ಈ ಅಮೂರ್ತ ಚಿತ್ರಕ್ಕೆ ಎಷ್ಟು ಕೋಟಿ ಸಿಕ್ತು ಗೊತ್ತಾ?

 

ಸೌಮ್ಯ ಸಂದೇಶ್

ಚಿತ್ರಕಲೆಯೊಂದು ಎಷ್ಟು ಬೆಲೆಗೆ ಮಾರಾಟವಾಗಬಹುದು? ಹಲವು ಲಕ್ಷಗಳು, ಒಂದೆರಡು ಕೋಟಿ ರುಪಾಯಿಗಳು ಎಂಬ ಅಂದಾಜು ನಿಮ್ಮದಾಗಿದ್ದರೆ ಉಸಿರು ಬಿಗಿಹಿಡಿದುಕೊಳ್ಳಿ.

ವಾರದ ಹಿಂದೆ ಮುಂಬೈನಲ್ಲಿ ನಡೆದ ಕಲಾಕೃತಿ ಹರಾಜೊಂದರಲ್ಲಿ ವಾಸುದೇವ ಗೈತೊಂಡೆ ಅವರ ಅಮೂರ್ತ ಕಲಾಕೃತಿಯೊಂದು 29.30 ಕೋಟಿ ರುಪಾಯಿಗಳಿಗೆ ಬಿಕರಿಯಾಗಿದೆ! ಕ್ರಿಸ್ಟಿಸ್ ಹರಾಜು ಸಂಸ್ಥೆಯ ಬಳಿಯಲ್ಲಿ ಗೈತೊಂಡೆಯವರ 1995ರ ಈ ಅಮೂರ್ತ ಕಲಾಕೃತಿ ಇತ್ತು. ಇದಕ್ಕೆ ಶೀರ್ಷಿಕೆ ಸಹ ಇಲ್ಲ.

ಭಾರತದ ಅಗ್ರಗಣ್ಯ ಅಮೂರ್ತ ಚಿತ್ರಕಾರರೆಂದೇ ಪ್ರಸಿದ್ಧರಾಗಿದ್ದ ಗೈತೊಂಡೆ 2001ರಲ್ಲಿ ಕೊನೆಯುಸಿರೆಳೆದರು. 2013ರಲ್ಲಿ ಇದೇ ಕ್ರಿಸ್ಟಿ ಸಂಸ್ಥೆ ಗೈತೊಂಡೆಯವರ 1979ರ ಚಿತ್ರವೊಂದನ್ನು ಹರಾಜಿಗಿಟ್ಟಾಗ ಅದು 23 ಕೋಟಿ ರುಪಾಯಿಗಳಿಗೆ ಬಿಕರಿಯಾಗಿತ್ತು. ಎರಡು ವರ್ಷಗಳ ನಂತರ ಗೋವಾದ ಕಲಾಕಾರ ಫ್ರಾನ್ಸಿಸ್ ನ್ಯೂಟನ್ ಸೋಜಾ ಈ ದಾಖಲೆ ಮುರಿದರು. ಇದೀಗ ಮತ್ತೆ ವಾಸುದೇವ ಗೈತೊಂಡೆ ಹೆಸರಿಗೇ ದಾಖಲೆ ಬಂದಂತಾಗಿದೆ.

ಕ್ರಿಸ್ಟೀಸ್ ಅನ್ನೋದು ಬ್ರಿಟನ್ ಮೂಲದ ಫೈನ್ ಆರ್ಟ್ಸ್ ಮತ್ತು ಹರಾಜು ಸಂಸ್ಥೆ. ಕಲಾವಿದರ ಚಿತ್ರಗಳನ್ನು ಖರೀದಿಸಿ ನಂತರ ಹರಾಜು ಪ್ರಕ್ರಿಯೆಗೆ ಒಳಪಡಿಸುವ ಉದ್ಯಮ ಇದು. ಇಲ್ಲೊಂದು ಆಸಕ್ತಿಕರ ಆಯಾಮ ಗಮನಿಸಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಲಾವಿದರ ಕಲಾಕೃತಿಗಳೇ ಹೆಚ್ಚಿನ ಮೌಲ್ಯಕ್ಕೆ ಬಿಕರಿಯಾಗುತ್ತಿವೆ. ಗೈತೊಂಡೆ, ತ್ಯೆಬ್ ಮೆಹ್ತ, ನಸ್ರೀನ್ ಮೊಹಮದ್ ಇಂಥ ಕಲಾವಿದರು ಅಗ್ರ ಪಟ್ಟಿಯಲ್ಲಿದ್ದಾರೆ.

