ಇಂಗ್ಲೆಂಡ್ ನಲ್ಲಿ ಕ್ರಿಸ್ ಮಸ್ ಅಂದ್ರೆ ಏಸುವಿನ ಆದರ್ಶವಲ್ಲ, ಕಣ್ಣಿಗೆ ರಾಚೋದು ಯುವ ಸಮೂಹದ ಸ್ವೇಚ್ಛಾಚಾರ!

ಪ್ರವೀಣ್ ಕುಮಾರ

ಕ್ರಿಸ್ ಮಸ್. ಏಸು ಹುಟ್ಟಿದ್ದನ್ನು ಸಂಭ್ರಮಿಸುವ ಹಬ್ಬ. ಕ್ರೈಸ್ತ ಸಮುದಾಯದವರಿಗಂತೂ ಕ್ಯಾಲೆಂಡರಿನ ಅತಿ ಪ್ರಮುಖ ದಿನ ಹಾಗೂ ಜಗತ್ತಿನಾದ್ಯಂತ ಸಂಭ್ರಮಕ್ಕೆ ತೆರೆದುಕೊಳ್ಳುವ, ಏಸು ಕ್ರಿಸ್ತನ ಸಂದೇಶಗಳ ಬಗ್ಗೆ, ಆ ದೈವಿಕ ಅವತಾರದ ನೆನಪಿಗೆ ಒಡ್ಡಿಕೊಳ್ಳುವ ಅವಕಾಶ ಡಿಸೆಂಬರ್ 25ಕ್ಕೆ ವಾರದ ಮೊದಲೇ ತೆರೆದುಕೊಳ್ಳುತ್ತದೆ. ರಜಾದ ಮೂಡು, ಕುಟುಂಬ- ಸ್ನೇಹಿತರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವುದಕ್ಕೆ ಒದಗುವ ನೆಪ…

ಅದು ಕ್ರಿಸ್ ಮಸ್ ಇರಲಿ, ದೀಪಾವಳಿ ಇರಲಿ ಮನಸ್ಸಿನಲ್ಲಿ ಇಂಥದೇ ಒಂದು ವಿರಾಮದ, ಪರಸ್ಪರ ಕಲೆಯುವಿಕೆಯ, ಸೌಹಾರ್ದದ ಚಿತ್ರಣ ಮೂಡಬೇಕಲ್ಲವೇ?

ಆದರೆ….

ಕ್ರೈಸ್ತ ಬಹುಸಂಖ್ಯಾತ ದೇಶ ಇಂಗ್ಲೆಂಡ್ ನಲ್ಲಿ ಕ್ರಿಸ್ ಮಸ್ ಬಂತೆಂದರೆ ಬೆಚ್ಚಿ ಬೀಳುವಂತಾಗಿದೆ! ಕಾರಣ, ಹಬ್ಬದ ಎಲ್ಲ ಆದರ್ಶ- ಉದ್ದೇಶಗಳನ್ನೇ ಮರೆತು ಕ್ರಿಸ್ ಮಸ್ ರಜೆ ಬಂದಿರುವುದೇ ಮಜಾ ಉಡಾಯಿಸಲಿಕ್ಕೆ ಎಂಬಂತೆ ಶೋಕಿಲಾಲರಾಗಿ ಪರಿವರ್ತನೆಗೊಂಡುಬಿಟ್ಟಿದೆ ಅಲ್ಲಿನ ಯುವ ಸಮೂಹ! ಪರಿಸ್ಥಿತಿ ಹೇಗಾಗಿದೆ ಎಂದರೆ ಕ್ರಿಸ್ ಮಸ್ ಎಂದೊಡನೆ ಅಲ್ಲಿನ ಯುವ ಸಮೂಹಕ್ಕೆ ಅಪ್ಪಿ ತಪ್ಪಿಯೂ ಏಸು ಕ್ರಿಸ್ತ ನೆನಪಾಗುವುದಿಲ್ಲ. ಕ್ರಿಸ್ ಮಸ್ ಎಂದರೆ ಅವರ ಪಾಲಿಗೆ ಕುಡಿದು ತೂರಾಡಿ, ರಸ್ತೆಯಲ್ಲೇ ವಾಂತಿ ಮಾಡಿಕೊಂಡು, ತುರ್ತು ಆರೋಗ್ಯ ಕೇಂದ್ರಗಳಿಗೆ ದಾಖಲಾಗುವ ದಿನವಾಗಿಬಿಟ್ಟಿದೆ. ವಾರದ ಮೊದಲೇ, ಅಂದರೆ ಡಿಸೆಂಬರ್ 17-18 ರಂದೇ ಇಂಗ್ಲೆಂಡ್ ನ ನಾನಾ ನಗರಗಳ ಬೀದಿಗಳು ಸಮಸ್ಯೆಯ ತಾಣಗಳಾಗಿ ಮಾರ್ಪಾಡಾಗುತ್ತವೆ. ಕ್ರಿಸ್ ಮಸ್ ರಜೆ ಶುರುವಾಗುವ ಶುಕ್ರವಾರವನ್ನು (ಈ ಬಾರಿ ಡಿ.18) ‘ಬ್ಲಾಕ್ ಐ ಫ್ರೈಡೆ’ ಅಂತಲೇ ಕರೆಯುವಮಟ್ಟಿಗೆ ಅಲ್ಲಿನ ಪರಿಸ್ಥಿತಿ ಹದಗೆಟ್ಟುಬಿಟ್ಟಿದೆ.

