
ಪರಿಷತ್ ಚುನಾವಣೆಗೆ ಸಿದ್ಧತೆಯ ನೋಟ
ಭಾನುವಾರದ ಪರಿಷತ್ ಚುನಾವಣೆ: ನೀವು ತಿಳಿದಿರಬೇಕಾದ್ದೇನು?
- ವಿಧಾನಪರಿಷತ್ನ 25 ಸ್ಥಾನಗಳಿಗೆ ಮತದಾನ ನಡೆಯಲಿದೆ.
- ಈ ಪೈಕಿ ಐದು ದ್ವಿಸದಸ್ಯ ಕ್ಷೇತ್ರಗಳಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ತಲಾ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಜೆಡಿಎಸ್ 18 ಸ್ಥಾನಗಳಲ್ಲಿ ಕಣಕ್ಕಿಳಿದಿದೆ.
- ಚಿಂತಕರ ಚಾವಡಿ ಎಂಬ ಖ್ಯಾತಿಯ ಮೇಲ್ಮನೆಗೆ ಈ ಬಾರಿ ಸ್ಪರ್ಧೆಯಲ್ಲಿರುವವರಲ್ಲಿ ಹೆಚ್ಚಿನವರು ಹಣಬಲದವರು. ರಿಯಲ್ ಎಸ್ಟೇಟ್ ಕುಳಗಳು, ಸಿನಿಮಾ ನಿರ್ಮಾಪಕರು, ಉದ್ದಿಮೆದಾರರು ಕಣದಲ್ಲಿದ್ದಾರೆ. ಹೀಗಾಗಿ ಕೋಟಿಗಟ್ಟಲೇ ಆಮಿಷದ ಹಣ ಓಡಾಡುತ್ತಿದೆ ಎಂಬ ಮಾತು ಚಾಲ್ತಿಯಲ್ಲಿದೆ.
- ಪರಿಷತ್ ನಲ್ಲಿ ಐದು ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಗೆ ಮತ್ತೆರಡು ಗೆಲ್ಲುವ ಗುರಿ. ಕಾಂಗ್ರೆಸ್ 11 ರಲ್ಲಿದ್ದು 15ಕ್ಕೆ ಜಿಗಿಯುವ ಇಂಗಿತದಲ್ಲಿದೆ. 8 ಸ್ಥಾನ ಹೊಂದಿರುವ ಬಿಜೆಪಿ 10 ಸ್ಥಾನ ಗೆಲ್ಲುವ ಉಮೇದಿಯಲ್ಲಿದೆ.
- 12 ಸ್ಥಾನಕ್ಕೂ ಮೇಲ್ಪಟ್ಟು ಗೆಲ್ಲುವ ಪಕ್ಷ ವಿಧಾನಪರಿಷತ್ನಲ್ಲಿ ಮೇಲುಗೈ ಸಾಧಿಸಲಿದ್ದು ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನ ತನ್ನದಾಗಿಸಿಕೊಳ್ಳುತ್ತದೆ.
- ಒಟ್ಟು 1,07,123 ಮತದಾರರಿದ್ದು ಆ ಪೈಕಿ ಮಹಿಳೆಯರ ಸಂಖ್ಯೆ 55232. ಒಟ್ಟು ಕಣದಲ್ಲಿರುವ ಅಭ್ಯರ್ಥಿಗಳು 125.
- ಮತದಾನ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ.
- ಮತ ಎಣಿಕೆ ಡಿಸೆಂಬರ್ 30 ರಂದು.
3 ವೈದ್ಯ ಕಾಲೇಜುಗಳಿಗೆ ತಾತ್ವಿಕ ಒಪ್ಪಿಗೆ
ಚಾಮರಾಜನಗರ, ಕೊಡಗು ಹಾಗೂ ಕಾರವಾರದಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ತೆರೆಯಲು ಭಾರತೀಯ ವೈದ್ಯಕೀಯ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದ ಗ್ರಾಮೀಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 450 ವೈದ್ಯಕೀಯ ಸೀಟುಗಳು ಉಚಿತವಾಗಿ ಲಭ್ಯವಾಗಲಿವೆ.