ಅಮೂರ್ತ ಕಲಾಕೃತಿಗಳು ಇಷ್ಟು ದೊಡ್ಡ ಬೆಲೆಗೆ ಬಿಕರಿಯಾಗುತ್ತಿರುವುದು ಅರ್ಥವ್ಯವಸ್ಥೆಯ ಇನ್ನೊಂದು ಆಯಾಮವನ್ನೂ ಸೂಕ್ಷ್ಮವಾಗಿ ತಿಳಿಸಿಕೊಡುತ್ತಿದೆ. ಹೇಗೆ ಮೇಲ್ಮಧ್ಯಮ ವರ್ಗದವರು ಚಿನ್ನ, ಶೇರು ಮಾರುಕಟ್ಟೆ ಎಂದೆಲ್ಲ ಹೂಡಿಕೆ ಮಾಡುತ್ತಾರೋ, ಅಂತೆಯೇ ಸೂಪರ್ ಶ್ರೀಮಂತರಿಗೆ ಕಲಾಕೃತಿಗಳೇ ಹೂಡಿಕೆಯ ಒಂದು ಮಾರ್ಗವಾಗಿರಬಹುದಾ ಎಂಬ ಪ್ರಶ್ನೆ ಸಹಜ. ಅಪಾರ ಪ್ರಮಾಣದ ಹಣವನ್ನು ಹೇಗೆ ಇಟ್ಟುಕೊಳ್ಳುವುದು, ಲಭ್ಯವಿರುವ ಉಳಿತಾಯ ಮತ್ತು ಹಣ ತೊಡಗಿಸುವಿಕೆ ಸಾಧನಗಳ ಮೇಲೆ ಅಷ್ಟು ನಂಬಿಕೆ ಕುದುರದಿದ್ದರೆ ಏನು ಮಾಡಬೇಕು? ಕಲಾಕೃತಿ ಅಥವಾ ಪುರಾತನ ವಸ್ತುಗಳನ್ನು ಖರೀದಿಸಿ ಇಡಬೇಕು! ಈ ನಿಟ್ಟಿನಲ್ಲಿ ನೋಡಿದಾಗ ಕಲಾಕೃತಿಗಳೆಂದರೆ ಶ್ರೀಮಂತರ ಮನೆಯ ಗೋಡೆಯನ್ನಲಂಕರಿಸಿರುವ ಸಿಂಗಲ್ ಕರೆನ್ಸಿ ಬ್ಯಾಂಕುಗಳು!

ಸ್ವಾರಸ್ಯದ ವಿಷಯ ಎಂದರೆ ಕಲಾಕೃತಿಗಳು ಹಾಗೂ ಪುರಾತನ ವಸ್ತುಗಳು ಇವೆರಡರ ಪೂರೈಕೆ ತಾಣ ಭಾರತವೇ ಆಗಿದೆ. ಅಂದಹಾಗೆ, ಗೈತೊಂಡೆ ಕೃತಿಗೆ 29 ಕೋಟಿ ರುಪಾಯಿಗಳನ್ನು ಕೊಟ್ಟು ಹರಾಜಿನಲ್ಲಿ ಖರೀದಿಸಿದವರು ಯಾರು ಎಂಬ ವಿಷಯ ಬಹಿರಂಗವಾಗಿಲ್ಲ!

Leave a Reply