿ ಗೀತಾಳ ಬಾಲ್ಯದ ಫೋಟೋಗಳಿದ್ದರೆ ನೀಡುವಂತೆ ಮನವಿ ಮಾಡಲಾಗಿದೆ. ಈ ಪ್ರಯತ್ನದಲ್ಲಾದರೂ ಸುಳಿವು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.