ಸತತ ಐದನೇ ವರ್ಷಕ್ಕೆ ರುಪಾಯಿ ಪತನ, ಆದ್ರೂ ಇದೆ ಸಮಾಧಾನ!

ಚಾರ್ಲ್ಸ್ ಡಿಕೆನ್ಸ್ ಅವರ ‘ಟೇಲ್ ಆಫ್ ಟು ಸಿಟೀಸಿ (ಎರಡು ನಗರಗಳ ಕತೆ)’ ಯ ಪ್ರಾರಂಭವು, ‘ಅದು ಅತಿ ಒಳ್ಳೆ ಕಾಲವೂ ಆಗಿತ್ತು, ಅತಿ ಕೆಟ್ಟ ಕಾಲವೂ ಆಗಿತ್ತು’ ಅಂತ ಶುರುವಾಗುತ್ತದೆ.

ರುಪಾಯಿ ಮತ್ತು ಡಾಲರ್ ಗಳ ಕಥಾನಕವನ್ನೂ ಹೀಗೆಯೇ ವಿಶ್ಲೇಷಿಸಬೇಕಾಗುತ್ತದೆ. 2015 ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ರುಪಾಯಿ ಮೌಲ್ಯವು ಡಾಲರ್ ಎದುರು ಪತನದ ಹಾದಿಯಲ್ಲೇ ಸಾಗಿದೆ. ಇದು ಸತತ ಐದನೇ ವರ್ಷದ ಕುಸಿತ. ಇದು ಕೆಟ್ಟ ಸುದ್ದಿ ಎನ್ನುವುದಾದರೆ, ಪ್ರಪಂಚದ ಇತರ ದೇಶಗಳ ಕರೆನ್ಸಿಗೆ ಹೋಲಿಸಿಕೊಂಡರೆ ಡಾಲರ್ ಎದುರು ರುಪಾಯಿ ಮಾತ್ರ ಉತ್ತಮ ಸ್ಪರ್ಧೆ ನೀಡಿದೆ ಎಂದು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಗಮನಿಸಿ ಸಮಾಧಾನವನ್ನೂ ಪಟ್ಟುಕೊಳ್ಳಬಹುದಾಗಿದೆ.

ರುಪಾಯಿ ಮೌಲ್ಯವನ್ನು ಹೆಚ್ಚಿಸಲು ಕೇಂದ್ರ ಸರಕಾರ ಮತ್ತು ಆರ್.ಬಿ.ಐ ಸಾಕಷ್ಟು ಆರ್ಥಿಕ ಸುಧಾರಣೆಗಳನ್ನು ತಂದರು. ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದರೆ ಖುಷಿ ಪಡುವ ಸಂಗತಿ ಎಂದರೆ ಡಾಲರ್ ಎದುರು ಅಪಮೌಲ್ಯಗೊಳ್ಳುವ ಪ್ರಮಾಣ ಕಡಿಮೆಯಾಗಿರುವುದು.

ರೂಪಾಯಿ ಮೌಲ್ಯ ವೃದ್ಧಿಯಾಗಲು ಸರಕಾರ ತೆಗೆದುಕೊಂಡ ಕ್ರಮಗಳ ಜೊತೆಗೆ ಆರ್.ಬಿ.ಐ ಸಹ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಬೆಂಬಲಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕಳೆದ ಎರಡು ವರ್ಷಗಳಿಂದ ಡಾಲರ್ ಎದುರು ರುಪಾಯಿ ಮಾತ್ರ ಪ್ರಬಲ ಪೈಪೋಟಿ ನೀಡುತ್ತಿದೆ.

