ಮೋದಿ-ಷರೀಫ್ ಅಚ್ಚರಿಯ ಹಸ್ತಲಾಘವ, ಪಾಕಿಸ್ತಾನದಲ್ಲಿ ಕುಗ್ಗುತ್ತಿದೆಯೇ ಸೇನೆಯ ಪ್ರಭಾವ?

ಎಸ್. ಆರ್. ವೆಂಕಟೇಶ್

“ಭಾರತ ವಿರೋಧಿ ಹೇಳಿಕೆ ಬೇಡ” ಹಾಗಂತ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕಳೆದ ವಾರವಷ್ಟೇ ತಮ್ಮ ಸಂಪುಟ ಸಚಿವರಿಗೆ, ಅಧಿಕಾರಿಗಳಿಗೆ ತಾಕೀತು ಮಾಡಿದ್ದು ನೆನಪಿರಬೇಕಲ್ಲವೇ? ಸುಷ್ಮಾ ಸ್ವರಾಜ್ ಅವರ ಭೇಟಿಯ ಹಿನ್ನೆಲೆಯಲ್ಲಿ ಷರೀಫ್ ನೀಡಿದ್ದ ಈ ಆದೇಶ ಮೇಲ್ನೋಟಕ್ಕೆ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವಷ್ಟು ಪರಿಣಾಮಕಾರಿ ಎಂದಷ್ಟೇ ಭಾವಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ- ಅಫ್ಘಾನಿಸ್ತಾನಗಳಿಗೆ ಭೇಟಿ ನೀಡಿದ ಬಳಿಕ ಲಾಹೋರ್ ನಲ್ಲಿ ಇಳಿದು ಷರೀಫ್ ಅವರನ್ನು ಭೇಟಿ ಮಾಡುವ ಆಯ್ಕೆಯನ್ನು ತೆರೆದಿರುಸುತ್ತದೆ ಎಂಬ ಯಾವ ಊಹೆಯೂ ಇರಲಿಲ್ಲ.

ಪ್ರಧಾನ ಮಂತ್ರಿಯಂತಹ ಹುದ್ದೆಯಲ್ಲಿರುವವರು ಕನಿಷ್ಠ ಭದ್ರತೆಯ ದೃಷ್ಟಿಯಿಂದಾದರೂ ಧಿಡೀರ್ ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳು ತೀರ ಅಪರೂಪ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಆದರೆ ಕೆಲವೇ ಗಂಟೆಗಳ ಹಿಂದಷ್ಟೇ ಅಫ್ಘಾನಿಸ್ತಾನದ ಸಂಸತ್ ನಲ್ಲಿ “ಅಫ್ಘಾನಿಸ್ತಾನ ಉದ್ಧಾರವಾಗಬೇಕಾದರೆ ಮೊದಲು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು, ಹಾಗಾದರೆ ಮಾತ್ರ ಅಫ್ಘಾನಿಸ್ತಾನ ಅಭಿವೃದ್ಧಿ ಸಾಧ್ಯ, ಭಾರತ- ಅಫ್ಘಾನಿಸ್ತಾನದ ಸೌಹಾರ್ದಯುತ ಸಂಬಂಧ ವೃದ್ಧಿಯಾಗುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೆಲ್ಲಾ ಗುಡುಗಿದ್ದ ಮೋದಿ, ಧಿಡೀರ್ ಪಾಕಿಸ್ತಾನಕ್ಕೆ ಭೇಟಿ ನೀಡುವುದಾಗಿ ಟ್ವೀಟ್ ಮಾಡಿದ್ದನ್ನು ನೋಡಿದರೆ ಇದೊಂದು ಸರ್ಪ್ರೈಸ್ ಬರ್ತ್ ಡೇ ಡಿಪ್ಲೊಮಸಿಯೇ ಇರಬೇಕು ಎಂದೆನಿಸುವುದರಲ್ಲಿ ಅಚ್ಚರಿಯಿಲ್ಲ. ಇದನ್ನು ಬರ್ತ್ ಡೇ ಡಿಪ್ಲೊಮಸಿಯೇ ಎನ್ನುವುದಕ್ಕಿಂತ ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ನಡೆ ಎಂದರೇನೇ ಸೂಕ್ತ, ಏಕೆಂದರೆ ಪಾಕಿಸ್ತಾನಕ್ಕೆ ಮೋದಿ ಅವರ ದಿಢೀರ್ ಭೇಟಿ ಕೇವಲ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಅವರ ಮೊಮ್ಮಗಳ ಮದುವೆಗೆ ಉಡುಗೊರೆ ಕೊಡುವುದೋ, ಅಥವಾ ಷರೀಫ್ ಅವರ ತಾಯಿಗೆ ನಮಸ್ಕರಿಸುವುದೋ ಆಗಿರಲಿಲ್ಲ. ‘ಭಾರತ ಮಾತುಕತೆಗೆ ಷರತ್ತುಗಳನ್ನು ವಿಧಿಸುತ್ತಿದೆ. ದ್ವಿಪಕ್ಷೀಯ ಮಾತುಕತೆಗೆ ಪಾಕ್ ಸಿದ್ಧವಿದ್ದರೂ ಭಾರತವೇ ದೂರ ಸರಿಯುತ್ತಿದೆ’ ಎಂದೆಲ್ಲಾ ಪುಂಖಾನುಪುಂಖವಾಗಿ ಅಂತಾರಾಷ್ಟ್ರೀಯ ಸಮುದಾಯದ ಎದುರು ಕಣ್ಣೀರಿಡುತ್ತಿದ್ದ ಪಾಕಿಸ್ತಾನದ ವಾದವನ್ನು ಸುಳ್ಳು ಎಂದು ಸಾಬೀತು ಮಾಡುವುದು ಈ ಭೇಟಿ ಉದ್ದೇಶವಿದ್ದಿರಬಹುದು. ಪ್ರಮುಖವಾಗಿ ಇಸೀಸ್ ನಂತಹ ಉಗ್ರ ಸಂಘಟನೆಗಳ ರೌದ್ರಾವತಾರ ವಿಶ್ವಕ್ಕೇ ಕರಿನೆರಳಾಗಿ ಕಾಡುತ್ತಿದ್ದು, ಸಿರಿಯಾದ ಭಯೋತ್ಪಾದನೆ ಜೊತೆಜೊತೆಗೇ ಮತ್ತೊಂದು ಸಿರಿಯಾ ಆಗಲು ಸಾಧ್ಯವಿರುವ ಪಾಕಿಸ್ತಾನವೂ ಬದಲಾಗಲೇಬೇಕೆಂಬ ಒತ್ತಡ ಹೆಚ್ಚುತ್ತಿದೆ. ಪೇಷಾವರದ ದಾಳಿ ಬಳಿಕ ಪಾಕಿಸ್ತಾನಕ್ಕೂ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ನಡುವೆ ಭೇದ ಮಾಡಬಾರದು ಅನ್ನಿಸಿರಬಹುದು.

