ಕೇಜ್ರಿವಾಲ್ ವರ್ಸಸ್ ಜೇಟ್ಲಿ: ಮುಖ್ಯಾಂಶ ತಿಳ್ಕೋಳಿ

ಡಿಜಿಟಲ್ ಕನ್ನಡ ಟೀಮ್

  •  2013ಕ್ಕೂ ಪೂರ್ವದಲ್ಲಿ ಬಿಜೆಪಿಯ ಅರುಣ್ ಜೇಟ್ಲಿ ಅವರು ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅಧ್ಯಕ್ಷರಾಗಿದ್ದಾಗ ನಡೆದ ನಿರ್ಮಾಣ ಕಾಮಗಾರಿಗಳಲ್ಲಿ ಹಣಕಾಸು ಅವ್ಯವಹಾರ ನಡೆದಿದೆ, ಇದರಲ್ಲಿ ಖಾಸಗಿ ಕಂಪನಿಗಳು ಲಾಭ ಮಾಡಿಕೊಂಡಿವೆ ಎಂಬ ಆರೋಪ ಕೆಲದಿನಗಳಿಂದ ಕೇಳಿಬಂತು. ಮೊದಲಿಗೆ ಆಮ್ ಆದ್ಮಿ ಪಕ್ಷ ಇದನ್ನು ದೊಡ್ಡಮಟ್ಟದಲ್ಲಿ ಪ್ರಶ್ನಿಸಿತಲ್ಲದೇ, ತನ್ನ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ಆಗುವುದಕ್ಕೂ ತಾನು ಡಿಡಿಸಿಎ ಹಗರಣಗಳ ತನಿಖೆಗೆ ಮುಂದಾಗಿದ್ದೇ ಕಾರಣ ಎಂದಿತು. ಇವೆಲ್ಲವುಗಳ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜಿನಾಮೆ ಕೊಡಬೇಕು ಇಲ್ಲವೇ ಪ್ರಧಾನಿ ನರೇಂದ್ರ ಮೋದಿ, ಜೇಟ್ಲಿಯವರನ್ನು ಸಂಪುಟದಿಂದ ಕೈಬಿಡಬೇಕು ಅನ್ನೋದು ಅದರ ಆಗ್ರಹ. ಇದೀಗ ಅರವಿಂದ ಕೇಜ್ರಿವಾಲರ ಆಪ್ ವಿರುದ್ಧ ಅರುಣ್ ಜೇಟ್ಲಿ ಹತ್ತು ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
  • ಅರವಿಂದ ಕೇಜ್ರಿವಾಲ್ ಆರೋಪಕ್ಕಿಂತ ತೀವ್ರತರವಾಗಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಂಗತಿ ಎಂದರೆ ಅವರದ್ದೇ ಪಕ್ಷದ ಸಂಸದ ಕೀರ್ತಿ ಆಜಾದ್ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಜೇಟ್ಲಿಯವರು ಡಿಡಿಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಬೋಗಸ್ ಕಂಪನಿಗಳು ಕಾರ್ಯನಿರ್ವಹಿಸಿವೆ ಅಂತ ದೂರಿ, ಕೆಲವು ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಅರುಣ್ ಜೇಟ್ಲಿಯವರ ವಿರುದ್ಧ ವೈಯಕ್ತಿಕ ದಾಳಿ, ಆಗ್ರಹಗಳನ್ನು ಮಾಡದಿದ್ದರೂ ಆ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎಂಬ ಬಗ್ಗೆ ಕೀರ್ತಿ ಆಜಾದ್ ಪ್ರತಿಪಾದನೆ ಪ್ರಬಲವಾಗಿತ್ತು. ಅಷ್ಟೇ ಅಲ್ಲ, ಕೇಜ್ರಿವಾಲ್ ವಿರುದ್ಧ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿರುವ ಸುದ್ದಿ ಬರುತ್ತಲೇ, ‘ಅರುಣ್ ಜೇಟ್ಲಿ ಅವರು ನನ್ನ ವಿರುದ್ಧವೇಕೆ ಮೊಕದ್ದಮೆ ಹೂಡಿಲ್ಲ’ ಎಂದು ಟ್ವೀಟ್ ಮಾಡಿ ಕೆಣಕಿದ್ದಾರೆ ಕೀರ್ತಿ ಆಜಾದ್.
