ಜನತಾ ಪರಿವಾರ ಒಗ್ಗೂಡುವುದರ ಹಿಂದೆ ಗೌಡರು ಕಂಡ ಸಿದ್ರಾಮಯ್ಯನವರ ಹುನ್ನಾರವಾದರೂ ಏನು?

 

ಒಳಸುಳಿ

P Thyagaraj

ಪಿ. ತ್ಯಾಗರಾಜ್

ಈ ರಾಜಕೀಯದಲ್ಲಿ ಯಾವಾಗಲೂ ನೇರ ಯುದ್ಧಕ್ಕಿಂತ, ಗೆರಿಲ್ಲಾ ಯುದ್ಧದ್ದೇ ಪಾರುಪತ್ಯ. ಸುತ್ತು-ಬಳಸಿ ಆಟಗಳ ಮೂಲಕ ಎದುರಾಳಿಯನ್ನು ಕಟ್ಟಿ ಹಾಕುವುದು, ಹಿಮ್ಮೆಟ್ಟಿಸುವುದು ಒಂದು ತಂತ್ರ. ಕರ್ನಾಟಕದಲ್ಲಿ ಜನತಾ ಪರಿವಾರ ಒಗ್ಗೂಡಿಸುವುದರ ಬಗ್ಗೆ ಎದ್ದಿರುವ ಪರ ಮತ್ತು ವಿರುದ್ಧ ಧ್ವನಿಗಳ ಹಿಂದೆ ಇಂಥದೊಂದು ತಂತ್ರ ಉರುಳಾಡುತ್ತಿದೆ.

ನಿಜ, ಇದ್ದಕ್ಕಿದ್ದಂತೆ ಈ ಹಳೇ ಸಮಾಜವಾದಿ ಮುಖಂಡರಿಗೆ ಜನತಾ ಪರಿವಾರ ಒಗ್ಗೂಡಿಸಬೇಕು ಎನ್ನುವ ಬಯಕೆ ಬಂದಿದ್ದಾದರೂ ಏಕೆ? ಈ ಸಭೆಯ ಹಿಂದೆ ಯಾರ ಕೈವಾಡವಿದೆ? ಅವರ ಉದ್ದೇಶವಾದರೂ ಏನು? ಸಭೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಮಾಜಿ ಪ್ರಧಾನಿ ದೇವೇಗೌಡರು ಜನತಾ ಪರಿವಾರ ಒಂದುಗೂಡಲು ಇದು ಸಕಾಲವಲ್ಲ ಎಂದು ತಕರಾರು ತೆಗೆದದ್ದಾದರೂ ಏಕೆ – ಇವೇ ಮೊದಲಾದ ಪ್ರಶ್ನೆಗಳ ಹಿಂದೆ ಇರುವುದೂ ಮತ್ತದೇ ರಾಜಕೀಯ ತಂತ್ರ-ಪ್ರತಿತಂತ್ರವೇ.

ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಪುತ್ರ, ಮಾಜಿ ಶಾಸಕ ಮಹಿಮಾ ಪಟೇಲ್ ಅವರ ಬೆಂಗಳೂರು ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ದೇವೇಗೌಡರ ಕುಟುಂಬದಿಂದ ಅಂತರ ಕಾಯ್ದುಕೊಂಡಿರುವವರು. ಎಂ.ಪಿ. ನಾಡಗೌಡ, ಬಿ.ಆರ್. ಪಾಟೀಲ್, ಎನ್. ತಿಪ್ಪಣ್ಣ, ಬಸವರಾಜ ಹೊರಟ್ಟಿ, ಎಂ.ಸಿ. ನಾಣಯ್ಯ, ಎಂ. ಶ್ರೀನಿವಾಸ್ – ಇವರನ್ನು ಕಂಡರೆ ಗೌಡರಿಗಾಗಲಿ, ಕುಮಾರಸ್ವಾಮಿ ಅವರಿಗಾಗಲಿ ಅಷ್ಟಕ್ಕಷ್ಟೇ. ಆದರೆ ಅದೇ ಕಾಲಕ್ಕೆ ಇವರೆಲ್ಲರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಒಲವು ಇದೆ ಎಂಬುದು ಕಾಕತಾಳೀಯವೇನೂ ಅಲ್ಲ. ನೈಜ ವಿಚಾರ ಅಡಗಿರುವುದೇ ಇಲ್ಲಿ!

