ಭಾನುವಾರ ಭಾರತ ಕೇಳಿದ ಪ್ರಶ್ನೆ: ಬಾಲರಾಕ್ಷಸ ಬೇರೆಯವರನ್ನು ರೇಪ್ ಮಾಡಿದ್ರೆ ಯಾರು ಹೊಣೆ?

‘ಅತ್ಯಾಚಾರ- ಕ್ರೌರ್ಯ ಮೆರೆಯುವುದಕ್ಕೆ ಸಾಧ್ಯ ಎಂದಾದರೆ ಕೇವಲ ವಯಸ್ಸನ್ನು ಆಧಾರವಾಗಿರಿಸಿಕೊಂಡು ಆತನನ್ನು ಬಾಲಕ ಎಂದು ಹೇಗೆ ಹೇಳುವುದಕ್ಕೆ ಆಗುತ್ತದೆ? ಅತ್ಯಾಚಾರ ಮಾಡಿದ್ದಾನೆಂದ ಮೇಲೆ ಅದಕ್ಕೆ ಶಿಕ್ಷೆಯನ್ನೂ ಅನುಭವಿಸಲಿ.’

ಇದು ಜಂತರ್ ಮಂತರ್ ನಲ್ಲಿ ಭಾನುವಾರಬಾಲಾಪರಾಧಿ ಬಿಡುಗಡೆ ವಿರೋಧಿಸಿ ಪ್ರತಿಭಟಿಸುತ್ತಿದವರಲ್ಲಿ ಮಹಿಳೆಯೊಬ್ಬರು ಹೇಳಿದ ಮಾತು.

‘ನನಗೀಗ ಹೆದರಿಕೆ ಆಗ್ತಿದೆ. ಆತ ಹೊರಗೆ ಬಂದು ನಮ್ಮಲ್ಲಿ ಯಾರದ್ದೋ ಮೇಲೆ ರೇಪ್ ಮಾಡಲ್ಲ ಅಂತ ಗ್ಯಾರಂಟಿ ಏನು? ಹದಿನೆಂಟು ವರ್ಷ ತುಂಬಿರದ ಹುಡುಗರೂ ಇನ್ನು ಮುಂದೆ ಹೀಗೆ ಯೋಚಿಸಿಯಾರು. ಅತ್ಯಾಚಾರ ಮಾಡೋಣ, ಹಿಂಸೆ ಮಾಡೋಣ. ವಯಸ್ಸು ಕಡಿಮೆ ಇರೋದ್ರಿಂದ ಶಿಕ್ಷೆ ಕಮ್ಮಿನೇ ಆಗುತ್ತೆ ಅಂತ’ ಜಂತರ್ ಮಂತರ್ ನಲ್ಲಿ ಯುವತಿಯೊಬ್ಬಳ ಆಕ್ರೋಶ ಹೀಗೆ ವ್ಯಕ್ತವಾಯಿತು.

‘ಆ ಹುಡುಗ ಹೊರಬಂದು ನಾಳೆ ಎಲ್ಲೆಡೆ ಓಡಾಡಬಹುದು. ಆದರೆ ನಾವಿಲ್ಲಿ ಆತನ ಬಿಡುಗಡೆ ವಿರೋಧಿಸಿ ನಮ್ಮ ಮಗಳ ಸಾವಿಗೆ ನ್ಯಾಯ ಬೇಕೆಂದು ಧರಣಿ ನಡೆಸಲು ಬಂದರೆ ಪೊಲೀಸರು ತಡೆಯುತ್ತಿದ್ದಾರೆ’ ಎಂಬುದು ಜ್ಯೋತಿಸಿಂಗ್ ತಂದೆಯ ಆಕ್ರೋಶ.