brit

ಇಲ್ಲ…ಇಲ್ಲ.. ಇದು ಇಂಗ್ಲೆಂಡ್ ಬಗ್ಗೆ ಮತ್ಸರ ಇಟ್ಟುಕೊಂಡಿರುವವರ್ಯಾರೋ ನೀಡುತ್ತಿರುವ ಚಿತ್ರಣ ಅಂದುಕೊಳ್ಳಬೇಡಿ. ಆ ದೇಶದ ಪ್ರಸಿದ್ಧ ಪತ್ರಿಕೆಗಳಾದ ‘ಡೈಲಿ ಮೇಲ್’ , ‘ಡೈಲಿ ಸ್ಟಾರ್’ನಂಥ ಪತ್ರಿಕೆಗಳೇ ಈ ಬಗ್ಗೆ ವಿವರವಾದ ವರದಿಗಳನ್ನು ಮಾಡಿವೆ. ಸ್ವೇಚ್ಛಾಚಾರವನ್ನು ಬಿಂಬಿಸುವ ಫೋಟೋಗಳನ್ನು ಪ್ರಕಟಿಸಿವೆ.

ಕ್ರಿಸ್ ಮಸ್ ರಜೆಯೊಂದಿಗೆ ಶುರುವಾಗುವ ಮಿತಿಮೀರಿದ ಕುಡಿತ ಎಂಥ ಸನ್ನಿವೇಶವನ್ನು ಸೃಷ್ಟಿಸಿದೆ ಎಂಬ ಬಗ್ಗೆ ‘ಡೈಲಿ ಮೇಲ್’ ಪಟ್ಟಿ ಮಾಡಿರುವ ಅಂಶಗಳನ್ನು ಗಮನಿಸಿ.

  • ಹಿಂಸೆ, ಮಿತಿ ಮೀರಿದ ಕುಡಿತ, ಅಶಿಸ್ತಿನ ಪ್ರಕರಣಗಳಿಂದ ಪೊಲೀಸ್ ಠಾಣೆಗಳೆಲ್ಲ ಭರ್ತಿಯಾಗಿರುತ್ತವೆ.
  • ಇಂಗ್ಲೆಂಡ್ ನ ನಗರಗಳು, ಸಣ್ಣ ಪಟ್ಟಣಗಳಲ್ಲೆಲ್ಲ ಕುಡಿದು ಗಲಾಟೆ ಎಬ್ಬಿಸುವ ಉನ್ಮಾದ ಸಮೂಹದಿಂದಾಗಿ ಕ್ರಿಸ್ ಮಸ್ ಎಂಬ ಪದ ನೇಪಥ್ಯಕ್ಕೆ ಹೋಗಿ, ‘ಬ್ಲಾಕ್ ಐ ಫ್ರೈಡೆ’ ಎಂಬ ಪದವೇ ಚಾಲ್ತಿಗೆ ಬಂದಿದೆ.
  • ಕ್ರಿಸ್ ಮಸ್ ಗೂ ಪೂರ್ವದಲ್ಲಿ ಶುರುವಾಗುವ ರಜೆಯಿಂದಲೇ ಎಲ್ಲರೂ ಪಾರ್ಟಿಗಳನ್ನು ಸಂಘಟಿಸಲು ತೊಡಗುತ್ತಾರಾದ್ದರಿಂದ ಈ ಅವಧಿಯಲ್ಲಿ ಆಲ್ಕೋಹಾಲ್ ಮಾರಾಟ ಶೇ. 142ರಷ್ಟು ಹೆಚ್ಚಳ ಕಾಣುತ್ತದೆ!