ಈ ವರ್ಷದ ಡಾಲರ್ ಎದುರಿನ ರುಪಾಯಿಯ ವಹಿವಾಟು 66 ರಿಂದ 67 ರುಪಾಯಿಗಳ ನಡುವೆಯೇ ಕೊನೆಗೊಳ್ಳಲಿದೆ. 2014ರ ಅಂತ್ಯಕ್ಕೆ 63.03 ರೂಪಾಯಿ ಇದ್ದ ಪ್ರತಿ ಡಾಲರ್ ಬೆಲೆ 2015ರ ಅಂತ್ಯಕ್ಕೆ 66.21 ರೂಪಾಯಿಗೆ ತಲುಪಿದೆ. ಇನ್ನೂ ಈ ವರ್ಷದ ವಹಿವಾಟಿನ ಅಂತ್ಯಕ್ಕೆ ಕೇವಲ ಐದು ದಿನ ಬಾಕಿ ಇರುವುದರಿಂದ ಹೆಚ್ಚಿನ ವ್ಯತ್ಯಾಸವೇನೂ ಆಗದು.

ಪ್ರಮುಖವಾಗಿ ಈ ವರ್ಷದ ಪ್ರಾರಂಭದ ತನಕ ವಿದೇಶಿ ಬಂಡವಾಳ ಹೂಡಿಕೆ ಗಣನೀಯವಾಗಿ ಕಡಿಮೆಯಾಗಿತ್ತು. ಇದರಿಂದ ವರ್ಷದ ಅರ್ಧ ಭಾಗದವರೆಗೆ ರುಪಾಯಿ ಪ್ರಪಂಚದ ಕಡಿಮೆ ಬೆಳವಣಿಗೆಯ ಹಣ ಎಂದೇ ಬಿಂಬಿತವಾಗಿತ್ತು. ಆದರೆ ಇದೆ ಸಮಯದಲ್ಲಿ ಪ್ರಪಂಚದ ಎಲ್ಲಾ ಹಣಕಾಸಿನ ಮೌಲ್ಯ ಕುಸಿತದ ಹಾದಿ ಹಿಡಿದಿತ್ತು. ಇದು ರುಪಾಯಿಗೆ ವರವಾಗಿದ್ದರಿಂದ ವರ್ಷಾಂತ್ಯದಲ್ಲಿ ಉತ್ತಮ ಬೆಳವಣಿಗೆ ಹೊಂದಿತು. ಅಮೆರಿಕದ ಡಾಲರ್ ಎದುರು ಪ್ರಪಂಚದ ಎಲ್ಲಾ ಪ್ರಮುಖ ಕರೆನ್ಸಿಗಳು ಕುಸಿಯುತ್ತಿರುವುದಕ್ಕೆ ಹೋಲಿಸಿದಾಗ, ಇನ್ನೂ ಪತನ ಕಾಣಬೇಕಿದ್ದ ರುಪಾಯಿ ಅಷ್ಟರಮಟ್ಟಿಗೆ ಚೇತರಿಕೆ ಸ್ಥಿತಿಯಲ್ಲೇ ಇದೆ. ಯೂರೋ ಶೇ 16 ರಷ್ಟು ಕುಸಿದರೆ, ಇಂಡೋನೆಷಿಯಾದ ರುಪೀಯಾ ಅತ್ಯಂತ ಕಳಪೆ ಮೌಲ್ಯ ಪಡೆದ ಕರೆನ್ಸಿ ಎಂಬ ಕುಖ್ಯಾತಿಗೆ ಒಳಗಾಗಿದೆ. ಚೀನಾದ ಯೆನ್ ಸಹ ಕಳಪೆ ಬೆಳವಣಿಗೆ ದಾಖಲಿಸಿತು.

ಕಳೆದ ಐದು ವರ್ಷಾಂತ್ಯಗಳಲ್ಲಿ  ಡಾಲರ್ ಎದುರು ರುಪಾಯಿ ಮೌಲ್ಯದ ದಾಖಲೆ ಹೀಗಿದೆ: 2011ರಲ್ಲಿ – 52.48, 2012 – 55.06, 2013 – 61.98, 2014 – 63.52 ರುಪಾಯಿಗಳು.

Leave a Reply