ಸಾಮ, ದಾನ, ಬೇಧ, ದಂಡ ಎಂಬ ಸೂತ್ರ, ಇದುವೇ ಪಾಕಿಸ್ತಾನದೊಂದಿಗೆ ಮೋದಿ ಕಾರ್ಯತಂತ್ರ!

praveen kumar shetty (2)

ಪ್ರವೀಣ್ ಕುಮಾರ್ ಶೆಟ್ಟಿ, ಒಮಾನ್

ನಮ್ಮೂರಿನಲ್ಲಿ ಬರಿ ಚೂರಿಚಿಕ್ಕಣ್ಣಗಳಿರುವ ಜಾಗದಲ್ಲೇ ಚಿಲ್ಲರೆ ರಾಜಕಾರಣಿಗಳ ಭೇಟಿಯ ಸಂದರ್ಭದಲ್ಲಿ ಎರಡು ದಿನ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕಾಗಿರುವಾಗ, ನಮ್ಮೊಂದಿಗೆ ಬಹಳಷ್ಟು ಬಾರಿ ಯುದ್ದಕ್ಕಿಳಿದಿದ್ದ ಪಾಕಿಸ್ತಾನಕ್ಕೆ ಯಾವುದೇ ಪೂರ್ವ ತಯಾರಿಯಿಲ್ಲದೆ  ಯಾವುದೇ ಅಂಜಿಕೆಯಿಲ್ಲದೆ ನರೇಂದ್ರ ಮೋದಿಯು ಭೇಟಿ ಕೊಟ್ಟಿದ್ದು ಮಾತ್ರ ಸಾಮಾನ್ಯ ಸಂಗತಿಯಲ್ಲ. ಈಜಿಪ್ಟಿನಲ್ಲಿ ಇತ್ತೀಚಿಗೆ ಪ್ರಯಾಣಿಕ ವಿಮಾನವನ್ನೇ ಭಯೋತ್ಪಾದಕರು ಹೊಡೆದುರುಳಿಸಿದ ಉದಾಹರಣೆಯಿರುವಾಗ, ಆಕಾಶದಲ್ಲಿ ಕೆಳಮಟ್ಟದಲ್ಲೇ ಹಾರಾಡುವ ಹೆಲಿಕಾಪ್ಟರಿನಲ್ಲಿ 20 ಕಿ. ಮೀ ದೂರವನ್ನು ಭಯೋತ್ಪಾದಕರ ಉಪಟಳವಿರುವ ಪಾಕಿಸ್ತಾನದಲ್ಲಿ ಪ್ರಯಾಣಿಸಲು ಎಂಟೆದೆಯೇ ಬೇಕು. ವಿಮಾನಗಳನ್ನು ಹೊಡೆದುರುಳಿಸಲ್ಲುವಂತಹ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹೊಂದಿರುವ ಭಯೋತ್ಪಾದಕ ಸಂಘಟನೆಗಳು ಹಿಂದೆಂದಿಗಿಂತಲೂ ಅತ್ಯಾಧುನಿಕಗೊಂಡಿರುವ ಸಂದರ್ಭದಲ್ಲಿ ಶತ್ರು ನೆಲೆಯೊಳಕ್ಕೆ ನುಗ್ಗಿ ಬರುವುದು ಊಹಿಸಲೂ ಅಸಾಧ್ಯವಾದದ್ದು.

