ಗರ್ಭಾವಸ್ಥೆಯ ಮೊದಲ ತ್ರೈಮಾಸಿಕ, ತಿಳಿಯಬೇಕಿರುವ ಸಂಗತಿಗಳು ಅನೇಕ

ನಂದಿಬಟ್ಟಲು

shama nandibetta (2)

ಶಮಾ, ನಂದಿಬೆಟ್ಟ

ಒಡಲಲ್ಲಿ ಇನ್ನೊಂದು ಜೀವ ಚಿಗಿತುಕೊಳ್ಳುವ ಕ್ಷಣ ಮಧುರ ಮಂಜುಳ ಗಾನದಂಥದ್ದು. ಸಂಭ್ರಮದ ಜತೆಗೇ ಆತಂಕ, ಕಾಳಜಿಗಳೂ ಅವತ್ತಿಂದಲೇ ಶುರು. ಮೊದಲನೇ ತಿಂಗಳು ತುಂಬುವ ಹೊತ್ತಿಗೆ ಒಂದು ಮಲ್ಲಿಗೆ ಮೊಗ್ಗಿನಷ್ಟೂ ದೊಡ್ಡವಿಲ್ಲದೇ ಬರೀ 6-7 ಮಿ.ಮೀ ಮಾತ್ರ ಇರುವ ಜೀವ ಅರಳುವ ರೀತಿ ಪ್ರಕೃತಿಯ ವಿಸ್ಮಯ. ಮೊದಲ ತ್ರೈಮಾಸಿಕ (First Trimester) ಅಂದರೆ 12 ವಾರದವರೆಗಿನ ಅವಧಿ ತಾಯಿ, ಮಗು ಇಬ್ಬರ ದೃಷ್ಟಿಯಿಂದಲೂ ಬಹಳ ಮುಖ್ಯ. ಐದನೇ ವಾರದಿಂದ ಮೊದಲ್ಗೊಂಡು ಹನ್ನೆರಡನೇ ವಾರದವರೆಗಿನ ಅವಧಿಯಲ್ಲದು ಭ್ರೂಣವೆಂದು (Embryo) ಕರೆಯುತ್ತಾರೆ. ಇದು ತುಂಬ ವೇಗದ ಬೆಳವಣಿಗೆಯ ಹಂತ. ಜೀವಕೋಶಗಳು ಕ್ಷಣ ಕ್ಷಣಕ್ಕೂ ವೃದ್ಧಿಯಾಗುತ್ತ ಪ್ರಮುಖ ಅಂಗಾಂಗಳ ರಚನೆ ಪ್ರಾರಂಭವಾಗುತ್ತದೆ. ತಾಯಿಯ ದೇಹದಿಂದ ಸಾಕಷ್ಟು ನೀರು, ಆಮ್ಲಜನಕ, ಪೋಷಕಾಂಷಗಳು ಎಲ್ಲವನ್ನು ಹೀರಿಕೊಂಡು ಮಗುವಿಗೆ ನೀಡುವ ಗರ್ಭಚೀಲ ಕೂಡ ಇದೇ ಹಂತದಲ್ಲಿ ರೂಪುಗೊಳ್ಳುತ್ತದೆ.

          ಮೊದಲ ತ್ರೈಮಾಸಿಕದ ಪ್ರಮುಖ ಬೆಳವಣಿಗೆಗಳೆಂದರೆ:

 • ನರಮಂಡಲ : ಮಗುವಿನ ಮೆದುಳು, ಬೆನ್ನು ಮೂಳೆ ಮತ್ತು ನರಗಳು
 • ಹೃದಯ : ಮೊದಲಿಗೆ “ಎಸ್” ಆಕಾರದ ಕೊಳವೆಯಂಥ ಆಕಾರವೊಂದು ಮೂಡಿ ನಂತರ ಆಕಾರ ಗಾತ್ರ ಬದಲಾಗುತ್ತ ಹೋಗುತ್ತದೆ. ಮೂಡುವಾಗ ಹೃದಯ ಬಡಿತ ಇರುವುದಿಲ್ಲ. ಆದರೆ ಬಹಳ ಬೇಗನೇ ಬಡಿತವೂ ರಕ್ತ ಸಂಚಲನೆಯೂ ಆರಂಭವಾಗುತ್ತದೆ.
 • ಮುಖ : ಮುಖದ ಬೆಳವಣಿಗೆಗೆ ಆಕಾರವೊಂದು ಪಡಿಮೂಡಿ ಕಣ್ಣು ಮತ್ತು ಕಿವಿಗಳ ಜಾಗದಲ್ಲೂ ಪುಟ್ಟ ಆಕಾರ ಹುಟ್ಟಿಕೊಂಡು ಮೆದುಳಿನೊಂದಿಗೆ ಬೆಸೆದಿರುತ್ತವೆ. ರೆಪ್ಪೆಗಳು, ಹಣೆ, ಮೂಗು, ಗದ್ದ, ತುಟಿಗಳು ಮತ್ತು ದವಡೆಗಳ ಜಾಗದಲ್ಲಿ ಅಂಗಾಂಶಗಳು ಹುಟ್ಟಿಕೊಳ್ಳುತ್ತವೆ.
 • ಕೈ ಕಾಲುಗಳು : ಮೊದಲಿಗೆ ಪುಟ್ಟ ಚಾಚಿಕೆಗಳಂತಿದ್ದು ನಂತರ ಕೈಗಳು ಪೆಡಲ್^ಗಳಂತೆ ಮತ್ತು ಕಾಲುಗಳು ದೋಣಿಯ ಹುಟ್ಟಿನಾಕಾರಕ್ಕೆ ಬರುತ್ತವೆ. ತುದಿಯಲ್ಲಿರುವ ಸಣ್ಣ ಕವಲುಗಳು ಮುಂದೆ ಬೆರಳುಗಳಾಗಿ ಮಾರ್ಪಾಡಾಗುತ್ತವೆ.
 • ಜನನೇಂದ್ರಿಯಗಳು : ಇವುಗಳು ಈ ಹಂತದಲ್ಲೇ ಹುಟ್ಟುತ್ತವಾದರೂ ಪರಿಪೂರ್ಣ ಆಕಾರ ಮೂಡಿರದ ಕಾರಣ ಸ್ಕ್ಯಾನಿಂಗ್ ಮೂಲಕ ಕೂಡ ಮಗುವಿನ ಲಿಂಗ ನಿರ್ಧಾರ ಸಾಧ್ಯವಾಗುವುದಿಲ್ಲ.
 • ಮಾಂಸ ಖಂಡಗಳು : ಮಾಂಸ ಖಂಡಗಳು ರಚನೆಯಾಗಿ ಭ್ರೂಣ ಚಲನೆ ಪ್ರಾರಂಭವಾಗುತ್ತದೆ. ಆದರೆ ಭ್ರೂಣದ ಗಾತ್ರ ಕೇವಲ ಒಂದಿಂಚಿನಷ್ಟಿರುವ ಕಾರಣ ತಾಯಿಗೆ ಚಲನೆ ಗೊತ್ತಾಗುವುದಿಲ್ಲ.

ಮಗುವಿನ ಇಷ್ಟೂ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಷಗಳು ತಾಯಿಯ ಆಹಾರದ ಮೂಲಕವೇ ಹೋಗಬೇಕಾದ ಕಾರಣ ಗರ್ಭಿಣಿಯ ಆಹಾರದ ಗುಣಮಟ್ಟ ಬಹಳ ಮುಖ್ಯ. ತನ್ನ ಆಸೆಗಳಿಗಿಂತ ಹೆಚ್ಚಾಗಿ ಅವಶ್ಯಕತೆಯಿರುವ ಆಹಾರದ ತಿನ್ನುವುದು ಕಡ್ಡಾಯ. ಸ್ರ್ತೀರೋಗ ವೈದ್ಯೆ ಡಾ. ಶ್ವೇತಾ ಅವರು ಹೀಗನ್ನುತ್ತಾರೆ.