  •  ಸೋಮವಾರ ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಕೊಟ್ಟರು. ‘ದೆಹಲಿಯಲ್ಲಿ ಇದ್ದಿದ್ದು ಮೈದಾನವಾಗಿತ್ತೇ ಹೊರತು ಕ್ರೀಡಾಂಗಣವಲ್ಲ. ಹೊಸ ಕ್ರೀಡಾಂಗಣವನ್ನು ನಿರ್ಮಿಸುವುದಕ್ಕೆ ಹೊರಟಾಗ ಬಿಸಿಸಿಐ ಕಡೆಯಿಂದ ಕೇವಲ 4 ಕೋಟಿ ರುಪಾಯಿಗಳ ಅನುದಾನವಷ್ಟೇ ಸಿಕ್ಕಿತು. ಆಗ ನಾವು ಕೆಲ ಕಂಪನಿಗಳಿಗೆ ಸೀಟುಗಳನ್ನು ಮುಂಗಡವಾಗಿ ಬುಕ್ ಮಾಡುವ ಅವಕಾಶ ಕಲ್ಪಿಸಿ ಹಣ ಸಂಗ್ರಹಿಸುವ ನಿರ್ಧಾರ ಕೈಗೊಂಡೆವು. ನಂತರದಲ್ಲಿ ಬಿಬಿಸಿ 50 ಕೋಟಿ ರುಪಾಯಿಗಳನ್ನು ನೀಡುವುದಕ್ಕೆ ಒಪ್ಪಿತು. ಕ್ರೀಡಾಂಗಣ ನಿರ್ಮಾಣದ ಮೊದಲ ಹಂತದಲ್ಲಿ 58 ಕೋಟಿ ರುಪಾಯಿಗಳ ಕಾಮಗಾರಿಯನ್ನು ಸಾರ್ವಜನಿಕ ಸಂಸ್ಥೆಯಿಂದಲೇ ಕೈಗೊಳ್ಳಲಾಗಿದೆ. ಉಳಿದ ಕೆಲಸಗಳಲ್ಲಿ ಮಾತ್ರ ಖಾಸಗಿಯವರಿಗೆ ಟೆಂಡರ್ ಸಿಕ್ಕಿದೆ. ಇಷ್ಟೆಲ್ಲ ಆಗಿಯೂ ಹೊಚ್ಚಹೊಸ ಕ್ರೀಡಾಂಗಣ 144 ಕೋಟಿ ರುಪಾಯಿಗಳಿಗೆ ತಲೆ ಎತ್ತಿ ನಿಂತಿತು. ಆದರೆ ಈಗ ಗಲಾಟೆ ಎಬ್ಬಿಸುತ್ತಿರುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಜವಹರ್ ಲಾಲ್ ನೆಹರು ಕ್ರೀಡಾಂಗಣದ ನವೀಕರಣ ಮಾತ್ರಕ್ಕೆ 900 ಕೋಟಿ ರುಪಾಯಿಗಳನ್ನು ಹಾಗೂ ಧ್ಯಾನ್ ಚಂದ್ ಕ್ರೀಡಾಂಗಣವನ್ನು ಕೇವಲ ನವೀಕರಣಗೊಳಿಸಿದ್ದಕ್ಕೆ 600 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿತ್ತು. ಹೀಗಾಗಿ ಡಿಡಿಸಿಎ ವ್ಯವಹಾರದಲ್ಲಿ ಅಕ್ರಮದ ಪ್ರಶ್ನೆಯೇ ಇಲ್ಲ. ಯಾವ ತನಿಖಾ ಸಂಸ್ಥೆಗಳೂ ಭ್ರಷ್ಟಾಚಾರವಾಗಿದೆ ಎಂದು ವರದಿ ಸಲ್ಲಿಸಿಲ್ಲ’ ಎಂದರು.
  • ಆದರೆ ಈ ಮೇಲಿನ ಜೇಟ್ಲಿ ಉತ್ತರದಲ್ಲಿ, ಕೀರ್ತಿ ಆಜಾದ್ ಅವರು ತೋರಿಸಿರುವ ದಾಖಲೆಗಳಿಗೆ ಪ್ರತ್ಯುತ್ತರ ಸಿಕ್ಕಿಲ್ಲ. ಇದಕ್ಕೆ ಉತ್ತರ ನೀಡುವ ಕೆಲಸವನ್ನು ಡಿಡಿಸಿಎ ಅಧ್ಯಕ್ಷ ಸ್ನೇಹ ಪ್ರಕಾಶ್ ಬನ್ಸಲ್ ಮಾಡಿದ್ದಾರೆ. ಬೋಗಸ್ ಕಂಪನಿಗಳಿಗೆ ಕಾಮಗಾರಿಯ ಟೆಂಡರ್ ನೀಡಲಾಗಿತ್ತು ಎಂದು ಆಜಾದ್, ಬಿಷನ್ ಸಿಂಗ್ ಬೇಡಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಕ್ಕೆ ಬನ್ಸಲ್ ಹೀಗೆ ಉತ್ತರಿಸಿದ್ದಾರೆ-

