ಚಿಕ್ಕಮಗಳೂರಲ್ಲಿ ಇಂದಿನಿಂದ ದತ್ತಮಾಲೆ ಅಭಿಯಾನ, ಇಲ್ಲಿದೆ ಪರ- ವಿರೋಧದ ಹೂರಣ

ಚಿಕ್ಕಮಗಳೂರಿನ ಗುರು ದತ್ತಾತ್ರೆಯ ಬಾಬಾ ಬುಡನ್ ಗಿರಿಯಲ್ಲಿ ಮೂರು ದಿನಗಳ ದತ್ತಮಾಲ ಜಯಂತಿ ಇಂದಿನಿಂದ ಪ್ರಾರಂಭವಾಗಿದೆ. ಪ್ರತಿವರ್ಷದಂತೆ ಈ ಬಾರಿಯು ಮಾಜಿ ಸಚಿವ, ಶಾಸಕ  ಸಿ.ಟಿ ರವಿ ನೇತೃತ್ವದಲ್ಲಿ ಹಲವಾರು ಭಕ್ತಾದಿಗಳು ದತ್ತಮಾಲವನ್ನು ಧರಿಸಿ ಬಾಬಾ ಬುಡನ್ ಗಿರಿಯಲ್ಲಿ ಮುಡಿ ಅರ್ಪಿಸಿದ್ದಾರೆ.

ಯಾವತ್ತೂ ಚರ್ಚೆಯಾಗುವಂತೆ ಈ ಬಾರಿಯೂ ಪರ- ವಿರೋಧಗಳ ಮಾತು ಇದ್ದೇ ಇದೆ. ಈ ಪ್ರದೇಶ ಯಾರಿಗೆ ಸೇರಬೇಕು ಎಂಬ ವಿವಾದ ನ್ಯಾಯಾಲಯದಲ್ಲಿರುವುದರಿಂದ ದತ್ತಮಾಲ ಜಯಂತಿ ಆಚರಣೆಯಿಂದ ಸುಪ್ರೀಂ ಕೋರ್ಟ್ ನೀಡಿದ್ದ ಯಥಾಸ್ಥಿತಿಯ ಆದೇಶ ಉಲ್ಲಂಘನೆಯಾಗಿದೆ ಎಂದು ಕೋರ್ಟನಲ್ಲಿ ದಾವೆ ಹೂಡಿರುವವರ ಆರೋಪ. ಸೆಪ್ಟೆಂಬರ್ 3ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದಲ್ಲಿ- ಈ ಜಾಗದ ಮೇಲೆ ಯಾರ ಹಕ್ಕು ಎಂದು ಕರ್ನಾಟಕ ಸರ್ಕಾರ ನಿರ್ಧರಿಸುವವರೆಗೆ ಆ ಜಾಗದಲ್ಲಿ ಯಥಾಸ್ಥಿತಿ ಮುಂದುವರಿಯಬೇಕು ಎಂದು ಹೇಳಿದೆ.

ಆದರೆ, ದತ್ತಮಾಲೆ ಅಭಿಯಾನ ಮಾಡುತ್ತಿರುವವರ ವಾದ ಹೀಗಿದೆ:

ನಾವು ಗುಡಿಯ ಹೊರಗಡೆಯೇ ಆಚರಣೆ- ಅಭಿಯಾನಗಳನ್ನು ಇಟ್ಟುಕೊಂಡಿರುವುದರಿಂದ ಯಾವುದೇ ಆದೇಶದ ಉಲ್ಲಂಘನೆಯಾಗುವುದಿಲ್ಲ. ಈಗ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಸರ್ಕಾರ ಪ್ರದೇಶದ ವಿವಾದವನ್ನು ಬಗೆಹರಿಸಬೇಕು.

ಶಾಸಕ ಸಿ.ಟಿ ರವಿ ಮತ್ತು ಭಜರಂಗದಳ ಮುಖಂಡ ಸೂರ್ಯನಾರಾಯಣ ದತ್ತಮಾಲ ಜಯಂತಿ ಅಭಿಯಾನದ ಮುಂಚೂಣಿಯಲ್ಲಿದ್ದಾರೆ. ಡಿ. 24ರಂದು ಈದ್ ಮಿಲಾದ್, ಡಿ. 25ರಂದು ಕ್ರಿಸ್ ಮಸ್ ಇರುವುದರಿಂದ ಜಿಲ್ಲಾಡಳಿತ ಹೆಚ್ಚಿನ ಬಿಗಿ ಭದ್ರತೆ ಒದಗಿಸಿದೆ.

Leave a Reply