ನಿಮ್ಮ ಮಗುವಿಗೆ ಬೇಕಾದ್ದೆಲ್ಲ ಕೊಟ್ಟಿದೀರಾ? 6 ನಿಮಿಷದ ಕಿರುಚಿತ್ರ ನೋಡಿದ್ರೆ ನೀವು ಆ ಬಗ್ಗೆ ಮತ್ತೆ ಯೋಚಿಸ್ತೀರಿ!

ಡಿಜಿಟಲ್ ಕನ್ನಡ ಟೀಮ್

ಮಗುವಿಗೆ ಬೇಕಾದ್ದೆಲ್ಲ ತೆಗ್ಸಿ ಕೊಟ್ಟಿದ್ದೀನಿ ಎನ್ನೋರಿಗೆ ನಿಜಕ್ಕೂ ಕೊಡಬೇಕಿರೋದು ಸಮಯವನ್ನು ಅಂತ ಅರ್ಥ ಮಾಡಿಸುತ್ತೆ 6 ನಿಮಿಷದ ಈ ಕಿರುಚಿತ್ರ. ಅಪ್ಪ- ಅಮ್ಮ ಇಬ್ಬರೂ ಹೊರಗಡೆ ಉತ್ತಮ ಉದ್ಯೋಗದಲ್ಲಿದ್ದಾರೆ. ಹಾಗಂತ ಮಗಳು ‘ಕಿಕ್ಕಿ’ಯನ್ನೇನೂ ಕಡೆಗಣಿಸಿಲ್ಲ. ಅವಳಿಗೆ ಆಡೋದಕ್ಕೆ ಸಾಕಷ್ಟು ಆಟಿಕೆಗಳನ್ನು ಕೊಡಿಸಿದ್ದಾರೆ. ಐಷಾರಾಮಿ ಅಪಾರ್ಟ್ ಮೆಂಟ್ ಇದೆ. ಆ ಮನೆಗೆ ಎಲ್ಲ ಸವಲತ್ತುಗಳೂ ಇವೆ. ಆದರೆ ಅಪ್ಪ- ಅಮ್ಮ ಬರೋದು ರಾತ್ರಿಯಾಗುತ್ತೆ. ಅಲ್ಲೀವರೆಗೆ ಕಿಕ್ಕಿ, ಗೊಂಬೆಗಳ ನಡುವೆ ಮನೇಲಿ ಒಬ್ಳೇ ಇರ್ತಾಳೆ. ಓಹ್… ಇಲ್ಲ, ಓದ್ಲಿಕ್ಕೆ ಅಂತ ಇವ್ರ ಮನೇಲಿ ಉಳಿದುಕೊಂಡಿರೋ ಅಂಕಲ್ ಒಬ್ರು ಇದ್ದಾರೆ. ಆದ್ರೆ… ಈ ಅಂಕಲ್ ಕಿಕ್ಕಿಯನ್ನೇ ಬೊಂಬೆ ಮಾಡ್ಕೊಂಡಿದಾರೆ. ಕಣ್ಣಿಗೆ ಬಟ್ಟೆ ಕಟ್ತಾನೆ, ಬೆರಳಲ್ಲಿ ತುಟಿ ಮುಚ್ತಾನೆ… ಹೀಗೆ ಆತ ಮಾಡೋ ಎಷ್ಟೋ ಸಂಗತಿಗಳು ಆಕೆಗೆ ಸರಿ ಬರ್ತಿಲ್ಲ. ಆದ್ರೆ ಅಪ್ಪ- ಅಮ್ಮನಿಗೆ ಹೇಳೋದು ಯಾವಾಗ? ಅಮ್ಮ ಅಂತೂ ಆಫೀಸಲ್ಲಿ ಕೆಲ್ಸ ಮಾಡಿ ಬಂದು ಒತ್ತಡದಲ್ಲಿರ್ತಾಳೆ. ಸಖತ್ ಸಿಟ್ ಮಾಡ್ತಾಳೆ…. ಅಂಕಲ್ ಧ್ವನಿ ಕೇಳಿದ್ರೆ ಕಿಕ್ಕಿಗೆ ಜೀವವೇ ಬಾಯಲ್ಲಿ ಬರುತ್ತೆ… ಇದಕ್ಕೆಲ್ಲಿ ಕೊನೆ?

24 ವರ್ಷದ ವಿಶಾಖ್ ನಿರ್ದೇಶಿಸಿರುವ ಈ ಚಿತ್ರಕ್ಕೆ ರಮೇಶ ನಡುವಿಲೇದಮ್ ಕತೆ-ಚಿತ್ರಕತೆ ಬರೆದಿದ್ದಾರೆ. ಕಿರುಚಿತ್ರ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯದ ಸನ್ನಿವೇಶವನ್ನು ಅನನ್ಯವಾಗಿ ಮನಮುಟ್ಟಿಸುತ್ತದೆ. ಈ ಕತೆ ಹೇಳುವುದಕ್ಕಾಗಿ ಅವರು ಆರಿಸಿಕೊಂಡಿರುವ ಬೊಂಬೆಗಳ ಮಾರ್ಗ ವಿನೂತನವಾಗಿದೆ.

ನಮ್ಮ ಮಗು ಹೊರಗಡೆ ಅಸರುಕ್ಷಿತವಾಗಿರುತ್ತೆ ಅಂತ ಹೆಚ್ಚಿನವರು ಅಂದುಕೊಂಡಿದ್ದೇವೆ. ಶಾಲೆ- ಕಾಲೇಜುಗಳು ಮಾತ್ರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯಬಹುದಾದ ಸ್ಥಳಗಳು ಅಂತಲೂ ಅಂದುಕೊಂಡಿದ್ದೇವೆ. ಕೆಳವರ್ಗದ ಹಂತದವರು ಮಾತ್ರ ಇಂಥ ದೌರ್ಜನ್ಯಗಳಲ್ಲಿ ತೊಡಗಿಕೊಳ್ತಾರೆ ಅನ್ನೋದು ಇನ್ನೊಂದು ತಪ್ಪು ನಂಬಿಕೆ.

ಕೊನೆಗೂ ನೀವು ಮಾಡಬೇಕಿರುವುದು ಮಕ್ಕಳೊಂದಿಗೆ ಆತ್ಮೀಯ ಸಂವಾದವೊಂದನ್ನು ಕಾಯ್ದುಕೊಂಡಿರುವುದು ಅನ್ನೋದನ್ನು ಈ ಚಿತ್ರ ಆಪ್ತವಾಗಿ ಹೇಳುತ್ತೆ. ಮಲಯಾಳಂ ಮೂಲದ ಚಿತ್ರಕ್ಕೆ ಇಂಗ್ಲಿಷ್ ಉಪ ಶೀರ್ಷಿಕೆಗಳಿವೆ. ಆರು ನಿಮಿಷ ವ್ಯರ್ಥ ಅನ್ನಿಸೋಲ್ಲ. ನೋಡಿ.

ಈ ಸಂಡೆ ಏನ್ಮಾಡಿದ್ರಿ? ಕಮ್ಯುನಿಕೇಟ್, ಕಮ್ಯುನಿಕೇಟ್ ..ಕಮ್ಯುನಿಕೇಟ್ ವಿತ್ ಯುವರ್ ಚೈಲ್ಡ್.

Leave a Reply