ಮಹಿಳೆ ಕುರಿತ ಸಾಮಾಜಿಕ ದೃಷ್ಟಿಕೋನ ಬದಲಾಗುವುದು ಯಾವಾಗ?

source- wikepedia

ಧರೆಯ ಸಿರಿ

Dr Vasundhar Bhupati (2)

ಡಾ|| ವಸುಂಧರಾ ಭೂಪತಿ

1970ರ ದಶಕವನ್ನು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಹಲವು ಚಳುವಳಿಗಳ ದಶಕ ಎಂದು ಕರೆಯಬಹುದು. ಸಾಮಾಜಿಕವಾಗಿ, ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವು ಬಗೆಯ ಹೋರಾಟಗಳು ಜನ್ಮತಾಳಿದವು. ದಲಿತ ಚಳುವಳಿ, ಬಂಡಾಯ, ಭಾಷಾ ಚಳುವಳಿ ಹೀಗೆ ಪ್ರಮುಖ ಚಳುವಳಿಗಳ ದನಿ ಪಡೆದುಕೊಂಡ ಕಾಲಘಟ್ಟವದು. ಅದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಂವೇದನೆಯ ವಿಭಿನ್ನತೆಗಳನ್ನು ಗುರುತಿಸುವ ಕಾರ್ಯವೂ ಆಯಿತು. ಮುಸ್ಲಿಂ ಸಂವೇದನೆ, ಮಹಿಳಾ ಸಂವೇದನೆ, ಮುಖ್ಯವಾಗಿ ಹೆಸರಿಸಬೇಕಾದ ಸಂವೇದನೆಗಳು. ಯಾಕೆ ಈ ಸಂವೇದನೆಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ ಎನ್ನುವುದಕ್ಕೆ ನಮ್ಮ ಸಾಮಾಜಿಕ ಸಂರಚನೆಯನ್ನು ನೋಡಬೇಕಾಗುತ್ತದೆ. ಮಹಿಳೆಯರಷ್ಟೇ ಅವಮಾನ ಮತ್ತು ಶೋಷಣೆ, ಅಭದ್ರತೆ, ಆತಂಕ ಈ ಭಾವಗಳಿಗೆ ಒಳಗಾದ ಸಮುದಾಯವೆಂದರೆ ಮುಸ್ಲಿಂ ಸಮುದಾಯ. ಅದೇ ರೀತಿ ಮಹಿಳೆ ಎಲ್ಲ ಧರ್ಮಗಳಲ್ಲಿಯೂ ಕುಟುಂಬ, ಸಮಾಜ, ಶಿಕ್ಷಣ, ಧರ್ಮ, ಸಂಸ್ಕೃತಿ ಈ ಎಲ್ಲ ವಿಚಾರಗಳಲ್ಲೂ ಪುರುಷ ಪ್ರಧಾನತೆಯ ಹಲ್ಲೆಗೆ ಒಳಗಾದವಳಾಗಿದ್ದಾಳೆ. ಪ್ರಾಕೃತಿಕವಾಗಿ ಮಹಿಳೆಯ ಶಕ್ತಿ ಅಪಾರವೆಂಬುದಕ್ಕೆ ಪಾಲನೆ, ಪೋಷಣೆ ಇತ್ಯಾದಿ ಹೊಣೆಗಾರಿಕೆಯ ಜವಾಬ್ದಾರಿಯನ್ನು ನಿರ್ವಹಿಸಿಯೂ ಕಡೆಗಣನೆಗೆ ಒಳಗಾದ ಜೀವ.

