ನೈಜ ನಟನೆಗಾಗಿ ಕಾಡುಕೋಣದ ಹಸೀ ಯಕೃತ್ತು ತಿಂದ ಡಿಕ್ಯಾಪ್ರಿಯೋ!

 

ಮಹೇಂದ್ರ ಎಸ್. ಡಿ.

ಕಳೆದ ಒಂದು ದಶಕದಿಂದ ಪ್ರತಿ ಬಾರಿಯೂ ಆಸ್ಕರ್ ಸಮಾರಂಭ ಮುಗಿದಾಗಲೆಲ್ಲ ಹಾಲಿವುಡ್ ಚಿತ್ರ ಪ್ರೇಮಿಗಳಲ್ಲಿ ಒಂದು ಅಸಮಾಧಾನವಂತೂ ಎದ್ದೇ ಏಳುತ್ತದೆ. `ಈ ಸರ್ತಿಯಾದ್ರೂ ಲಿಯೋನಾರ್ಡೋ ಡಿಕ್ಯಾಪ್ರಿಯೋಗೆ ಆಸ್ಕರ್ ಬರುತ್ತೇ ಅನ್ಕೊಂಡಿದ್ದೆ!’.

ಡಿಕ್ಯಾಪ್ರಿಯೋ ಆಸ್ಕರ್ ಗೆಲ್ಲಬೇಕು ಎಂಬ ಅಭಿಮಾನಿಗಳ ಆಸೆಯ ಹಿಂದೆ, ಆ ನಟನ ಅಗಾಧ ಸಾಮರ್ಥ್ಯ ಮತ್ತು ಪರಿಶ್ರಮಕ್ಕೆ ಮನ್ನಣೆ ದೊರೆಯಬೇಕೆಂಬ ಪ್ರಾಮಾಣಿಕ ಹಂಬಲವಿದೆ. ಈಗ ಜನವರಿ 8ರಂದು ಡಿಕ್ಯಾಪ್ರಿಯೋನ `ದಿ ರೆವೆನೆಂಟ್’ ಎಂಬ ಸಿನೆಮಾ ವಿಶ್ವಾದ್ಯಂತ ತೆರೆಕಾಣಲಿದೆ. ಟ್ರೇಲರ್ ನೋಡಿದವರೆಲ್ಲ, `ಮುಂದಿನ ವರ್ಷ ಲಿಯೋಗೆ ಆಸ್ಕರ್ ಮಿಸ್ ಆಗೋ ಚಾನ್ಸೇ ಇಲ್ಲ’ ಎಂದೇ ಖುಷಿಪಡುತ್ತಿದ್ದಾರೆ.

ಹ್ಯೂ ಗ್ಲಾಸ್ ಎಂಬ ಬೇಟೆಗಾರನ ನೈಜ ಕಥೆಯಾಧರಿಸಿದ ದಿ ರೆವನೆಂಟ್ ಚಿತ್ರದಲ್ಲಿ ಮುಖ್ಯ ಪಾತ್ರ ಡಿಕ್ಯಾಪ್ರಿಯೋನದ್ದು. ಈ ಸಿನೆಮಾ ಚಿತ್ರೀಕರಣದ ವೇಳೆ, ತನ್ನ ಪಾತ್ರ ನೈಜತೆಗೆ ಹತ್ತಿರವಾಗಿರಬೇಕು ಎಂಬ ಕಾರಣಕ್ಕೆ ಲಿಯೋ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಪ್ರಾಣಿಯ ಕೊಳೆಯುವ ಹೆಣದ ಮೇಲೆ ಮಲಗಿಕೊಂಡಿದ್ದು, ಥರಗುಟ್ಟುವ ನೀರಿನಲ್ಲಿ ಮುಳುಗೆದ್ದದ್ದಷ್ಟೇ ಅಲ್ಲದೆ, ಕಾಡು ಕೋಣದ ಹಸಿ ಮಾಂಸವನ್ನು(ಯಕೃತ್ತು) ಕಚಕಚನೆ ಜಗಿದು ತಿಂದಿದ್ದಾನೆ!

