ಬನ್ನಂಜೆ 80, ಅಭಿಮಾನದ ಕಾರ್ಯಕ್ರಮಗಳು ಹಲವು- ಹತ್ತು!

ಸಾಮಾನ್ಯವಾಗಿ ಶ್ರೇಷ್ಠ ಕವಿ, ಸಾಹಿತಿ ಅಥವಾ ವಿಮರ್ಶಕರ ಹುಟ್ಟು ಹಬ್ಬದ ಸಮಾರಂಭಗಳಲ್ಲಿ  ಭಾಷಣಗಳಿಗೆ, ವ್ಯಕ್ತಿ ಪ್ರಶಂಸೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಆದರೆ ಬನ್ನಂಜೆ ಗೋವಿಂದಾಚಾರ್ಯರ “ಬನ್ನಂಜೆ 80ರ ಸಂಭ್ರಮ” ವನ್ನು ಭಿನ್ನವಾಗಿ ಆಚರಿಸಲು ನಗರದ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ ಕಾಲೇಜಿನ ಸಭಾಂಗಣ ವಿಶೇಷವಾಗಿ ಸಿದ್ದಗೊಂಡಿದೆ.

ಡಿಸೆಂಬರ್ 23 ರಂದ 27 ರ ವರೆಗೆ 5 ದಿನಗಳು ನಡೆಯುವ ಈ ಸಂಭ್ರಮದಲ್ಲಿ  ಬನ್ನಂಜೆ ಗೋವಿಂದಾಚಾರ್ಯರು ರಚಿಸಿದ ಪುಸ್ತಕಗಳ ಪ್ರದರ್ಶನ, ಸಾಹಿತ್ಯ ಮತ್ತು ಮಾರ್ಗದರ್ಶನದಲ್ಲಿ ನಿರ್ಮಾಣವಾದ ಚಲನಚಿತ್ರಗಳ ಪ್ರದರ್ಶನ, ಎಡ ಬಲ ಚಿಂತನೆಗಳನ್ನು ಮೀರಿದ ಚಿಂತಕರ ಮಾತು, ಯಕ್ಷಗಾನ-ಆಭಿಮನ್ಯು ಕಾಳಗ, ಕಾವ್ಯ-ಚಿತ್ರ-ಭರತ ನೃತ್ಯ, ಬನ್ನಂಜೆ ಆವರ ವಿಮರ್ಶೆ, ಕವಿತೆಯ ಓದು, ನಗೆಹಬ್ಬ, ನಾಟಕ-ಪತ್ರಿಕೋದ್ಯಮ ಸಂವಾದ ಸೇರಿ ಹಲವು ಕಾರ್ಯಕ್ರಮಗಳ ಗುಚ್ಛವೇ ಇಲ್ಲಿದೆ.

ಮತ್ತೆ ರಾಮನ ಕತೆ, ಮುಗಿಲ ಮಾತು, ನೆನಪಾದಳು ಶಕುಂತಲೆ, ಉಪನ್ಯಾಸಗಳು, ಮಹಾಶ್ವೇತೆ, ಹೇಳದೆ ಉಳಿದದ್ದು, ಋತು ಸಂಹಾರ, ಪರಾಶರ ಕಂಡ ಪರತತ್ತ್ವ, ಹೊಸ ಕವಿತೆಗಳು, ಬ್ರಹ್ಮರಥ-2 ಪುಸ್ತಕಗಳು ಪ್ರದರ್ಶನ. ಡಿ.23ರ ಸಂಜೆ 6-30ಕ್ಕೆ ದಿ. ಜಿ.ವಿ ಅಯ್ಯರ್ ನಿರ್ದೇಶಿತ ಶ್ರೀ ಭಗವದ್ಗೀತೆ, 24ರ ಮಧ್ನಾಹ 3-30ಕ್ಕೆ ಆದಿ ಶಂಕರಚಾರ್ಯ, 6-30ಕ್ಕೆ ಶ್ರೀಮಧ್ವಾಚಾರ್ಯ ಚಲನಚಿತ್ರಗಳ ಪ್ರದರ್ಶನ ಮತ್ತು ಸಂಜೆ 6ಕ್ಕೆ ರಷ್ಯಾದ ಲಲಿತಾ ಶಿವಾನಿ ರವರ “ಇಂಡೋ-ರಷ್ಯನ್” ಬ್ಯಾಲೆ ನಾಟ್ಯಸೇವೆ ನಡೆಯಲಿದೆ.