ಜನತಾ ಪರಿವಾರ ಒಗ್ಗೂಡಿಸುವ ದಿಕ್ಕುದೆಸೆ ಬಗ್ಗೆ ಅನೌಪಚಾರಿಕ ಚರ್ಚೆಗಾಗಿ ಇಂಥದೊಂದು ಸಭೆ ನಡೆಸುವುದಾಗಿ ಬಸವರಾಜ ಹೊರಟ್ಟಿ ಅವರು ವಾರ ಮೊದಲೇ ದೇವೇಗೌಡರ ಗಮನಕ್ಕೆ ತಂದಿದ್ದರು. ಆದರೆ ಸಭೆ ನಡೆಯುವ ಹೊತ್ತಿಗೆ ಇದರ ಉದ್ದೇಶ ಜನತಾ ಪರಿವಾರ ಒಗ್ಗೂಡಿಸುವುದಲ್ಲ, ಬದಲಿಗೆ ಜೆಡಿಎಸ್ ಗೆ ಪರ್ಯಾಯವಾಗಿ ಸಂಯುಕ್ತ ಜನತಾ ದಳ (ಜೆಡಿಯು) ಪುನಶ್ಚೇತನಗೊಳಿಸುವುದಾಗಿದೆ,  ತಮ್ಮ ಕುಟುಂಬದ ವಿರುದ್ಧ ಮುನಿದಿರುವ ಜೆಡಿಎಸ್ ಮುಖಂಡರನ್ನು ಜೆಡಿಯು ತೆಕ್ಕೆಗೆ ಸೆಳೆದೊಯ್ಯುವ ಹುನ್ನಾರ ನಡೆಯುತ್ತಿದೆ ಎಂಬ ಸುಳಿವು ಗೌಡರಿಗೆ ಸಿಕ್ಕಿತು. ಹೀಗಾಗಿ ಸಭೆ ನಡೆದ ಮರುದಿನವೇ, ಜನತಾ ಪರಿವಾರ ಒಗ್ಗೂಡಲು ಇದು ಸಕಾಲವಲ್ಲ, ಇಂಥ ಸಭೆಗಳ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಬೇಡ ಎಂಬ ಫರ್ಮಾನು ಹೊರಡಿಸಿಬಿಟ್ಟರು.

ಹಾಗಾದರೆ ಈ ಸಭೆಯ ಹಿಂದೆ ಗೌಡರು ಸಂಶೋಧನೆ ಮಾಡಿದ ಹುನ್ನಾರವಾದರೂ ಏನು? ಅದು ಅವರನ್ನು ಯಾವ ಪರಿ ಡಿಸ್ಟರ್ಬ್ ಮಾಡಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಹೀಗೆ ಸಾಗುತ್ತದೆ –

ಬಿಹಾರ ವಿಧಾನಸಭೆ ಚುನಾವಣೆ ನಂತರ, ಅಲ್ಲಿನ ಮುಖ್ಯಮಂತ್ರಿ ಆಗುವುದರ ಜತೆಜತೆಗೆ ನಿತೀಶ್ ಕುಮಾರ್ ರಾಷ್ಟ್ರೀಯ ನಾಯಕರಾಗಿಯೂ ಹೊರಹೊಮ್ಮಿದ್ದಾರೆ. ಹರಿದು ಹಂಚಿ ಹೋಗಿದ್ದ ಜನತಾ ಪರಿವಾರದ ನಾನಾ ಗುಂಪುಗಳು ಒಗ್ಗೂಡಿ ಚುನಾವಣೆ ಎದುರಿಸಿದ್ದು, ಜತೆಗೆ ‘ಮಹಾಘಟ ಬಂದನ್’ ವೇದಿಕೆಯಡಿ ಕಾಂಗ್ರೆಸ್ ಅನ್ನೂ ತಂದದ್ದು, ಈ ಚುನಾವಣೆಯಲ್ಲಿ ಬಿಜೆಪಿ ನೇತ್ವತದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) ಧೂಳೀಪಟವಾಗಿ ನಿತೀಶ್ ಕುಮಾರ್ ಅಧಿಕಾರ ಹಿಡಿದದ್ದು ಈಗ ಇತಿಹಾಸ.