ಅವಿಭಜಿತ ಮೈಸೂರು ಜಿಲ್ಲೆಯ ಚಾಮರಾಜನಗರ ಹಾಗೂ ನೆರೆಯ ಕೊಡಗಿಗೆ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆ ಉನ್ನತೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿದ್ದರು.
ಆದರೆ ಐಎಂಸಿ ನಿಯಮಾವಳಿ ಪಾಲಿಸದ ಕಾರಣ ಅನುಮತಿ ದೊರೆತಿರಲಿಲ್ಲ. ಇದೀಗ ಮೂಲಸೌಕರ್ಯಾಭಿವೃದ್ಧಿ ಆಗಿರುವುದರಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ.
ಏರ್ ಇಂಡಿಯಾದಲ್ಲಿ ಮಾಂಸಾಹಾರ ಇಲ್ವಾ?
ಏರ್ ಇಂಡಿಯಾ ಸಂಸ್ಥೆಯ ವಿಮಾನಗಳಲ್ಲಿ ಮಾಂಸಾಹಾರ ನೀಡುವುದಿಲ್ಲ ಎಂಬ ಊಹಾಪೋಹ ಹರಿಡಾದುತ್ತಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಸಂಸ್ಥೆ ಕಡಿಮೆ ಅವಧಿಯ ಪ್ರಯಾಣಕ್ಕೆ ಮಾಂಸಾಹಾರ ನೀಡುವುದಿಲ್ಲ. ಇದು ಹೊಸದಾಗಿ ಬಂದ ನೀತಿಯೇನಲ್ಲ, ಹಿಂದೆಯೂ ನೀಡುತ್ತಿರಲಿಲ್ಲ ಎಂದು ತಿಳಿಸಿದೆ.
ಕೇವಲ ಆಹಾರದ ಪಟ್ಟಿ (ಮೆನು) ಯನ್ನಷ್ಟೆ ಬದಲಾಯಿಸಿರುವುದರಿಂದ ಇಲ್ಲಿ ಮಾಂಸಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚಳಿಗಾಲವಾದ್ದರಿಂದ 60 ರಿಂದ 90 ನಿಮಿಷ ಅವಧಿಯ ಪ್ರಯಾಣದಲ್ಲಿ ಲಘು ಉಪಾಹಾರದ ಬದಲಿಗೆ ಬಿಸಿ ಊಟವನ್ನು ನೀಡುವಂತೆ ಪ್ರಯಾಣಿಕರು ಮನವಿ ಮಾಡಿದ್ದರು ಎಂದು ಸ್ಪಷ್ಟ ಪಡಿಸಿದೆ.
ಅಖಂಡ ಭಾರತ: ರಾಮ್ ಮಾಧವ್ ವಿಶ್ವಾಸ
ಆರ್ ಎಸ್ ಎಸ್ ನ ಕಲ್ಪನೆಯಂತೆ ಮುಂದೊಂದು ದಿನ ಭಾರತ, ಪಾಕಿಸ್ಥಾನ, ಮತ್ತು ಬಾಂಗ್ಲಾದೇಶ ಸಹಮತದಿಂದ ಒಟ್ಟುಗೂಡಿ ಅಖಂಡ ಭಾರತವಾಗಲಿದೆ ಎಂಬ ನಂಬಿಕೆಯನ್ನು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರವರು ವ್ಯಕ್ತಪಡಿಸಿದ್ದಾರೆ.
60 ವರ್ಷಗಳ ಹಿಂದೆ ಐತಿಹಾಸಿಕ ಕಾರಣಗಳಿಗಾಗಿ ಅಖಂಡ ಭಾರತ ತುಂಡಾಗಿತ್ತು. ಹಾಗೆಂದು ಭವಿಷ್ಯದಲ್ಲಿ ಯುದ್ಧದ ಮೂಲಕ ಈ ಎಲ್ಲ ಭೂಭಾಗಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂಬ ಅರ್ಥವಲ್ಲ. ಎಲ್ಲಾ ದೇಶಗಳು ಒಮ್ಮತದಿಂದ ಒಂದಾಗಲಿವೆ ಎಂದಿದ್ದಾರೆ.