ಮೋದಿ ದೇವನೆ ಲೋಕಪಾಲನೆ, ತೇ ನಮೋಸ್ತು ನಮೋಸ್ತುತೆ…

ಚಿತ್ರ: ಮಹಾಂತೇಶ್

ಚೈತನ್ಯ ಹೆಗಡೆ

(ಶಾಸನ ವಿಧಿಸಿರದ ಎಚ್ಚರಿಕೆ: ವಿಡಂಬನೆ ಎಲ್ಲರ ಆರೋಗ್ಯಕ್ಕೂ ಸರಿಹೊಂದುವುದಿಲ್ಲ. ಲೇಖಕನಿಗೆ ಸಹಿಷ್ಣು ಭಾರತದಲ್ಲೇ ಸಾಯುವ ಆಸೆ ಇದ್ದು, ಪಾಕಿಸ್ತಾನಕ್ಕೆ ಹೋಗುವ ಇರಾದೆ ಹೊಂದಿಲ್ಲ.)

ದೇವರು ಭಕ್ತರನ್ನು ನಾನಾ ವಿಧದಲ್ಲಿ ಪರೀಕ್ಷಿಸ್ತಾನೆ ಅಂತ ಕೇಳಿದ್ವಿ. ಓ ಮೋದಿ ದೇವರೇ.. ತಾವು ಸಹ ಭಕ್ತರನ್ನು ಹೇಗೆಲ್ಲ ಪರೀಕ್ಷಿಸುವಿರಪ್ಪಾ? ಈ ಆಪ್ಟಾರ್ಡ್, ಕಾಂಗಿ ದುಷ್ಟ ಜಗತ್ತಿನಿಂದ ತಮ್ಮ ಮಹಿಮೆ- ಸ್ತೋತ್ರ- ಭಜನೆಗಳನ್ನು ಕಾಪಾಡುವಲ್ಲಿ ಎಂಥೆಂಥ ಕಷ್ಟಗಳು ಎದುರಾಗುತ್ತವೆ ಗೊತ್ತೇ?

ನಿನ್ನನ್ನು ನಮ್ಮ ನಾಯಕನೆಂದು ಹೊತ್ತು ಮೆರೆಸುವುದಕ್ಕೆ ಮೊದಲಿಗೆ ನಾವು ಮಾಡಿದ್ದೇನು ಹೇಳು ಮೋದಿ ದೇವರೇ? ಮನಮೋಹನ ಸಿಂಗರಲ್ಲಿ ಒಬ್ಬ ಪ್ರತಿನಾಯಕನನ್ನು, ಖಳನಾಯಕನನ್ನು ಹುಡುಕಿಕೊಂಡ್ವಿ. ಅವರನ್ನು ಗೇಲಿ ಮಾಡಿದಂತೆಲ್ಲ, ಅವರ ಮೇಲೆ ಜೋಕು ಹೊಸೆದಂತೆಲ್ಲ, ಅವರನ್ನು ಕೈಲಾಗದವರಂತೆ ಚಿತ್ರಿಸಿದಂತೆಲ್ಲ… ಮೋದಿ ದೇವರೇ.. ತಾವು ಪರ್ಯಾಯವಾಗಿ ಬೆಳೆದಿರಿ…

ನಾವವತ್ತು ಬೊಬ್ಬಿರಿದೆವು, ನನಗೆ ನೆನಪಿದೆ… ‘ಯಾವತ್ತೂ ಬದಲಾಗದ ಪಾಕ್ ಜತೆ ಮಾತುಕತೆ ನಡೆಸುವ ಮನಮೋಹನ ಸರ್ಕಾರಕ್ಕೆ ನಾಚಿಕೆ ಇದೆಯೇ? ಗಡಿಯಲ್ಲಿ ನಮ್ಮ ಸೈನಿಕರ ರುಂಡ ಚೆಂಡಾಡುತ್ತಿರುವ ಪಾಕಿಗಳ ಜತೆ ಊಟಕ್ಕೆ ಕೂರುವವರಿಗೆ ಪುರುಷತ್ವ ಇದೆಯೇ. ನಿಜಕ್ಕೂ ತಾಕತ್ತಿದ್ದರೆ ಪಾಕ್ ಸೈನಿಕರದ್ದೂ ನಾಲ್ಕು ರುಂಡ ತರಬೇಕಿತ್ತು’ ಅಂತೆಲ್ಲ ಹಿಂದಿನ ಸರ್ಕಾರದ ಮೇಲೆ ನಾವು ಬಾಣ ಪ್ರಯೋಗಿಸುತ್ತಿದ್ದರೆ…. ಅಹಹಾ, ನಮ್ಮ ದೇವರ ಎದೆಯು ಐವತ್ತಾರಿಂಚು ಉಬ್ಬಿರಲು ನೋಡಲೆಂಥ ಅಂದವದು… ಆಹಾ ಎಂಥ ಚೆಂದವದು…!

