ಆಶಾದೇವಿಯಂಥ ಅಮ್ಮಂದಿರೇ ಈ ದೇಶದ ಭರವಸೆ!

 

ಕಾರ್ತಿಕ ಶರ್ಮ

ಅಂತೂ ಇಂತೂ ರಾಜ್ಯಸಭೆ ‘ಬಾಲಾಪರಾಧ ನ್ಯಾಯ ವಿಧೇಯಕ’ದ ಮೇಲೆ ಚರ್ಚೆ ಶುರು ಮಾಡಿದೆ. ದೇಶದಲ್ಲಿ ಅಸಹಿಷ್ಣುತೆ ಇದೆ ಅಂತ ಒಂದಷ್ಟು ಸಮಯ, ಅಯ್ಯಯ್ಯೋ ರಾಹುಲ್- ಸೋನಿಯಾರಿಗೆ ಸಮನ್ಸ್ ಬಂದ್ಬಿಡ್ತು ಅಂತ ಒಂದಷ್ಟು ದಿನ… ಹಿಂಗೆಲ್ಲ ಕಲಾಪ ಹದಗೆಡಿಸಿ ಕೂರುವುದಕ್ಕೆ ಒಂದೊಂದು ನೆಪ ಹುಡುಕಿಕೊಂಡಿದ್ದ ಸಂಸದರು ಈಗ ರಾಜ್ಯಸಭೆಯಲ್ಲಿ ಕೊನೆಪಕ್ಷ ಮಾತಿಗೆ ಕುಳಿತಿದ್ದಾರೆ. ಲೋಕಸಭೆಯಲ್ಲಿ ಪಾಸ್ ಆಗಿದ್ದ ವಿಧೇಯಕವನ್ನು ಚರ್ಚೆಗೆ ಕೈಗೆತ್ತಿಕೊಳ್ಳೋದಕ್ಕೂ ಇಲ್ಲಿನವರಿಗೆ ಇಷ್ಟು ದಿನ ಪುರಸೊತ್ತಿರಲಿಲ್ಲ.

ಇದೀಗ ಅಂಥ ಕ್ಷಣ ಸಾಕಾರವಾಗಿರುವುದಕ್ಕೆ ನಿರ್ಭಯಾ ಪ್ರಕರಣದಲ್ಲಿ ಬಿಡುಗಡೆ ಆಗಿರುವ ಬಾಲಾಪರಾಧಿ ಬಗ್ಗೆ ಸಮಾಜ ಆಕ್ರೋಶದಿಂದ ಎದ್ದು ನಿಂತಿರುವುದೇ ಕಾರಣ. ‘ಬಾಲಾಪರಾಧಿ ಬಿಡುಗಡೆ ಕುರಿತು ನಿಮಗಿರುವ ಆತಂಕ- ಕಾಳಜಿಗಳೇ ನಮಗೂ ಇವೆ. ಆದರೆ ಆತನನ್ನು ಹಿಡಿದಿಟ್ಟುಕೊಳ್ಳುವಂತೆ ಆದೇಶಿಸುವುದಕ್ಕೆ ನಮಗೆ ಕಾನೂನಿನ ಬಲವೇ ಇಲ್ಲ. ನಾವು ಹೆಲ್ಪ್ ಲೆಸ್’ ಎಂಬರ್ಥದಲ್ಲಿ ಸುಪ್ರೀಂ ಕೋರ್ಟ್ ಹೇಳಿದಾಗ, ಇಂಥದೊಂದು ಕಾನೂನು ಬರುವುದಕ್ಕೆ ತಡೆಯಾಗಿ ಕುಳಿತಿರುವ ರಾಜ್ಯಸಭೆ ವಿರುದ್ಧ ಎಲ್ಲರ ಆಕ್ರೋಶ ತಿರುಗಿತು.

ಇವೆಲ್ಲ ಒಳ್ಳೆಯದಕ್ಕೇ ಆಗುತ್ತಿವೆ. ರೇಪ್ ಮಾಡುವ ಮನೋಭಾವ, ಸಾಮರ್ಥ್ಯ ಇರುವನನ್ನು ‘ಬಾಲಕ’ ಎಂಬ ವ್ಯಾಖ್ಯೆಯಲ್ಲಿಡುವುದಕ್ಕೆ, ಆತನಿಗೆ ಶಿಕ್ಷೆ ಇಲ್ಲದೇ ಬಿಡುಗಡೆ ಮಾಡುವುದಕ್ಕೆ ಯಾವ ಸಮಾಜ ತಾನೇ ಒಪ್ಪೀತು ಹೇಳಿ? ಹೀಗಾಗಿ ಸಮಾಜದ ಆಕ್ರೋಶ ಸಹಜ.

ಆದರೆ….