ಬಿಹಾರದಲ್ಲಿ ಜನತಾ ಪರಿವಾರದ ಪ್ರಯೋಗ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಆಸೆಯೊಂದು ಚಿಗುರಿದೆ. ಕರ್ನಾಟಕದಲ್ಲಿ ಅಡ್ಡಡ್ಡ-ಉದ್ದುದ್ದ ಮಲಗಿರುವ ಸಂಯುಕ್ತ ಜನತಾ ದಳಕ್ಕೆ ಏಕೆ ಜೀವ ತುಂಬಬಾರದು, ಅದನ್ನು ಜಾತ್ಯತೀತ ಜನತಾ ದಳಕ್ಕೆ ಪರ್ಯಾಯವಾಗಿ ಏಕೆ ಬೆಳಸಬಾರದು ಎಂಬುದು ಆವರ ಆಸೆ. ಸಮಯ ಬಂದಾಗ ಕತ್ತಿಯಾಗಿಯೋ, ಗುರಾಣಿಯಾಗಿಯೋ ಅಥವಾ ಈವೆರಡನ್ನೂ ಝಳಪಿಸುವ ಸೇನಾನಿಯಾಗಿಯೋ ಸಂಯುಕ್ತ ಜನತಾ ದಳವನ್ನು ಬಳಸಿಕೊಳ್ಳಬಹುದು ಎನ್ನುವುದು ಅವರ ಈ ಆಸೆಯ ಹಿಂದಿರುವ ಆಶಯ.

ಹೇಳಿ-ಕೇಳಿ ನಿತೀಶ್ ಕುಮಾರ್ ಹಾಗೂ ಸಿದ್ದರಾಮಯ್ಯ ಮೊದಲಿಂದಲೂ ಪರಮಾಪ್ತರು. ಇಬ್ಬರೂ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಶಿಷ್ಯರು. ಗೌಡರಿಗಿಂತ ಮೊದಲು ಸಿದ್ದರಾಮಯ್ಯನವರಿಗೆ ರಾಜಕೀಯ ಆಶೀರ್ವಾದ ಮಾಡಿದವರು ಫರ್ನಾಂಡಿಸ್. 1983 ರಲ್ಲಿ ಸಿದ್ದರಾಮಯ್ಯನವರು ಜಾರ್ಜ್ ನೇತೃತ್ವದ ಭಾರತೀಯ ಲೋಕದಳ ಅಭ್ಯರ್ಥಿಯಾಗಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ನಿತೀಶ್ ಕುಮಾರ್ ಜತೆ ಸ್ನೇಹ, ಒಡನಾಟ ನಿಕಟವಾಗಿಯೇ ಮುಂದುವರಿದಿದ್ದು, ಮೊನ್ನೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಸಮಾರಂಭಕ್ಕೂ ಸಿದ್ದರಾಮಯ್ಯನವರು ಸಾಕ್ಷಿಯಾಗಿದ್ದರು.