ಇತ್ತೀಚಿನ ಭಯೋತ್ಪಾದಕ ಕೃತ್ಯಗಳ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವುದಾದರೆ, ಭಯೋತ್ಪಾದನೆ ತಮ್ಮ ಬುಡಕ್ಕೇ ಬಂದಿದ್ದು, ಡಾಲರ್ ಗಳ ಸುರಿಮಳೆ ಸುರಿಸಿ ಪರೋಕ್ಷವಾಗಿ ಒಂದು ಹಂತಕ್ಕೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ ಅಮೆರಿಕ, ಭಯೋತ್ಪಾದನೆ ಎಂದರೇನು ಎಂದು ವ್ಯಾಖ್ಯಾನಿಸುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಬಗ್ಗೆ ತಳೆದಿರುವ ನಿಲುವುಗಳಲ್ಲಿ ಬದಲಾವನೆ ಕಂಡು ಬರುತ್ತಿದೆ. ಇತ್ತೀಚೆಗೆ ಅಮೆರಿಕ ಪಾಕಿಸ್ತಾನವನ್ನು ಉಗ್ರರ ಸ್ವರ್ಗ ಎಂದಿತ್ತು. ಅಷ್ಟೇ ಅಲ್ಲದೇ ಅಲ್ಲಿನ ಕಾರ್ಯದರ್ಶಿಗಳು ಪಾಕಿಸ್ತಾನದೊಂದಿಗೆ ಅಮೆರಿಕ ನಾಗರಿಕ ಪರಮಾಣು ಒಪ್ಪಂದದಿಂದ ದೂರ ಉಳಿಯಬೇಕೆಂಬ ವರದಿ ನೀಡಿದ್ದರು ಸಾಲದೆಂಬಂತೆ ಅಮೆರಿಕ ಪಾಕ್ ಗೆ ನೀಡುವ ಫೈಟರ್ ಜೆಟ್ ಗಳು ಬಳಕೆಯಾಗುವುದು ಭಾರತದ ವಿರುದ್ಧ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿಯೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು ಪ್ರಮುಖ ವಿಷಯ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದಕ್ಕೂ ಸೇನೆಯ ಅಪ್ಪಣೆ ಪಡೆಯಬೇಕಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್, ಈ ಬಾರಿ ಲಾಹೋರ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಶಿಷ್ಟಾಚಾರ ಬದಿಗಿಟ್ಟು ಹೋದಾಗ ಸೇನೆ ತಕರಾರು ತೆಗೆಯದೇ ಇರುವುದು ಮೋದಿ ಅವರ ದಿಢೀರ್ ಭೇಟಿ ವೇಳೆ ಗಮನಿಸಬೇಕಾದ ಮತ್ತೊಂದು ಅಂಶ.