ಹಾಗೆಂದು ಡೈರೆಕ್ಟರ್ ಸಾಹೇಬರು ಈತನಿಗೆ ಒರಿಜಿನಲ್ ಲಿವರ್ ತಿನ್ನಬೇಕು ಎಂದೇನೂ ಒತ್ತಾಯ ಮಾಡಲಿಲ್ಲವಂತೆ. ಕಾಡುಕೋಣದ ಯಕೃತ್ತಿನಂತೆಯೇ ಕಾಣುವ ಜೆಲ್ಲಿಯಿಂದ ತಯಾರಾದ ಖಾದ್ಯವನ್ನು ಚಿತ್ರತಂಡ ಡಿಕ್ಯಾಪ್ರಿಯೋಗಾಗಿ ಸಿದ್ಧಪಡಿಸಿತ್ತಂತೆ. ಆದರೆ ಅದನ್ನು ತಿನ್ನಲು ಒಪ್ಪದ ಡಿಕ್ಯಾಪ್ರಿಯೋ, ನನಗೆ ಒರಿಜಿನಲ್ ಯಕೃತ್ತನ್ನೇ ತನ್ನಿ ಎಂದು ಆದೇಶ ಹೊರಡಿಸಿದ್ದಾನೆ. ಹಾಗೆಂದು ಕೇಳಿದಾಕ್ಷಣ ತಂದು ಕೊಡುವುದು ಚಿತ್ರತಂಡಕ್ಕೆ ಅಷ್ಟು ಸುಲಭದ ಕೆಲಸವಲ್ಲ, ಮೊದಲೇ ಸತ್ತ ಕೋಣದ ಯಕೃತ್ತು ಅಪಾಯಕಾರಿ ರೋಗಗಳನ್ನು ಹರಡಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಹಾಲಿವುಡ್‍ನ ಅತಿ ದುಬಾರಿ, ಪ್ರಖ್ಯಾತ ನಟರಲ್ಲಿ ಒಬ್ಬನಾದ ಡಿಕ್ಯಾಪ್ರಿಯೋ ಅದನ್ನು ತಿಂದು ಏನಾದರೂ ಯಡವಟ್ಟು ಮಾಡಿಕೊಂಡರೆ? ಹೀಗಾಗಿ ಚಿತ್ರತಂಡ ಮೊದಲು ಡಿಕ್ಯಾಪ್ರಿಯೋನ ವಕೀಲರು, ಏಜೆಂಟರ ಅನುಮತಿ ಪಡೆದು, ಎಲ್ಲರೂ ಒಪ್ಪಿಗೆ ಕೊಟ್ಟ ಮೇಲೆ ಹುಡುಕಾಡಿ ತಂದು `ತಿನ್ನಪ್ಪ’ ಎಂದು ಎದುರಿಗಿಟ್ಟಿದ್ದಾರೆ.

“ಎಲ್ಲಕ್ಕಿಂತ ಬಲುಕಷ್ಟವೆನಿಸಿದ್ದು, ಬಲೂನಿನಂತಿರುವ ಅದರ ಒಳಚರ್ಮವನ್ನು ಅಗಿಯುವುದು. ಕಚ್ಚಿದಾಕ್ಷಣ ಅದು ಬಾಯಲ್ಲೆಲ್ಲ  ಸಿಡಿಯಿತು, ” ಎನ್ನುವ ಡಿಕ್ಯಾಪ್ರಿಯೋ, ಸಿನೆಮಾದಲ್ಲಿ ಈ ಸನ್ನಿವೇಶದಲ್ಲಿ ಕಾಣಿಸುವ ತನ್ನ ಎಕ್ಸ್‍ಪ್ರೆಶನ್ ನೈಜವಾಗಿ ಬರುವುದಕ್ಕೆ ಇದೇ ಕಾರಣ ಎನ್ನುತ್ತಾನೆ!

