ಡಿಜಿಟಲ್ ಧೀರರಿಗೆ ನಮಸ್ಕಾರ!

ಯುವರ್ ಸ್ಟೋರಿಯ ಶ್ರದ್ಧಾ ಶರ್ಮ

ಸೌಮ್ಯ ಸಂದೇಶ್

ಡಿಜಿಟಲ್ ಮಾಧ್ಯಮ ಎಂಬುದು ತನ್ನದೇ ಜಾಯಮಾನವೊಂದನ್ನು ಹೊಂದಿರುವುದು ಸ್ಪಷ್ಟ. ಅದು ಪೀಳಿಗೆಯೊಂದನ್ನು ಪ್ರತಿನಿಧಿಸುತ್ತದೆ. ಈ ಡಿಜಿಟಲ್ ಪೀಳಿಗೆಯ ಮಿಡಿತ ಅರ್ಥ ಮಾಡಿಕೊಂಡವ ಆ ಯುಗಕ್ಕೆ ಪ್ರಸ್ತುತನಾಗುತ್ತಾನೆ. ಅಂದರೆ, ಈಗ ಮುದ್ರಣದಲ್ಲಿರುವುದನ್ನೋ, ವಿದ್ಯುನ್ಮಾನದಲ್ಲಿರುವ ಸರಕನ್ನೋ ಇಂಟರ್ನೆಟ್ ನಲ್ಲೂ ಇಟ್ಟ ಮಾತ್ರಕ್ಕೆ ಡಿಜಿಟಲ್ ಆಗಿಬಿಡುವುದು ಸಾಧ್ಯವಿಲ್ಲ.

ಬಹುಶಃ ಈ ಕಾರಣಕ್ಕಾಗಿಯೇ ಇಂದು ವೆಬ್ ಸೈಟ್, ಯೂಟ್ಯೂಬ್ ಗಳಲ್ಲಿ ಬೇರೆಯದೇ ಆದ ಉತ್ಪನ್ನ ನಿರ್ಮಾಪಕರು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಎಷ್ಟೊಂದು ಪತ್ರಿಕೆಗಳು, ಎಷ್ಟೆಲ್ಲ ಟಿವಿ ಚಾನೆಲ್ ಗಳು ಅಂತರ್ಜಾಲದಲ್ಲೂ ತಮ್ಮ ಉಪಸ್ಥಿತಿ ಹೊಂದಿವೆ. ಅವರೆಲ್ಲರ ಮಧ್ಯದಲ್ಲೂ ಡಿಜಿಟಲ್ ಮಾತ್ರವೇ ಆಗಿರುವ, ಡಿಜಿಟಲ್ ಯುಗದ ಹಸಿವಿಗೆಂದೇ ಕಂಟೆಂಟ್ ಸೃಷ್ಟಿಸಿದಂತಿರುವ ಹಲವು ಮೊದಲಿಗರ, ಪ್ರತಿಭಾವಂತರ ಗುಂಪು ತನ್ನದೊಂದು ಐಡೆಂಟಿಟಿ ಕಂಡುಕೊಂಡಿದೆ. ಮಾಹಿತಿ- ಮನರಂಜನೆಯ ಡಿಜಿಟಲ್ ಯುಗದ ವಕ್ತಾರರಲ್ಲಿ ಮುಂದಿರುವವರು ಇವರೇ. ಅಂಥ ಕೆಲವರ ಪರಿಶ್ರಮ- ಆಲೋಚನೆಗಳನ್ನು ಸಂಭ್ರಮಿಸೋಣ ಬನ್ನಿ.