brit2

ಹೀಗೆ ಅಕ್ಷರಗಳಲ್ಲಿ ವಿವರಣೆ ಓದುವುದಕ್ಕಿಂತ ನೀವು ಡೈಲಿಮೇಲ್ ಜಾಲತಾಣ ಪ್ರಕಟಿಸಿರುವ ಚಿತ್ರಗಳನ್ನು ಈ ಕೊಂಡಿಯಲ್ಲಿ ನೋಡಿದರೆ ಪರಿಸ್ಥಿತಿಯ ನಿಖರ ಚಿತ್ರಣ ಸಿಕ್ಕಿಬಿಡುತ್ತದೆ.

brit3

ಇದೇನು ಈ ವರ್ಷ ಪ್ರಾರಂಭವಾದ ಪಿಡುಗಲ್ಲ. ಸಂಭ್ರಮ- ಸೌಹಾರ್ದಕ್ಕೆ ಕಾರಣವಾಗಬೇಕಿದ್ದ ಕ್ರಿಸ್ ಮಸ್ ಮುನ್ನಾದಿನವು ಸ್ವೇಚ್ಛಾಚಾರಕ್ಕೆ ತಿರುಗಿ ಹಲವು ವರ್ಷಗಳೇ ಕಳೆದಿವೆ. ಅಲ್ಲಿನ ಯುವ ಸಮೂಹವನ್ನು ಬೆಸೆದಿಡಬೇಕಿದ್ದ ಶ್ರದ್ಧೆಯ ಎಳೆಗಳು ಯಾವತ್ತೋ ಹರಿದುಹೋಗಿವೆ. 2012ರ ಈ ವಿಡಿಯೋ ತುಣುಕು ಸಹ ಕ್ರಿಸ್ ಮಸ್ ರಜೆಯ ರೌಡಿ ರಾತ್ರಿಗಳನ್ನು ಪರಿಚಯಿಸುತ್ತದೆ.

ನಾವು ಆಧುನಿಕರಾಗಬೇಕು, ಉದಾರವಾದಿಗಳಾಗಬೇಕು ಎಂದೆಲ್ಲ ಮಾತನಾಡುವಾಗ ಹೆಚ್ಚಿನ ಬಾರಿ ಪಶ್ಚಿಮದ ರಾಷ್ಟ್ರಗಳ ಉದಾಹರಣೆ ಆದರ್ಶವಾಗಿಬಿಡುತ್ತದೆ. ಆದರೆ ಏಸು ಕ್ರಿಸ್ತ ಅಥವಾ ಇನ್ಯಾವುದೇ ಪೂಜನೀಯ ವ್ಯಕ್ತಿಯ ಹಬ್ಬದಲ್ಲಿ ಕುಡಿದು ತೂರಾಡುವ ಪೀಳಿಗೆಯೊಂದನ್ನು ಸೃಷ್ಟಿಸುವುದು ನಮಗೆ ಬೇಡದಿರುವ ಉಸಾಬರಿ ಅಲ್ಲವೇ? ಇಂಥ ಆಧುನಿಕತೆ ನಮಗೆ ಯಾಕಾದರೂ ಬೇಕು ಎಂಬ ಪ್ರಶ್ನೆ ಏಳುವುದಿಲ್ಲವೇ?

Leave a Reply