25ರ ಬೆಳಿಗ್ಗೆ 9 ರಿಂದ 10ರ ವರೆಗೆ ಗಂಗಾವತಿ ಪ್ರಾಣೇಶ್ ರಿಂದ ನಗೆಸೇವೆ, ಮಧ್ನಾಹ 2-40ಕ್ಕೆ ಸಂಸ್ಕತಿಯ ಚಿಂತಕರಾದ ಡಾ.ಜಿ.ಬಿ ಹರೀಶ್, ಡಾ.ಎಂ.ಪ್ರಭಾಕರ ಜೋಶಿ, ಪತ್ರಕರ್ತ ಸೂರ್ಯಪ್ರಕಾಶ್ ಪಂಡಿತ್, ಕಥೆಗಾರ ಫಕೀರ್ ಮಹಮದ್ ಕಟ್ಟಾಡಿ, ಸಾಹಿತಿ ಡಾ.ನಾ.ಡಿಸೋಜ, ಪ್ರಾಧ್ಯಾಪಕ ಡಾ.ಬಸವರಾಜ ಸಬರದ, ನಿವೃತ್ತ ಐ.ಎ.ಎಸ್ ಆಧಿಕಾರಿ ಡಾ. ಚಿರಂಜೀವಿ ಸಿಂಗ್, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ರವರು ಸರ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಸಂಜೆ 6-15 ರಿಂದ ಅಮೆರಿಕದ ಪಂಪ ಡ್ಯಾನ್ಸ್ ಆಕಾಡೆಮಿಯ ನಿರ್ದೇಶಕಿ ನಿರ್ಮಾಲಾ ಮಾಧವರಿಂದ ಗುರು ನಮನ ನಾಟ್ಯ, 7ಕ್ಕೆ ವಿದ್ವಾನ್ ಡಾ. ವಿದ್ಯಾಭೂಷಣ ಮತ್ತು ಪಂಡಿತ್ ಫಯಾಜ್ ಖಾನ್ ರವರಿಂದ ದ್ವಂದ್ವ ಹಾಡುಗಾರಿಕೆಯ ಸಂಗೀತದಂತಹ ವಿಭಿನ್ನ ಕಾರ್ಯಕ್ರಮಗಳಿಗೆ ಈ ಸಂಭ್ರಮ ಸಾಕ್ಷಿಯಾಗಲಿದೆ.

26ರ ಬೆಳಿಗ್ಗೆ 10 ರಿಂದ ಪ್ರಾರಂಭವಾಗುವ ಸಾಹಿತ್ಯ ವಿಮರ್ಶೆ ಮತ್ತು ಕವಿತೆ ಓದಲಿಕ್ಕೆ ಕವಿಗಳಾದ ಎನ್.ಎಸ್.ಲಕ್ಷ್ಮೀನಾರಾಯಣ ಭಟ್, ಎಚ್.ಎಸ್. ವೆಂಕಟೇಶ್ ಮೂರ್ತಿ, ಜಯಂತ್ ಕಾಯ್ಕಿಣಿ, ಪ್ರತಿಭಾ ನಂದಕುಮಾರ್, ಬಿ.ಆರ್. ಲಕ್ಷ್ಮಣರಾವ್, ಎಚ್ ಡುಂಡಿರಾಜ್, ಮಮತಾ ಸಾಗರ, ಸಾಹಿತಿ ಮತ್ತು ಸಾಹಿತ್ಯ ವಿಮರ್ಶಕರಾದ ಡಾ. ಎಚ್ ಎಸ್ ರಾಘವೇಂದ್ರರಾವ್, ಸುಮತೀಂದ್ರ ನಾಡಿಗ, ಸುಮಿತ್ರ ಬಾಯಿ, ಚಂಪಾ ಸೇರಿದಂತೆ ಹಲವರು ಬರಲಿದ್ದಾರೆ. ಮಧ್ನಾಹ 2.40ಕ್ಕೆ ಸಿನಿಮಾ ಸಂವಾದದಲ್ಲಿ ರಂಗಕರ್ಮಿ ಬಿ ಜಯಶ್ರೀ, ಗರೀಶ್ ಕಾಸರವಳ್ಳಿ, 5.15ರ ಪತ್ರಿಕೋದ್ಯಮ ಸಂವಾದದಲ್ಲಿ ಪತ್ರಕರ್ತರಾದ ಸಂಧ್ಯಾ ಪೈ ಮತ್ತು ಗೌರೀಶ್ ಆಕ್ಕಿ ಸೇರಿದಂತೆ ಸಿನಿಮಾ ರಂಗ ಮತ್ತು ಪತ್ರಿಕಾರಂಗದ ಹಲವಾರು ಹಿರಿಯರು ಇರಲಿದ್ದಾರೆ.

ಐದು ದಿನಗಳ ಈ ಸಾಹಿತ್ಯ- ಸಂಸ್ಕೃತಿ- ಕಲೆ- ವಿಚಾರಗಳ ಉತ್ಸವವನ್ನು ಸಂಘಟಕರು ಆಹ್ವಾನ ಪತ್ರಿಕೆಯಲ್ಲಿ ಚೆನ್ನಾಗಿಯೇ ಹಿಡಿದಿಟ್ಟಿದ್ದಾರೆ-

ಅಭಿಮಾನದ ಪ್ರೀತಿಗೆ ಸನ್ಮಾನದ ನೆಪ/ ಕೂಡಿ ಬೆಳೆಯುವುದಕ್ಕೆ ಹೆಸರಿನ ಜಪ/ ಬನ್ನಂಜೆ ಅಂಥ ಒಂದು ಹೆಸರು/ನೀವು ಅದರ ಉಸಿರು/

ನಾವು ನಿಮ್ಮ ದಾರಿ ಕಾಯುತ್ತೇವೆ…

Leave a Reply