ಅಂತ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅನ್ನು ಕರ್ನಾಟಕದಲ್ಲಿ ಬೆಳೆಸಿ, ಅಗತ್ಯ ಬಿದ್ದಾಗ ಬಳಸಿಕೊಳ್ಳಬೇಕು ಎಂದು ಸಿದ್ದರಾಮಯ್ಯನವರಿಗೆ ಅನ್ನಿಸಿಬಿಟ್ಟಿದೆ. ಹಾಗೆ ಅವರಿಗೆ ಅನ್ನಿಸಲು ಸಾಕಷ್ಟು ಕಾರಣಗಳಿವೆ. ಈಗ ಕರ್ನಾಟಕದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ ಎನ್ನುವುದರ ಜತೆಜತೆಗೆ ಒಕ್ಕಲಿಗ ಸಮುದಾಯದೊಂದಿಗೆ ಗುರುತಿಸಿಕೊಂಡಿದೆ. ಬೇರೆ ಸಮುದಾಯದವರು ಇಲ್ಲಿ ನಾಯಕರಾಗಲು ಸಾಧ್ಯವಿಲ್ಲ. ಒಂದೊಮ್ಮೆ ನಾಯಕರಾಗಿ ಬಿಂಬಿತರಾದರೂ ಅಲ್ಲೊಂದು ಚೌಕಟ್ಟು ಇರುತ್ತದೆ. ಮಾಜಿ ಸಚಿವರಾದ ಚಲುವರಾಯಸ್ವಾಮಿ ಇರಲಿ, ಬಸವರಾಜ ಹೊರಟ್ಟಿ ಇರಲಿ, ಜಮೀರ್ ಅಹಮದ್ ಖಾನ್ ಇರಲಿ ಯಾರೇ ನಾಯಕರೆನಿಸಿಕೊಂಡರೂ ಅದು ಸೀಮಿತ ಉದ್ದೇಶ ಮತ್ತು ಸಂದರ್ಭಕ್ಕೆ ಮಾತ್ರ. ಹೀಗಾಗಿ ಅವರೆಲ್ಲ ‘ಟೈಮ್ ಪಾಸ್’ ನಾಯಕರು. ಹಾಗಿದ್ದಾಗಲೂ ಗೌಡರು ಮತ್ತು ಕುಮಾರಸ್ವಾಮಿ ನೆರಳಲ್ಲೇ ಕೆಲಸ ಮಾಡಬೇಕು. ಇದು ಸಹ್ಯವಾಗದೇ ಚಲುವರಾಯಸ್ವಾಮಿ ಮತ್ತವರ ಗುಂಪು ಈಗ ಪಕ್ಷದೊಳಗೇ ಮುಟ್ಟಿದರೆ ಮುನಿ ಗಿಡದಂತಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ  ಜೆಡಿಯು ಪುನಶ್ಚೇತನಗೊಳಿಸಿದರೆ ಒಂದಷ್ಟು ರಾಜಕೀಯ ಲಾಭ ಆಗಬಹುದು ಎನ್ನುವುದು ಸಿದ್ದರಾಮಯ್ಯನವರ ಚಿಂತನೆ.

ಹೇಗಿದ್ದರೂ ತಮಗೆ ಅಹಿಂದ ನಾಯಕನ ಪಟ್ಟ ಬಂದಿದೆ. ಒಕ್ಕಲಿಗರು ಗೌಡರ ಜತೆಗಿದ್ದಾರೆ ಎಂಬುದನ್ನೇ ಮುಂದೆ ಮಾಡಿ, ಮತ್ತೊಂದು ಪ್ರಬಲ ಸಮುದಾಯ ಲಿಂಗಾಯತರನ್ನು ಸೆಳೆಯಲು ಯತ್ನಿಸಬಹುದು. ಬಸವರಾಜ ಹೊರಟ್ಟಿ, ಬಿ.ಆರ್. ಪಾಟೀಲ್, ನಾಡಗೌಡ, ತಿಪ್ಪಣ್ಣ ಅವರಂಥವರನ್ನು ಮುಂದೆ ಮಾಡಿರುವುದೇ ಈ ಕಾರಣಕ್ಕೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಮುಖಂಡರಿಗಾಗಲಿ, ದಿಲ್ಲಿಯ ವರಿಷ್ಠರಿಗಾಗಲಿ ಈ ಬಗ್ಗೆ ಮನಸ್ಸು ಇದ್ದಂಲಿಲ್ಲ. ಒಂದೊಮ್ಮೆ ಯಡಿಯೂರಪ್ಪನವರಿಗೆ ಪಟ್ಟ ಕಟ್ಟದಿದ್ದರೆ ಲಿಂಗಾಯತ ಸಮುದಾಯ ಪರ್ಯಾಯ ಪಕ್ಷದ ಕಡೆ ನೋಡುತ್ತದೆ. ಆ ಪರ್ಯಾಯ ಪಕ್ಷ ಸಂಯುಕ್ತ ದಳವೇ ಆಗಬೇಕು ಎನ್ನುವುದು ಸಿದ್ದರಾಮಯ್ಯನವರ ಯೋಚನೆ.

