ಶಾದಿ ಭಾಗ್ಯಕ್ಕೂ ಮುಂಚೆ ಹೆಣ್ಣಿಗೆ ಬೇಕಿರೋದು ಶಿಕ್ಷಣ, ಕೆಲಸ, ಆಪ್ತ ಬೆಂಬಲ

ಚೌಕಟ್ಟಿನಾಚೆ

Geeta b u

ಗೀತಾ ಬಿ. ಯು

”ನಾಳೆ ನಾನು ಕೆಲಸಕ್ಕೆ ಬರೊಲ್ಲ ಅಕ್ಕ ! ಮಗಳನ್ನು ನೋಡಲು ಗಂಡಿನವರು ಬರ್ತಾರೆ.”

ರತ್ನ ಹೇಳಿದಾಗ ರೇಗಿತು ನನಗೆ. ಒಂದು, ನಾನೇ ಕೆಲಸ ಮಾಡಿಕೊಳ್ಳಬೇಕು. ಎರಡು, ಅವಳ ಮಗಳಿಗೆ ಇನ್ನೂ ಹದಿನೈದು ವರ್ಷ. ಬರುವ ಏಪ್ರಿಲ್ ನಲ್ಲಿ ಎಸ್.ಎಸ್.ಎಲ್. ಸಿ ಪರೀಕ್ಷೆ ಬರೆಯಬೇಕಿರುವ ಹುಡುಗಿ.

”ಬೇಡ ಕಣೇ ಇನ್ನೂ ಚಿಕ್ಕ ಹುಡುಗಿ ಮೊದಲು ಓದಲಿ ಆಮೇಲೆ ಮದುವೆ ಮಾಡುವೆಯಂತೆ” ಅಂದೆ.

”ಇಲ್ಲ ಅಕ್ಕ ಕೇಳಿಕೊಂಡು ಬಂದಾಗ ಮಾಡಲ್ಲ ಅಂದ್ರೆ ಅಹಂಕಾರ ಅಂದುಕೊಳ್ತಾರೆ. ಮಾತು ಹರಡಿದರೆ ನಾಳೆ ಮಗಳಿಗೆ ಮದುವೆಯೇ ಆಗದಿರಬಹುದು…”

ನನ್ನ ಬಾಯಿ ಕಟ್ಟಿ ಹೊರಟು ಹೋದಳು ರತ್ನ.

ಮೂರನೇ ದಿನ ಎಂದಿನಂತೆ ಅವಳು ಕೆಲಸಕ್ಕೆ ಬಂದಾಗ ಅಚ್ಚರಿಯಾಯಿತು ನನಗೆ ವಿಚಾರಿಸಿದಾಗ,

”ಹೂಂ… ಅಕ್ಕ !.. ಗಂಡಿನವರು ನೋಡಲು ಬಂದು, ಒಪ್ಪಿ ಮುಂದೆ ಮದುವೆ ಅಂತೆಲ್ಲಾ ನೀನು ಶುರು ಮಾಡಿದ್ರೆ ನಾನು ಪೊಲೀಸ್ ಕಂಪ್ಲೇಂಟ್ ಕೊಟ್ಟು ನಿನ್ನ ಜೈಲಿಗೆ ಹಾಕಿಸ್ತೀನಿ ಅಂದ್ಲಕ್ಕ ನನ್ನ ಮಗಳು. ಅದಕ್ಕೆ ಗಳಿಗೆ ಚೆನ್ನಾಗಿಲ್ಲ ಮುಂದೆ ನೋಡೋಣ ಅಂತ ಫೋನ್ ಮಾಡಿ ಹೇಳಿಬಿಟ್ಟೆ… ನಿಜಾನಾ ಅಕ್ಕ..?

ನನ್ನ ಮಗಳಿಗೆ ನನಗೆ ಬೇಕಾದಾಗ ನಾನು ಮದುವೇ ಮಾಡುವ ಹಾಗೆ ಇಲ್ಲವೇ..?”

”ನಿನ್ನ ಮಗಳು ಹಾಗೆ ಹೇಳಿದಳೇ?”  ದಂಗಾಗಿ ಪ್ರಶ್ನಿಸಿದೆ ನಾನು. ”ಹೂಂ.. ಅಕ್ಕ ಹಾಗೇ ಹೇಳಿದ್ಲು… ಹದಿನೆಂಟು ಆಗೋವರೆಗೂ ಮದುವೆ ಮಾಡೋ ಹಾಗೇ ಇಲ್ಲವಂತೆ…?”