ಈ ಬಾರಿ ಪಾಕಿಸ್ತಾನಕ್ಕೆ ಬದಲಾಗುವುದನ್ನು ಬಿಟ್ಟು ಬೇರೆ ದಾರಿಯೂ ಇಲ್ಲದಂತೆ ಕಾಣುತ್ತದೆ. ಹಿಂದಿನಂತೆ ಅಮೆರಿಕಾದ ನೆರವು ಪಡೆದು, ಭಾರತಕ್ಕೆ ಧಮಕಿ ಹಾಕಲು ಅಮೆರಿಕಾ ಪಾಕಿಸ್ತಾನ- ಭಾರತ ಎರಡಕ್ಕೂ ಬೆಂಬಲಿಸುವಂತೆ ಕಾಣುತ್ತಿಲ್ಲ. ಪಾಕಿಸ್ತಾನ-ಭಾರತದ ನಡುವೆ ಆಯ್ಕೆ ಬಂದಲ್ಲಿ ಭಯೋತ್ಪಾದನೆ ನಿಗ್ರಹ ಮಾಡಲು ಪಾಕಿಸ್ತಾನಕ್ಕೆ ಸೂಚಿಸಿ, ಭಾರತಕ್ಕೆ ಬೆಂಬಲಿಸುವ ಸಾಧ್ಯತೆಯೇ ಹೆಚ್ಚಿದೆ. ಇನ್ನು ಭಯೋತ್ಪಾದನೆಯನ್ನು ಒಡಲಲ್ಲಿಯೇ ಇಟ್ಟುಕೊಂಡು ನಿಗ್ರಹಿಸುತ್ತಿರುವ ಚೀನಾ ಸಹ ಭಯೋತ್ಪಾದನೆ ವಿಷಯ ಬಂದಾಗ ಭಾರತದ ಪರ ನಿಲ್ಲದೇ ಇದ್ದರೂ ಪಾಕಿಸ್ತಾನದ ಪರ ನಿಲ್ಲುವ ಮಾತೇ ಇಲ್ಲ. ಅಷ್ಟರ ಮಟ್ಟಿಗೆ ಪಾಕ್ ನ ಭಯೋತ್ಪಾದನೆ ಜಾಗತಿಕವಾಗಿ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಪಾಕಿಸ್ತಾನದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಗಳ ಅಭಿಪ್ರಾಯ ಬದಲಾಗುತ್ತಿರುವ ವೇಳೆಯಲ್ಲೇ, ಸುಷ್ಮಾ ಸ್ವರಾಜ್, ಮೋದಿ ಅವರ ಪಾಕಿಸ್ತಾನದ ಭೇಟಿ ಹಾಗೂ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದರೂ ದ್ವಿಪಕ್ಷೀಯ ಮಾತುಕತೆಗೆ ಭಾರತ ಸಿದ್ಧವಿದೆ ಎಂಬ ಸಂದೇಶ ನೀಡಿರುವುದು ವಿಶ್ವಮಟ್ಟದಲ್ಲಿ ಭಾರತದತ್ತ ಯಾರು ಬೆರಳು ತೋರದಂತೆ ಮಾಡಲು ಮಾಡಿರುವ ರಾಜತಾಂತ್ರಿಕ ನಡೆ. ಇಷ್ಟಕ್ಕೂ ಸೇನೆಯ ಕಪಿಮುಷ್ಠಿಯಿಂದ ಪಾಕಿಸ್ತಾನದ ಆಡಳಿತವನ್ನು ಬಿಡುಗಡೆಗೊಳಿಸಬೇಕೆಂದರೆ ನವಾಜ್ ಷರೀಫ್ ಅವರಿಗೂ ಭಾರತದ ಸ್ನೇಹ ಅನಿವಾರ್ಯ. ಅಂದಹಾಗೆ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೂ ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಸಲು ಷರೀಫ್ ಸಿದ್ಧರಾದಂತಿತ್ತಾದರೂ ಬೆನ್ನಿಗೆ ಚೂರಿ ಹಾಕಿದ್ದು ಪಾಕ್ ಸೇನೆಯೇ. ಭಾರತದೊಂದಿಗೆ ಶಾಂತಿಯುತ ಮಾತುಕತೆ ಯಶಸ್ವಿಯಾಗುವ ಹಂತ ತಲುಪಿದ ಬಹುತೇಕ ಪ್ರಕರಣಗಳಲ್ಲಿ ವಿಲನ್ ಆಗಿದ್ದು ಪಾಕ್ ಸೇನೆಯೇ.

ಸದ್ಯಕ್ಕೆ ಮೋದಿ ದಿಢೀರ್ ಭೇಟಿ ಮಾಸ್ಟರ್ ಸ್ಟ್ರೋಕ್, ಷರೀಫರೊಂದಿಗಿನ ಮಾತುಕತೆಯೇನೋ ಒಂದು ಹಂತಕ್ಕೆ ನಿರೀಕ್ಷೆ ಮೂಡಿಸುವಂತಿದೆ ಬಿಡಿ. ಆದರೆ ಪಾಕಿಸ್ತಾನದ ಸೇನೆಯನ್ನು ಮೋದಿ ಸರ್ಕಾರದ ದೋವಲ್ ಪ್ರಣೀತ ವ್ಯವಸ್ಥೆ ಹೇಗೆ ಟ್ಯಾಕಲ್ ಮಾಡುತ್ತದೆ ಎಂಬುದು ಸದ್ಯದ ಪ್ರಶ್ನೆ.

Leave a Reply