ಯಾವುದೇ ಆಕ್ರೋಶವು ಒಂದೆಡೆ ಕೇಂದ್ರೀಕೃತವಾಗುವಂತೆ ಮಾಡಿ ಅದರ ಪರಿಣಾಮ ಉಂಟುಮಾಡುವುದಕ್ಕೆ ನೇತೃತ್ವವೊಂದು ಬೇಕಾಗುತ್ತದೆ. ನಿರ್ಭಯಾ ಪ್ರಕರಣದಲ್ಲಿ ಈ ನಾಯಕತ್ವದ ಶ್ರೇಯಸ್ಸು ಸಲ್ಲಬೇಕಿರುವುದು ನಿರ್ಭಯಾ… ಅಲ್ಲಲ್ಲ, ಜ್ಯೋತಿಸಿಂಗ್ ಪಾಲಕರಿಗೆ. ಅದರಲ್ಲೂ ಆಕೆಯ ತಾಯಿ ಆಶಾದೇವಿ ಅವರಿಗೆ!

ಭಾರತದಲ್ಲಿ ಬದಲಾಗುತ್ತಿರುವ ಮನೋಭಾವಕ್ಕೆ ಸಾಕ್ಷಿಯಾಗಿ, ಬಿಂಬವಾಗಿ ಗೋಚರಿಸುತ್ತಿರುವವರು ಆಶಾದೇವಿ. ಏಕೆಂದರೆ, ಅತ್ಯಾಚಾರವಾಗಿದ್ದರೂ ಅದನ್ನು ಹೇಳಿಕೊಳ್ಳುವುದರಲ್ಲಿ ಮರ್ಯಾದೆ ಹೋಗುವ ಅಂಶವಿದೆ ಎಂಬುದನ್ನು ನಮ್ಮ ಸಮಾಜದ ಬಹುದೊಡ್ಡ ಭಾಗ ನಂಬಿಕೊಂಡಿದೆ. ಅಂಥವರ ನಡುವಿಂದ ಎದ್ದುಬಂದ, ಕೆಳ ಮಧ್ಯಮ ವರ್ಗದ ಈ ತಾಯಿ, ಅದೊಂದು ದಿನ ಮಾಧ್ಯಮದ ಎದುರಿಗೆ ಹೇಳುತ್ತಾರೆ- ‘ನೀವೆಲ್ಲ ನನ್ನ ಮಗಳ ಗುರುತನ್ನು ಮುಚ್ಚಿಟ್ಟು ನಿರ್ಭಯಾ ಅಂತ ಕರೆಯುವ ಅಗತ್ಯವೇ ಇಲ್ಲ. ನಾನೇ ಹೇಳ್ತೀನಿ ಕೇಳಿ, ಹೇಯ ಅತ್ಯಾಚಾರಕ್ಕೆ ಒಳಗಾಗಿ ಸತ್ತುಹೋದ ನನ್ನ ಮಗಳ ಹೆಸರು ಜ್ಯೋತಿ ಸಿಂಗ್ ಅಂತ! ನನಗೆ ಈ ಬಗ್ಗೆ ಖಂಡಿತ ನಾಚಿಕೆ ಇಲ್ಲ, ಆಕ್ರೋಶವಿದೆ!’

ಇದೊಂದೇ ಹೇಳಿಕೆಯಿಂದ ಆಕೆ ಸಮಾಜದ ಮನಸ್ಥಿತಿಗೇ ಚುರುಕು ಮುಟ್ಟಿಸಿಬಿಟ್ಟರು! ಹೌದಲ್ಲ, ಯಾವುದೇ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾಗಿರುವವರು ಏಕೆ ನಾಚಿಕೆ ಪಟ್ಟುಕೊಳ್ಳಬೇಕು. ನಾಚಿಕೆ ಪಡಬೇಕಾದವರು, ಭಯ ಪಡಬೇಕಾದವರು ಇಂಥ ಹೀನ ಕೃತ್ಯ ಎಸಗಿದವರು.

ಈ ಮಾತನ್ನು ಹೋರಾಟಗಾರರೋ, ಪತ್ರಕರ್ತರೋ ಹೇಳಿಬಿಡಬಹುದು. ಆದರೆ ಅತ್ಯಾಚಾರ ಪ್ರಕರಣದಲ್ಲಿ ಮಗಳನ್ನು ಕಳೆದುಕೊಂಡಿರುವ ತಾಯಿಯೊಬ್ಬರು ಹೀಗೆಂದು ಮಾಧ್ಯಮದ ಮುಂದೆ ಹೇಳುವುದು, ಅಷ್ಟಕ್ಕೇ ನಿಲ್ಲದೇ ಅಭಿಯಾನವೊಂದರ ಮುಂಚೂಣಿಯಲ್ಲಿ ನಿಲ್ಲುವುದು ಸುಲಭದ ಮಾತಲ್ಲ.