ಈಗಲೂ ನಾವು ಭಕ್ತಿ ಪರವಶರೇ. ಆದರೂ ಏಕೋ ತರ್ಕ ಚುಚ್ಚುತ್ತದೆ ಎದೆಗೆ ನೀವು ಕರಾಚಿಯಲ್ಲಿಳಿದು ನವಾಜ್ ಶರೀಫರಿಗೆ ಹ್ಯಾಪಿ ಬರ್ತ್ ಡೇ ಹೇಳಿ ಉಂಡು ಬರುವಾಗ…

ಆದರೂ… ಆದರೂ… ಸಂಶಯವು ಬೇಡ, ನಿಮ್ಮ ಬಿಡಲೊಲ್ಲೆವು ನಾವು… ಇಗೋ, ನಾವು ಟ್ವೀಟಿಸುತ್ತಿದ್ದೇವೆ ಇದು ನಮೋ ಅವರ ಅತ್ಯದ್ಭುತ ರಾಜತಾಂತ್ರಿಕ ವಿಜಯ ಎಂದು… ಭಕ್ತರು ಎಂದಾದರೂ ದೇವರನ್ನು ಕೈಬಿಡುವುದುಂಟೇ? ಅಕಟಕಟಾ… ಕೂಡದು, ಕೂಡದು! ಇಗೋ ನಾವು ಪದಗಳನ್ನು ಹೆಂಗಾದರೂ ಹೊಸೆಯಬಲ್ಲೆವು ಮೋದಿ ದೇವನೆ, ಲೋಕಪಾಲನೆ.. ನಿನ್ನಯ ಭಜನೆಗೆ. ನೋಡಿಲ್ಲಿ ನಾವು ಸಮರ್ಥನೆಗಳ ಅಲಂಕಾರದಲ್ಲಿ ಶೃಂಗರಿಸುತ್ತಿದ್ದೇವೆ ಫೇಸ್ ಬುಕ್ ಗೋಡೆಗಳನ್ನು, ಟ್ವಿಟ್ಟರ್ ನ ಬೇಲಿ ಸಾಲುಗಳನ್ನು…

ಇಗೋ ಇಗೋ.. ನಮ್ಮ ಧ್ವನಿ ಬದಲಿಸಿದ ಭಜನೆಯ ಸಾಲುಗಳನ್ನು ಒಪ್ಪಿಸಿಕೋ… ನಮೋ, ನಮೋ…

– ಹೇಗಿಹುದು ನೋಡಿ ನಮ್ಮ ಮೋದಿ ದೇವರ ಮಹಿಮೆಯು, ಬಂದಿಹರು ನವಾಜರು ಖುದ್ದು ವಿಮಾನ ನಿಲ್ದಾಣಕೆ ಕೆಂಪು ಹಾಸನು ಹಾಸಿ!

– ನವಾಜ್ ಷರೀಫರಿಗೆ ಬರ್ತ್ ಡೇ ದಿನವೂ ಪುರಸೊತ್ತು ನೀಡದೇ ನಿಲ್ದಾಣಕ್ಕೆ ಕರೆಸಿಕೊಂಡ ನಮೋ ತಾಕತ್ತು ಜಗದಲ್ಲಿ ಇನ್ಯಾರಿಗೆ ಇಹುದು?

