ಮತ್ತೆ ಮೊಳಗಿದ ಮಂದಿರ ನಿರ್ಮಾಣದ ಸದ್ದು!

ಅಯೋಧ್ಯೆಯಲ್ಲಿ ರಾಮ ಮಂದಿರ ಎಂಬ ವಿಷಯ ಮತ್ತೆ ಸದ್ದು ಮಾಡುತ್ತಿದೆ. ಮಂದಿರ ಚರ್ಚೆಯ ಸದ್ದು ಮತ್ತೆ ಸಣ್ಣ ಮಟ್ಟದಲ್ಲಾದರೂ ಏಳಬಹುದೆಂಬುದಕ್ಕೆ ಎರಡು ಅಂಶಗಳು ಎದ್ದು ತೋರುತ್ತಿವೆ.

ಒಂದೆಡೆ ಅಯೋಧ್ಯೆಗೆ ವಿಶ್ವ ಹಿಂದು ಪರಿಷತ್ ಕಡೆಯಿಂದ ಎರಡು ದೊಡ್ಡ ಲಾರಿಗಳಷ್ಟು ಕಲ್ಲುಗಳು ಬಂದಿವೆ. ದಶಕಗಳ ಹಿಂದೆ ರಾಮಜನ್ಮಭೂಮಿ ಚಳವಳಿ ತಾರಕಕ್ಕೆ ಏರಿದ್ದ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕೆ ಸಂಘ ಪರಿವಾರ ಇಟ್ಟಿಗೆಗಳನ್ನು ಸಂಗ್ರಹಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇನ್ನೊಂದೆಡೆ, ನ್ಯಾಯಾಲಯದಲ್ಲಿ ಹೂಡಿರುವ ನಾನಾ ಪ್ರಕರಣಗಳ ಮೂಲಕ ಸುದ್ದಿಯಲ್ಲಿರುವ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಮಾಡಿರುವ ಟ್ವೀಟ್ ಸಹ ಇದಕ್ಕೆ ಪುಷ್ಟಿ ನೀಡುತ್ತಿದೆ. ‘2016ರ ವರ್ಷವನ್ನು ನ್ಯಾಷನಲ್ ಹೆರಾಲ್ಡ್ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಮೀಸಲಿಡುತ್ತೇನೆ. 2017 ಕ್ಕೆ ರಾಹುಲ್ ಗಾಂಧಿಯ ಅಮೇಥಿ ಭೂ ಕಬಳಿಕೆ ವಿಚಾರವನ್ನು ಕೆದಕುತ್ತೇನೆ’ ಅಂತ ಟ್ವೀಟಿಸಿರುವುದು ಕುತೂಹಲಕ್ಕೆ ಕಾರಣ. ಏಕೆಂದರೆ ಸ್ವಾಮಿ ಒಂದು ವಿಷಯವನ್ನು ಹಿಡಿದರೆಂದರೆ ಅದರ ತಾರ್ಕಿಕ ಅಂತ್ಯವನ್ನು ಕಾಣಿಸದೇ ಸುಲಭಕ್ಕೆ ಬಿಡುವವರಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲೂ ಅಯೋಧ್ಯೆಯಲ್ಲಿ ‘ರಾಮಮಂದಿರ ನಿರ್ಮಾಣ’ದ ಭರವಸೆ ಇತ್ತು. ಅಭಿವೃದ್ಧಿ ಘೋಷದಲ್ಲಿ ಈ ವಿಷಯ ಹಿನ್ನೆಲೆಗೆ ಹೋದಂತೆ ಕಂಡಿದ್ದರೂ ಮೋದಿ ಸರ್ಕಾರ ಒಂದು ವರ್ಷ ಪೂರೈಸಿ ಮುಂದೆ ಸಾಗುತ್ತಿರುವಾಗ ಸಂಘ ಪರಿವಾರವು ತನ್ನ ಮೂಲ ಕಾರ್ಯಸೂಚಿಯನ್ನು ಮುನ್ನಲೆಗೆ ತರಲು ಪ್ರಯತ್ನಿಸುತ್ತಿರುವುದು ಸ್ಪಷ್ಟ. ಮಂದಿರ ನಿರ್ಮಾಣಕ್ಕೆ ಈ ಹಿಂದೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಲ್ಲುಗಳನ್ನು ಒಂದೆಡೆ ಸಂಗ್ರಹಿಸುವಂತೆ ಆರು ತಿಂಗಳ ಹಿಂದೆ ವಿಎಚ್ ಪಿ ಕರೆ ನೀಡಿತ್ತು. ‘ನಮಗೆ ಮೋದಿ ಸರ್ಕಾರದಿಂದ ಸೂಚನೆ ಸಿಕ್ಕಿದೆ. ರಾಮ ಮಂದಿರ ನಿರ್ಮಾಣಕ್ಕೆ ಸನ್ನದ್ಧರಾಗಿದ್ದೇವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿಎಚ್ ಪಿಯ ಮಹಂತ್ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.

ಇದೀಗ ಎರಡು ಲಾರಿಗಳಲ್ಲಿ ಬಂದಿರುವ ಕಲ್ಲುಗಳನ್ನು ಅಯೋಧ್ಯೆಯ ರಾಮ ಸೇವಕಪುರದ ವಿ.ಎಚ್.ಪಿಗೆ ಸೇರಿದ ಜಾಗದಲ್ಲಿ ಸಂಗ್ರಹಿಸಿ ಇಡಲಾಗಿದೆ. ಈ ಕಲ್ಲುಗಳಿಗೆ ಶಿಲಾನ್ಯಾಸ ಪೂಜೆ ಸಹ ಮಾಡಲಾಗಿದೆ ಎಂದು ರಾಮ ಜನ್ಮಭೂಮಿ ನ್ಯಾಸ್ ಆಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಖಚಿತಪಡಿಸಿದ್ದಾರೆ.

‘ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ಸ್ಥಳೀಯ ಪೊಲೀಸ್ ಇಲಾಖೆ ತಿಳಿಸಿದೆ.

1 COMMENT

Leave a Reply