ಯುವರ್ ಸ್ಟೋರಿಯ ಶ್ರದ್ಧಾ ಶರ್ಮ

ಆಂಗ್ಲ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವದೊಂದಿಗೆ yourstory.com ಎಂಬ ಜಾಲತಾಣವನ್ನು 2008ರಲ್ಲಿ ಪ್ರಾರಂಭಿಸಿದಾಗ ಅದರ ಯಶಸ್ಸಿನಲ್ಲಿ ಕೆಲವರಷ್ಟೇ ನಂಬಿಕೆ ಇರಿಸಿದ್ದರು. ಉದ್ಯಮಶೀಲತೆಯು ಸುದ್ದಿಯಾಗುತ್ತಿರುವ ಭಾರತದಲ್ಲಿ, ಕೇವಲ ಕೋಟ್ಯಧಿಪತಿಗಳ ಕತೆಯನ್ನಷ್ಟೇ ಅಲ್ಲದೇ, ಹೊಸ ಆಲೋಚನೆಯೊಂದಿಗೆ ಅಪರಿಮಿತ ಉತ್ಸಾಹ ಕಟ್ಟಿಕೊಂಡು ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್ ಗಳ ಕತೆ ಹೇಳಬೇಕೆಂದು ಹುಟ್ಟಿಕೊಂಡಿದ್ದು ಯುವರ್ ಸ್ಟೋರಿ. ‘ಇಂಥದ್ದನ್ನೆಲ್ಲ ಯಾರು ಓದ್ತಾರೆ? ಇವನ್ನೆಲ್ಲ ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳಬಹುದೇ ಹೊರತು, ವೃತ್ತಿಯಾಗಿ ಅಲ್ಲ’ ಎಂಬೆಲ್ಲ ಮಾತುಗಳು ತಮಗೆ ಎದುರಾಗಿದ್ದವು ಎಂಬುದನ್ನು ಸಂದರ್ಶನಗಳಲ್ಲಿ ನೆನಪಿಸಿಕೊಳ್ಳುತ್ತಾರೆ ಶ್ರದ್ಧಾ. ನಿಜ. ಅದು ಅತಿ ಕಠಿಣ ಹಾದಿಯೇ ಆಗಿತ್ತು. ಆದರೆ ತಮ್ಮ ಪರಿಕಲ್ಪನೆ ಬಗ್ಗೆ ಅಚಲ ನಂಬಿಕೆ ಹೊಂದಿದ್ದ ಶ್ರದ್ಧಾ, ‘ಅಯ್ಯೋ, ಸಾಕಿನ್ನು’ ಎಂದು ಯಾವ ಹಂತದಲ್ಲೂ ಹೇಳಲಾರೆ ಎಂಬ ಗಟ್ಟಿತನದಿಂದ ಮುನ್ನಡೆದರು. ಹಣಕಾಸು ಸಮಸ್ಯೆ, ಹತಾಶೆಗಳನ್ನೆಲ್ಲ ಎದುರಿಸಿ ಕತೆ ಪೋಣಿಸುತ್ತ ಹೋದರು. ಇದೀಗ ಉದ್ಯಮವಲಯದಲ್ಲಿ ಶ್ರದ್ಧಾ ಶರ್ಮರ ‘ಯುವರ್ ಸ್ಟೋರಿ’ ದೊಡ್ಡ ಹೆಸರು. ಇದರಲ್ಲೀಗ ರತನ್ ಟಾಟಾ, ಟಿ ವಿ ಮೋಹನ್ ದಾಸ್ ಪೈ, ಕಲಾರಿ ಕ್ಯಾಪಿಟಲ್ ನ ವಾಣಿ ಕೊಲಾ, ಕ್ವಾಲ್ಕಂ ವೆಂಚುರ್ಸ್ ನ ಕಾರ್ತಿ ಮಾದಸಾಮಿ ಹಣ ಹೂಡಿದ್ದಾರೆ. ಮೂಲತಃ ಇಂಗ್ಲಿಷ್ ನಲ್ಲಿ ಆರಂಭವಾಗಿದ್ದ ಜಾಲತಾಣ ಈಗ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಹೊಸ ಹುಡುಗರು ಕಟ್ಟುತ್ತಿರುವ ಉದ್ಯಮ ಲೋಕ, ಅದರ ಸುತ್ತಲಿನ ಟ್ರೆಂಡ್ ಗಳ ಬಗ್ಗೆ ಆಸಕ್ತಿ ಇರುವವರು ಭೇಟಿ ಕೊಡಲೇಬೇಕಾದ ತಾಣವಿದು.