”ಹೂಂ ಮಾಡೋ ಹಾಗೇ ಇಲ್ಲ. ಅವಳು ಓದಲಿ ಬಿಡು. ಫೀಸು, ಬಟ್ಟೆ, ಪುಸ್ತಕಕ್ಕೆ ನಾನು ಕೊಡ್ತೀನಿ. ಅವಳು ಓದ್ತಾಳೆ. ನಾಳೆ ಒಳ್ಳೆ ಕೆಲಸ ಸಿಗುತ್ತೆ ಒಳ್ಳೆ ಗಂಡೂ ಸಿಗ್ತಾನೆ.”

”ಏನೋ ಅಕ್ಕ ಇವಳು ಹೀಗಾಡ್ತಾಳೆ. ಅತ್ತ ಕಡೆ ನಮ್ಮಮ್ಮ ಮಗಳಿಗೆ ಮಾದುವೆ ಮಾಡಿ ಜವಾಬ್ದಾರಿ ಕಳ್ಕೊ ಅಂತಾಳೆ…. ಇಬ್ಬರ ಮಧ್ಯೆ ಸಿಕ್ಕಾಕೊಂಡು ನಾನು ಸಾಯಬೇಕು ಅಷ್ಟೇ..”

ಗೊಣಗಿಕೊಂಡು ಪೊರಕೆ ಮೊರೆ ಹಿಡಿದು ಒಳಗೆ ನಡೆದಳು ರತ್ನ. ನಾನು ಟಿ.ವಿ ಆನ್ ಮಾಡಿದೆ. ಕಾಕತಾಳೀಯ ಎಂಬಂತೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ, ಮದುವೆಯ ವಯಸ್ಸಿನ ಬಗ್ಗೆ ಒಂದು ಚರ್ಚೆ ಸಾಂಗವಾಗಿ ನಡೆದಿತ್ತು.

ರತ್ನಳ ಮಗಳ ವಿಶ್ವಾಸವನ್ನು ಈ ಸಮಾಜ ಉಳಿಸಿಕೊಳ್ಳುತ್ತದೆಯೇ..?

ತಮಗೆ ಮದುವೆ ಈಗಲೇ ಬೇಡ ಎಂದು ಹೆತ್ತವರ ವಿರುದ್ಧವೇ ಪೊಲೀಸ್ ಸ್ಟೇಷನ್ನಿಗೆ ಹೋಗಲು ಸಿದ್ಧಳಿರುವ ಹುಡುಗಿಗೆ ಸ್ಟೇಷನ್ನಿನ್ನಲ್ಲಿ ಯಾವ ರೀತಿಯ ಬೆಂಬಲ ಸಿಕ್ಕಬಹುದು..?  ಅಪ್ಪ ಅಮ್ಮನನ್ನು ಸ್ಟೇಷನ್ನಿಗೆ ಕರೆಸಿ ಬುದ್ಧಿ ಹೇಳುವ ತಾಳ್ಮೆ, ಸಮಯ ಅಲ್ಲಿಯ ಸಿಬ್ಬಂದಿಗೆ ಇದೆಯೇ..? ಅಥವಾ ಅದಕ್ಕಾಗಿ ನಮ್ಮ ಸರ್ಕಾರ ಬೇರೆ ಇಲಾಖೆಯನ್ನು ತೆರದಿದೆಯೇ?  ಮಹಿಳಾ ಆಯೋಗ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆಯೇ?

ಇಲ್ಲಿ ಹೆಣ್ಣು ಮಕ್ಕಳು ವಿರೋಧಿಸುತ್ತಿರುವುದು ಸ್ವಂತ ತಂದೆ ತಾಯಿಯನ್ನು. ತಮ್ಮ ಕುಟುಂಬದವರಿಂದಲೇ ರಕ್ಷಣೆ ಕೋರಿ ಬರುವ ಹೆಣ್ಣು ಮಕ್ಕಳಿಗೆ ಯಾವ ರೀತಿಯ ಸಹಾಯ ಮಾಡಲು ನಮ್ಮ ಮಹಿಳಾ ಆಯೋಗ, ಪೊಲೀಸ್ ಠಾಣೆ ಸಜ್ಜಾಗಿವೆ? ಈ ಹೆಣ್ಣು ಮಕ್ಕಳಿಗೆ ಯಾವ ರೀತಿಯ ಸಹಾಯ ಬೇಕಾಗಬಹುದು?