ಪಾಕಿಸ್ತಾನವೆಂಬ ಮಗ್ಗಲು ಮುಳ್ಳನ್ನು ಇಲ್ಲಿಯವರೆಗೂ ಭಾರತವು ಬಹಳ ಕೆಟ್ಟದಾಗಿ ನಿರ್ವಹಿಸಿದೆ. ಶತ್ರುಪಾಳಯದ ಲಕ್ಷಕ್ಕೂ ಅಧಿಕ ಸೈನಿಕರನ್ನು ಸೆರೆಹಿಡಿದು ಮೇಲುಗೈ ಸಾಧಿಸಿದ್ದ ಭಾರತವು ಗಟ್ಟಿಯಾದ ಒಪ್ಪಂದೊಂದಿಗೆ ಕಾಶ್ಮೀರವನ್ನು ಬಗೆಹರಿಸುವುದನ್ನು ಬಿಟ್ಟು, ಯುದ್ಧ ಗೆದ್ದ ಬೀಗಿನೊಂದಿಗೆ ಸೆರೆಸಿಕ್ಕವರಿಗೆ ಬಿರಿಯಾನಿ ಕೊಟ್ಟು ಬಿಳಿ ಕಾಗದಕ್ಕೊಂದು ಸಹಿ ಹಾಕಿಸಿಕೊಂಡು ರಾಜತಾಂತ್ರಿಕವಾಗಿ ಸೋತುಬಿಟ್ಟಿತು. ಸೈನಿಕರು ಗೆದ್ದ ಯುದ್ಧವನ್ನು ರಾಜಕಾರಣಿಗಳು ಹೇಡಿಗಳಂತೆ ಸೋತದ್ದರಿಂದಲೇ ಇಂದಿಗೂ ನಿಯಂತ್ರಣ ರೇಖೆಯೆಂಬ ಆಟ್ಟಣಿಕೆಯಲ್ಲಿ ಕುಳಿತು ಪಾಕಿಸ್ತಾನ ಭಾರತದ ಜೀವ ಹಿಂಡುತ್ತಿದೆ. ಕಳೆದ ಅರುವತ್ತು ವರ್ಷಗಳಲ್ಲಿ ನೆಡೆದ ತಪ್ಪನ್ನು ಈಗ ಸರಿಪಡಿಸಬೇಕಾಗಿದೆ. ಈ ಮುಂಚೆಯೆಲ್ಲಾ ನಿಯಂತ್ರಣ ರೇಖೆಯ ಉಲ್ಲಂಘನೆಯಾದಾಗ ಗುಂಡು ಹಾರಿಸಲು ದೆಹಲಿ ಆಡಳಿತಗಾರರ ಸೂಚನೆಗೆ ಕಾಯುತ್ತಿದ್ದ ಭಾರತೀಯ ಸೈನಿಕರಿಂದು ಗಡಿಯಾಚಿನಿಂದ ತೂರಿಬಂದ ಪ್ರತಿಯೊಂದು ಗುಂಡಿಗೂ ಹತ್ತು ಗುಂಡನ್ನು ಹಾರಿಸುವ ಅಧಿಕಾರ ಪಡೆದು ಕೊಂಡಿದ್ದಾರೆ.

ಪಾಕಿಸ್ತಾನದ ಸರಕಾರವು ಜನರಿಂದಲೇ ಚುನಾಯಿತರಾಗಿದ್ದರೂ, ಸೇನೆ ಮತ್ತು ಮತಾಂಧ ಸಂಘಟನೆಗಳ ಕಪಿಮುಷ್ಠಿಯಲ್ಲಿದೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧವಾಗಿ ಹೋದ ಯಾವ ಪಾಕಿಸ್ತಾನದ ಜನನಾಯಕನೂ ಇಂದಿಗೆ ಬದುಕುಳಿದಿಲ್ಲ. ತನ್ನ ಪಶ್ಚಿಮ ಭಾಗದಲ್ಲಿ ಹೇರಳವಾಗಿ ತೈಲ ನಿಕ್ಷೇಪವಿರುವ ಪಾಕಿಸ್ತಾನದಲ್ಲಿ ನಿರಂತರ ಶಾಂತಿ ನೆಲೆಗೊಳ್ಳುವುದು ಯಾರಿಗೂ ಬೇಕಾಗಿಲ್ಲ. ಅದೇ ಕಾರಣಕ್ಕಾಗಿ ಭಯೋತ್ಪಾದಕರ ಸೋಗಿನಲ್ಲಿ ಚುನಾಯಿತ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯವನ್ನು ಇನ್ಯಾರೋ ತೆರೆಮರೆಯಲ್ಲಿ ನಿಂತು ಕುತಂತ್ರ ಮಾಡುತ್ತಿದ್ದಾರೆ. ಈ ಭಯಂಕರವಾದ ವಿಷಜಾಲದಿಂದ ನವಾಜ್ ಷರೀಫರನ್ನು ಹೊರತಂದರೆ ಮಾತ್ರವೇ ಭಾರತಕ್ಕೆ ಲಾಭವಾಗುತ್ತದೆ. ಚುನಾಯಿತ ಸರಕಾರದ ಮುಖ್ಯಸ್ಥ ನವಾಜ್ ಷರೀಫರನ್ನು ಸಹಮತಕ್ಕೆ ತೆಗೆದುಕೊಂಡೇ ಪಾಕಿಸ್ತಾನದಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಭಯೋತ್ಪಾದಕರನ್ನು ಮಟ್ಟಹಾಕಬೇಕಾಗಿದೆ. ಇದೇ ಕಾರಣಕ್ಕೆ ನರೇಂದ್ರ ಮೋದಿಯವರು ಬಹಳ ನಾಜೂಕಾಗಿ ತನ್ನ ರಾಜತಾಂತ್ರಿಕ ನಡೆಯನ್ನಿಡುತ್ತಿದ್ದಾರೆ.

