ಅಮೆರಿಕದ ಮರೆವು ನಿವಾರಣೆ ಆಗ್ಬೇಕಿದ್ರೆ ನಂಗೆ ಮತ ಹಾಕೋದು ಮರಿಬೇಡಿ ಅಂತಿದಾರೆ ಹಿಲರಿ ಕ್ಲಿಂಟನ್!

ಡಿಜಿಟಲ್ ಕನ್ನಡ ಟೀಮ್

ನಮ್ಮಲ್ಲಿ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳು ಇವೆಲ್ಲ ಚಿರಪರಿಚಿತ. ಬಡತನ ನಿರ್ಮೂಲನೆ, ಸಬ್ಸಿಡಿ, ಬಿಟ್ಟಿ ಕೊಡುಗೆ ಇಂಥದೇ ಸಮ್ಮಿಶ್ರಣಗಳನ್ನು ಹೆಚ್ಚು ಕಡಿಮೆ ಎಲ್ಲ ಪಕ್ಷಗಳೂ ಬೇರೆ ಬೇರೆ ಶಬ್ದಗಳನ್ನು ಉಪಯೋಗಿಸಿ ಕಟ್ಟಿಕೊಡ್ತವೆ.

ಆದರೆ ಅಮೆರಿಕದ ಕತೆ ನೋಡಿ. ಅಲ್ಲೀಗ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಪ್ರಾರಂಭವಾಗಿದೆ ಅನ್ನೋದು ಗೊತ್ತಲ್ಲ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ನೀಡುತ್ತಿರುವ ಭರವಸೆ ಎಂದರೆ, ಅಲ್ಜಮೀರ್ (ಮಹಾ ಮರೆಗುಳಿ ವ್ಯಾಧಿ) ಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಹಣ ವ್ಯಯಿಸುವುದನ್ನು ತಮ್ಮ ಆದ್ಯತೆ ಎಂದು! ಅಷ್ಟೇ ಅಲ್ಲ, 2025ರ ವೇಳೆಗೆ ಅಲ್ಜಮೀರ್ ಕಾಯಿಲೆ ನಿವಾರಣೆಗೆ ತಾವು ಹಮ್ಮಿಕೊಂಡಿರುವ ಯೋಜನೆ ಏನು ಅಂತಲೂ ಅವರು ವಿವರ ಬಿಡುಗಡೆ ಮಾಡಿದ್ದಾರೆ.

ಅರೆ, ಚುನಾವಣೆಯಲ್ಲಿ ಮತ ತಂದುಕೊಡಬಲ್ಲ ವಿಷಯವಾ ಇದೆಲ್ಲಾ ಅಂತ ಯೋಚಿಸುತ್ತಿರೇನೋ? ಆದರೆ ಅಮೆರಿಕದ ಸ್ಥಿತಿ ಹೇಗಿದೆ ಅಂತಂದ್ರೆ ಈ ಕಾಯಿಲೆಯಿಂದ ಸದ್ಯ 60 ಲಕ್ಷ ಅಮೆರಿಕನ್ನರು ಬಳಲುತ್ತಿದ್ದಾರೆ. 2050 ಕ್ಕೆ 1.60 ಕೋಟಿ ತಲುಪುವ ಸಾಧ್ಯತೆಯಿದೆ ಎಂದು ಸಂಶೋಧನೆಗಳು ವಿವರಿಸುತ್ತಿವೆ. ಪ್ರಮುಖವಾಗಿ ಈ ಕಾಯಿಲೆಗೆ ತುತ್ತಾಗುತ್ತಿರುವವರು ಮಹಿಳೆಯರು. ಅಮೆರಿಕದಲ್ಲಿ ಸಂಭವಿಸುತ್ತಿರುವ ಪ್ರಮುಖ 5 ರೀತಿಯ ಸಾವುಗಳಲ್ಲಿ ಮರೆವಿನ ಕಾಯಿಲೆಯಿಂದ ಉಂಟಾಗುತ್ತಿರುವ ಸಾವು ಒಂದಾಗಿದೆ.

ಯು.ಎಸ್ ಸರಕಾರ ಈ ಸಮಸ್ಯೆಯನ್ನು ಬಗೆಹರಿಸಲು ಕಳೆದ ವರ್ಷ ಸಂಶೋಧನೆಗಾಗಿ 586 ಮಿಲಿಯನ್ ಡಾಲರ್ ಗಳನ್ನು ವ್ಯಯಿಸಿದೆ. ಅದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 60ರ ಹೆಚ್ಚಳ ಇದಾಗಿದೆ. ಮತ್ತೆ ಮುಂದಿನ ವರ್ಷದ ಸಂಶೋಧನೆಗಾಗಿ 936 ಮಿಲಿಯನ್ ಡಾಲರ್ ಗಳಷ್ಟು ಮೊತ್ತವನ್ನು ಮೀಸಲಿಟ್ಟಿದೆ.

Leave a Reply