ಸತಿ ಸಾವಿತ್ರಿ, ಗಾಂಧಾರಿ, ಸೀತೆ, ಮಾದ್ರಿ ಹೀಗೆ ಹಲವಾರು ಉದಾಹರಣೆಗಳೊಳಗೆ ಪುರಷಾನುಸಾರಿಯಾಗಿ ಅವಳ ಬದುಕನ್ನು ವೈಭವಿಕರಿಸಲಾಯಿತು. ಪುರಾಣ, ಇತಿಹಾಸ, ವರ್ತಮಾನ ಎಲ್ಲಾ ಕಾಲದ ಸಾಹಿತಿಗಳು ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಹುಡುಕಿದ್ದು ಸಾಂಪ್ರದಾಯಿಕ ಕಟ್ಟುಕಟ್ಟಲೆಯ ನೀತಿ ನಿಯಮಗಳಲ್ಲಿ ಬಂಧಿತವಾದ ಮಹಿಳೆಯನ್ನೇ. ಪಠ್ಯಪುಸ್ತಕಗಳಲ್ಲಿಯೂ ಇದೇ ಮಾದರಿಯ ಸ್ತ್ರೀತ್ವವನ್ನು ಬೋಧಿಸಲಾಯಿತು.

70ರ ದಶಕದ ನಂತರ ಈ ಎಲ್ಲಾ ಪಾತ್ರಗಳನ್ನು ಮರುಚಿಂತನೆಗೆ ಒಳಪಡಿಸಲಾಯಿತು. ಬುದ್ಧನನ್ನು ಪ್ರಶ್ನಿಸುವ ಯಶೋಧರೆ, ಇಡೀ ಪ್ರಭುತ್ವವನ್ನು ಪ್ರಶ್ನಿಸುವ ಅಮೃತಮತಿ, ಸಾಮಾಜಿಕ ಮೌಲ್ಯಗಳನ್ನು ಪ್ರಶ್ನಿಸುವ ದ್ರೌಪದಿ ಪುರುಷ ಪ್ರಧಾನತೆಯನ್ನ ಪ್ರಶ್ನಿಸುವ ಅಕ್ಕಮಹಾದೇವಿ ಇಂಥ ಪಾತ್ರಗಳ ದಿಟ್ಟ, ನೇರ ನಡೆಯ ಮುಖಾಂತರ ಸ್ತ್ರೀ ಸ್ವಾತಂತ್ರ್ಯವನ್ನು ಸಮಾನತೆಯನ್ನು ಎತ್ತಿ ಹಿಡಿಯಲಾಯಿತು. ಇದು ಸಾಮಾಜಿಕ ಸಂಕಷ್ಟಗಳನ್ನು ಪ್ರಶ್ನಿಸಿದ ಬಗೆಯ ರಚನೆಯಾದರೆ ಸ್ವಾನುಭವನಿಷ್ಟ ಕೃತಿಗಳಲ್ಲಿ ಸದ್ಯದ ಸಮಕಾಲೀನ ವಿದ್ಯಮಾನಗಳ ಹಿನ್ನಲೆಯಲ್ಲಿ ಸ್ತ್ರೀತ್ವದ ಘನತೆಯನ್ನು ಎತ್ತಿಹಿಡಿಯುವ ಧೈರ್ಯವನ್ನು ನಮ್ಮ ಲೇಖಕಿಯರು ದಿಟ್ಟತನದಿಂದ ನೆರವೇರಿಸುತ್ತಿದ್ದಾರೆ. ಆತ್ಮಕಥಾನಕ, ಕಾವ್ಯ, ಕಥೆ, ಕಾದಂಬರಿಗಳ ಮುಖಾಂತರ ಹೆಣ್ಣಿನ ಸಂಕಷ್ಟಗಳನ್ನು ಮತ್ತು ಮಹಿಳೆಯ ಮೇಲೆ ನಡೆಯುವ ದೌರ್ಜನ್ಯವನ್ನು ಅನಾವರಣಗೊಳಿಸಿದ್ದಾರೆ. ತುಳಿತಕ್ಕೊಳಗಾದ ಹೆಣ್ಣಿನ ಆಳದಲ್ಲಿ ಜೀವದ ಘನತೆ ಮತ್ತು ಧಾರಣಗುಣ ಇವುಗಳ ಸೂಕ್ಷ್ಮ ಸಂವೇದನೆಯ ಮಿಡಿತವನ್ನು ಕಾಣಬಹುದು.