ದ ವೈರಲ್ ಫಿವರ್ನ ಅರ್ನುಬ್ ಕುಮಾರ್

ದ ವೈರಲ್ ಫಿವರ್ ಅನ್ನೋದು ಯೂಟ್ಯೂಬ್ ನಲ್ಲಿ ಸಿಗುವ ಯುವಕರ ಮನರಂಜನೆ ಅಗತ್ಯ ನೀಗಿಸುವ ಉದ್ದೇಶದ ಚಾನೆಲ್. ಟಿವಿ ವಾಹಿನಿಗಳೆಲ್ಲ ಧಾರಾವಾಹಿ- ರಿಯಾಲಿಟಿ ಶೋಗಳಲ್ಲೇ ಮುಳುಗಿರುವಾಗ, ಇವತ್ತಿನ ಲೈಫ್ ಸ್ಟೈಲ್ ಗೆ ತುಂಬ ಪ್ರಸ್ತುತ ಎನಿಸುವ ಕಾಮಿಡಿ, ವೆಬ್ ಧಾರಾವಾಹಿ, ಯುವ ಮಿಡಿತ, ವ್ಯಂಗ್ಯಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತಿರುವ ತಾಣವಿದು. ಬರೋಬ್ಬರಿ 12 ಲಕ್ಷ 42 ಸಾವಿರ ಅನುಯಾಯಿಗಳನ್ನು ಹೊಂದಿರುವ ಇವರ ಯೂಟ್ಯೂಬ್ ಚಾನೆಲ್ ಹೊಕ್ಕಿ ಬಂದರೆ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇವರು ನೀಡುತ್ತಿರುವ ಉತ್ಕೃಷ್ಟ ಮನರಂಜನೆ, ಟಿವಿಗಿಂತ ಭಿನ್ನ ಲೋಕವೊಂದನ್ನು ನಿಮ್ಮೆದುರು ತೆರೆದಿಡದಿದ್ದರೆ ಹೇಳಿ. ಅರ್ನಬ್ ಗೋಸ್ವಾಮಿ ಶೋಗಳ ಅಣಕವಂತೂ ನಿಮ್ಮನ್ನು ನಗೆಗಡಲಲ್ಲಿ ಮುಳುಗಿಸುತ್ತದೆ. ಪರ್ಮನೆಂಟ್ ರೂಮ್ ಮೇಟ್, ಪಿಚ್ಚರ್ಸ್ ಇಂಥ ವೆಬ್ ಸಿರೀಸ್ ಗಳು ನಿಮಗೆ ಉತ್ತಮ ಸಿನಿಮಾವೊಂದನ್ನು ನೋಡಿದ ಅನುಭವ ಕೊಡುತ್ತವೆ.

ಐಐಟಿ ಖರಗಪುರದ ಪದವೀಧರ ಅರ್ನುಬ್ ಕುಮಾರ್ ಸ್ಥಾಪಿಸಿರುವ ಈ ಆನ್ ಲೈನ್ ಕಂಪನಿಯಲ್ಲಿ 20 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಂಟಿವಿಗೆ ಕಾರ್ಯಕ್ರಮವೊಂದನ್ನು ರೂಪಿಸಿಕೊಟ್ಟಾಗ- ಇದು ಇಂದಿನ ಯುವಕರಿಗೆ ತಲುಪೋದಿಲ್ಲ ಅಂತ ನಿರಾಕರಣೆಗೆ ಒಳಗಾಗಿದ್ದೇ ಟಿವಿಎಫ್ ಕಟ್ಟುವುದಕ್ಕೆ ಅರ್ನುಬ್ ಅವರಿಗೆ ಒಲಿದ ಪ್ರೇರಣೆ.

ಆಲ್ ಇಂಡಿಯಾ ಬಕ್ಚೋದ್

ತನ್ಮಯ್ ಭಟ್, ಗುರ್ಸಿಮ್ರಾನ್ ಕಂಬ ನೇತೃತ್ವದ ಈ ಕಾಮಿಡಿ ಕಂಪನಿಯನ್ನು ಇಷ್ಟಪಡುವವರು ಹಾಗೂ ವಿರೋಧಿಸುವವರ ಗುಂಪುಗಳು ದೊಡ್ಡದಿವೆ. ಆದರೆ ಯೂಟ್ಯೂಬ್ ನಲ್ಲಿ ಇವರು ಆವರಿಸಿಕೊಂಡಿರುವ ಸ್ಥಾನವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದಂತೆ ಇವರ ಇತ್ತೀಚಿನ ಅಭಿಯಾನ ಗಮನಾರ್ಹವಾದದ್ದು. ಹಾಗೆಯೇ ಕರಣ್ ಜೋಹರ್ ಮುಖ್ಯ ಅತಿಥಿಯಾಗಿದ್ದ ಕಾಮಿಡಿ ಕಾರ್ಯಕ್ರಮವೊಂದು ಅಶ್ಲೀಲತೆ ಪಸರಿಸುವ ಆರೋಪದ ಮೇಲೆ ವ್ಯಾಪಕ ಖಂಡನೆಗೆ ಒಳಗಾಗಿದ್ದೂ ಆಗಿದೆ. 13 ಲಕ್ಷ ಚಿಲ್ಲರೆ ಅನುಯಾಯಿ ವೀಕ್ಷಕರನ್ನು ಹೊಂದಿರುವ ಚಾನೆಲ್ ಇದು.