 • ದಿನಕ್ಕೆ ಮೂರರಿಂದ ನಾಲ್ಕು ಸಲ ತಾಜಾ ಹಣ್ಣುಗಳು ಮತ್ತು ಒಣ ಹಣ್ಣುಗಳ ಸೇವನೆ. ಇವುಗಳಲ್ಲಿ ವಿಟಮಿನ್ ಸಿ ಹೊಂದಿರುವ ಕಿತ್ತಳೆ, ಮೂಸಂಬಿ ಬಹು ಮುಖ್ಯ.
 • ಮೂರರಿಂದ ಐದು ತರಕಾರಿಗಳು – ಕಾಮನಬಿಲ್ಲಿನಂತೆ ಬಹು ಬಣ್ಣದವುಗಳು – ಹಸಿರು (ಸೊಪ್ಪುಗಳು) ಕೇಸರಿ (ಕ್ಯಾರೆಟ್, ಚೀನಿಕಾಯಿ) ಹಳದಿ (ಜೋಳ), ಕೆಂಪು (ಟೊಮ್ಯಾಟೋ, ಬೀಟ್^ರೂಟ್), ಬಿಳಿ (ಮೂಲಂಗಿ). ಸಾಧ್ಯವಾಗುವಂಥವುಗಳನ್ನು ಹಸಿ ಇಲ್ಲವಾದವುಗಳನ್ನು ಬೇಯಿಸಿ ತಿನ್ನಬಹುದು. ಇವುಗಳೆಲ್ಲವೂ ಖನಿಜಾಂಶಗಳ ಬಹುದೊಡ್ಡ ಆಕರಗಳು.
 • ದಿನಕ್ಕೆ ಮೂರು ಬಾರಿ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳು :ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಎಲ್ಲವೂ ಆಗಾಧ ಪ್ರಮಾಣದ ಕ್ಯಾಲ್ಸಿಯಂಗಳ ಆಕರವಾಗಿದ್ದು ಮಗುವಿನ ಮೂಳೆಗಳ ಬೆಳವಣಿಗೆಗೆ ಅತ್ಯವಶ್ಯ.
 • 2 ರಿಂದ ಮೂರು ಬಾರಿ ಪ್ರೊಟೀನ್ ಯುಕ್ತ ಆಹಾರಗಳಾದ ಮೊಟ್ಟೆ, ಮಾಂಸ, ಬೇಳೆ ಕಾಳುಗಳು, ದ್ವಿದಳ ಧಾನ್ಯಗಳು, ಎಣ್ಣೆಯುಕ್ತ ಧಾನ್ಯಗಳು ಅಂಗಾಂಶಗಳ ಬೆಳವಣಿಗೆಗೆ ಉಪಯುಕ್ತವಾಗಿವೆ. ಜತೆಗೆ ಫೋಲಿಕ್ ಆಸಿಡ್ ಮತ್ತು ವೈದ್ಯರ ಸಲಹೆ ನೀಡಿದಂಥ ಆಹಾರಗಳೂ ಅವಶ್ಯ.

ತನ್ನೊಳಗಿನ ಬದಲಾವಣೆಗಳಿಗೆ ದೇಹ ಹೊಂದಿಕೊಳ್ಳುವ ಈ ಕಾಲದಲ್ಲಿ ಸಣ್ಣಪುಟ್ಟ ನೋವುಗಳು, ಕಿರಿಕಿರಿಗಳು ಸಾಮಾನ್ಯ. ಇವುಗಳಿಗಾಗಿ ಅನವಶ್ಯಕವಾಗಿ ಮಾತ್ರೆ ಅಥವಾ ಔಷಧಿಗಳ ಸೇವನೆ ಒಳ್ಳೆಯದಲ್ಲ. ಜತೆಗೇ ಮದ್ಯಪಾನ ಧೂಮಪಾನ ಅಥವಾ ಯಾವುದೇ ಮಾದಕ ದ್ರವ್ಯದ ಚಟಗಳಿದ್ದರೆ ಅವುಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡಲು ಇದು ಸುಸಮಯ. ಆಹಾರಗಳಂತೆಯೇ ಇವು ಕೂಡ ಕೊನೆಗೆ ತಲುಪುವುದು ಮಗುವನ್ನೇ. ಕಾಫಿ, ಟೀ ಸೇವನೆಯನ್ನು ಕೂಡ ಒಂಭತ್ತು ತಿಂಗಳವರೆಗೆ ಬಿಡುವುದೊಳಿತು. ಸಾಧ್ಯವಾಗದಿದ್ದಲ್ಲಿ ಕಡಿಮೆ ಸೇವನೆ ಸೂಕ್ತ. ನಿಯಮಿತವಾಗಿ 200ಮಿ.ಗ್ರಾಂಗಿಂತ ಹೆಚ್ಚು ಕೆಫೀನ್ ಸೇವನೆಯಿಂದ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ. ಇಂದಿನ ಮಾಲಿನ್ಯದ ದಿನಗಳಲ್ಲಿ ಸಾಕುಪ್ರಾಣಿಗಳು ರೋಗವಾಹಕಗಳಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅವುಗಳನ್ನು ಅತೀ ಹತ್ತಿರಕ್ಕೆ ಬಿಟ್ಟುಕೊಳ್ಳುವುದು, ಮುದ್ದು ಮಾಡುವುದು ಒಳ್ಳೆಯದಲ್ಲ. ಸೌಂದರ್ಯ ಪ್ರಜ್ಞೆಯನ್ನು ಬದಿಗೊತ್ತಲಾಗದೇ ಕೂದಲಿಗೆ ಡೈ ಹಾಕಿಕೊಳ್ಳುವಾಗಲೂ ತುಂಬ ಗಾಢವಾದ ರಾಸಾಯನಿಕಗಳುಳ್ಳ ಬಣ್ಣಗಳ ಬಳಕೆ ಮಗುವಿಗೆ ತೊಂದರೆಯುಂಟು ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಪರಿಣಿತರು.

