ಲಿಂಗಾಯತ ಲಾಬಿಗೆ ಸಿಎಂ ತಿರುಗುಬಾಣ, ರತ್ನಪ್ರಭಾ ಅಥವಾ ಪಟ್ನಾಯಕ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂಭವ

ರತ್ನಪ್ರಭಾ, ಎಸ್. ಕೆ. ಪಟ್ನಾಯಕ್, ಸುಭಾಷ್ ಕುಂಟಿಯಾ

ಡಿಜಿಟಲ್ ಕನ್ನಡ ವಿಶೇಷ 

ಲಿಂಗಾಯತ ಲಾಬಿಗಾಗಲಿ, ಬೆದರಿಕೆಗಾಗಲಿ ಮಣಿಯದಿರಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಐಎಎಸ್ ಅಧಿಕಾರಿಗಳಾದ ರತ್ನಪ್ರಭಾ, ಪಟ್ನಾಯಕ್ ಇವರಿಬ್ಬರಲ್ಲಿ ಒಬ್ಬರನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ.

ಕೇಂದ್ರ ಸರಕಾರದ ಸೇವೆಗೆ ನಿಯೋಜನೆ ಮೇಲೆ ಹೋಗಿರುವ ಒರಿಸ್ಸಾ ಮೂಲದ, ಕರ್ನಾಟಕ ಶ್ರೇಣಿಯ ಮತ್ತೊಬ್ಬ ಹಿರಿಯ ಅಧಿಕಾರಿ ಸುಭಾಷ್ ಕುಂಟಿಯಾ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳುವಂತೆ ಕೇಳಲಾಗಿದೆ. ಆದರೆ ಕುಂಟಿಯಾ ಅವರು ಇನ್ನೂ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಒಂದೊಮ್ಮೆ ಅವರು ಒಪ್ಪದಿದ್ದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಥವಾ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪಟ್ನಾಯಕ್  ಅವರನ್ನು ಸಿಎಸ್ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಸೋಮವಾರ ತೀರ್ಮಾನ ಹೊರಬೀಳಲಿದೆ.

ಲಿಂಗಾಯತ ಸಮುದಾಯದ ವಿ. ಉಮೇಶ ಅವರನ್ನು ಸಿಎಸ್ ಹುದ್ದೆಗೆ ನೇಮಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಅವರು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಅಲ್ಲದೇ, ರಾಜಕೀಯ ಹಾಗೂ ಅಧಿಕಾರಶಾಹಿ ನೇಮಕಗಳಲ್ಲಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಬದಲಿಗೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಅಡಿ ಅವರಂತವರ ಅಧಿಕಾರ ಕಸಿದುಕೊಳ್ಳುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇದು ಹೀಗೆ ಮುಂದುವರಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದರು. ಆದರೆ ಈ ಬೆದರಿಕೆಗೆ ಬಗ್ಗದಿರಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಾಜಕೀಯ ಮೇಲಾಟಗಳು ನಡೆಯುತ್ತಿರುವಂತೆಯೇ ಐಎಎಸ್ ವಲಯದೊಳಗೂ ಲಾಬಿಗಳು ಚುರುಕಾಗಿವೆ. ಈಗ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಆಗಿರುವ ನರಸಿಂಹರಾಜು ಮತ್ತು ರತ್ನಪ್ರಭಾ ಅವರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಇಬ್ಬರ ನಡುವೆ ಯಾವಾಗಲೂ ಪ್ರತಿಷ್ಠೆ ಜಗಳ. ಇವರಿಬ್ಬರೂ ಹಿಂದೆ ಮಾಧ್ಯಮದವರ ಮುಂದೆಯೇ ಕಿತ್ತಾಡಿಕೊಂಡಿದ್ದರು. ಹೀಗಾಗಿ ರತ್ನಪ್ರಭಾ ಅವರು ಸಿಎಸ್ ಆಗುವುದರ ವಿರುದ್ಧ ನರಸಿಂಹರಾಜು ಪ್ರಾಯೋಜಕತ್ವದ ಐಎಎಸ್ ಲಾಬಿ ಕೆಲಸ ಮಾಡುತ್ತಿದೆ.