ಬಿಡುಗಡೆಯಾಗಲಿರುವ ಬಾಲಾಪರಾಧಿಗೆ ಹೊಸಜೀವನ ಕಟ್ಟಿಕೊಳ್ಳುವುದಕ್ಕೆ ದೆಹಲಿ ಸರ್ಕಾರದಿಂದ ಸಹಾಯಧನ ಹಾಗೂ ದರ್ಜಿಯ ಉದ್ಯೋಗ ಸಿಗಲಿದೆ. ಆತನ ಗುರುತನ್ನೂ ಬಹಿರಂಗಗೊಳಿಸುವುದಿಲ್ಲ. ಈಗ ಜ್ಯೋತಿಸಿಂಗ್ ತಾಯಿ ಕೇಳುತ್ತಿರುವ ಪ್ರಶ್ನೆ-

‘ಆತನಿಗೆ ಎರಡನೇ ಚಾನ್ಸ್ ಸಿಗಬೇಕು ಅನ್ನೋದಕ್ಕೆ ಇದೇನು ದರೋಡೆ ಕೇಸೇ? ಈತ ಎಸಗಿರುವ ಹೀನಾಯ ಅಪರಾಧಕ್ಕೆ ದೇವರೂ ಕ್ಷಮಿಸುವುದಿಲ್ಲ. ಸುಧಾರಣಾ ಕೇಂದ್ರದಲ್ಲಿ ಆತನಿಗೆ ಅಂಥ ಅವಕಾಶ ಸಿಕ್ಕಿತ್ತು. ಅವನಲ್ಲಿ ಯಾವ ಬದಲಾವಣೆ ಆಗಿದೆ?’

ಇದು ಕೇವಲ ಆ ತಾಯಿಯ ಪ್ರಶ್ನೆ ಆಗಿರದೇ ಎಲ್ಲರನ್ನೂ ಕಾಡುತ್ತಿರುವ ಆತಂಕ- ಆಕ್ರೋಶ.

ಈ ನಡುವೆ ದೆಹಲಿ ಮಹಿಳಾ ಆಯೋಗವು ಬಾಲಾಪರಾಧಿ ಬಿಡುಗಡೆ ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ವಿಶೇಷ ಅರ್ಜಿ ಸಲ್ಲಿಸಿತು. ಇದನ್ನು ನಾಟಕ ಎಂದು ಬಣ್ಣಿಸಿರುವ ಜ್ಯೋತಿ ಸಿಂಗ್ ಪಾಲಕರು, ಇಷ್ಟು ಕಾಲ ಇವರೆಲ್ಲ ಏನು ಮಾಡುತ್ತಿದ್ದರು ಎಂದು ಕೇಳಿದ್ದಾರೆ.

ಇನ್ನೂ ಬದಲಾಗಿಲ್ಲ ಕಾಯ್ದೆ

ಬಾಲಕ ಎಂಬುದರ ಮಾನದಂಡವನ್ನು ಈಗಿರುವ 18ರ ವಯೋಮಾನದಿಂದ 16ಕ್ಕೆ ಇಳಿಸುವುದು ಹಾಗೂ ಬಾಲಾಪರಾಧದ ಗಂಭೀರತೆ ಪರಿಗಣಿಸಿ, ಅಪರಾಧಿಯ ಮಾನಸಿಕ ಸ್ಥಿತಿ ವಿಶ್ಲೇಷಿಸಿ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಧೀಶರಿಗೆ ನೀಡುವ ಮಸೂದೆ ಲೋಕಸಭೆಯಲ್ಲಿ ಪಾಸ್ ಆಗಿದೆ. ಆದರೆ ರಾಜ್ಯಸಭೆಯಲ್ಲಿ ಇದನ್ನು ಪಾಸ್ ಮಾಡಿ ಕಾಯ್ದೆಯಾಗಿಸುವುದಕ್ಕೆ ಕಲಾಪವೇ ಸರಿಯಾಗಿ ನಡೆಯದ ಪರಿಸ್ಥಿತಿ ಇದೆ. ಈಗಿರುವ ಬಾಲಾಪರಾಧ ಕಾಯ್ದೆಯ ಲೋಪಗಳು ತಿದ್ದುಪಡಿ ಆಗಬೇಕು ಎಂದು ಸುಪ್ರೀಂ ಕೋರ್ಟ್ ಸಹ ಆಸಕ್ತಿ ತೋರಿದೆ. ಏಕೆಂದರೆ 2005 ಮತ್ತು 2014ರ ನಡುವೆ ಬಾಲಾಪರಾಧದ ಪ್ರಮಾಣ 50.6 ಶೇಕಡ ಹೆಚ್ಚಾಗಿದೆ.

Leave a Reply