ಕೀರ್ತಿ ಆಜಾದ್ ಅಮಾನತು: ಜೇಟ್ಲಿ, ಶಾ, ಮೋದಿಯವರನ್ನು ಪ್ರಶ್ನಿಸೋರಿಗೆ ಬಿಜೆಪಿಯಲ್ಲಿ ಜಾಗವಿಲ್ಲವೆಂಬುದು ರುಜುವಾತು!

ಚೈತನ್ಯ ಹೆಗಡೆ

ಡಿಡಿಸಿಎ (ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್) ದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ, ಅರುಣ್ ಜೇಟ್ಲಿ ಅವರು ಡಿಡಿಸಿಎಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಗಿರಬಹುದಾದ ಹಣಕಾಸು ಅವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದ್ದಕ್ಕೆ ಸಂಸದ ಕೀರ್ತಿ ಆಜಾದ್ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ಅಲ್ಲಿಗೆ, ‘ಕಪ್ಪುಹಣ ತಂದು ಎಲ್ಲರ ಖಾತೆಗೆ ಜಮಾ ಮಾಡಿಬಿಡಬಹುದು’ ಅಂತ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಭಾಷಣ ಹೊಡೆದು ಚಪ್ಪಾಳೆ ಗಿಟ್ಟಿಸಿಕೊಂಡಂತೆಯೇ, ಬಿಜೆಪಿಯ ಭ್ರಷ್ಟಾಚಾರ ವಿರೋಧಿ ಮಾತುಗಳ ಬದ್ಧತೆಯೂ ಭಾಷಣದ ಕಾಪಿಗೇ ಸೀಮಿತ ಅಂದಹಾಗಾಯಿತು.

ಕೀರ್ತಿ ಆಜಾದ್ ಡಿಡಿಸಿಎ ಪ್ರಕರಣವನ್ನು ಎತ್ತಿರುವುದು ಆಪ್ ಸೇರಿದಂತೆ ಪ್ರತಿಪಕ್ಷದಲ್ಲಿರುವವರಿಗೆ ಶಸ್ತ್ರ ನೀಡಿದಂತೆ ಆಗುತ್ತದೆ ಎಂದು ಬಿಜೆಪಿ ಕಟ್ಟರ್ ಬೆಂಬಲಿಗರು ಸಮರ್ಥಿಸಿಕೊಳ್ಳಬಹುದು. ಅಷ್ಟುಮಾತ್ರದ ಕಿರಿಕಿರಿ, ಪ್ರಶ್ನೆಗಳನ್ನು ತಾಳಿಕೊಳ್ಳಲಾಗದವರು ಅದು ಹೇಗೆ ತಾನೇ ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧರಾಗಿರುವುದಕ್ಕೆ ಸಾಧ್ಯ? ತಮ್ಮ ವಿರುದ್ಧ ಇರುವುದು ಕೇವಲ ಮಿಥ್ಯಾರೋಪ, ಏನೂ ಸಾಬೀತಾಗಿಲ್ಲ ಎಂಬುದೇ ಅರುಣ್ ಜೇಟ್ಲಿ ಬಳಗದ ಪ್ರತಿಪಾದನೆ ಆಗುವುದಾದರೆ ಇದೇ ವಾದವನ್ನು ಪ್ರತಿಪಕ್ಷದವರೂ ಹೇಳಬಹುದಲ್ಲ? ರಾಬರ್ಟ್ ವಾದ್ರಾ ಮೇಲಿರುವ ಭೂ ಹಗರಣದ ಆರೋಪವೂ ಸಾಬೀತೇನೂ ಆಗಿಲ್ಲ. ಯಾವ ನ್ಯಾಯಾಲಯವೂ ಆ ಬಗ್ಗೆ ತೀರ್ಪಿತ್ತಿಲ್ಲ. ಹೀಗಿರುವಾಗ, ‘ನೋಡಿ, ನಮ್ಮ ದೇಶದಲ್ಲಿ ಯಾರದ್ದೋ ಮಗನ ಆಸ್ತಿ ಇಷ್ಟಾಯಿತು, ಅಳಿಯ ಅಷ್ಟು ದುಡ್ಡು ಮಾಡಿದ ಅಂತೆಲ್ಲ ಕೇಳುತ್ತಿರುತ್ತೇವೆ. ಆದರೆ ನಮ್ಮ ವಿರುದ್ಧ ಭ್ರಷ್ಟಾಚಾರದ ಒಂದೇ ಒಂದು ಆರೋಪವೂ ಇಲ್ಲ’ ಅಂತ ವಿದೇಶಿ ವೇದಿಕೆ ಮೇಲೆ ಭಾಷಣ ಹೊಡೆದು ಚಪ್ಪಾಳೆ ಗಿಟ್ಟಿಸಿಕೊಳ್ಳುವವರಿಗೆ, ತಮ್ಮ ಪಕ್ಷದ ಸದಸ್ಯ ಮಾಡಿರುವ ಭ್ರಷ್ಟಾಚಾರದ ಆರೋಪ ಈ ಪರಿ ಅಸಹನೆಗೆ ಈಡು ಮಾಡುತ್ತದೆ ಅಂತಾದರೆ ಇವರ ನೈತಿಕ ಮಟ್ಟವಾದರೂ ಯಾವುದು?