ಕ್ಷತ್ರಿಯ ರಾಜರುಗಳು ಅನುಸರಿಸುತ್ತಿದ್ದ ಮನವೊಲಿಕೆಯ ತಂತ್ರಗಳಾದ ಸಾಮ ದಾನ ಬೇಧ ಮತ್ತು ದಂಡಗಳನ್ನೇ ನರೇಂದ್ರ ಮೋದಿಯು ಪಾಕಿಸ್ತಾನದೊಂದಿಗೆ ಪರಿಪಾಲಿಸುತ್ತಿದ್ದಾರೆ. ತನ್ನ ಪ್ರಧಾನಿ ಪದಗ್ರಹಣಕ್ಕೆ ಪಾಕಿಸ್ತಾನದ ಪ್ರಧಾನಿಯನ್ನು ಅಹ್ವಾನಿಸಿ ಸಾಮ (ಗೌರವ ಕೊಡುವ) ತಂತ್ರವನ್ನು ಮೆರೆದ ಮೋದಿ, ಸಾರ್ಕ್ ಉಪಗೃಹವನ್ನು ಭಾರತವೇ ಅಭಿವೃದ್ಧಿ ಪಡಿಸಿ ಪಾಕಿಸ್ತಾನ ಸಮೇತ ಮತ್ತುಳಿದ ಸಾರ್ಕ್ ರಾಷ್ಟ್ರಗಳಿಗೆ ಉಚಿತವಾಗಿ ಕೊಡುವ ತೀರ್ಮಾನವನ್ನು ಪ್ರಕಟಿಸಿ, ಮತ್ತು ಕಳೆದ ಬಾರಿಯ ಪಾಕಿಸ್ಥಾನದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿ “ದಾನ”ವೆಂಬ ತಂತ್ರವನ್ನೂ ಅನುಸರಿಸಿಬಿಟ್ಟರು. ನವೆಂಬರ್ 2014 ರಲ್ಲಿ ನೇಪಾಳದ ಸಾರ್ಕ್ ದೇಶಗಳ (SAARC) ಶೃಂಗ ಸಭೆಯಲ್ಲಿ ಒಪ್ಪಂದಗಳಾದ ಗಡಿಯಾಚೆಗಿನ ವ್ಯಾಪಾರ, ವಿದ್ಯುತ್ ಹಂಚಿಕೆ ಮತ್ತು ಬಹುರಾಷ್ಟ್ರದೊಂದಿಗಿನ ಏಕೀಕೃತ ಹೆದ್ದಾರಿಗಳಿಗೆ ಪಾಕಿಸ್ತಾನವು ಒಪ್ಪದೇ ಇದ್ದಾಗ, ಉಳಿದ ರಾಷ್ಟ್ರಗಳನ್ನು ಒಪ್ಪಿಸಿ , ಪಾಕಿಸ್ತಾನವನ್ನು ಮಾತ್ರ ಈ ಒಪ್ಪಂದಗಳಿಂದ ಹೊರಗಿಟ್ಟು “ಬೇಧ” ವೆಂಬ ಅಸ್ತ್ರವನ್ನು ಪಾಕಿಸ್ತಾನದ ವಿರುದ್ಧ ಪ್ರಯೋಗಿಸಿದ ಮೋದಿ, ಪಾಕಿಸ್ತಾನದ ಸರಕಾರವು ತನ್ನ ಜನತೆಯ ವಿರೋಧವನ್ನು ಕಟ್ಟಿಕೊಳ್ಳುವಂತೆ ನೋಡಿಕೊಂಡಿತು.

