ಮೂರು ಎಕರೆಗೂ ಮೀರಿ ಅರಣ್ಯ ಭೂಮಿ ಹಿಡುವಳಿದಾರರ ತಕ್ಷಣ ತೆರವಿಗೆ ಸರಕಾರದ ಆದೇಶ

ಅರಣ್ಯ ಭೂಮಿಯಲ್ಲಿ ಮೂರು ಎಕರೆಗೆ ಒಳಪಟ್ಟು ಹಿಡುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸದಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಮಿತಿ ಮೀರಿರುವವರನ್ನು ತಕ್ಷಣ ತೆರವುಗೊಳಿಸಲು ಸೂಚಿಸಿದೆ.

1978 ಕ್ಕೂ ಮೊದಲಿಂದಲೂ ದಾಖಲೆ ಸಮೇತ ಸಾಗುವಳಿ ಮಾಡುತ್ತಿರುವವರು ಹಾಗೂ ತಮ್ಮ ಭೂಮಿ ಸಕ್ರಮಗೊಳಿಸುವಂತೆ 1980 ಕ್ಕೂ ಮೊದಲು ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಇದನ್ನು ಹೊರತುಪಡಿಸಿದ ಯಾವುದೇ ಒತ್ತುವರಿಗೂ ಮನ್ನಣೆ ಇಲ್ಲ. ಮೂಲ ದಾಖಲೆ ಹೊಂದಿರುವ ರೈತರಿಗೆ ಸಾಗುವಳಿ ಚೀಟಿ ನೀಡಲಾಗುತ್ತದೆ. ಅವರಿಗೆ ಅರಣ್ಯ ಅಧಿಕಾರಿಗಳಿಂದ ಯಾವುದೇ ಕಿರುಕುಳ ಇರುವುದಿಲ್ಲ.

ಸುಪ್ರೀಂ ಕೋರ್ಟ್ ಆದೇಶದಂತೆ ಡೀಮ್ಡ್ ಅರಣ್ಯ ಪ್ರದೇಶದ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವರದಿಗೆ ಅನುಮೋದನೆ ಪಡೆದು, ನ್ಯಾಯಾಲಯಕ್ಕೆ ಸಲ್ಲಿಸಲು ಸರಕಾರ ನಿರ್ಧರಿಸಿದೆ. ಈಗ ಸರ್ವೇ ಕಾರ್ಯ ಮುಗಿದಿರುವುದರಿಂದ ಬಹಳಷ್ಟು ಅರಣ್ಯ ಭೂಮಿ ತೆರವಾಗಿ ಕಂದಾಯ ಇಲಾಖೆಗೆ ಹಸ್ತಾಂತರವಾಗಲಿದೆ. ಕಂದಾಯ ಭೂಮಿಯ ಕೆಲ ಪ್ರದೇಶ ಅರಣ್ಯ ವ್ಯಾಪ್ತಿಗೆ ಒಳಪಡಲಿದೆ. ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಹೊರಬರುವ ಕಂದಾಯ ಭೂಮಿಯಲ್ಲಿ ಈಗಾಗಲೇ ಸಾಗುವಳಿ ಮಾಡುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಬೆಂಗಳೂರಿನಲ್ಲಿ ಬುಧವಾರ ತಿಳಿಸಿದ್ದಾರೆ.

Leave a Reply