ಜೆಡಿಯು ಪುನಶ್ಚೇತನದಿಂದ ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯವರಿಗೇನೂ ಲಾಭ ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ. ಕಾರಣವಿಲ್ಲದೇ ಯಾರೂ ಯಾವುದೇ ಕೆಲಸಕ್ಕೆ ಕೈ ಹಾಕುವುದಿಲ್ಲ. ನಿತೀಶ್ ಕುಮಾರ್ ಕಾರಣಕ್ಕೆ ಜೆಡಿಯು ಜತೆ ಕಾಂಗ್ರೆಸ್ ಒಡನಾಟ ಬೆಳೆಸಿರುವುದು ಸರಿಯಷ್ಟೇ. ಹಾಗೆಂದ ಮಾತ್ರಕ್ಕೆ ರಾಜಕೀಯ ಹೀಗೇ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಭವಿಷ್ಯದಲ್ಲಿ ಕಾಂಗ್ರೆಸ್ ಏನಾದರೂ ತಮ್ಮ ಸ್ಥಾನಪಲ್ಲಟಕ್ಕೆ ಯತ್ನಿಸಿದರೆ ಜೆಡಿಯು ಮುಂದಿಟ್ಟುಕೊಂಡು ಆ ಯತ್ನಕ್ಕೆ ತಿರುಗೇಟು ನೀಡುವುದು ಸಿದ್ದರಾಮಯ್ಯನವರ ತಂತ್ರ. ಏಕೆಂದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗಬೇಕೆನ್ನುವ ಇರಾದೆಯಿದೆ ಎಂಬ ಮಾತು ಆಗಾಗ್ಗೆ ಕೇಳಿಬರುತ್ತಿದೆ. ಅಂಥ ಸ್ಥಿತಿಯೇನಾದರೂ ಎದುರಾದರೆ, ಪ್ರತ್ಯಸ್ತ್ರವಾಗಿ ಬಳಸಲು ಜೆಡಿಯು ಗಟ್ಟಿಗೊಳಿಸಿಟ್ಟುಕೊಳ್ಳಬೇಕು ಎಂಬುದು ಸಿದ್ದರಾಮಯ್ಯನವರ ರಾಜಕೀಯ ಪಟ್ಟು.

ಹಿಂದೆಲ್ಲ ಆಗಿದ್ದಿದ್ದರೆ ಸಿದ್ದರಾಮಯ್ಯನವರು ಇಂಥ ಆಲೋಚನೆ ಮಾಡುವ ಮುನ್ನ ಹತ್ತು ಸಲ ಯೋಚನೆ ಮಾಡುತ್ತಿದ್ದರೇನೋ. ಆದರೆ ಈಗ ಆ ಸ್ಥಿತಿ ಇಲ್ಲ. ಮುಖ್ಯಮಂತ್ರಿ ಸ್ಥಾನಬಲದಿಂದ ಜೆಡಿಯುಗೆ ಆರ್ಥಿಕ ಶಕ್ತಿ ತುಂಬುವ ತಾಕತ್ತು ಅವರಿಗಿದೆ. ಅವರ ಮಾತು ಕೇಳುವ ಒಂದಷ್ಟು ಮಂದಿ ಈಗಲೂ ದಳದ ಉಭಯ ಪಾಳೆಯಗಳಲ್ಲೂ ಇದ್ದಾರೆ. ಅವರೆಲ್ಲರಿಗೂ ಗೌಡರು ಮತ್ತು ಕುಮಾರಸ್ವಾಮಿ ಎಂದರೆ ಸಮಾನ ಅಲರ್ಜಿ. ಮೇಲ್ಮನೆ ಸ್ಥಾನವಂಚಿತ ಮುಖಂಡ ಎಂ.ಸಿ. ನಾಣಯ್ಯ ಪಕ್ಷದ ರಾಜ್ಯ ಮುಖಂಡರ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮಡಿಕೇರಿ ಜೆಡಿಎಸ್ ಅಭ್ಯರ್ಥಿ ಎಂ.ಪಿ. ಸಂಕೇತ್ ಪೂವಯ್ಯ ಅವರನ್ನು ಬೆಂಬಲಿಸದಿರಲು ತಮ್ಮ ಬಣಕ್ಕೆ ಸೂಚನೆ ಕೊಟ್ಟಿದ್ದಾರೆ. ಇದೊಂದು ಸಂಕೇತ ಮಾತ್ರ. ನಾಣಯ್ಯ ಅವರ ನಿರ್ಧಾರದ ಹಿಂದಿರುವ ತರ್ಕಶಕ್ತಿ ಒಂದು ಕಡೆ ಅವರಿಗಾಗಿರುವ ಅನ್ಯಾಯವಾದರೆ, ಮತ್ತೊಂದು ಕಡೆ ಅವರಿಗೆ ಪ್ರೀತಿ ಮತ್ತು ಅನುಕಂಪ ಸ್ಫುರಿಸುತ್ತಿರುವ ಸಿದ್ದರಾಮಯ್ಯನವರೇ ಎಂಬುದು ಸಣ್ಣ ಮಗುವಿಗೂ ಅರ್ಥವಾಗುವ ವಿಷಯ. ಬಸವರಾಜ ಹೊರಟ್ಟಿ, ಚಲುವರಾಯಸ್ವಾಮಿ, ಬಾಲಕೃಷ್ಣ, ಶ್ರೀನಿವಾಸ್ ಸೇರಿದಂತೆ ಅನೇಕರು ಇದೇ ರೀತಿ ಸಿದ್ದರಾಮಯ್ಯನವರ ಪ್ರೀತಿ ಫಲಾನುಭವಿಗಳಾಗಿದ್ದಾರೆ.