ಹೀಗೆ ಮಹಿಳೆ 20ನೇ ಶತಮಾನದ ಕೊನೆಯ ದಶಕಗಳ ಮತ್ತು ಸಮಕಾಲೀನ ಸಂದರ್ಭಗಳಲ್ಲಿ ಹೆಣ್ಣಿನ ಅನುಭವ ಲೋಕವನ್ನು ವಿನೂತನ ರೀತಿಯಲ್ಲಿ ಅನೇಕ ಲೇಖಕಿಯರು ತೆರೆದಿಟ್ಟಿದ್ದಾರೆ. ನೊಂದಜೀವ ನೊಂದವರೇ ಬಲ್ಲರು ಎಂಬಂತೆ ಹೆಣ್ಣಿನ ಎಷ್ಟೋ ಒಳಸಂಕಟಗಳನ್ನು ಹೆಣ್ಣು ಹೇಳಲು ಸಾಧ್ಯವಾಗುವಂತಹ ಎಷ್ಟೇ ನೋವುಗಳು ಅವಳ ಬರಹದಲ್ಲಿ ವಿಶೇಷವಾಗಿ ದನಿ ಪಡೆದಿವೆ.

ಸಾಹಿತ್ಯ ಎಂದಾಕ್ಷಣ ನಮಗೆ ಎರಡು ಆಯಾಮಗಳು ಗೋಚರವಾಗುತ್ತವೆ. ಸಾಹಿತ್ಯದಲ್ಲಿ ಚಿತ್ರಿತವಾದ ಮಹಿಳೆಯರ ಬದುಕು ಒಂದಡೆಯಾದರೆ ಮತ್ತೊಂದು ಮಹಿಳೆಯರೇ ರಚಿಸಿದ ಸಾಹಿತ್ಯ. ಮಹಿಳೆಯರು ಅಕ್ಷರ ಲೋಕಕ್ಕೆ ತೆರೆದುಕೊಂಡಿದ್ದೇ ತಡವಾಗಿ, ಆದ್ದರಿಂದ ಸಾಹಿತ್ಯ ರಚನೆ ಕೂಡ ತಡವಾಗಿಯೇ ಶುರುವಾಯಿತು. ಈಗಲೂ ಅನೇಕ ಲೇಖಕಿಯರು ಚಿತ್ರಿಸುವ ಪಾತ್ರಗಳು ಪುರುಷ ಕೇಂದ್ರೀತವೇ ಆಗಿರುತ್ತವೆ. 12ನೇ ಶತಮಾನದ ಕನ್ನಡದ ಸಾಮಾಜಿಕ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಕಾಲಘಟ್ಟ. ವರ್ಣ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯವಾಗಿ  ಗಮನಕ್ಕೆ ಬರುವುದು ಆ ಚಳುವಳಿಗಳ ಒಂದು ಮಹತ್ವದ ಸಾಧನೆ. ಕೆಳವರ್ಗಗಳ ಕಾಯಕ ಜೀವಿಗಳಾದ ಮಹಿಳೆಯರು ಆ ಚಳುವಳಿಯ ಜೀವನಾಡಿಯಾಗಿ ಮಾತನಾಡಿದ್ದಾರೆ.  ಲಿಂಗ ತಾರತಮ್ಯದ ಬಗ್ಗೆ ಸತ್ಯಕ್ಕನ ವಚನ

“ಮೊಲೆ ಮುಡಿ ಇದ್ದುದೇ ಹೆಣ್ಣೆಂದು ಪ್ರಮಾಣಿಸಲಲ್ಲ

ಕಾಸೆಮೀಸೆ ಕಠಾರೆ ಇದ್ದುದೆ ಗಂಡೆಂದು ಪ್ರಮಾಣಿಸಲಲ್ಲ,

ಅದು ಜಗದ ಹಾಹೆ ಬಲ್ಲವರ ನೀತಿಯಲ್ಲ

ಏತರ ಹಣ್ಣಾದರೂ ಮಧುರವೇ ಕಾರಣ

ಅಂದವಿಲ್ಲದ ಕುಸುಮಕ್ಕೆ ವಾಸನೆಯೇ ಕಾರಣ

ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರ

ಹೆಣ್ಣು ಗಂಡುತನಗಳು ಸೃಷ್ಟಿಯ ವ್ಶೆರುಧ್ಯಗಳೇ ಪರಸ್ಪರ ಭೇದವಲ್ಲ.

