ಜಿಎಸ್ಟಿಗಾಗಿ ರಿಸ್ಕ್ ತೆಗೆದುಕೊಂಡ ಮೋದಿ ಸರ್ಕಾರ, ಇನ್ಫೋಸಿಸ್ ಗೆ ಸಿಕ್ಕಿದೆ ಎಲ್ಲ ಬಗೆಯ ಸಹಕಾರ

 

ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಪರಿಣತ

ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್ ಟಿ) ವಿಧೇಯಕ ಈ ವರ್ಷ ಪಾಸಾಗುವ ಸಾಧ್ಯತೆ ಇಲ್ಲ ಎನ್ನುವುದು ಈಗ ಎಲ್ಲರಿಗೂ ತಿಳಿದ ವಿಷಯ.  ತಿಳಿಯದ ವಿಷಯ ಏನೆಂದರೆ ಜಿಎಸ್ ಟಿ ಈ ವರ್ಷವೇ ಪಾಸಾಗಬಹುದು ಎನ್ನುವ ನಿರೀಕ್ಷೆಯಿಂದ ಅದರ ನಿರ್ವಹಣೆಗೆ ಬೇಕಾಗುವ ಸಾಫ್ಟ್ವೇರ್ ಸಿದ್ಧ ಮಾಡಲು ಕೇಂದ್ರ ಸರಕಾರ ಇನ್ಫೋಸಿಸ್ ಕಂಪನಿಯೊಂದಿಗೆ 1380 ಕೋಟಿ ರುಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಜಿಎಸ್ ಟಿ ಜಾಲದ ಅಭಿವೃದ್ಧಿ ಮತ್ತು ನಿರ್ವಹಣೆ ಈ ಎರಡೂ ಹೊಣೆಗಾರಿಕೆ ಇನ್ಫೋಸಿಸ್ ಗೆ ವಹಿಸಲಾಗಿದೆ.
ರಾಜ್ಯಸಭೆಯಲ್ಲಿ ಈ ವರ್ಷ ಜಿಎಸ್ ಟಿ ಪಾಸಾಗದೇ ಇದ್ದರೆ , ಸಾಫ್ಟ್ವೇರ್ ಕೆಲಸ ಕೂಡ ಮುಂದೆ ಹೋಗಬಹುದು ಎನ್ನುವ ಸಂಶಯ, ಆತಂಕ ಎಲ್ಲರಲ್ಲೂ ಇತ್ತು. ಆದರೆ ಅದು ಸುಳ್ಳಾಗಿದೆ. ಮೋದಿ ಸರಕಾರ ಇನ್ಫೋಸಿಸ್ ಸಂಸ್ಥೆಗೆ ಹಸಿರು ನಿಶಾನೆ ತೋರಿಸಿದೆ. ನೀವು ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿ , ಮಿಕ್ಕಿದ್ದ ನಮಗೆ ಬಿಡಿ ಎನ್ನುವ ಸಂದೇಶ ನೀಡಿದೆ.
ಮೋದಿ ಸರಕಾರ GSTN ಎನ್ನುವ ಕಂಪನಿ ಸೃಷ್ಟಿಸಿದೆ.  ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ನೆಟ್ವರ್ಕ್ ಎನ್ನುವ ಹೆಸರಿನ ಈ ಸಂಸ್ಥೆ ಇಡೀ ದೇಶದ ಜನರಿಗೆ ಜಿಎಸ್ ಟಿಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಸಹಾಯ ಒದಗಿಸಲಿದೆ. ಇನ್ಫೋಸಿಸ್ ತಯಾರು ಮಾಡಲಿರುವ ಈ ಸಾಫ್ಟ್ವೇರ್ ಮೂಲಕ ಪ್ರತಿಯೊಬ್ಬರೂ ತಮ್ಮ PAN  ( ಪರ್ಮನೆಂಟ್ ಅಕೌಂಟ್ ನಂಬರ್ ) ಉಪಯೋಗಿಸಿ ಹೆಸರನ್ನು ನೊಂದಾಯಿಸಿ ಕೊಳ್ಳಬಹುದು ಮತ್ತು ತಮ್ಮ ಟ್ಯಾಕ್ಸ್ ರಿಟರ್ನ್ಸ್ ಅನ್ನು ನೇರವಾಗಿ ಆನ್ಲೈನ್ ಮೂಲಕ ಸಲ್ಲಿಸಬಹುದು.
