ಗೂಗಲ್ ನ ಪಿಚೈ ಹೇಳಿಹೋದ ಸುಂದರ ಸತ್ಯ, ಪ್ರಾದೇಶಿಕ ಭಾಷೆಗಳಲ್ಲಿದೆ ಅಂತರ್ಜಾಲದ ಭವಿಷ್ಯ!

ಡಿಜಿಟಲ್ ಕನ್ನಡ ಟೀಮ್

ಕಳೆದ ವಾರ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಭಾರತಕ್ಕೆ ಭೇಟಿ ನೀಡಿದ್ದರು. ದೇಶದಲ್ಲಿ ಗೂಗಲ್ ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಕಂಪನಿಗಳು, ಅಧಿಕಾರಿಗಳು, ಆಡಳಿತ ವರ್ಗಗಳ ಜತೆ ಸಮಾಲೋಚನೆ ಅವರ ಕಾರ್ಯಸೂಚಿಯಾಗಿತ್ತು. ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು- ಯುವ ಸಮೂಹದೊಂದಿಗೆ ಸಂವಾದದಲ್ಲೂ ತೊಡಗಿಸಿಕೊಂಡರು.

ಪಿಚೈ ತಮ್ಮ ಒಟ್ಟಾರೆ ಪ್ರವಾಸದಲ್ಲಿ ಹೊರಗೆಡವಿದ ಮುಖ್ಯ ಅಂಶ ಯಾವುದು ಅಂತ ನಾವು ಅವಲೋಕಿಸಿದರೆ ಅಲ್ಲಿ ನಮಗೆಲ್ಲ ಖುಷಿಯಾಗುವ ಸಂಗತಿಯೊಂದು ಗೋಚರಿಸುತ್ತದೆ. ಅದುವೇ ಗೂಗಲ್ ನಂಥ ದೈತ್ಯ ಕಂಪನಿ ಪ್ರಾದೇಶಿಕತೆಗೆ ನೀಡುತ್ತಿರುವ ಒತ್ತು!

ಪ್ರೊಜೆಕ್ಟ್ ಲೂನ್, ರೈಲು ನಿಲ್ದಾಣಗಳಲ್ಲಿ ವೈ-ಫೈ ಪೂರೈಕೆ ಇವುಗಳ ಕುರಿತೆಲ್ಲ ನಾವು ಈ ಹಿಂದೆ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ಮಾಡಿದ ಸಂದರ್ಭದಲ್ಲೇ ತಿಳಿದುಕೊಂಡಿದ್ದೆವು. ಅವನ್ನೆಲ್ಲ ಪಿಚೈ ತಮ್ಮ ಭಾರತ ಭೇಟಿಯಲ್ಲಿ ಮತ್ತೆ ಪ್ರಸ್ತಾಪಿಸಿದ್ದಾರೆ. ಇವುಗಳ ಹೊರತಾಗಿಯೂ ನಾವು ಕೌತುಕಪಡಬೇಕಾದ ಕೆಲ ಸಂಗತಿಗಳು ಇಲ್ಲಿವೆ.