ಜತೆಗೇ ತಾಯಿಗೂ ಸುಸ್ತು, ವಾಕರಿಕೆ, ವಾಂತಿ ಸಹಜ ಪ್ರಕ್ರಿಯೆ. ಈ ಸಮಯದಲ್ಲಿ ಮನಸ್ಸನ್ನು ಖುಷಿಯಾಗಿಟ್ಟಕೊಳ್ಳುವುದು, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಕೊಟ್ಟು ಆರಾಮವಾಗಿರುವುದು ಮಗುವಿನ ಬೆಳವಣಿಗೆಗೆ ಬಹಳ ಸಹಾಯ ಮಾಡುತ್ತದೆ. ಮನಸ್ಸಿಗೆ ಖುಷಿ ಕೊಡುವ ಓದು, ಹಿತವಾದ ಸಂಗೀತಗಳು ಉಲ್ಲಾಸ ತರುತ್ತವೆ. ಜಾಗತಿಕ ಮಟ್ಟದಲ್ಲಿ ಪೂರ್ವ ಬಾಲ್ಯಾವಧಿ ತಜ್ಞರಾಗಿರುವ, ಪ್ರಿನೇಟಲ್ ಯುನಿವರ್ಸಿಟಿ ಕ್ಯಾಲಿಫೋರ್ನಿಯಾದ ಡಾ. ರೀನ್ ವ್ಯಾನ್ ಡೀ ಕಾರ್ ಪ್ರಕಾರ

“ಸಂಗೀತದ ಮೂಲಕ ಭ್ರೂಣ ಪ್ರಚೋದನೆ ಪರಿಣಾಮಕಾರಿಯಾಗಿದ್ದು ಬುದ್ಧಿಮತ್ತೆ ಮತ್ತು ಪಂಚೇಂದ್ರಿಯಗಳ ಕೌಶಲ್ಯ ವೃದ್ಧಿಸುತ್ತವೆ. ಅಲ್ಲದೆ ಇದು ಹೊರ ಜಗತ್ತಿನ ಸಂಪರ್ಕ ಕೊಂಡಿಯಾಗಿದ್ದು ಹುಟ್ಟಿನ ನಂತರ ಹೊಂದಾಣಿಕೆಯನ್ನು ಸುಲಭಗೊಳಿಸುತ್ತದೆ”

ಬೆಂಗಳೂರಿನ ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಚಂದ್ರಿಕಾ ಆನಂದ್ ಹೇಳುವಂತೆ,