ಇನ್ನೊಂದು ಐಡಿಯಾವನ್ನೂ ಹುಡುಕಿ ಅನುಷ್ಠಾನಕ್ಕೆ ತಂದಿದ್ದೇವೆ. ಭಯಂಕರ ಗೊಂದಲದಲ್ಲಿದ್ದಾಗ ಬರ್ಖಾ ದತ್ತಳನ್ನು ಬಯ್ದು ಬಚಾವಾಗು ಎಂಬ ಸೂತ್ರವದು. ಹ್ಹೆ ಹ್ಹೆ ಹ್ಹೆ… ಬರ್ಖಾಗೆ ಗೊತ್ತಿಲ್ಲದೇ ಮೋದಿ ಹಠಾತ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಕ್ಕಿಂತ ಹೆಚ್ಚಿನ ಸಾಧನೆ ಏನಿಹುದು ಈ ಲೋಕದಲಿ? ಮೋದಿ ಜಯಂ, ಜಯ ಮೋದಿ ಜಯಂ, ಜಯ ಮೋದಿ ಜಯಂ..

ಒಂದ್ನಿಮಿಷ… ಈ ದೇಶಭಕ್ತ ಭಜನೆ ನಿಮ್ಮ ಹೆಸರಲ್ಲಷ್ಟೇ ಪೇಟೆಂಟ್. ಅಕಸ್ಮಾತ್… ಮನಮೋಹನ ಸಿಂಗ್ ಏನಾದರೂ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ರೆ (ಆಗೋ ಮಾತೇ ಅಲ್ಲ ಬಿಡಿ, ಅವರ ಎದೆ ಸುತ್ತಳತೆ ತುಂಬ ಕಮ್ಮಿ ಇದೆ) ಆಗ ನಾವು ಹೇಳ್ತಿದ್ವಿ- ‘ಇವರಿಗೆ ಏನಾಗಿದೆ? ಡಿಸೆಂಬರ್ 25ರಂದು ವಾಜಪೇಯಿ ಅವರಿಗೆ ಶುಭಾಶಯ ಕೋರುವುದಕ್ಕೆ ಮೊದಲು ನವಾಜ್ ಗೆ ಶುಭಾಶಯ ಕೋರಿದ ‘ದೇಶದ್ರೋಹಿ’ ಮನಸ್ಥಿತಿಗೆ ಏನನ್ನೋಣ? ದೇಶ ತುಂಡು ಮಾಡಿದ ಜಿನ್ನಾ ಬರ್ತ್ ಡೇ ಕೂಡ ಇದ್ದಿದ್ರಿಂದ ಈ ನಾಚಿಗೆಗೆಟ್ಟವರು ಮಂಡಿ ಊರೋಕೆಂದೇ ಅಲ್ಲಿಗೆ ಹೋಗಿದ್ರು’ ಹಿಂಗೆಲ್ಲ ಕೇಳ್ತಿದ್ವಿ. ರಾಮನಿಗೂ ರಾವಣನಿಗೂ ಒಂದೇ ಸೂತ್ರ ಅನ್ವಯಿಸೋಕಾಗುತ್ತೆಯೇ? ಹೀಗಾಗಿಯೇ ನಾವು ಮನಮೋಹವರಂಥವರು ಪಾಕ್ ಜತೆ ಮಾತಾಡ್ತೀನಿ ಅಂದ್ರೆ, ‘ಅಲ್ಲಿಂದ ರುಂಡ ಎಷ್ಟ್ ತರ್ತೀರಿ’ ಅಂತ ಕೇಳ್ತೀವಿ. ನಮ್ ಮೋದಿ ದೇವ್ರು ಹೋಗಿ ಬಂದ್ರೆ ಎದೆ ಸುತ್ತಳತೆ ಹೆಚ್ಚಾಗಿದೆ ಅಂತ ಬೀಗ್ತೀವಿ!