‘ನನ್ನಿಂದ ಆಗಿರುವ ತಪ್ಪೇನು ಅಂತ ಪ್ರಧಾನಿ ನರೇಂದ್ರ ಮೋದಿಯವರು ಹೇಳಲಿ. ಡಿಡಿಸಿಎ ಅವ್ಯವಹಾರಗಳ ಬಗ್ಗೆ ನಾನು 9 ವರ್ಷಗಳಿಂದ ಪ್ರಶ್ನೆ ಎತ್ತುತ್ತಿದ್ದೇನೆ. ವಿರೋಧ ಪಕ್ಷಗಳ ಜತೆ ಸೇರಿಕೊಂಡು ಈ ಹೆಜ್ಜೆ ಇಟ್ಟಿದ್ದೇನೆ ಎನ್ನುವುದಾದರೆ ನೋಟೀಸ್ ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿ. ನಾನು ವಿರೋಧ ಪಕ್ಷದ ಯಾವ ನಾಯಕರನ್ನು ಸಂಪರ್ಕಿಸಿದ್ದೇನೆ ಅಂತ ನಿಖರವಾಗಿ ಹೇಳಲಿ’ ಎಂದು ಕೀರ್ತಿ ಆಜಾದ್ ಕೇಳಿರುವುದರಲ್ಲಿ ತಪ್ಪೇನಿದೆ?

ಅದು 2ಜಿ ಇರಬಹುದು, ನ್ಯಾಶನಲ್ ಹೆರಾಲ್ಡ್ ಇದ್ದಿರಬಹುದು ಈ ದೇಶದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಕೇವಲ ಬೀದಿ ಆರೋಪಕ್ಕೆ ಸೀಮಿತವಾಗಿರದೇ ಕಾನೂನಿನ ಕಟಕಟೆಗೆ ಬಂದಿವೆ ಅಂತಾದರೆ ಅದರ ಶ್ರೇಯಸ್ಸು ಒಬ್ಬ ಸುಬ್ರಮಣಿಯನ್ ಸ್ವಾಮಿಯವರಿಗೆ ಸಲ್ಲುತ್ತದೆಯೇ ಹೊರತು ಬಿಜೆಪಿಯ ಇನ್ಯಾವ ಮುಕುಟಮಣಿಗಳಿಗೂ ಅಲ್ಲ. ಅಂಥ ಸುಬ್ರಮಣಿಯನ್ ಸ್ವಾಮಿ, ಕೀರ್ತಿ ಆಜಾದ್ ಅಮಾನತು ವಿಷಯದಲ್ಲಿ ತಾಳಿರುವ ನಿಲುವು ತುಂಬ ಮುಖ್ಯವಾಗುತ್ತದೆ. ಪಕ್ಷದ ಕ್ರಮಕ್ಕೆ ಉತ್ತರ ನೀಡುವಲ್ಲಿ ತಾವು ಕೀರ್ತಿ ಆಜಾದರಿಗೆ ಸಹಕರಿಸುವುದಾಗಿ ಸ್ವಾಮಿ ಹೇಳಿದ್ದಾರೆ. ಕೀರ್ತಿ ಆಜಾದ್ ಅವರಂಥ ಪ್ರಾಮಾಣಿಕರನ್ನು ಬಿಜೆಪಿ ಕಳೆದುಕೊಳ್ಳಬಾರದು ಅಂತಲೂ ಹೇಳಿದ್ದಾರೆ. ಬೇರೆ ಪ್ರಕರಣಗಳಲ್ಲಿ ಸರ್ಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕೆ, ಟ್ವೀಟು- ರೀಟ್ವೀಟು ಮಾಡಿಕೊಂಡಿರುವುದಕ್ಕೆ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆಗಳು ಬೇಕಾಗುತ್ತವೆ; ಆದ್ರೆ ಈ ವಿಷಯದಲ್ಲಿ ಮಾತ್ರ ಆ ಬಗ್ಗೆ ಹೆಚ್ಚು ಚರ್ಚಿಸೋದು ಬೇಡ ಎಂಬಂತಿದೆ ಹಲವು ಬಿಜೆಪಿ ಬೆಂಬಲಿಗರ ಧೋರಣೆ.

