ಕೊನೆಗೂ ಪಾಸಾಯ್ತು ಬಾಲನ್ಯಾಯ ವಿಧೇಯಕ, ಓದ್ಲೇಬೇಕಾದ ಮೇನಕಾರ ಮಾತು, ಯೆಚೂರಿ ವಿರೋಧ

ಬಾಲನ್ಯಾಯ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆ ಮಂಗಳವಾರ ಅಂಗೀಕರಿಸುವುದರೊಂದಿಗೆ ಬಾಲಾಪರಾಧಕ್ಕೆ ಸಂಬಂಧಿಸಿದ ಹೊಸ ಕಾನೂನಿಗೆ ದಾರಿ ಸುಗಮವಾಗಿದೆ. ಅತ್ಯಾಚಾರದಂಥ ಹೀನ ಅಪರಾಧದಲ್ಲಿ ತೊಡಗಿಸಿಕೊಂಡ 16- 18 ವಯೋಮಾನದವರಿಗೂ ಏಳು ವರ್ಷಗಳ ಶಿಕ್ಷೆ ವಿಧಿಸಬಹುದಾದ ಅವಕಾಶವನ್ನು ವಿಧೇಯಕ ನೀಡಿದೆ.

ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಮೃತಳಾದ ಜ್ಯೋತಿಸಿಂಗ್ ಪಾಲಕರು ಈ ವಿಧೇಯಕದ ಚರ್ಚೆ ವೇಳೆ ರಾಜ್ಯಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಹಾಜರಿದ್ದದ್ದು ವಿಶೇಷವಾಗಿತ್ತು.

ವಿಧೇಯಕದ ಮೇಲಿನ ಚರ್ಚೆಯಲ್ಲಿ ಬಿರುಸಿನ ಮಾತುಗಳೂ ಕೇಳಿ ಬಂದವು. ವಿಧೇಯಕದ ವಿವರಗಳನ್ನು ನೀಡುತ್ತ ಕೇಂದ್ರದ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಮೇನಕಾ ಗಾಂಧಿಯವರು ವಿಧೇಯಕದ ಪರವಾಗಿ ಆಡಿದ ಮಾತುಗಳು ಎಲ್ಲರನ್ನೂ ಸೆಳೆದವು. ಅವರ ಮಾತಿನಲ್ಲಿ ಬಂದ ಅಂಶಗಳು ಹೀಗಿದ್ದವು-

‘ತಿದ್ದುಪಡಿಗೂ ಮುಂಚಿನ ಕಾಯ್ದೆ ಬಾಲಾಪರಾಧಗಳನ್ನು ಪ್ರೋತ್ಸಾಹಿಸುವಂತಿದೆ. ಗಂಭೀರ ಬಾಲಾಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಪರಿಸ್ಥಿತಿ ಹೇಗಿದೆ ಎಂದರೆ ಬಾಲಾಪರಾಧಿಗಳು ಪೊಲೀಸ್ ಠಾಣೆಗೆ ಬಂದು, ನಾನು ಕೊಲೆ ಮಾಡಿದ್ದೇನೆ; ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಿ ಎಂದು ಹೇಳುತ್ತಿದ್ದಾರೆ. ನಾವು ಸಂತ್ರಸ್ತರನ್ನು ರಕ್ಷಿಸಬೇಕೋ ಅಪರಾಧಿಗಳನ್ನೋ?’

ಇದೇ ಸಂದರ್ಭದಲ್ಲಿ ಸಚಿವರು ಸ್ಪಷ್ಟಪಡಿಸಿದ ಇನ್ನೊಂದು ಅಂಶವೆಂದರೆ- ಹೊಸ ಕಾಯ್ದೆ ಪ್ರಕಾರ ಶಿಕ್ಷೆಗೆ ಒಳಗಾಗುವ ಬಾಲಾಪರಾಧಿಗಳನ್ನು ಇತರ ಶಿಕ್ಷಿತರೊಂದಿಗೆ ಜೈಲಿಗೆ ಕಳುಹಿಸದೇ, ಪ್ರತ್ಯೇಕ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತದೆ. ಅವರು 21 ವರ್ಷ ತಲುಪುವವರೆಗೂ ಇದೇ ವ್ಯವಸ್ಥೆಯಲ್ಲಿಟ್ಟು, ನಂತರವೂ ಬೇರೆ ಕೈದಿಗಳೊಂದಿಗೆ ಬಿಡಬಹುದಾದ ಸ್ಥಿತಿಯಲ್ಲಿದ್ದಾರೆಯೇ ಎಂದು ಪರಾಮರ್ಶೆ ನಡೆಸಲಾಗುತ್ತದೆ.

ಸಿಪಿಎಂ ಮಾತ್ರ ತಿದ್ದುಪಡಿ ವಿರೋಧಿಸಿ, ಧ್ವನಿ ಮತದಲ್ಲಿ ಪಾಲ್ಗೊಳ್ಳದೇ ಸಭಾತ್ಯಾಗ ಮಾಡಿತು.

ಸಿಪಿಎಂ ಸಂಸದ ಸೀತಾರಾಂ ಯೆಚೂರಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದು ಹೀಗೆ-

‘ಬಾಲಾಪರಾಧ ನಿಯಂತ್ರಣಕ್ಕೆ ಕಾಯ್ದೆ ಬರಬೇಕು ಎಂಬುದಕ್ಕೆ ನಮ್ಮದೂ ಸಹಮತವಿದೆ. ಆದರೆ ಭಾವನಾತ್ಮಕ ಒತ್ತಡದಲ್ಲಿ ತಿದ್ದುಪಡಿ ಕಾಯ್ದೆ ತರುವುದು ಸರಿ ಅಲ್ಲ. ಈಗ ಬಾಲಕ ಎಂಬ ವ್ಯಾಖ್ಯೆಯನ್ನು ಕಾಯ್ದೆಯಲ್ಲಿ 16 ವರ್ಷಕ್ಕೆ ಇಳಿಸಲಾಗಿದೆ. ನಾಳೆ ಯಾರಾದರೂ ಇದಕ್ಕಿಂತ ಕಡಿಮೆ ವಯಸ್ಸಿನವ ಗಂಭೀರ ಅಪರಾಧ ಎಸಗಿದರೆ ಮತ್ತೆ ಪರಾಮರ್ಶೆ ನಡೆಸಲಾಗುವುದೇ? ಹೀಗಾಗಿ ವಿಧೇಯಕವನ್ನು ಸೆಲೆಕ್ಟ್ ಸಮಿತಿಗೆ ಒಪ್ಪಿಸಿ ನಂತರವಷ್ಟೇ ಪಾಸು ಮಾಡಬೇಕು.’

ಕೊನೆಗೂ ಉಳಿದ ವಿಷಾದ ಎಂದರೆ, ಕಾಯ್ದೆಗೆ ಪೂರ್ವಾನ್ವಯ ಬಲವಿಲ್ಲದೇ ಇರುವುದರಿಂದ ಜ್ಯೋತಿ ಸಿಂಗ್ ಳ ಮೇಲೆ ಅತ್ಯಾಚಾರ ಎಸಗಿ ಈಗ ಬಿಡುಗಡೆಯಾಗಿರುವ ಬಾಲಾಪರಾಧಿಗೆ ಇಂದು ರಾಜ್ಯಸಭೆಯಲ್ಲಿ ಪಾಸಾದ ವಿಧೇಯಕವನ್ನು ಅನ್ವಯಿಸಲಾಗುವುದಿಲ್ಲ.

Leave a Reply