ಅಪ್ಪ ಅಮ್ಮನನ್ನು ಕರೆಸಿ ಬುದ್ಧಿ ಹೇಳಿದರೆ ಈ ಸಮಸ್ಯೆ ಪರಿಹಾರವಾಗುತ್ತದೆಯೇ?  ಕೇಳಿದ ಬುದ್ಧಿ ಅವರಿಗೆ ಒಪ್ಪಿಗೆಯಾಗದಿದ್ದರೆ? ಕೇಳಿದಂತೆ ಮಾಡಿ, ರಾತ್ರೋರಾತ್ರಿ ಬೇರೆ ಊರಿಗೆ ಕರೆದುಕೊಂಡು ಮದುವೆ ಮಾಡಿಬಿಡಬಹುದು… ಕಳ್ಳತನ, ಕೊಲೆ, ಅಪಘಾತ, ದರೋಡೆಗಳು ಕೇಸುಗಳು ತುಂಬಿ ತುಳುಕುತ್ತಿರುವ ಪೊಲೀಸ್ ಸ್ಟೇಷನ್ನುಗಳಲ್ಲಿ ಈ ವಿಚಾರಕ್ಕೆ, ಸಮಸ್ಯೆಗೆ ಸಮಯ ಕೊಡುವ ತಾಳ್ಮೆ, ವಿವೇಚನೆ, ಸಂಕಲ್ಪ ನಮ್ಮ ಪೊಲೀಸ್ ಸಿಬ್ಬಂದಿಗೆ ಇರಲು ಸಾಧ್ಯವೇ?

ಬೇರೆ ಯಾರನ್ನು ಈ ಹೆಣ್ಣು ಮಕ್ಕಳು ಸಂಪರ್ಕಿಸಬಹುದು? ಹದಿನೆಂಟು ವರ್ಷ ತುಂಬುವ ಒಳಗೆ ಮದುವೆ ಮಾಡಬಾರದು ಎಂದು ಯಶಸ್ವಿಯಾಗಿ ಪ್ರಚಾರ ಮಾಡಿರುವ ನಮ್ಮ ವ್ಯವಸ್ಥೆ ಆ ಹೆಣ್ಣು ಮಕ್ಕಳು ಅಂತಹ ಸಂದರ್ಭ ಬಂದರೆ ಯಾರನ್ನು ಸಂಪರ್ಕಿಸಬೇಕು ಎನ್ನುವುದನ್ನೂ ಅಷ್ಟೇ ತೀವ್ರವಾಗಿ ಪ್ರಚಾರ ಕೊಡಬೇಕು. ಶಾದಿ ಭಾಗ್ಯಕ್ಕಿಂತ ಶಿಕ್ಷಣ ಭಾಗ್ಯ, ಕೆಲಸ ಭಾಗ್ಯ ಎಂದು ಆ ಹೆಣ್ಣು ಮಕ್ಕಳಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಇದು ಅಲ್ಲೊಬ್ಬರು, ಇಲ್ಲೊಬ್ಬರು ನನ್ನಂಥವರು ಮಾಡುವ ಕೆಲಸವಲ್ಲ. ವ್ಯವಸ್ಥಿತವಾಗಿ ಆಗಬೇಕು. ಅದಕ್ಕೆ ನಮ್ಮ ಪೊಲೀಸ್ ಇಲಾಖೆ, ಮಹಿಳಾ ಕಲ್ಯಾಣ ಇಲಾಖೆ, ಆಯಾ ಕ್ಷೇತ್ರದ ಕಾರ್ಪೋರೆಟರ್, ಪಂಚಾಯಿತಿ ಸದಸ್ಯ , ಎಂ.ಎಲ್.ಎ, ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು. ಅವಶ್ಯಕತೆಯಿದ್ದರೆ ಅಂತಹ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಕೂಡ ಮಾಡಬೇಕು.

ಮಕ್ಕಳು ಹಾಗೂ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಕಾನೂನುಗಳನ್ನು ಮಾಡಿ ಕೂತರೆ ಆಗುವುದಿಲ್ಲ. ಅದನ್ನು ಜಾರಿಗೊಳಿಸಲು, ಅದರ ಫಲ ಅವರಿಗೆ ತಲುಪಲು ನಾವು ಸದಾ ಕಂಕಣ ಬದ್ಧರಾಗಿರಬೇಕು… ಏನಂತೀರಾ?

(ಲೇಖಕಿ ಕಾದಂಬರಿ ಮತ್ತು ಕತೆಗಳ ಮೂಲಕ ಹೆಸರುವಾಸಿ. ಇವರ ಅನೇಕ ಕಾದಂಬರಿಗಳು ಕನ್ನಡದ ಜನಪ್ರಿಯ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ.)

ಇದೇ ಲೇಖಕರ ಮೊದಲ ಅಂಕಣ- ಸಮಾನತೆ ಮಾತಿಗೆ ಮಾತ್ರವೇ? ಎಲ್ಲಿದೆ ಅದನ್ನು ಸಾಧಿಸುವ ಮಾರ್ಗ?

1 COMMENT

Leave a Reply