ಬಿಜೆಪಿಗೆ ಅರುಣ್ ಜೇಟ್ಲಿ ಮುಖ್ಯವೋ, ಕೀರ್ತಿ ಆಜಾದ್ ಮುಖ್ಯವೋ ಎಂಬ ವ್ಯಾವಹಾರಿಕ ನೆಲೆಯಲ್ಲಿ ಈ ಪ್ರಕರಣವನ್ನು ನೋಡಲಾಗುತ್ತದೆಯೇ? ಇದನ್ನು ಪಕ್ಷ ವಿರೋಧಿ ಎನ್ನುವುದಾದರೆ, ಕೀರ್ತಿಯವರ ಬಿಹಾರವನ್ನೇ ಪ್ರತಿನಿಧಿಸುವ ಶತ್ರುಘ್ನ ಸಿನ್ಹ ಅವೆಷ್ಟು ಬಾರಿ ನಿತೀಶ್ ಕುಮಾರ್ ಪರ ಬ್ಯಾಟ್ ಮಾಡಿಲ್ಲ? ಅವೆಷ್ಟು ಬಾರಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿಲ್ಲ? ಆದರೆ ಶತ್ರುಘ್ನ ಸಿನ್ಹ ಒಟ್ಟಾರೆ ಪಕ್ಷದ ವಿರುದ್ಧ ಟೀಕೆ ಮಾಡಿರುವುದರಿಂದ, ನೇರವಾಗಿ ಜೇಟ್ಲಿ, ಅಮಿತ್ ಶಾ, ನರೇಂದ್ರ ಮೋದಿಯವರನ್ನು ಪ್ರಶ್ನಿಸಲಿಲ್ಲವಾದ್ದರಿಂದ ಕ್ರಮ ತೆಗೆದುಕೊಳ್ಳುವ ಪ್ರಮೇಯ ಬರಲಿಲ್ಲವೇ? ಪಕ್ಷದ ಶಿಸ್ತು ಅಂತೆಲ್ಲ ರಾಗ ಎಳೆಯೋದು ಅನುಕೂಲಕ್ಕೆ ಒದಗುತ್ತಿರುವ ಮಾತು ಎಂದಾಯಿತಲ್ಲ? ಪಕ್ಷದ ಶಿಸ್ತು ಎಂಬ ಅಸ್ತ್ರ ಪ್ರಯೋಗದಲ್ಲೂ ಪಕ್ಷಪಾತ ಢಾಳಾಗಿದೆ ಅಂತಾಯಿತಲ್ಲ?

ಡಿಡಿಸಿಎ ಅವ್ಯವಹಾರಗಳನ್ನು ವಿವರಿಸುವ ಭಾನುವಾರದ ಪತ್ರಿಕಾಗೋಷ್ಠಿಯಲ್ಲೂ ಆಜಾದ್ ಹೇಳಿದ್ದು, ‘ಇಲ್ಲಿ ವೈಯಕ್ತಿಕ ಆರೋಪಗಳನ್ನೇನೂ ಮಾಡುವುದಿಲ್ಲ. ಆಗಿರುವ ಭ್ರಷ್ಟಾಚಾರವನ್ನು ಬಿಡಿಸಿಡುತ್ತಿದ್ದೇನೆ. ತನಿಖೆ ಆಗಲಿ, ಸತ್ಯ ಹೊರಬರಲಿ’ ಅಂತ. ಇದನ್ನೇ ಪ್ರತಿಪಕ್ಷಗಳು ಎತ್ತಿಕೊಂಡಾಗ ಸಂಸತ್ತಿನಲ್ಲಿ ಉತ್ತರಿಸಿದ ಅರುಣ್ ಜೇಟ್ಲಿ ಅವರು- ‘ತನಿಖಾ ಸಂಸ್ಥೆಗಳು ತಮ್ಮನ್ನು ತಪ್ಪಿತಸ್ಥರೆಂದು ಹೇಳಿಲ್ಲ, ಕಾಂಗ್ರೆಸ್ ನವರು 900 ಕೋಟಿ ರುಪಾಯಿ ವೆಚ್ಚ ಮಾಡಿ ಕ್ರೀಡಾಂಗಣ ನವೀಕರಣ ಮಾಡಿರುವಾಗ, ತಾವು 114 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸ ಕ್ರೀಡಾಂಗಣವನ್ನೇ ನಿರ್ಮಿಸಿರುವಾಗ ಏಕೆ ಪ್ರಶ್ನಿಸುತ್ತೀರಿ’ ಅಂತ ರಕ್ಷಣಾವ್ಯೂಹ ಹೊಸೆದರೇ ವಿನಃ, ಕೀರ್ತಿ ಆಜಾದ್ ಅವರು ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿ, ಬೋಗಸ್ ಕಂಪನಿಗಳಿಗೆ ಕಾಮಗಾರಿ ನೀಡಿರುವುದನ್ನು ಪ್ರಶ್ನಿಸಿದ್ದಕ್ಕೆ ಯಾವುದೇ ಸಮಜಾಯಿಷಿ ನೀಡಲಿಲ್ಲ.