ಅಕ್ಕಮಹಾದೇವಿ ಮತ್ತು ಆ ಕಾಲದ 30 ವಚನಕಾರ್ತಿಯರೇ ಕನ್ನಡದ ಮೊದಲ ಸಾಲಿನ ಲೇಖಕಿಯರು ಎನ್ನಬಹುದು. ಅದರಲ್ಲಿ ಆಯ್ದಕ್ಕಿ ಲಕ್ಕಮ್ಮ, ಜಾಡಮಾಲಿ ಸತ್ಯಕ್ಕ, ಭ್ರಷ್ಟಾಚಾರ, ಲಂಚದ ಬಗ್ಗೆ ನಿಖರವಾಗಿ ಮಾತಾಡಿದ್ದಾರೆ. ಇವರದು ಪ್ರಥಮ ಪ್ರಯತ್ನವಾದರೂ ಮಹಿಳೆಯರ ಅಸ್ತಿತ್ವದ ಕುರಿತು ಪ್ರಶ್ನಿಸಿ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದರು. ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಮಹಿಳೆಯರಿಗೆ ಶಿಕ್ಷಣ ದೊರಕುವಾಗ ಕೊಡಗಿನ ಗೌರಮ್ಮ, ಜಯದೇವಿತಾಯಿ ಲಿಗಾಡೆ, ನಂಜನಗೂಡು ತಿರುಮಲಾಂಬಾ, ಆರ್. ಕಲ್ಯಾಣಮ್ಮ, ಎಚ್.ವಿ.ಸಾವಿತ್ರಮ್ಮ ತ್ರಿವೇಣಿ ಎಂ.ಕೆ.ಇಂದಿರಾ, ಕಾವೇರಮ್ಮ, ಗಿರಿಬಾಲೆ(ಸರಸ್ವತಿಬಾಯಿ ರಾಜವಾಡೆ) ಮುಂತಾದವರು ಬರೆಯಲಾರಂಭಿಸಿದರು. ಅವರ ನಂತರ ನವ್ಯ ಪ್ರಗತಿಪರ ಚಿಂತನೆಯುಳ್ಳ ಬಹಳಷ್ಟು ಲೇಖಕಿಯರು ನಮಗೆ ಕಾಣಸಿಗುತ್ತಾರೆ.

ಸಾಹಿತ್ಯವೂ ಸಹ ಪುರುಷ ಪ್ರಧಾನ ವ್ಯವಸ್ಥೆಯ ಒಂದು ಭಾಗವಾಗಿದೆಯೇ ಹೊರತು ಮಹಿಳಾ ಅಭಿವೃದ್ಧಿಗೆ ಪೂರಕವಾದ ಸಾಹಿತ್ಯ ನಿರ್ಮಾಣ ಆಗಿಲ್ಲ. ಪ್ರಧಾನ ಧಾರೆಯಲ್ಲಿ ಮಹಿಳೆಯನ್ನು ಇನ್ನೂ ಕೂಡ 2ನೇ ದರ್ಜೆ ಪ್ರಜೆಯನ್ನಾಗಿಯೇ ನೋಡಲಾಗುತ್ತಿದೆ. ಸಮಾಜ ಮಹಿಳೆಯರನ್ನು ಒಂದು ವಸ್ತುವಾಗಿ ನೋಡುತ್ತಿದೆಯೇ ಹೊರತು ಜೀವವಾಗಿ ನೋಡಿಲ್ಲ.

ಸಮಾಜ ಮತ್ತು ಸಾಹಿತ್ಯದ ನಡುವೆ ಗಾಢ ಸಂಬಂಧವಿದ್ದು ಸಾಹಿತಿಗಳು ಸಮಾಜ ಕಟ್ಟುವ ತಿದ್ದುವ ಕೆಲಸದಲ್ಲಿ ಭಾಗಿಯಾಗಬೇಕು.

