ಕಾಬೂಲ್ ಉಪಾಹಾರ, ಪಾಕ್ ಭೋಜನ, ಮುಖ್ಯಾಂಶ ಹೊತ್ತಿರೋದು ಮಾತ್ರ ಈ ಆಲಿಂಗನ!

 

 

ಪ್ರವೀಣ್ ಕುಮಾರ್

ರಷ್ಯಾದ ಎರಡು ದಿನಗಳ ಪ್ರವಾಸ ಮುಗಿಸಿ, ಹಲವು ಮಹತ್ವದ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡ ನಂತರ ಪ್ರಧಾನಿ ಮೋದಿಯವರು ಶುಕ್ರವಾರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದರು. ಅಲ್ಲಿ ಬೆಳಗಿನ ಉಪಾಹಾರ ಮುಗಿಸಿ, ಅಲ್ಲಿನ ಸಂಸತ್ ಉದ್ಘಾಟನೆಯಲ್ಲಿ ಭಾಗವಹಿಸಿದ ಅವರು ಅದರ ಬೆನ್ನಲ್ಲೇ ಕೌತುಕದ ಟ್ವೀಟ್ ಒಂದನ್ನು ಮಾಡಿದ್ದಾರೆ. ‘ದೆಹಲಿಗೆ ಹಿಂತಿರುಗುವ ಹಾದಿಯಲ್ಲಿ ಮಧ್ಯಾಹ್ನ ಲಾಹೋರ್ ನಲ್ಲಿ ಇಳಿದು ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಬರುವುದಕ್ಕೆ ಕಾತುರದಿಂದಿದ್ದೇನೆ’ ಅಂತ ಟ್ವೀಟ್ ಮಾಡಿರುವ ಮೋದಿಯವರು, ಅದಕ್ಕೂ ಮೊದಲಿನ ಟ್ವೀಟ್ ನಲ್ಲಿ ನವಾಜ್ ಷರೀಫ್ ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿರುವುದಾಗಿ ಹೇಳಿದ್ದಾರೆ.

ಈ ಹಿಂದಿನ ಸರ್ಕಾರ ಪಾಕಿಸ್ತಾನದ ಜತೆ ಮಾತುಕತೆಗೆ ಮುಂದಾದಾಗಲೆಲ್ಲ ಅದನ್ನು ಹೇಡಿತನವೆಂದು ವ್ಯಾಖ್ಯಾನಿಸುತ್ತಿದ್ದವರೇ ಈಗ ಹುಟ್ಟುಹಬ್ಬದ ಡಿಪ್ಲೊಮಸಿಗೆ ಇಳಿದಿರುವುದು ಟೀಕೆ- ಪ್ರಶ್ನೆಗಳಿಗೂ ಕಾರಣವಾಗಿದೆ.

ಆದರೆ ಇವೆಲ್ಲದರ ನಡುವೆ ಪ್ರಧಾನಿಯವರ ಕಾಬೂಲ್ ಭೇಟಿಯ ಮಹತ್ವವನ್ನು ಕಡೆಗಾಣಿಸುವಂತಿಲ್ಲ. ಕಾಬೂಲ್ ನಲ್ಲಿ ತಿಂಡಿ ತಿಂದು, ಲಾಹೋರ್ ನಲ್ಲಿ ಮಧ್ಯಾಹ್ನದ ಊಟ ಮಾಡಿ, ಸಂಜೆಯ ಊಟಕ್ಕೆ ದೆಹಲಿ ಸೇರಿಕೊಳ್ಳಲಿರುವ ಪ್ರಧಾನಿ ಪ್ರವಾಸದಲ್ಲಿ ಅಫ್ಘನ್ ಭೇಟಿಯನ್ನು ವಿಶೇಷವಾಗಿ ನೋಡಬೇಕಿದೆ.

ಏಕೆಂದರೆ ಅಫ್ಘಾನಿಸ್ತಾನ ಎಂಬುದು ಪಾಕಿಸ್ತಾನ ಮತ್ತು ಚೀನಾ ಇವೆರಡಕ್ಕೂ ಆಸಕ್ತಿಯ ದೇಶ. ಮೊದಲಿನಿಂದಲೂ ಪಾಕ್- ಚೀನಾಗಳ ಹಿತಾಸಕ್ತಿಗಳು ಅಲ್ಲಿ ಕೆಲಸ ಮಾಡುತ್ತಲೇ ಬಂದಿವೆ. ಆದರೆ ನಿಧಾನಕ್ಕೆ ಆ ದೇಶದಲ್ಲಿ ಭಾರತದ ಪ್ರಭಾವ ಅಚ್ಚೊತ್ತುತ್ತಿದೆ.