ದೇವರೇ ಇದು ಮೊದಲ ಸಲವೇನಲ್ಲ…

ಸತ್ಯಮೇವ ಜಯತೇ ಎಂದ ಆಮೀರನನ್ನು ನಾವು ಟ್ವಿಟರ್ ನಲ್ಲಿ ಪರಿ ಪರಿಯಾಗಿ ಬಯ್ಯುತ್ತಿದ್ದಾಗಲೂ ನೀವು ಕಚೇರಿಗೆ ಬಂದ ಅವರೊಂದಿಗೆ ಮಾತಿಗೆ ಕುಳಿತಿರಿ. ನಾವು ಎದೆಗುಂದಲಿಲ್ಲ. ಇದು ಮೋದಿಯ ದೊಡ್ಡಗುಣ ಅಂತ ಟ್ವೀಟು ಕುಟ್ಟಿದೆವು. ತೊಂಬತ್ತು ಮುಟ್ಟಲಿರುವುದು ಮೊದಲಿಗೆ ಡಾಲರ್ ವಿರುದ್ಧದ ರುಪಾಯಿ ಮೌಲ್ಯವೋ ಅಥವಾ ಮನಮೋಹನ ಸಿಂಗರ ವಯಸ್ಸೋ ಅಂತ ಅವರು ಅಧಿಕಾರದಲ್ಲಿದ್ದಾಗ ಜೋಕು ಮಾಡಿದೆವು. ನೀವು ಬಂದ ನಂತರವೂ ಪರಿಸ್ಥಿತಿ ಅದೇ ಇರಲಾಗಿ… ಅಲ್ಲಲ್ಲ ಇದು ಜಾಗತಿಕ ಸಂಕಷ್ಟ, ಏನ್ ಮಾಡಕ್ಕಾಗಲ್ಲ ಅಂತ ರೋಧಿಸಿದೆವು. ತೈಲ ಬೆಲೆ ಚೂರು ಇಳಿದಿದ್ದಕ್ಕೆ ಇದು ಮೋದಿ ಪ್ರವಾಸದ ಫಲ ಅಂದೆವು. ನಂತರ ಮತ್ತೆ ಏರಿದಾಗ ನಿಮ್ಮನ್ನು ಯಾರೂ ದೂಷಿಸದಂತೆ ಜಾಗತಿಕ ಗಣಿತ ಬಿಚ್ಚಿಟ್ಟೆವು.

ಮೋದಿ ದೇವರೇ… ನಮ್ಮ ಸಮಸ್ಯೆಯೇ ಇದು. ಇವತ್ತು ಯಾರನ್ನು ಯಾವ ವಿಷಯಕ್ಕೆ ಬಯ್ದು ಅವರ ವಿರುದ್ಧ ನಿಮ್ಮನ್ನು ಹೀರೋ ಮಾಡಿರುತ್ತೇವೋ ಅದೇ ಸಂಗತಿಯನ್ನು ಮಾರನೇ ದಿನ ನೀವೇ ಮಾಡಿಬಿಟ್ಟಿರುತ್ತೀರಿ. ದೇವಾಲಯಕ್ಕಿಂತ ಶೌಚಾಲಯ ಮುಖ್ಯ ಅಂತ ಕಾಂಗ್ರೆಸಿಗ ಜೈರಾಂ ರಮೇಶ್ ಹೇಳಿದ್ದಕ್ಕೆ ಯಾವ ಪರಿ ಮೈಮೇಲೆ ಬಿದ್ವಿ ಗೊತ್ತಲ್ಲ? ಇದು ಹಿಂದು ವಿರೋಧಿ ಹೇಳಿಕೆ, ಯಾಕೆ ಚರ್ಚ್ ಪ್ರಸ್ತಾಪಿಸಲಿಲ್ಲ, ಮಸೀದಿ ಪ್ರಸ್ತಾಪಿಸಲಿಲ್ಲ ಅಂತ ಕೂಗಿದೆವು. ಅವ್ಯಾವ ಘೋಷಗಳೂ ನಿಮ್ಮ ಕಿವಿ ತಲುಪಲೇ ಇಲ್ಲವೇ ಮೋದಿ ದೇವರೇ? ಯಾಕೆ ಅಂತಂದ್ರೆ, ದೇವಾಲಯಕ್ಕಿಂತ ಮೊದ್ಲು ಶೌಚಾಲಯ ಅಂತ ನೀವೂ ಹೇಳಿಬಿಡೋದಾ? ಟವೆಲ್ಲಲ್ಲಿ ಮುಖ ಮುಚ್ಕೋಬೇಕಿದ್ದ ನಾವು ಅದನ್ನೇ ಸೊಂಟಕ್ಕೆ ಬಿಗಿದು ಹೇಳಿದ್ವಿ- ಇಲ್ಲಾ, ಇಲ್ಲಾ ಮೋದಿಯವರು ಹೇಳಿದ್ದೇ ಬೇರೆ ಅರ್ಥದಲ್ಲಿ. ಜೈರಾಂ ರಮೇಶ್ ರಿಗೆ ಉದ್ದೇಶ ಶುದ್ಧಿ ಇಲ್ಲ…. ನಾವು ಸರ್ಟಿಫಿಕೆಟ್ ಕೊಟ್ ಮೇಲೆ ಮುಗೀತ್ ನನ್ ಮಗಂದ್!