ಡಿಕ್ಯಾಪ್ರಿಯೋನ ಡೆಡಿಕೇಷನ್ ನಿಮಗೆ ಖಾತ್ರಿಯಾಗಬೇಕೆಂದರೆ ನೀವು “ಜಾಂಗೋ ಅನ್‍ಚೈನ್ಡ್’ ಎನ್ನುವ ಸಿನೆಮಾ ನೋಡಬೇಕು. ಅದರಲ್ಲಿ ಖಳನ ಪಾತ್ರ ನಿರ್ವಹಿಸಿರುವ ಡಿಕ್ಯಾಪ್ರಿಯೋ, ಸಿಟ್ಟಿನಲ್ಲಿ ಅರಚುತ್ತಾ ಟೇಬಲ್ಲಿಗೆ ಗುದ್ದುವ ಒಂದು ಸನ್ನಿವೇಶವಿದೆ. ಈ ಸೀನ್‍ನ ಚಿತ್ರೀಕರಣ ನಡೆಯುತ್ತಿದ್ದಾಗ ಡಿಕ್ಯಾಪ್ರಿಯೋ ತಿಳಿಯದೇ ಅಲ್ಲೇ ಇದ್ದ ಗಾಜಿಗೆ ಜೋರಾಗಿ ಕೈ ತಾಗಿಸಿಬಿಡುತ್ತಾನೆ. ಜೋರು ರಕ್ತ ಒಸರತೊಡಗುತ್ತದೆ. ಬೇರೇ ನಟರಾಗಿದ್ದರೆ ಅಲ್ಲಿಗೇ ಚಿತ್ರೀಕರಣ ನಿಲ್ಲಿಸಿ, ಆಸ್ಪತ್ರೆಗೆ ಓಡುತ್ತಿದ್ದರೇನೋ, ಆದರೆ ಈತ ಸೀನ್ ಅನ್ನು ಮುಂದುವರಿಸಿದ. ತನ್ನ ರಕ್ತ ಒಸರುವ ಕೈಯನ್ನು ಹೊಸ ಪ್ರಾಪ್ ಆಗಿ ಬಳಸಿದ. ತನ್ನ ಕೈಯಿಂದ ಚಿಮ್ಮುತ್ತಿರುವ ರಕ್ತವನ್ನು ಗುಲಾಮಳ ಮುಖಕ್ಕೆ ಸವರಿ ಕ್ರೌರ್ಯ ಕಲೆ ಅರಳಿಸಿದ! ನಿರ್ದೇಶಕನ ಕಲ್ಪನೆಗೂ ನಿಲುಕಿರದಂಥ ಅದ್ಭುತ ಸೀನ್ ಸೃಷ್ಟಿಯಾಗಿ ಹೋಯಿತು!

decaprio

ಹಾಲಿವುಡ್ ಚಿತ್ರಗಳು ಅಷ್ಟೇಕೆ ಸದ್ದು ಮಾಡುತ್ತವೆ ಎನ್ನುವ ಪ್ರಶ್ನೆಗೆ `ಹೈ ಬಜೆಟ್’ ಎಂಬ ಕ್ಲೀಷೆ ಉತ್ತರವೇ ಎದುರಾಗುತ್ತದೆ. ಆದರೆ, ಹೈ ಬಜೆಟ್‍ನ ಜೊತೆಗೆ, ಹೈಲೀ ಟ್ಯಾಲೆಂಟೆಡ್ ನಟರು ಮತ್ತು ನಿರ್ದೇಶಕರು ಅಲ್ಲಿದ್ದಾರೆ ಎನ್ನುವ ಉತ್ತರವೇ ಸರಿ. ದಿ ರೆವೆನೆಂಟ್ ಸಿನೆಮಾ ವನ್ನು ನಿರ್ದೇಶಿಸಿರುವುದು ಕಳೆದ ಬಾರಿ ಆಸ್ಕರ್ ಬಾಚಿಕೊಂಡ `ಬರ್ಡ್‍ಮ್ಯಾನ್’ ಖ್ಯಾತಿಯ ಇನಾರಿತು! ಇನಾರಿತು ಮತ್ತು ಡಿಕ್ಯಾಪ್ರಿಯೋ ಎಂಬ ಟ್ಯಾಲೆಂಟ್‍ಗಳ ಸಮಾಗಮವಾಗಿರುವ ದಿ ರೆವನೆಂಟ್, ಹೊಸ ವರ್ಷದಲ್ಲಿ ನೋಡಲೇಬೇಕಾದ ಸಿನೆಮಾ.

Leave a Reply