  • ಗೂಗಲ್ ಅನುವಾದ ಸಲಕರಣೆ, ಪ್ರಾದೇಶಿಕ ಭಾಷೆಗಳಿಗೆ ಒತ್ತು: ಗೂಗಲ್ ನ ಆ್ಯಂಡ್ರಾಯ್ಡ್ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಇನ್ನು ಕೆಲವೇ ದಿನಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಇದನ್ನು ಪ್ರಸ್ತಾಪಿಸುತ್ತ ಪಿಚೈ ಹೇಳಿದ್ದು- ‘ನಾವು ಭಾರತದ ಅಂತರ್ಜಾಲ ಬಳಕೆಯನ್ನು ಗಮನಿಸಿದಾಗ ಅದು ಹಲವು ಭಾಷೆಗಳಲ್ಲಿ ಹರಿದು ಹೋಗಿರುವುದು ಕಂಡುಬಂದಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಉಪಯೋಗಿಸುವವರು ಭಾರತದ ಬೇರೆ ಬೇರೆ ಭಾಷೆಗಳನ್ನು ಉಪಯೋಗಿಸುತ್ತಿದ್ದಾರೆ. ನಾವು ಈಗಾಗಲೇ ನಮ್ಮ ತಂತ್ರಜ್ಞಾನದಲ್ಲಿ ಭಾರತೀಯ ಭಾಷೆಗಳ ಬಳಕೆಗೆ ಒತ್ತು ಕೊಟ್ಟಿದ್ದೇವೆ. ಪ್ರಾದೇಶಿಕ ಭಾಷೆಗಳಿಗೆ ಸಹಕರಿಸುವ ಕೀಲಿಮಣೆ, ಅನುವಾದ ಈ ಸಂಬಂಧ ಅದಾಗಲೇ 12 ಭಾಷೆಗಳಲ್ಲಿ ನಮ್ಮ ಸೇವೆ ಇದೆ. ಭವಿಷ್ಯದಲ್ಲಿ ಇದನ್ನು ಇನ್ನೂ ಉತ್ತಮಪಡಿಸಲಾಗುವುದು.’

ಪಿಚೈ ಅವರ ಈ ಹೇಳಿಕೆ ಗಮನಿಸಿದರೆ, ಅಂತರ್ಜಾಲದ ಮುಂದಿನ ದೊಡ್ಡ ಬೆಳವಣಿಗೆ ಪ್ರಾದೇಶಿಕ ಭಾಷೆಗಳಲ್ಲಿ ಆಗಲಿದೆ ಎಂಬುದು ಸ್ಪಷ್ಟವಾಗಿದೆ. ಅಂತರ್ಜಾಲ ವಹಿವಾಟಿನಲ್ಲಿರುವ ಕಂಪನಿಗಳೂ ಇದನ್ನು ಅರ್ಥಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲೇ ಸ್ನ್ಯಾಪ್ ಡೀಲ್ ಕನ್ನಡದಲ್ಲೇ ಸೇವೆ ನೀಡುವ ನಿರ್ಧಾರ ಪ್ರಕಟಿಸಿರುವುದರ ನಡೆಯನ್ನು ‘ಡಿಜಿಟಲ್ ಕನ್ನಡ’ ಈ ಲೇಖನದಲ್ಲಿ ವಿಶ್ಲೇಷಿಸಿತ್ತು.

  • ಭಾರತದ ಸ್ಥಳೀಯ ಜಾಯಮಾನಕ್ಕೆ ಒಗ್ಗಿಕೊಳ್ಳುವಂತೆ ಆ್ಯಂಡ್ರಾಯ್ಡ್ ಕಿರು ತಂತ್ರಜ್ಞಾನ (ಆ್ಯಪ್)ಗಳ ತಯಾರಿಕೆಗೆ ಗೂಗಲ್ ಒತ್ತು ನೀಡಲಿದೆ ಎಂಬುದು ಪಿಚೈ ಪ್ರಸ್ತಾಪಿಸಿರುವ ಇನ್ನೊಂದು ಪ್ರಮುಖ ವಿಷಯ. ಇದಕ್ಕಾಗಿ ಭಾರತ ಸರ್ಕಾರದ ಕೌಶಲ ಅಭಿವೃದ್ಧಿ ಇಲಾಖೆ ಜತೆ ಕೈಜೋಡಿಸಿ, ಸ್ಥಳೀಯವಾಗಿ ಆ್ಯಂಡ್ರಾಯ್ಡ್ ಕಿರು ತಂತ್ರಜ್ಞಾನ ಅಭಿವೃದ್ಧಿಕಾರರನ್ನು ಬೆಳೆಸಲಾಗುತ್ತೆ ಅಂತ ಹೇಳಿದ್ದಾರೆ. ಖಂಡಿತವಾಗಿಯೂ ಇದು ಭಾರತದ ಪ್ರಾದೇಶಿಕ ವೈವಿಧ್ಯಕ್ಕೆ ಶಕ್ತಿ ತುಂಬುವ, ಅವಕ್ಕೆ ಮಾರುಕಟ್ಟೆ ಬಲವನ್ನು ತಂದುಕೊಡಲಿರುವ ನಡೆಯಾಗಲಿದೆ.