ದೇವೇಗೌಡರ ಕುಟುಂಬದಿಂದ ಕೋಪಗ್ರಸ್ತರಾಗಿರುವ ಅನೇಕ ಮುಖಂಡರು ಸಿದ್ದರಾಮಯ್ಯನವರ ಸಂಪರ್ಕದಲ್ಲಿದ್ದಾರೆ. ಕೆಲವರು ಬಹಿರಂಗವಾಗಿ, ಇನ್ನೂ ಕೆಲವರು ತೆರೆಮರೆಯಲ್ಲಿ. ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಅವರೂ ಒಂದು ಸ್ಪಷ್ಟ ನೆಲೆಗಾಗಿ ಹುಡುಕಾಡುತ್ತಿದ್ದಾರೆ. ಇನ್ನೊಂದೆಡೆ ಸರಿಯಾದ ಮೇಟಿ ಇಲ್ಲದೇ ಜೆಡಿಯು ನಾಯಕರೂ ಪರಿತಪಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಸಿದ್ದರಾಮಯ್ಯ ಕೃಪಾಪೋಷಿತ ನಾಯಕ ಮಂಡಳಿ ಜನತಾ ಪರಿವಾರ ಒಗ್ಗೂಡಿಸುವ ನೆಪದಲ್ಲಿ ಜೆಡಿಯು ಪುನಶ್ಚೇತನಕ್ಕೆ ಮುಂದಾಗಿವೆ. ಇದನ್ನು ಅಷ್ಟೇ ಸ್ಪಷ್ಟವಾಗಿ ಗ್ರಹಿಸಿರುವ ದೇವೇಗೌಡರು ಪ್ರತಿವ್ಯೂಹ ರಚನೆಯಲ್ಲಿ ನಿರತರಾಗಿದ್ದಾರೆ. ಅದರ ಮೊದಲ ಅಸ್ತ್ರವೇ, ‘ಜನತಾ ಪರಿವಾರ ಒಗ್ಗೂಡಲು ಇದು ಸಕಾಲವಲ್ಲ’ ಎಂಬ ಹೇಳಿಕೆ.

ಲಗೋರಿ :  ಅವರ ದೇವರ ಸತ್ಯ ಅವರವರಿಗೇ ಚನ್ನಾಗಿ ಗೊತ್ತಿರುತ್ತದೆ.

7 COMMENTS

  1. Very good analysis. You have identified the political scenario correctly. Siddaramaiah is getting smart every day. He has brought the JD(S) to its knees by making appropriate moves. Very interesting!!

  2. Thanks Tyagaraj. Once again welcome to “olasuli” We missed a lot in between. Very happy to see you in “olasuli”. Keep it up.

Leave a Reply