ರಾಷ್ಟ್ರಕವಿ ದಿ|| ಜಿ.ಎಸ್.ಶಿವರುದ್ರಪ್ಪನವರ ಕವನದಂತೆ ”ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆಯಿದೆ” ಮಹಿಳೆಯರ ಪಾಲಿಗೆ ಇದು ಸತ್ಯವಾಗಿದೆ. ಪ್ರತಿದಿನ ಅತ್ಯಾಚಾರದ ಪ್ರಕರಣಗಳು, ಲೈಂಗಿಕ ಕಿರುಕುಳ, ದೌರ್ಜನ್ಯದ ಪ್ರಕರಣವನ್ನು ನೋಡುತ್ತೇವೆ. ಸಮಾಜದಲ್ಲಿ ಮಹಿಳಾ ಸಂವೇದನೆ ಮಾಯವಾಗಿದೆಯೇನೋ ಎನಿಸುತ್ತಿದೆ. ಮನೆಯಲ್ಲಿ, ಬೀದಿಯಲ್ಲಿ, ಶಾಲೆಯಲ್ಲಿ ಎಲ್ಲಿಯೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. 70ರ ದಶಕದಲ್ಲಿ ಮಹಿಳಾ ಸಮಾನತೆ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಈಗ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡಬೇಕಾಗಿ ಬಂದಿರುವುದು ವಿಪರ್ಯಾಸದ ಸಂಗತಿ. ಪೊಲೀಸರು, ವೈದ್ಯರು, ಶಿಕ್ಷಕರು, ನ್ಯಾಯವಾದಿಗಳು ಎಲ್ಲರಲ್ಲೂ ಸ್ಪಂದನೆ ಸಂವೇದನೆ ಇಲ್ಲವಾಗಿದೆಯೋನೋ ಎಂಬಂತೆ ಜಡತ್ವ ತುಂಬಿದೆ. ಜಾಹೀರಾತುಗಳು, ಟಿ.ವಿ ಮಾಧ್ಯಮಗಳು ಮಹಿಳೆಯರನ್ನು ಸರಕನ್ನಾಗಿ ಬಿಂಬಿಸುವ ಬಗೆ ವಿವಿಧ ಬಗೆಯಲ್ಲಿ ಹೆಚ್ಚುತ್ತಿದೆ. ವಿಚಿತ್ರವೆಂದರೆ ಮಹಿಳೆಯರನ್ನು ಗ್ರಾಹಕರನ್ನಾಗಿಯೂ ಬಲಿಪಶುಗಳನ್ನಾಗಿಸಿ ಹೆಚ್ಚೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಕ್ಕೊಳಗಾದವರೆ, ಹುಟ್ಟುವ ಮುಂಚೆಯೇ ಭ್ರೂಣಹತ್ಯೆ ಮುಖಾಂತರ ಹೊಸಕಿ ಹಾಕುವ ತಣ್ಣಗಿನ ಕ್ರೌರ್ಯ ಸದ್ದಿಲ್ಲದೇ ನಡೆಯುತ್ತಿದೆ. ಮಹಿಳೆಯ ಜೀವನ ಮತ್ತು ದೇಹವನ್ನು ಸೀಮಿತ ದೃಷ್ಟಿಕೋನದಿಂದ ನೋಡಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಶೇ.75ರಷ್ಟು ಮಹಿಳೆಯರು ಜೀವನುಪಾಯಕ್ಕಾಗಿ ಕೃಷಿಯನ್ನು ನೇರವಾಗಿ ಅವಲಂಬಿಸಿದ್ದಾರೆ. ಕಳೆದ ಮೂರು ಜನಗಣತಿ ನೋಡಿದಾಗ ಕೃಷಿ ಕೂಲಿಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆತ್ಮಹತ್ಯೆಗೊಳಗಾದ ರೈತನ ಪತ್ನಿ ಪರಿಹಾರಕ್ಕೆ ಕಚೇರಿಗೆ ಅಲೆದಾಡುವಾಗ ಆಕೆಗೆ ಆಕೆ ಹೆಸರಲ್ಲಿ ಭೂಮಿ ಇದೆಯಾ ಅಂತ ನೋಡಲಾಗುತ್ತಿದೆ. ನಮ್ಮಲ್ಲಿ ಮಹಿಳೆಯರ ಹೆಸರಲ್ಲಿ ಭೂಮಿ ಎಲ್ಲಿರಲು ಸಾಧ್ಯ? ಹೀಗಾಗಿ ಯಾವ ಪರಿಹಾರ ಸಿಗುತ್ತದೆಂದು ರೈತ ಆತ್ಮಹತ್ಯೆ ಮಾಡಿಕೊಂಡಿರುತ್ತಾನೋ ಅದು ಕೂಡ ಮರೀಚಿಕೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಆರೋಗ್ಯ ವ್ಯವಸ್ಥೆಯಲ್ಲಿ ನ್ಯೂನ್ಯತೆ, ಆಹಾರ ಪದಾರ್ಥಗಳ ಬೆಲೆಯ ಹೆಚ್ಚಳ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣದ ಗಣನೀಯವಾಗಿ ಹೆಚ್ಚಾಗಲು ಕಾರಣವಾಗಿದೆ.