ಇದರ ಮುಂದಿನ ನಡೆಗಳ ಬಗ್ಗೆ ಪಿಚೈ ಮಾತಿನಲ್ಲಿ ವ್ಯಕ್ತವಾಗಿರುವ ಸೂಚನೆಗಳನ್ನು ಗಮನಿಸಬೇಕು. ಅವರು ಹೇಳುವಂತೆ, ಪ್ರಸ್ತುತ ಆ್ಯಂಡ್ರಾಯ್ಡ್ ಕಿರು ತಂತ್ರಜ್ಞಾನಗಳಿಗೆ ಡೊನಟ್, ಜೆಲ್ಲಿಬೀನ್, ಸ್ಯಾಂಡ್ ವಿಚ್, ಲಾಲಿಪಾಪ್ ಅಂತೆಲ್ಲ ಹೆಸರುಗಳಿವೆ. ಭಾರತದಲ್ಲಿ ಆ್ಯಂಡ್ರಾಯ್ಡ್ ಕಿರು ತಂತ್ರಜ್ಞಾನಗಳು ಲಭ್ಯವಾದಾಗ ಅವುಗಳ ಹೆಸರು ಪೇಡಾ, ಪಾಯಸ ಅಂತ ಏಕಿರಬಾರದು ಅಂತ ಕೇಳುವ ಮೂಲಕ ಪಿಚೈ ತಾಯ್ನುಡಿ ಮನಸುಗಳಿಗೆ ಲಗ್ಗೆ ಹಾಕಿದ್ದಾರೆ. ಇವಕ್ಕೆಲ್ಲ ಪೂರಕವಾಗಿ ಹೈದರಾಬಾದ್ ನಲ್ಲಿ ನೂತನ ಗೂಗಲ್ ಕ್ಯಾಂಪಸ್ ಸ್ಥಾಪಿಸುವುದಾಗಿ ಹೇಳಿರುವುದು ಉದ್ಯೋಗ ಮಾರುಕಟ್ಟೆಗೆ ಸಂತಸದ ಸಂಗತಿ.

ಇವನ್ನೆಲ್ಲ ಗಮನಿಸಿದಾಗ, ಜಗತ್ತಿನ ದೈತ್ಯ ಕಂಪನಿ ಹೈದರಾಬಾದ್ ನ ಪ್ರತಿಭಾವಂತನೊಬ್ಬನನ್ನು ಮುಖ್ಯಸ್ಥ ಹುದ್ದೆಯಲ್ಲಿ ಕೂರಿಸಿರುವುದು ತುಂಬ ಯೋಜನಾಬದ್ಧ ನಡೆಯೇ ಇರಬಹುದೇನೋ ಎಂದೆನಿಸುತ್ತದೆ. ಇಂಟರ್ನೆಟ್ ನ ನೆಕ್ಸ್ಟ್ ಬಿಗ್ ಥಿಂಗ್ ಅಂತಿರೋದು ಪ್ರಾದೇಶಿಕ ಭಾಷೆಗಳಲ್ಲಿ ಅಂತ ಹಲವರು ಹೇಳುತ್ತ ಬಂದಿದ್ದಾರೆ. ಸುಂದರ್ ಪಿಚೈ ಮಾತುಗಳು ಹಾಗೂ ಭಾರತದಲ್ಲಿ ಗೂಗಲ್ ನ ನಡೆ ಇವನ್ನೆಲ್ಲ ಗಮನಿಸಿದಾಗ ಅಂತರ್ಜಾಲದ ಮುಂದಿನ ಯುಗ ತೆರೆದುಕೊಳ್ಳೋದೇನಿದ್ರೂ ಪ್ರಾದೇಶಿಕ ಭಾಷೆಗಳಲ್ಲಿ ಎಂಬುದರ ಬಗ್ಗೆ ಅನುಮಾನ ಬೇಡ ಎನಿಸುತ್ತದೆ.

1 COMMENT

Leave a Reply