10 ಲಕ್ಷಕ್ಕೂ ಹೆಚ್ಚು ವ್ಯವಹಾರ ಹೊಂದಿರುವ ವರ್ತಕರು ಈ ಸಾಫ್ಟ್ವೇರ್ ಮೂಲಕ ತಮ್ಮ ನೊಂದಾವಣಿ ಮಾಡಿಕೊಳ್ಳಬೇಕಿರುವುದು ಕಡ್ಡಾಯ.
ಈ ಸಾಫ್ಟ್ವೇರ್ ಮೊದಲ ಹಂತದಲ್ಲಿ ನೋಂದಣಿ, ತೆರಿಗೆ ನೇರ ಸಲ್ಲಿಕೆ ಹಾಗೂ ರೀಫಂಡ್ (ಹೆಚ್ಚು ಕಟ್ಟಿದ ಹಣ ವಾಪಸ್ಸು ಕೊಡುವ ಪ್ರಕ್ರಿಯೆ ) ಹೊಂದಿರಲಿದ್ದು, ಎರಡನೇ ಹಂತದಲ್ಲಿ ಸಲ್ಲಿಸಿದ ತೆರಿಗೆ ಸಲ್ಲಿಕೆ (ಟ್ಯಾಕ್ಸ್ ರಿಟರ್ನ್ಸ್ ) ಪರಿಶೀಲನೆ ಹಾಗೂ ಅದರ ನಿಖರತೆಯ ತಪಾಸಣೆ (ಆಡಿಟ್) ಹೊಂದಿರಲಿದೆ.
ಈ ಹಿಂದೆ ‘ಡಿಜಿಟಲ್ ಕನ್ನಡ’ದಲ್ಲಿ ಮೋದಿ ಸರಕಾರಕ್ಕೆ ಜಿಎಸ್ಟಿ ಏಕೆ ನಿರ್ಣಾಯಕ ಗೊತ್ತಾ? ಎನ್ನುವ ಲೇಖನದಲ್ಲಿ , ಕಾಂಗ್ರೆಸ್ ಸರಕಾರ ಈ ವರ್ಷ ಜಿಎಸ್ಟಿ ಪಾಸ್ ಆಗದಂತೆ ನೋಡಿಕೊಂಡರೆ ಅಚ್ಚರಿ ಇಲ್ಲ ಎಂದು ಬರೆಯಲಾಗಿತ್ತು. ಮುಂದಿನ ವರ್ಷ ಏಪ್ರಿಲ್ ನಲ್ಲೋ  ಅಥವಾ ನವೆಂಬರ್- ಡಿಸೆಂಬರ್ ನಲ್ಲೋ ಈ ವಿಧೇಯಕ ಪಾಸು ಆದರೆ ಅದು ಮೋದಿ ಸರಕಾರಕ್ಕೆ ಬಹಳ ರಿಸ್ಕ್ ನ ಸಂಗತಿ. ಮೂವತ್ತು ಬಾಲ್ ಗಳಲ್ಲಿ ಎಪ್ಪತ್ತು ರನ್ ಗಳಿಸುವ ಹಾಗೆ. ಇನ್ಫೋಸಿಸ್ ಸಂಸ್ಥೆಗೆ ನಿಮ್ಮ ಕೆಲಸ ಮುಂದುವರಿಸಿ ಎಂದು ಕೇಂದ್ರ ನೀಡಿರುವ ಅಭಯ ನೋಡಿದರೆ, ಮೋದಿ ಸರಕಾರ  ‘ರಿಸ್ಕ್’ ತೆಗೆದು ಕೊಳ್ಳಲು ಮಾನಸಿಕವಾಗಿ ಸಿದ್ಧವಾದಂತಿದೆ. ಹಾಗೊಮ್ಮೆ ಮೋದಿ ಸರಕಾರ 2019 ರಲ್ಲಿ ಜಯಗಳಿಸಲು ಅಶಕ್ತವಾದರೂ ಮುಂಬರುವ ದಿನಗಳಲ್ಲಿ ಭಾರತೀಯ ಜನತೆಗೆ, ದೇಶಕ್ಕೆಈ  ದಿಟ್ಟ ನಿರ್ಧಾರ ಉತ್ತಮ ಫಲಿತಾಂಶ ನೀಡಲಿದೆ.

1 COMMENT

Leave a Reply