ಅಸಹಿಷ್ಣುತೆಯ ನೈಜ ಮಾದರಿ ಉ.ಪ್ರ.ದಲ್ಲಿದೆ, ಮಂದಿರ ಸಮಸ್ಯೆ ಸೌಹಾರ್ದವಾಗಿ ಬಗೆಹರಿಯಲಿ ಎಂದವರ ಕೆಲಸ ಹೋಗಿದೆ!

ಡಿಜಿಟಲ್ ಕನ್ನಡ ಟೀಮ್

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸದಸ್ಯ, ಎರಡು ತಿಂಗಳ ಹಿಂದೆಯಷ್ಟೆ ಮನರಂಜನೆ ತೆರಿಗೆ ಇಲಾಖೆಯ ಸಲಹೆಗಾರರಾಗಿ ನೇಮಕಗೊಂಡಿದ್ದ 68 ವರ್ಷದ ಓಂ ಪಾಲ್ ನೆಹ್ರಾ ಎಂಬುವರು ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರ ಕೆಂಗಣ್ಣಿಗೆ ಗುರಿಯಾಗಿ ಸಂಪುಟ ಸ್ಥಾನಮಾನದ ಹುದ್ದೆ ಮತ್ತು ಸವಲತ್ತುಗಳನ್ನು ಕಳೆದುಕೊಂಡಿದ್ದಾರೆ. ಈ ಕ್ರಮಕ್ಕೆ ಅಧಿಕೃತ ಕಾರಣಗಳನ್ನೇನೂ ಉತ್ತರ ಪ್ರದೇಶ ಸರ್ಕಾರ ನೀಡಿಲ್ಲ.

ಅವರು ಮಾಡಿರುವ ಅಪರಾಧವಾದರೂ ಏನು? ಅಯೋಧ್ಯೆಯಲ್ಲಿ ಮುಸ್ಲಿಮರೇ ಮುಂದಾಗಿ ನಿಂತು ಮಂದಿರ ನಿರ್ಮಿಸಿದರೆ ದೇಶದಲ್ಲಿ ಸೌಹಾರ್ದತೆಗೆ ಸಹಾಯವಾಗುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದು. ಇದನ್ನು ಒಪ್ಪುವುದು, ಬಿಡುವುದು ಇಲ್ಲವೇ ಅವರ ಮಾತುಗಳನ್ನು ಖಂಡಿಸುವುದು ಈ ಮಾರ್ಗಗಳು ಎಲ್ಲರಿಗೂ ಮುಕ್ತ. ಆದರೆ, ಸೆಕ್ಯುಲರ್ ಮೌಲ್ಯಗಳು- ಸೌಹಾರ್ದತೆ ಎಂದೆಲ್ಲ ಬಡಬಡಿಸುವ ಸಮಾಜವಾದಿ ಪಕ್ಷದಂಥ ರಾಜಕೀಯ ಸಂಘಟನೆಗಳು ತಮ್ಮ ಮತಬ್ಯಾಂಕ್ ಗೆ ಹೊಂದದ ಚಿಕ್ಕ ಭಿನ್ನಾಭಿಪ್ರಾಯವನ್ನೂ ಸಹಿಸಿಕೊಳ್ಳುತ್ತಿಲ್ಲ ಎಂಬುದರಲ್ಲೇ ನಿಜವಾದ ‘ಅಸಹಿಷ್ಣುತೆ’ ಇದೆ. ಇಷ್ಟಕ್ಕೂ ನೆಹ್ರಾ ಅವರು ಮಂದಿರ ನಿರ್ಮಾಣಕ್ಕಾಗಿ ಯಾರನ್ನೋ ಕೊಚ್ಚಿ, ಕೊಲ್ಲಿ ಎಂದೇನೂ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ.

ಯುಪಿ ಸರಕಾರ ಹಮ್ಮಿಕೊಂಡಿದ್ದ ಕಿಸಾನ್ ದಿನಾಚರಣೆಯಲ್ಲಿ ಮಾತನಾಡುತ್ತ, ‘ಅಯೋಧ್ಯೆಯ ರಾಮಮಂದಿರದ ಮತ್ತು ಮಥುರಾದಲ್ಲಿ ಕೃಷ್ಣಮಂದಿರ ನಿರ್ಮಾಣಕ್ಕೆ ಮುಸ್ಲಿಮರ ಸಹಾಯ ಬೇಕು. ಮಸೀದಿಯ ಜಾಗವನ್ನು ಮಂದಿರ ನಿರ್ಮಾಣಕ್ಕೆ ಬಿಟ್ಟು ನೀವು ಕರಸೇವಕರಾಗಿ ಸೇರಿ ಮತ್ತು ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲೇ 2 ರಿಂದ 3 ಕಿ.ಮೀ ಒಳಗೆ ಜಾಗ ಪಡೆದುಕೊಂಡರೆ ಎಲ್ಲರಲ್ಲೂ ಸೌಹಾರ್ದತೆಯ ಭಾವನೆ ನಿರ್ಮಾಣವಾಗುವುದು’ ಎಂಬ ಸಲಹೆಯನ್ನು ನೀಡಿದ್ದರು. ಅಲ್ಲದೇ, ಹೀಗೆ ಮಾಡಿದ್ದೇ ಆದಲ್ಲಿ ಈ ವಿಷಯ ಪ್ರಸ್ತಾಪಿಸಿ ಲಾಭ ಮಾಡಿಕೊಳ್ಳುತ್ತಿರುವ ವಿಎಚ್ ಪಿ ತಂತ್ರವನ್ನೂ ಎದುರಿಸಿದಂತಾಗುತ್ತದೆ ಎಂಬುದು ಅವರ ಆಶಯವಾಗಿತ್ತು.

ನಿಜ. ಮಂದಿರ ವಿವಾದ ನ್ಯಾಯಾಲಯದಲ್ಲಿರುವುದರಿಂದ ಯಾರು ಯಾವ ಸೂತ್ರ ಮುಂದೆ ಮಾಡಿದರೂ ಅದು ಸಿಂಧುವಾಗುವುದಿಲ್ಲ. ಹಾಗೆಂದು ಹುದ್ದೆ ಕಳೆದುಕೊಳ್ಳಬೇಕಾದ ಅಪದ್ಧವನ್ನೇನೂ ನೆಹ್ರಾ ನುಡಿದಿಲ್ಲ ಅನ್ನೋದು ಸ್ಪಷ್ಟ. ಮಂದಿರ- ಮಸೀದಿಗಳ ವಿಷಯದಲ್ಲಿ ಪರ್ಯಾಯ ಸಲಹೆಗಳನ್ನು ಅಭಿವ್ಯಕ್ತಿಸುವುದೇ ಗಂಭೀರ ತಪ್ಪು ಎಂದಾಗಿಬಿಟ್ಟರೆ, ಇಂಥದ್ದೇ ಹಲವು ಸಮಸ್ಯೆಗಳಿಗೆ ಸೌಹಾರ್ದದ ನೆಲೆಯಲ್ಲಿ ಪರಿಹಾರ ಸಿಕ್ಕೀತಾದರೂ ಹೇಗೆ? ಸಹಿಷ್ಣುತೆ ಎಂಬ ಪದಕ್ಕೇನರ್ಥ?

Leave a Reply