ಇನ್ನು ಮುಂದೆ 500 ಅಡಿಗಿಂತ ಆಳಕ್ಕೆ ಕೊಳವೆ ಬಾವಿ ಕೊರೆಯುವಂತಿಲ್ಲ!

ಡಿಜಿಟಲ್ ಕನ್ನಡ ಟೀಮ್

ಇನ್ನು ಮುಂದೆ 500 ಅಡಿಗಳಿಗಿಂತ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆಯುವಂತಿಲ್ಲ. ಒಂದೊಮ್ಮೆ ಕೊರೆದರೆ ಸಂಬಂಧಪಟ್ಟ ಬೋರ್ವೆಲ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಲಕ್ಷ ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಅಂತರ್ಜಲ ಮಟ್ಟ 2000 ಸಾವಿರ ಅಡಿಗಳಿಗಿಂತಲೂ ಕೆಳಗಿದೆ. ಆದರೂ ರೈತರು ಅದಕ್ಕಿಂತಲೂ ಆಳಕ್ಕೆ ಕೊಳವೆ ಬಾವಿ ಕೊರೆಸುವ ಸಾಹಸ ಮಾಡುತ್ತಿದ್ದಾರೆ. ಇಷ್ಟಾದರೂ ನೀರು ಸಿಗದೆ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಇಂಥದೊಂದು ಆದೇಶ ಹೊರಡಿಸಿದೆ.

ಸಣ್ಣ ನೀರಾವರಿ ಇಲಾಖೆ ಹೊರಡಿಸಿರುವ ಪರಿಷ್ಕೃತ ಆದೇಶದ ಪ್ರಕಾರ ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಯುವವರನ್ನು ಜೈಲಿಗೆ ಕಳುಹಿಸಬಹುದಾಗಿದೆ. ವಾಣಿಜ್ಯ, ಕೃಷಿ ಅಥವಾ ಗೃಹಬಳಕೆ ಯಾವುದೇ ಇರಲಿ ಕೊಳವೆ ಬಾವಿ ಕೊರೆವ ಮುನ್ನ ಅನುಮತಿ ಪಡೆಯುವುದು ಕಡ್ಡಾಯ. ನಿಯಮ ಉಲ್ಲಂಘಿಸಿಸುವ ಜಮೀನು ಮಾಲೀಕರು ಹಾಗೂ ಬೋರ್ವೆಲ್ ಸಂಸ್ಥೆಗಳ ಮಾಲೀಕರು ಇಬ್ಬರನ್ನೂ ಮೂರು ತಿಂಗಳವರೆಗೆ ಜೈಲಿಗೆ ಕಳುಹಿಸಬಹುದಾಗಿದೆ.

ಸಿಕ್ಕ, ಸಿಕ್ಕಲ್ಲಿ ಅವೈಜ್ಞಾನಿಕವಾಗಿ ಕೊಳವೆ ಬಾವಿಗಳನ್ನು ಕೊರೆಯುತ್ತಿರುವುದರಿಂದ ಒಂದೆಡೆ ಅಂತರ್ಜಲ ಮಟ್ಟ ಕುಸಿದು, ಜಲಕ್ಷಾಮ ಉಂಟಾಗಿದೆ. ಇನ್ನೊಂದೆಡೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೊರೆದರೂ ನೀರು ಸಿಗದೆ ಹತಾಶರಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದೂ ಉಂಟು. ಹೀಗಾಗಿ ವಾಣಿಜ್ಯ, ಕೃಷಿ ಅಥವಾ ಗೃಹ ಬಳಕೆಗೆ ಕೊಳವೆ ಬಾವಿ ಕೊರೆಯುವ ಮುನ್ನ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಅನುಮತಿ ಕಡ್ಡಾಯ.

ಕೊಳವೆ ಬಾವಿ ಕೊರೆಸುವವರು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಉನ್ನತ ಮಟ್ಟದ ಸಮಿತಿಗೆ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು. ಗ್ರಾಮ ಪಂಚಾಯ್ತಿಗಳು ಈ ಅರ್ಜಿಗಳನ್ನು ಆಯಾ ಸಹಾಯಕ ಆಯುಕ್ತರಿಗೆ ರವಾನಿಸಬೇಕು. ಅಗತ್ಯವೆನಿಸಿದಲ್ಲಿ ಮಾತ್ರ ಅವರು ಅನುಮತಿ ನೀಡುತ್ತಾರೆ. ಇದಕ್ಕೆ ಮೊದಲು ಆಯಾ ಗ್ರಾಮ ಲೆಕ್ಕಿಗರು ಜಮೀನುಗಳಿಗೆ ಭೇಟಿ ನೀಡಿ ಕೊಳವೆ ಬಾವಿ ಕೊರೆಸುತ್ತಿರುವುದರ ಉದ್ದೇಶ ಕುರಿತು ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ.

Leave a Reply