ಆರೋಪ ಬಂದಿದೆ ಎಂಬ ಕಾರಣಕ್ಕೆ ಕೀರ್ತಿ ಆಜಾದರ ಜಾತಕ ಕೆದಕಿ ಕೂರುವುದು, ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಹೋರಾಟ ಪ್ರಾರಂಭಿಸಿದ್ದಾರೆ ಎಂಬ ಮಾತು ತೇಲಿಬಿಡುವುದು- ಇವೆಲ್ಲ ಮೋದಿ ಸರ್ಕಾರದಲ್ಲಿ ಏನೇ ನಡೆದರೂ ಭಜನೆ ಮಾಡಿಕೊಂಡಿರಬೇಕು ಎಂಬ ಒಂದು ವರ್ಗವನ್ನು ಖುಷಿ ಪಡಿಸಬಹುದಷ್ಟೇ. ಉಳಿದಂತೆ ಜನಕ್ಕೆ ಬೇಕಿರೋದು ಕೀರ್ತಿ ಆಜಾದ್ ಹೀರೋನೋ- ವಿಲನ್ನೋ ಎಂಬ ಪ್ರಶ್ನೆ ಅಲ್ವೇ ಅಲ್ಲ. ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವ್ಯವಹಾರ ಆಗಿದೆಯಾ ಇಲ್ಲವಾ, ಅದಕ್ಕೆ ಅವರೆಷ್ಟು ಹೊಣೆ ಎಂಬುದಷ್ಟೇ ಉತ್ತರ ಸಿಗಬೇಕಿರುವ ಪ್ರಶ್ನೆ.

ಮಾತೆತ್ತಿದರೆ ಕಾಂಗ್ರೆಸ್ ಅರವತ್ತು ವರ್ಷ ದೇಶವನ್ನು ಲೂಟಿ ಮಾಡಿತು ಅಂತ ಭಾಷಣ ಮಾಡುವವರಿಗೆ ತಮ್ಮ ಮೇಲೆ ಯಾರೂ ಆರೋಪ ಮಾಡಲೇಬಾರದು ಎಂಬ ಮನಸ್ಥಿತಿ ಇದ್ದರೆ ಅದ್ಯಾವ ವೀರತ್ವವೂ ಅಲ್ಲ, ಧೀರತ್ವವೂ ಅಲ್ಲ.

ಈ ದೇಶದ ಅತಿ ಹಳೆಯ ಪಕ್ಷ ಕಾಂಗ್ರೆಸ್ ಗೆ ಇರುವ ದೊಡ್ಡ ದೋಷ ಎಂದರೆ, ಅದರ ಅಗ್ರ ನಾಯಕರನ್ನು ಯಾರೂ ಪ್ರಶ್ನಿಸುವಂತಿಲ್ಲ. ನಲ್ವತ್ತನಾಲ್ಕು ಸ್ಥಾನಗಳಿಗೆ ಕುಸಿದರೂ ಅಗ್ರ ಸ್ಥಾನದಲ್ಲಿರುವವರು ಯುವರಾಜರಾಗಿಯೇ ಇರ್ತಾರೆ, ಸುತ್ತಲಿನವರು ಹಾಗೆಂದೇ ಬಹುಪರಾಕು ಹಾಕಬೇಕು. ಬಿಜೆಪಿಯಲ್ಲಿ ಹಳ್ಳಿಯ ಹಂತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕನಾಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿಯೂ ಚುನಾವಣೆಗೆ ಟಿಕೆಟ್ ಪಡೆಯಬಹುದು ಎಂಬ ಅವಕಾಶವೊಂದಿದೆ. ಕುಟುಂಬ ಬೆಳೆಸುವ ರಾಜಕಾರಣ ಮಾದರಿ, ಹಣಬಲಗಳೆಲ್ಲ ಬಿಜೆಪಿಯಲ್ಲೂ ಕೆಲಸ ಮಾಡುತ್ತಿವೆಯಾದರೂ ಅದರ ನಡುವೆಯೇ ಕೆಲವೇ ಸಾಮಾನ್ಯರಿಗಾದರೂ ಕೆಲಸದ ಮೂಲಕ ಬಿಜೆಪಿಯಲ್ಲಿ ಪ್ರವೇಶ ಪಡೆಯಬಹುದೆಂಬ ಸ್ಥಿತಿ ಇದೆ.