2011ರ ಅಂಕಿಸಂಖ್ಯೆಗಳ ಪ್ರಕಾರ ಕರ್ನಾಟದಲ್ಲಿ ಶೇ.48.8 ಕುಟುಂಬಗಳಲ್ಲಿ ಶೌಚಾಲಯವಿಲ್ಲ. ಗುಲ್ಬರ್ಗಾ ವಿಭಾಗದಲ್ಲಿಯಂತೂ ಶೇ. 68.8ರಷ್ಟು ಮನೆಗಳಲ್ಲಿ ಶೌಚಾಲಯವಿಲ್ಲ.

ಸರ್ಕಾರಿ ಶಾಲೆಗಳು ಮುಚ್ಚುವುದರಿಂದ ಆಗುವ ಅನಾಹುತಗಳ ಹೆಣ್ಣುಮಕ್ಕಳ ಮೇಲೆ ನೇರವಾಗಿ ಆಗುತ್ತದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಾಕ್ಷರತೆ ಮತ್ತು  ಶಾಲಾ ಭಾಗವಹಿಸುವಿಕೆಯಲ್ಲಿ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಭಾರತದ ಸಾಮಾಜಿಕ ಸಂದರ್ಭದಲ್ಲಿ ಮಹಿಳೆಯನ್ನು ಸೇವಾವಲಯದ ಕ್ಷೇತ್ರದಲ್ಲಿ ಮಾತ್ರ ಗುರುತಿಸಲಾಗುತ್ತವೆ. ಅಂಗನವಾಡಿ, ಆಶಾ, ಎ.ಎನ್.ಎಂ ಗಳಲ್ಲಿ ಕೆಲಸ ಮಾಡುವ ಮಹಿಳೆಯರ ದುಡಿಮೆಯನ್ನು ದುಡಿಮೆ ಅಂತ ಪರಿಗಣಿಸುತ್ತಿಲ್ಲ. ಕರ್ನಾಟಕದ ಎಲ್ಲೆಡೆ ಶೇ 50% ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಅಧಿಕಾರಕ್ಕೆ ಬಂದರೂ ಅಧಿಕಾರ ಚಲಾಯಿಸುವ ಸಂದರ್ಭದಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಅವರೇ ಅಧಿಕಾರ ಚಲಾಯಿಸುವಂತಹ ಒಂದು ತರಬೇತಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಿದೆ. ಅದನ್ನು ಸಾಹಿತಿಗಳು ತಜ್ಞರು ಮಾಡಬೇಕಾಗಿದೆ.

ಪ್ರಜಾಪ್ರಭುತ್ವ ಸಂದರ್ಭದಲ್ಲಿ ಹಲವು ಸಂಕ್ರಮಣದ ಸ್ಥಿತಿಗಳು ಬಿಂಬಿಸುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮೆಲ್ಲರ ಸಾಂಸ್ಕೃತಿಕ ಜವಾಬ್ದಾರಿ ದೊಡ್ಡದು.

(ಅಂಕಣಕಾರ್ತಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿಜ್ಞಾನ ಪರಿಷತ್ ಗೌರವಾಧ್ಯಕ್ಷೆ, ಆಯುರ್ವೇದ ತಜ್ಞರು. ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.)

Leave a Reply