ಆದರೆ ರತ್ನಪ್ರಭಾ ಅವರೂ ಕಡಿಮೆ ಏನಿಲ್ಲಾ. ಇಲ್ಲಿಂದ ದಿಲ್ಲಿಯವರೆಗೂ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿದ್ದಾರೆ. ತೆಲುಗು ಮೂಲದವರಾಗಿದ್ದು ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿಯಾಗಿರುವ ರತ್ನಪ್ರಭಾ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಆರಂಭಿಸಿದವರು. ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿದ್ದು, ಉತ್ತಮ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ಇನ್ನೂ ಎರಡು ವರ್ಷ ಅಧಿಕಾರ ಅವಧಿ ಇದೆ. ಅವರ ಪತಿ ಕೂಡ ಐಎಎಸ್ ಅಧಿಕಾರಿ. ನೆರೆಯ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮೂಲಕ ದಿಲ್ಲಿ ವಲಯದಲ್ಲೂ ಪ್ರಭಾವ ಹೊಂದಿದ್ದಾರೆ. ಅಹಿಂದ ಗುಂಪಿಗೆ ಬರುವ ಕಾರಣಕ್ಕೆ ಇವರನ್ನೇ ಸಿಎಸ್ ಮಾಡಬೇಕು ಎಂಬುದು ಸಿದ್ದರಾಮಯ್ಯನವರ ಇಂಗಿತ.

ಸಿದ್ದರಾಮಯ್ಯನವರ ಎರಡನೇ ಆದ್ಯತೆ ಎಸ್.ಕೆ. ಪಟ್ನಾಯಕ್ ಅವರು. ಇನ್ನೂ ಮೂರು ವರ್ಷ ಅಧಿಕಾರ ಅವಧಿ ಇರುವ ಪಟ್ನಾಯಕ್ ಕೂಡ ಉತ್ತಮ ಅಧಿಕಾರಿ ಎಂದು ಹೆಸರಾದವರು. ಒಂದೊಮ್ಮೆ ಇವರಿಗೆ ಸಿಎಸ್ ಅವಕಾಶ ತಪ್ಪಿದಲ್ಲಿ ಮೂರು ತಿಂಗಳಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಆಗಲಿದ್ದಾರೆ. ಪ್ರಸ್ತುತ ಈ ಹುದ್ದೆ ನಿರ್ವಹಿಸುತ್ತಿರುವ ನರಸಿಂಹರಾಜು ಅಷ್ಟೊತ್ತಿಗೆ ಸೇವೆಯಿಂದ ನಿವೃತ್ತಿ ಆಗಲಿದ್ದಾರೆ.

ಇನ್ನೂ ಐದು ತಿಂಗಳು ಸೇವೆ ಬಾಕಿ ಇರುವ ಉಮೇಶ ಅವರೂ ಉತ್ತಮ ಅಧಿಕಾರಿ, ಈ ಹಿಂದೆ ಕೌಶಿಕ್ ಮುಖರ್ಜಿ ಅವರು ಮುಖ್ಯ ಕಾರ್ಯದರ್ಶಿ ಆದಾಗಲೇ ಅವರ ಜತೆ ಸ್ಪರ್ಧೆಯಲ್ಲಿದ್ದವರು. ಆದರೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೃಪಾಕಟಾಕ್ಷದಿಂದ ಕೌಶಿಕ್ ಮುಖರ್ಜಿ ಮುಖ್ಯ ಕಾರ್ಯದರ್ಶಿ ಆಗಿದ್ದಷ್ಟೇ ಅಲ್ಲದೇ ಮೂರು ತಿಂಗಳ ಸೇವಾ ವಿಸ್ತರಣೆ ಪಡೆದುಕೊಂಡರು. ಈಗ ಉಮೇಶ ಮತ್ತೇ ಪೈಪೋಟಿಯಲ್ಲಿದ್ದಾರೆ. ವೀರಶೈವ ಮಹಾಸಭೆ ಅವರ ಬೆನ್ನಿಗೆ ನಿಂತಿದ್ದು, ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಿದೆ.

Leave a Reply