ಪೀಳಿಗೆಗಳು ಬದಲಾದರೂ ಮಾಸದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ಡಿಜಿಟಲ್ ಕನ್ನಡ ಟೀಮ್

ಕ್ರಿಸ್ ಮಸ್ ಸಂಭ್ರಮದ ನಡುವೆಯೇ ದೇಶ ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆರ್ದ್ರವಾಗಿ ನೆನಪಿಸಿಕೊಳ್ಳುತ್ತಿದೆ. ಭಾರತರತ್ನ ಅಟಲ್ ಅನಾರೋಗ್ಯದಿಂದ ಮೌನವಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಹಿಂಸೆ ಪಡುತ್ತಿದೆ.

ಅಟಲ್ ಈಗಿರಬೇಕಾಗಿತ್ತು, ರಾಜಕೀಯವನ್ನು ನಿರ್ದೇಶಿಸಬೇಕಿತ್ತು ಎಂಬುದು ಭಾವುಕತೆಯ, ಕ್ಲೀಷೆಯ ಮಾತು. ಇವತ್ತಿನ ‘ಸೌಂಡ್ ಬೈಟ್’ ರಾಜಕಾರಣದಲ್ಲಿ ಅಟಲ್ ಇಕ್ಕಟ್ಟಿಗೆ ಸಿಲುಕುತ್ತಿದ್ದರೇನೋ. ಈಗಿನ ಅವರ ಮೌನದಲ್ಲೇ ಆನಂದ ಸಿಗಲಿ, ಅವರ ಕವಿಮನವನ್ನು ತನುವಿನ ನೋವುಗಳು ಭಾದಿಸದಿರಲಿ ಅಂತ ನಾವಾದರೂ ಪ್ರಾರ್ಥಿಸಬಹುದು.

ವಾಜಪೇಯಿ ಅವರಿಗೆ ಜನ್ಮದಿನದ ಶುಭಾಶಯ ಹೇಳುತ್ತಿರುವ ಸಂಗತಿ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ. ಫೇಸ್ ಬುಕ್ ಗೋಡೆಗಳನ್ನೆಲ್ಲ ವಾಜಪೇಯಿ ಆವರಿಸಿದ್ದಾರೆ. ಸಾಮಾಜಿಕ ಮಾಧ್ಯಮಕ್ಕೆ ಆತುಕೊಂಡಿರುವ ದೊಡ್ಡದೊಂದು ಯುವ ಸಮೂಹಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರಂಥ ಹಿರಿಯರು ಇಂದಿಗೂ ಬೆಸೆದುಕೊಳ್ಳುವ, ನೆನಕೆಯ ವ್ಯಕ್ತಿತ್ವವಾಗಿದ್ದಾರೆ ಎಂಬುದರಲ್ಲೇ ಅವರ ವ್ಯಕ್ತಿತ್ವದ ಸತ್ತ್ವ, ವಿಸ್ಮಯ ಎಲ್ಲವೂ ಗೋಚರವಾಗುತ್ತಿದೆ.

ರಾಮಜನ್ಮಭೂಮಿಯಂಥ ವಿಷಯವನ್ನು ಪ್ರಸ್ತುತಪಡಿಸುವಲ್ಲೂ ಇಂಡೋನೇಷ್ಯದಂಥ ರಾಷ್ಟ್ರಗಳಲ್ಲಿ ರಾಮನಿಗಿರುವ ಸ್ಥಾನ ಎಂಥಾದ್ದು ಅಂತೆಲ್ಲ ವಿವರಿಸಿ, ಭಾವನಾತ್ಮಕವಷ್ಟೇ ಅಲ್ಲದೇ ಬೌದ್ಧಿಕ ಪ್ರಚೋದನೆ ಕೊಡಬಲ್ಲ ತಾಕತ್ತು ಅವರಲ್ಲಿತ್ತು.

ರಾಜೀನಾಮೆ ಕೊಟ್ಟು ಬರುವ ಸಂದರ್ಭದಲ್ಲೂ ಹತಾಶೆಯಲ್ಲಿ ಮಾತುಗಳು ದಿಕ್ಕು ತಪ್ಪಲಿಲ್ಲ. ‘ಒಬ್ಬೊಬ್ಬ ವ್ಯಕ್ತಿ ಒಂದು ಪಕ್ಷ ಮಾಡಿಕೊಂಡು, ನಂತರ ದೆಹಲಿಯಲ್ಲಿ ಎಲ್ಲರೂ ಒಟ್ಟಾಗಿ ನಮ್ಮನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸುತ್ತೀರಲ್ಲ… ನಿಮಗಿಂತ ನಾವು ಸಿದ್ಧಾಂತದಲ್ಲಿ ಮೇಲ್ ಸ್ತರದಲ್ಲಿದ್ದೇವೆ ಅಂತ ಅವರಂದು ಸದನದಲ್ಲಿ ಆಡಿದ ಮಾತು, ಕೆಳಹಂತದ ಎಷ್ಟೋ ಕಾರ್ಯಕರ್ತರಲ್ಲಿ ಅದೆಂಥ ವಿಶ್ವಾಸ ತುಂಬಿರಬಹುದಲ್ಲವೇ? ನಂತರ ಇನ್ನೂ ಮುಂದುವರಿದು, ‘ಚುನಾವಣೆಗಳು ಬರ್ತಾವೆ- ಹೋಗ್ತಾವೆ, ಪಕ್ಷಗಳು ಇವತ್ತಿರಬಹುದು, ನಾಳೆ ಇಲ್ಲವಾಗಬಹುದು… ಆದರೆ ಈ ದೇಶ ಮುಖ್ಯ’ ಎಂಬ ಮಾತುಗಳು ಈಗಲೂ ಎದೆ ತುಂಬಿಸುತ್ತವೆ.

Leave a Reply