ಮಂಗಳವಾರವೂ ಆಶಾದೇವಿಯವರು ಬಿಜೆಪಿಯ ಮುಕ್ತಾರ್ ಅಬ್ಬಾಸ್ ನಖ್ವಿ ಅವರನ್ನು ಹಾಗೂ ಪ್ರತಿಪಕ್ಷದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಬಂದರು. ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾಗಿ ಚರ್ಚೆಯಾಗುವುದಕ್ಕೆ ಅವಕಾಶ ಮಾಡಿಕೊಡಿ ಎಂಬ ನಿವೇದನೆ ಅಲ್ಲಿತ್ತು.

ಇಲ್ಲಿ, ಆರೇಳು ತಿಂಗಳ ಹಿಂದೆ ಮೃತರಾದ ಸುಜೆತ್ ಜೊರ್ಡಾನ್ ಎಂಬ ಕೋಲ್ಕತಾದ ಮಹಿಳೆ ಸಹ ಇಲ್ಲಿ ನೆನಪಾಗುತ್ತಾರೆ. ಅತ್ಯಾಚಾರಕ್ಕೆ ಒಳಗಾದ ಅವರನ್ನು ಎಲ್ಲರೂ ‘ಪಾರ್ಕ್ ಸ್ಟ್ರೀಟ್ ಸಂತ್ರಸ್ತೆ’ ಅಂತ ಕರೆಯುತ್ತಿದ್ದರು. ಅಲ್ಲದೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಸದಸ್ಯರು, ‘ಇದು ಅತ್ಯಾಚಾರವಲ್ಲ, ವ್ಯವಹಾರ ಮಾಡುತ್ತಿದ್ದಾಗ ಗಿರಾಕಿಗಳೊಂದಿಗೆ ಜಗಳ ಮಾಡಿಕೊಂಡಿದ್ದಾಳಷ್ಟೇ’ ಎಂದೆಲ್ಲ ಬಾಯಿಗೆ ಬಂದಂತೆ ಮಾತಾಡಿದರು. ಆಗ ಸುಜೆತ್ ಮಾಧ್ಯಮದೆದುರು ಬಂದು, ‘ನಾಚಿಕೆ ಪಟ್ಟುಕೊಳ್ಳಬೇಕಾದವಳು ನಾನಲ್ಲ’ ಅಂತ ಧೈರ್ಯವಾಗಿ ಸಾರಿ, ಅನ್ಯಾಯದ ವಿರುದ್ಧ ಧ್ವನಿ ಮೊಳಗಿಸಿದರು. ಅಲ್ಲೊಂದು ಅಭಿಯಾನವೇ ಶುರುವಾಗಿಹೋಯಿತು. ಪರಿಣಾಮವೆಂಬಂತೆ, 2012ರಲ್ಲಿ ನಡೆದ ಈ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ಬಂದು ಮೂವರಿಗೆ ಶಿಕ್ಷೆಯಾಯಿತು.

ನಿಜ, ಯಾವುದೇ ಕಾಯ್ದೆಗಳಿಗೆ ಪೂರ್ವಾನ್ವಯ ಬಲ ಇರುವುದಿಲ್ಲ. ಹೀಗಾಗಿ ಜ್ಯೋತಿ ಸಿಂಗ್ ಅತ್ಯಾಚಾರಿಯನ್ನು ಏನೂ ಮಾಡುವುದಿಲ್ಲ. ಆದರೆ ಮುಂದಿನ ಪ್ರಕರಣಗಳಿಗಾದರೂ ಅನ್ವಯಿಸುವಂತೆ ಪ್ರಬಲ ಕಾಯ್ದೆಯೊಂದು ಬರುತ್ತಲ್ಲ, ಅದೇ ಸಮಾಧಾನ. ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸುವುದಕ್ಕೆ, ಸಮಾಜದ ಅಂತಃಪ್ರಜ್ಞೆಯನ್ನು ಕಲಕುವುದಕ್ಕೆ ಇಂಥ ಧ್ವನಿಗಳ ಅಗತ್ಯ ಯಾವತ್ತೂ ಇದೆ. ಹಾಗೆಂದೇ, ಬಾಲಾಪರಾಧದ ಕುರಿತ ಅಪ್ರಸ್ತುತ ಕಾನೂನಿನ ಬದಲಾವಣೆಗೆ ಪೂರಕವಾಗಿ ಹೋರಾಟದ ಕಿಡಿ ಹಚ್ಚಿರುವ ಆಶಾದೇವಿಯವರಿಗೆ ಹ್ಯಾಟ್ಸಾಫ್ ಎನ್ನೋಣ!

Leave a Reply