ಪಾಕಿಸ್ತಾನದೊಂದಿಗೆ ಯುದ್ಧವನ್ನೇ ಮಾಡಬೇಕೆಂಬ ರಕ್ತಪಿಪಾಸುಗಳೇ ನಮ್ಮಲ್ಲಿ ಅಧಿಕವಾಗಿದ್ದಾರೆ. ಅಂತಹ ಯುದ್ಧವೇನಾದರೂ ನಡೆದರೆ ಅಲ್ಲಿ ಸತ್ತು ಬೀಳುವವರು ನಮ್ಮ ನಿಮ್ಮಂತೆ ಸಾಮಾನ್ಯ ಜನರೇ ಹೊರತು ಮಾನವ ಜನಾಂಗದ ಮೇಲೆ ಹಲ್ಲೆ ನೆಡೆಸುತ್ತಿರುವ ನರಪೀಡಕರಲ್ಲ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಪಾಕಿಸ್ತಾನಿಗಳು ನಮ್ಮಲ್ಲಿರುವ ಕೆಲವು ಉಪದ್ರಕಾರಿಗಳಂತೆಯೇ ಸಮಾಜ ಘಾತುಕರು. ಇಂತಹ ಸನ್ನೀವೇಶದಲ್ಲಿ ಯಾವುದೋ ಆವೇಶದಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದರೆ ಎರಡೂ ಕಡೆಗಳಲ್ಲೂ ಸಾವು ನೋವು ಸಂಭವಿಸಬಹುದು.

ಹಾಗಾಗಿ ರಾಜತಾಂತ್ರಿಕನಾಗಿ ಇನ್ನುಳಿದ ತಂತ್ರವಾದ ದಂಡ ಪ್ರಯೋಗವನ್ನು ಮಾತ್ರ ಬಹಳ ದುಸ್ತರವಾದ ಕಾಲಘಟ್ಟದಲ್ಲಿ ಮಾತ್ರ ಮಾಡಬೇಕಾಗುತ್ತದೆ ಎಂಬುದು ಮೋದಿಗೆ ಚೆನ್ನಾಗಿ ಅರಿವಿದೆ. ಉಳಿದೆಲ್ಲಾ ತಂತ್ರಗಳು ಪ್ರಯೋಜನಕ್ಕೆ ಬಾರದಿರುವಾಗ ದಂಡ ಹಿಡಿಯಬೇಕಾಗಿದೆ. ಕಂಪ್ಯೂಟರಿನಲ್ಲೇ ಯುದ್ಧಗಳು ನೆಡೆಯುತ್ತಿರುವ 21ನೇ ಶತಮಾನದಲ್ಲಿ, ಜಗತ್ತಿನ ಬಹುರಾಷ್ಟ್ರಗಳ ಸಮ್ಮತಿಯಿಲ್ಲದೇ ಇನ್ನೊಂದು ಸಾರ್ವಭೌಮ ರಾಷ್ಟ್ರದೊಂದಿಗೆ ಯುದ್ಧಕ್ಕಿಳಿಯಲು ಸಾಧ್ಯವಿಲ್ಲ. ತೈಲಸಂಪನ್ನ ಇರಾನ್ ದೇಶವೇ ಜಗತ್ತಿನ ಆರ್ಥಿಕ ದಿಗ್ಬಂಧನವನ್ನು ಎದುರಿಸಬೇಕಾಯಿತು. ಅಂತಹುದರಲ್ಲಿ ತೈಲಕ್ಕಾಗಿ ಪರಾವಲಂಬಿಯಾದ ಭಾರತ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ. ಪಾಕಿಸ್ತಾನದ ಮೇಲೆ ದಂಡ ಪ್ರಯೋಗಿಸುವ ಮೊದಲು ಸಾಮ ದಾನ ಮತ್ತು ಬೇಧ ಪ್ರಯೋಗದ ಪ್ರಯತ್ನವನ್ನು ಜಗತ್ತಿಗೆ ಭಾರತವು ಮನವರಿಕೆ ಮಾಡಿಕೊಡುತ್ತಿರುವುದು ಬಹಳ ಸಮಯೋಚಿತವಾದದ್ದು. ಪಾಕಿಸ್ತಾನದೊಂದಿಗಿನ ಭಾರತದ ಸೌಮ್ಯ ಸ್ವರೂಪದ ರಾಜಕೀಯ ನಿರ್ಧಾರಗಳು ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳಬೇಕಾಗಿರುವ ಕಠಿಣ ನಿರ್ಧಾರದ ಗಟ್ಟಿ ಪಂಚಾಂಗಕ್ಕೆ ಹಾಕುತ್ತಿರುವ ಒಂದೊಂದೆ ಕಲ್ಲುಗಳು ಎಂಬುದನ್ನು ನಾವು ಮರೆಯಬಾರದು.