ಮೋದಿ ದೇವರೇ… ನಿಮಗೆ ಕನಿಷ್ಠ ಇನ್ನೊಂದು ಟರ್ಮಿಗಂತೂ ಭಕ್ತರ ಅಭಯವಿದೆ. ನೀನೊಂದು ಇಶಾರೆ ಕೊಡು ದೇವರೇ… ಫ್ರೀ ಬೇಸಿಕ್ಸ್ ಗೆ ಸಹಿ ಹಾಕಬೇಕಾ, ದೇಶದ ಸಾಲವೆಲ್ಲ ತೀರಿದೆ ಅಂತ ಪ್ರಚಾರ ಮಾಡಬೇಕಾ, ನಿಮ್ಮ ನೀತಿ ಪ್ರಶ್ನಿಸಿದವರನ್ನೆಲ್ಲ ದೇಶದ್ರೋಹಿಗಳೆಂದು ಅನವರತ ಜರೆಯಬೇಕಾ, ಮಿಕ್ಕ ಪಕ್ಷಗಳ ನೇತಾರರದ್ದೆಲ್ಲವೂ ಕುತಂತ್ರ- ನಮ್ಮ ಮೋದಿ ದೇವರದ್ದು ಮಾತ್ರ ಅದ್ಭುತ ಕಾರ್ಯತಂತ್ರ… ಇದುವೇ ದೇಶಕ್ಕಾಗಿ ಪ್ರಾಣ ತೊರೆಯಲು ಸಿದ್ಧವಿರುವ ನಮ್ಮೆಲ್ಲರ ಮಂತ್ರ… ಎಲ್ಲವೂ ಒಂದಾಗಿ, ಮೋದಿಯವರಲ್ಲಿ ಐಕ್ಯವಾಗಿ… ಏಕ ಭಾರತ, ಶ್ರೇಷ್ಠ ಭಾರತ!

5 COMMENTS

  1. Oh! enidu Chaitanya Hegde yavare ! Ee….tarahanu vidambane madabahude …..! Suuuuper. What you have said is 100% right. But modina bidaku agalve! enu madona… enu madona….. iddavaralli ivare best alva? Let us wait for the result.

  2. yavtharada manushyanappa?! CongressgaLa nari buddhi thildidroo ishtondu mathigedithanave? Bharathambe madilalli nimmanthavaru janma thaledirodlinde deshada Kathe haalagirodu. CongigaLu maadiro avantharagaLe saakagihogide, swalpa bayina/yochaneyanna adumkand koothkoppa…Eegina sarkarada karyavadhi mugidmele yenbeko vadrukoLLi congressigaLu.. 60 varshadinda berelloo Maryade, gouravadinda badkakirogagde maadiro congressigaLige yella bharatheeyara (resident and non residents) dhikkaravide! Nimmantha andha bhaktharu congress supporters aagirodanna nodidivi who fail to decide the right and the wrong..italian lady sonia seragu hidkondu, pappudu kaalu thoLitha SEVE maadthiro nimmanthavarindane deshana koLLe hoDithirodu avrella! Whatever u write, it will not affect the good work to be done by the present Govt.

  3. ಕನ್ನಡ ಅಥವಾ ಇತ್ತೀಚಿನ ಪತ್ರಿಕೋಧ್ಯಮದಲ್ಲಿ ಇಂತಹ ಬರವಣಿಗೆಗಳು ವಿರಳವಾಗುತ್ತಿವೆ. ತೂಕವಾಗಿಯೂ ಇದೆ. ಲೇವಡಿಗೋಸ್ಕರ ಬರೆದಿಲ್ಲ… ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನವನ್ನು ನಿರೀಕ್ಷಿಸುತ್ತೇನೆ ಚೈತನ್ಯ…. Good One

Leave a Reply