ಹಾಗೆ ನೋಡಿದರೆ, ಯೂಟ್ಯೂಬ್ ಹಾಗೂ ಡಿಜಿಟಲ್ ನ ಒಟ್ಟಾರೆ ಅಭಿವ್ಯಕ್ತಿ ಮತ್ತು ಸೃಜನಶೀಲ ಜಾಗದಲ್ಲಿ ಈಗ ಹೆಚ್ಚಾಗಿ ಓಡುತ್ತಿರುವುದು ಹಾಸ್ಯದ ಸರಕುಗಳು. ಆದರೆ ಟಿವಿಗಳಲ್ಲಿ ನಾವು ಕಾಣುವ ಹಾಸ್ಯಕ್ಕಿಂತ ಇವು ಭಿನ್ನವಾಗಿದ್ದು, ಇವತ್ತಿನ ನಗರದ ಯುವ ಟ್ರೆಂಡ್ ಗಳನ್ನು ಗಮನದಲ್ಲಿರಿಸಿಕೊಂಡಿವೆ ಅನ್ನೋದು ಗಮನಾರ್ಹ. ಹಳೆಯ ಬಾಲಿವುಡ್ ಸಿನಿಮಾಗಳನ್ನು ತಮಾಷೆಯಿಂದ ಒರೆಗೆ ಹಚ್ಚುವ ಕಣ್ಣನ್ ಗಿಲ್ ಅವರ ಪ್ರಿಟೆನ್ಶಿಯಸ್ ಮೂವಿ ರಿವ್ಯೂ ಸರಣಿಗಳು ಯೂಟ್ಯೂಬಿಗರಿಗೆ ಅಚ್ಚುಮೆಚ್ಚು. ಅಂತೆಯೇ, ಇವತ್ತಿನ ಜನಪ್ರಿಯ ಬಾಲಿವುಡ್ ಸಿನಿಮಾಗಳಿಗೆ ಭಿನ್ನ ಅಂತ್ಯ ಕಲ್ಪಿಸಿಕೊಂಡು, ಎನಿಮೇಷನ್ ದೃಶ್ಯಾವಳಿಗಳ ಮೂಲಕ ಜಾಲಿಗರನ್ನು ತಲುಪುತ್ತಿರುವ ‘ಶುಧ್ ದೇಸಿ ಎಂಡಿಂಗ್’ ಸಹ ತನ್ನದೇ ಆದ ವೀಕ್ಷಕ ಬಳಗ ಹೊಂದಿದೆ.

ಉಳಿದಂತೆ ಯೂಟ್ಯೂಬ್ ನಲ್ಲಿ ಸೌಂದರ್ಯ ಸಲಹೆ, ತಂತ್ರಜ್ಞಾನ ಸಲಹೆ ಮತ್ತು ಅಡುಗೆ ಕಾರ್ಯಕ್ರಮದ ಮೂಲಕವೂ ಹಲವಾರು ಮಂದಿ ತಮ್ಮದೇ ಬ್ರಾಂಡ್ ರೂಪಿಸಿಕೊಂಡಿದ್ದಾರೆ. ಗೀಕಿ ರಂಜಿತ್, ಅರ್ಚನಾಸ್ ಕಿಚನ್ ಇಂಥ ಪ್ರಯತ್ನಗಳು ಯೂಟ್ಯೂಬ್ ನಲ್ಲಿ ಯಶಸ್ವಿಯಾಗಿವೆ.

ಇವರೆಲ್ಲರೂ ತಮ್ಮ ವಿಡಿಯೋಗಳಿಗೆ ಹೆಚ್ಚು ಹಿಟ್ ಪಡೆಯುತ್ತಿದ್ದಾರಾದ್ದರಿಂದ ಜಾಹೀರಾತುಗಳಿಂದ ಆದಾಯ ಗಳಿಸುತ್ತಿದ್ದಾರೆ. ಟಿವಿಎಫ್, ಎಐಬಿಯಂಥವು ದೊಡ್ಡ ಕಾರ್ಪೋರೇಟ್ ಉತ್ಪನ್ನಗಳೊಂದಿಗೆ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡು, ಅವುಗಳ ಬ್ರಾಂಡ್ ಅಡಿಯಲ್ಲಿ ತಮ್ಮ ವಿಡಿಯೋಗಳನ್ನು ಬಿಡುತ್ತಾರೆ.

ಇವೆಲ್ಲ ಗಮನಿಸಿದಾಗ ಕನ್ನಡದಲ್ಲಿ ಇಂಥ ಪ್ರಯತ್ನಗಳು ಇನ್ನಷ್ಟೇ ವ್ಯಾಪಕವಾಗಬೇಕಿದೆ ಅನಿಸುತ್ತದೆ.

Leave a Reply