ನರೇಂದ್ರ ಮೋದಿಯವರು ಅಫ್ಘಾನಿಸ್ತಾನ ಸಂಸತ್ತಿನ ಮೊದಲ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿರುವುದು ಐತಿಹಾಸಿಕ ಕ್ಷಣ. ಇಷ್ಟಕ್ಕೂ ಆ ದೇಶದಲ್ಲಿ ಸಂಸತ್ ಭವನ ತಲೆ ಎತ್ತುತ್ತಿರುವುದಕ್ಕೆ ಭಾರತದ ಕೊಡುಗೆಯೇ ಗಣನೀಯವಾಗಿದೆ. ಯುದ್ಧಗ್ರಸ್ತ ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಜಗತ್ತಿನ ನಾನಾ ರಾಷ್ಟ್ರಗಳು ಕೈಜೋಡಿಸಿದ ಸಂದರ್ಭದಲ್ಲಿ, 2007ರಲ್ಲಿ ಭಾರತವೇ ಮುಂದೆ ನಿಂತು ಸಂಸತ್ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಿತ್ತು.

ಅಫ್ಘಾನಿಸ್ತಾನದ ಮರುನಿರ್ಮಾಣ ಕಾರ್ಯದಲ್ಲಿ ಭಾರತವು ಎರಡು ಬಿಲಿಯನ್ ಡಾಲರ್ ಗಳಷ್ಟು ಹಣವನ್ನು ಹೂಡಿದೆ. ಭಾರತದಿಂದ ಹೋಗಿರುವ ಅನೇಕ ಕಂಪನಿಗಳು, ಅಧಿಕಾರಿಗಳು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತವು ಯಾವುದೇ ದೇಶಕ್ಕೆ ಮಾರಕ ಯುದ್ಧಾಸ್ತ್ರಗಳನ್ನು ಕೊಡುಗೆ ನೀಡಿದ ಉದಾಹರಣೆ ವಿರಳ. ಪ್ರಧಾನಿ ಭೇಟಿಗೆ ಎರಡು ದಿನ ಮುಂಚಿತವಾಗಿಯಷ್ಟೇ ರಷ್ಯದ ಎಮ್ 25 ಶ್ರೇಣಿಯ ಶಸ್ತ್ರಸಜ್ಜಿತ ಮೂರು ಹೆಲಿಕಾಫ್ಟರ್ ಗಳನ್ನು ಅಫ್ಘಾನಿಸ್ತಾನಕ್ಕೆ ನೀಡಿತ್ತು. ಇನ್ನೊಂದು ಹೆಲಿಕಾಫ್ಟರ್ ತಿಂಗಳೊಳಗೆ ಅಫ್ಘಾನಿಸ್ತಾನಕ್ಕೆ ಭಾರತದ ಕಡೆಯಿಂದ ಸಿಗಲಿದೆ.

ಪಾಕಿಸ್ತಾನದ ಮಗ್ಗುಲಲ್ಲಿರುವ, ಚೀನಾ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಬಯಸಿರುವ ಅಫ್ಘಾನಿಸ್ತಾನದಲ್ಲಿ ಭಾರತದ ಪ್ರಜಾಪ್ರಭುತ್ವ ಸ್ಥಾಪನೆಯ ಪಾತ್ರ, ಭವಿಷ್ಯದ ಕಾರ್ಯತಂತ್ರ ದೃಷ್ಟಿಯಿಂದ ತುಂಬ ಮುಖ್ಯ. ಈ ಪ್ರಕ್ರಿಯೆಯ ಶ್ರೇಯಸ್ಸು ಹಿಂದಿನ ಸರ್ಕಾರಗಳಿಗೂ ಸಲ್ಲುತ್ತದೆ. ಇದನ್ನು ಮೋದಿ ಸರ್ಕಾರ ಉತ್ತಮ ರೀತಿಯಲ್ಲೇ ಮುಂದಕ್ಕೊಯ್ಯುತ್ತಿದೆ ಎಂಬುದು, ಕಾಬೂಲ್ ನಲ್ಲಿ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಮೋದಿ ಆಲಂಗಿಸಿರುವ ರೀತಿಯೇ ಸಾರಿ ಹೇಳುತ್ತಿದೆ.

ಇವತ್ತಿಡೀ ಚರ್ಚೆಯಾಗಲಿರುವ ವಿಷಯ ಮೋದಿ- ಷರೀಫ್ ಭೇಟಿಯೇ ಆಗಿರುತ್ತದೆ. ಆದರೆ ಚರ್ಚೆಯ ಭರಾಟೆಯಲ್ಲಿ ಅಫ್ಘನ್ ನೊಂದಿಗಿನ ಆಲಿಂಗನವನ್ನು ಮರೆಯಬಾರದು.

Leave a Reply