‘ಆಜಾದ್ ಅವರು ವಿಕಿಲೀಕ್ಸ್4ಇಂಡಿಯಾ ಹೆಸರಲ್ಲಿ ಕುಟುಕು ಕಾರ್ಯಾಚರಣೆ ವಿಡಿಯೋ ತೋರಿಸಿರುವುದರಲ್ಲಿ ಕೆಲವು ಬೋಗಸ್ ಪಾವತಿಗಳನ್ನು ಉಲ್ಲೇಖಿಸಲಾಗಿದೆ. ಆದರೆ ಅವ್ಯಾವವೂ ಡಿಡಿಸಿಎ ಖಾತೆಗೆ ಸಂಬಂಧಿಸಿದ್ದಲ್ಲ. ಕುಟುಕು ಕಾರ್ಯಾಚರಣೆ ವಿಡಿಯೋದಲ್ಲಿ ತೋರಿಸಲಾದ ಕಂಪನಿಗಳ ಪೈಕಿ ವಿಎಝಡ್ ಕನ್ಸಲ್ಟೆನ್ಸಿ ಜತೆ ಹೊರತುಪಡಿಸಿ ಇನ್ಯಾವುದರೊಂದಿಗೂ ಡಿಡಿಸಿಎ ವ್ಯವಹಾರ ನಡೆಸಿಯೇ ಇಲ್ಲ. ಆ ಬಗ್ಗೆ ದಾಖಲೆಗಳೇ ಇಲ್ಲ. ಇವರು ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಟೆಂಡರ್ ವಹಿಸಿಕೊಂಡಿದ್ದಾವೆ ಎನ್ನಲಾಗಿರುವ ಕಂಪನಿಗಳ ಪಿನ್, ಪಾನ್ ಮತ್ತು ಸೇವಾ ತೆರಿಗೆ ಸಂಖ್ಯೆಗಳು ಸರಿ ಇಲ್ಲ ಅಂತ ತೋರಿಸಲಾಗಿದೆ. ಆದರೆ ಡಿಡಿಸಿಎ ಖಾತೆಯನ್ನೂ ಬಹಿರಂಗಗೊಳಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಹೀಗೆ ಮಾಹಿತಿ ಸರಿ ಇಲ್ಲದ ಯಾರೊಂದಿಗೂ ನಾವು ವ್ಯವಹಾರ ಮಾಡಿಲ್ಲ’

ಎಂದಿದ್ದಾರೆ ಬನ್ಸಲ್.

ಹಾಗಾದರೆ, ಮಾಜಿ ಕ್ರಿಕೆಟಿಗರ ಪೈಕಿ ಕೆಲವರು ಏಕೆ ತೀವ್ರತರ ಆರೋಪ ಮಾಡುತ್ತಿದ್ದಾರೆ ಎಂಬುದಕ್ಕೆ ಬನ್ಸಲ್ ಪ್ರತಿಕ್ರಿಯೆ- ‘ನಾನು ಯಾರದ್ದೂ ಹೆಸರು ಉಲ್ಲೇಖಿಸುವುದಿಲ್ಲ. ಆದರೆ ಈಗ ಆರೋಪ ಮಾಡುತ್ತಿರುವವರಿಗೆ, ಅವರ ಮಕ್ಕಳು ಡಿಡಿಸಿಎದಲ್ಲಿ ಆಡುತ್ತಿದ್ದಷ್ಟು ಕಾಲವೂ ಯಾವ ಸಮಸ್ಯೆಯೂ ಉಂಟಾಗಿರಲಿಲ್ಲ. ಯಾವಾಗ ಅವರ ಮಕ್ಕಳ ಆಟ ಇಲ್ಲಿ ನಿಂತಿತೋ, ಆಗಿನಿಂದ ಆರೋಪಗಳು ಶುರುವಾಗಿವೆ’ ಎಂದಿದ್ದಾರೆ.

1 COMMENT

Leave a Reply