ಆದರೆ ಜೇಟ್ಲಿ ಪ್ರಕರಣದಿಂದ ಸಾಬೀತಾಗುತ್ತಿರುವುದೇನೆಂದರೆ ನಿಧಾನಕ್ಕೆ ಬಿಜೆಪಿಯೂ ಕಾಂಗ್ರೆಸ್ ಜಾಯಮಾನವನ್ನೇ ಒಗ್ಗೂಡಿಸಿಕೊಳ್ಳುತ್ತಿದೆ. ಒಂದು ಕಾಲಕ್ಕೆ ಕಾಂಗ್ರೆಸ್ ನಲ್ಲಿ ಇಂದಿರಾರನ್ನು ಪ್ರಶ್ನಿಸುವಂತಿರಲಿಲ್ಲ, ಈಗ ಸೋನಿಯಾ- ರಾಹುಲ್ ಅವರನ್ನು ಪ್ರಶ್ನಿಸಿ ಬಚಾವಾಗುವವರಿಲ್ಲ. ಅಂತೆಯೇ ಸದ್ಯದ ಬಿಜೆಪಿ ಪರ್ವದಲ್ಲಿ ಅರುಣ್ ಜೇಟ್ಲಿ, ಅಮಿತ್ ಶಾ, ನರೇಂದ್ರ ಮೋದಿಯವರನ್ನು ಪ್ರಶ್ನಿಸಿದರೆ ಉಳಿಗಾಲವಿಲ್ಲ ಎಂಬ ಸೂಚನೆ ಸಿಗುತ್ತಿದೆ. ಅರುಣ್ ಜೇಟ್ಲಿ ಕುರಿತು ಭಿನ್ನಾಭಿಪ್ರಾಯಗಳಿರುವವರಿಗೆ ಅಧಿಕಾರದ ಹುದ್ದೆಗಳು ಅಸಂಭವ. ಸುಬ್ರಮಣಿಯನ್ ಸ್ವಾಮಿ ಅಂಥವರಿಗೇ ಸಚಿವ ಸಂಪುಟದ ಹತ್ತಿರ ಸುಳಿಯಲಾಗಲಿಲ್ಲ. ಅರುಣ್ ಶೌರಿ ಹೇಳಿದ್ದೆಲ್ಲ ಒಪ್ಪಬೇಕಿಲ್ಲವಾದರೂ ಅವರು ಮೋದಿ- ಜೇಟ್ಲಿ ಎಕನಾಮಿಕ್ ಮಾದರಿಗಳನ್ನು ಪ್ರಶ್ನಿಸಬಲ್ಲರೆಂಬ ಕಾರಣಕ್ಕೆ ಪ್ರಾರಂಭದಿಂದಲೇ ದೂರವಿಡಲಾಯಿತು.

ಕೀರ್ತಿ ಆಜಾದರನ್ನು ಹೊರಹಾಕಿರುವುದರಿಂದ ಒಂದು ಪಕ್ಷವಾಗಿ ಬಿಜೆಪಿ ಸಾಧಿಸಲಿಕ್ಕಿರುವುದು ಏನೂ ಇಲ್ಲ. ಆದರೆ ಹಿಂದೆಲ್ಲ ಮಾತನಾಡಿದಷ್ಟು ಉದ್ವೇಗದಲ್ಲಿ ‘ನ ಖಾನೇ ದೂಂಗಾ’ ಅಂತ ಮಾತುದುರಿಸಿದರೆ, ಆರ್ ಯು ಶ್ಯೂರ್ ಅಂತ ಜನ ಕೇಳ್ತಾರಷ್ಟೆ.

4 COMMENTS

  1. ಚೈತನ್ಯ ಹೆಗಡೆಯವ. ಹಾಗೆ ಪ್ರಮಾಣಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಪತ್ರಕರ್ತರು ಹೆಚ್ಚಲಿ ಎಂಬುವುದು ನನ್ನ ಆಶಯ.., ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಗಳನ್ನು ಬೆಳಸಿ.. ಉಳಿಸುತ್ತದೆ.

Leave a Reply