“ಸುಮಾರು ಒಂದು ದಶಕದಿಂದೀಚೆಗೆ ಬಸಿರಿನ ಪರಿಕಲ್ಪನೆ ಬಹಳ ಬದಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿದೆ; ಆದರೆ ಜೀವನಶೈಲಿಯಿಂದ ಬರುವ ತೊಂದರೆಗಳು ಹೆಚ್ಚಾಗಿವೆ. ಕುಟುಂಬಕ್ಕಿಂತ ಹೆಚ್ಚಿನ ಆದ್ಯತೆ ವೃತ್ತಿ ಬದುಕಿಗೆ ನೀಡುತ್ತಿದ್ದು 28/30ನೇ ವಯಸ್ಸಿಗೆ ಮೊದಲನೇ ಗರ್ಭ ಧರಿಸುವುದು ಸಾಮಾನ್ಯ. ಇದರಿಂದಾಗಿ ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹದಂಥ ಜೀವನ ಶೈಲಿ ಸಂಬಂಧಿತ ಖಾಯಿಲೆಗಳು ಬಂದು ತೊಂದರೆಗಳಿಗೆ ದಾರಿ ಮಾಡುತ್ತವೆ. ಅಧಿಕ ಒತ್ತಡ, ಬಿಡುವಿಲ್ಲದ ದುಡಿಮೆ ಜತೆಗೇ  ಆರೋಗ್ಯಕರವಲ್ಲದ ಜಂಕ್^ಫುಡ್ ಸೇವನೆಗಳು ಹೆಚ್ಚಾಗಿ ಬಸಿರನ್ನು ತ್ರಾಸದಾಯಕವಾಗಿಸುತ್ತವೆ. ವೈದ್ಯರು ಹೇಳುವ ಪ್ರಕಾರ ವಿಶ್ರಾಂತಿ, ಉದ್ವೇಗರಹಿತ ಜೀವನಶೈಲಿ, ಪೌಷ್ಟಿಕ ಆಹಾರ, ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ, ಎಲ್ಲಕ್ಕೂ ಪುಟವಿಟ್ಟಂತೆ ಧನಾತ್ಮಕ ಮನೋಭಾವ ಬೆಳೆಸಿಕೊಂಡಲ್ಲಿ ತಾಯಿಗೆ ಆರೋಗ್ಯ, ಮಗುವಿಗೆ ಚೈತನ್ಯ ತಾನಾಗಿ ಬರುತ್ತದೆ”

ಬಸಿರು ಅರಳುವ ಹೊತ್ತಿನಲ್ಲಿ ಯಾವುದೇ ಬಿಸಿಲು ಬೀಳಬಾರದು. ಮಮತೆಯ ಸೆಲೆ ಒಣಗಬಾರದು. ತಾಯಿಯಾಗುವವಳು ಮಾತ್ರವಲ್ಲ ಮನೆ ಮಂದಿಯೆಲ್ಲ ಖುಷಿಯಾಗಿರಬೇಕು. ಆ ಖುಷಿ ಮಗುವನ್ನು ತಲುಪಬೇಕು. ಸ್ವಸ್ಥ ಸಮಾಜದ ಕನಸು ನನಸಾಗಬೇಕಾದ್ದೇ ಹೌದಾದಲ್ಲಿ ಇದು ಅವಶ್ಯಕತೆ, ಅನಿವಾರ್ಯತೆ ಎರಡೂ ಹೌದು.

(ಲೇಖಕಿಯ ಹಲವು ಬರಹಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಾಲ್ಯಾವಧಿ ಶಿಕ್ಷಣ ಹಾಗೂ ನಿರ್ವಹಣೆಯಲ್ಲಿ ಎಮ್ ಎಸ್ ಸಿ ಪದವಿ. ಎರಡು ಮಕ್ಕಳ ತಾಯಿಯೂ ಆಗಿರುವ ಇವರು, ತಾಯ್ತನ- ಮಕ್ಕಳನ್ನು ಬೆಳೆಸುವುದು ಇತ್ಯಾದಿ ವಿಷಯಗಳ ಸುತ್ತ ಡಿಜಿಟಲ್ ಕನ್ನಡಕ್ಕೆ ಅಂಕಣ ಬರೆಯುತ್ತಾರೆ.)

ಇವರ ಮೊದಲ ಅಂಕಣ ಓದಿ-  ಬಸುರಿಗೆ ಬಲ ಕೊಡುವ ಆಹಾರವಷ್ಟೇ ಅಲ್ಲ, ಖುಷಿ ಕೊಡುವ ವಿಚಾರವೂ ಬೇಕು

1 COMMENT

 1. ಆರೋಗ್ಯ ವಿಚಾರ ಪ್ರಸ್ತುತೆಯ ಜೊತೆಗೆ, ಮಾನವೀಯ ಕಾಳಜಿಗಳು ತಮ್ಮ ಬರಹದಲ್ಲಿ ಮನೆ ಮಾಡಿರುವುದು ಅರಿವಿಗೆ ಬರುತ್ತದೆ. ಡಾ. ಅನುಪಮಾ ನಿರಂಜನ ಅವರು ಅಂದಿನ ದಿನಗಳಲ್ಲಿ ಬರೆದಿದ್ದ ‘ತಾಯಿ ಮಗು’ ಪುಸ್ತಕ ಓದಿದ ನೆನಪು ಕೂಡಾ ಮರುಕಳಿಸಿದಂತಾಯ್ತು.

Leave a Reply