5 COMMENTS

  1. ಒಳ್ಳೆ ಲೇಖನ. ಒಬ್ಬ common man ‘ಮೋದಿ protocol ಬದಿಗೊತ್ತಿ ಪಾಕ್ ಗೆ ಭೇಟಿ ನೀಡಿದರೆ ಏನು ವ್ಯತ್ಯಾಸವಾಗುತ್ತೆ. ಇದಕ್ಕೆ ಇಷ್ಟೊಂದು hype ಮಾಡಬೇಕ’ ಅಂತ ಯೋಚಿಸುವುದು ಸಹಜ. ನಿಜಕ್ಕಾದರು ನಾನು ಹಾಗೆ ಅಂದುಕೊಂಡಿದ್ದೆ. ಆದರೆ ಲೇಖಕರು ಸಾಮ, ದಾನ ಬೇಧ ದಂಡ ತಂತ್ರವನ್ನು ಬಹಳ ಚೆನ್ನಾಗಿ ಕೆಲವೇ ಪದಗಳಲ್ಲಿ ಸೂಕ್ತ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. Good analysis !

  2. ನನ್ನ ಪ್ರಕಾರ ನರೇಂದ್ರ ಮೋದಿ ಅವರಿಗೆ ದಾದ್ರಿ ಪ್ರಕರಣದಲ್ಲಿ ಹೋದ ಮಾನ ವಾಪಸ್ ಪಡೆದು ಉತ್ತರ ಪ್ರದೇಶ ಚುನಾವಣೆ ಎದುರಿಸಬೇಕು ಹಾಗೂ ನವಾಜ್ ಷರೀಫ್‌ಗೆ ಪಾಕಿಸ್ಥಾನದಲ್ಲಿ ಹಿಂದೂಗಳ ಮತ ಗಳಿಸಬೇಕು… ಅದಕ್ಕೇ ಹಲವು ಪ್ರಯೋಜನವಿಲ್ಲದ ಮೀಟಿಂಗ್ ನಡೆಸಿ, ಆತ್ಮೀಯ ಸಂವಾದ ನಡೆಸಿದ್ದಾರೆ. ಆದರೆ, ಗಡಿಯಲ್ಲಿ ಯುದ್ಧ ವಿರಾಮ ಉಲ್ಲಂಘನೆ ನಿಂತಿಲ್ಲ ಎಂಬುದನ್ನು ನೆನಪಿಡಬೇಕು…

  3. ನರೇಂದ್ರ ಮೋದಿ ಅವರು ಸಾಮ, ದಾನ, ಭೇದ ತಂತ್ರವನ್ನು ಸ್ವತಃ ಪ್ರಯೋಗಿಸಿಯೇ ಏಕೆ ಅರಿಯಬೇಕು. ಭಾರತದ ಇತಿಹಾಸದಲ್ಲಿ ಹಿಂದಿನ ಪ್ರಧಾನಿಗಳು (ವಾಜಪೇಯಿ ಸೇರಿದಂತೆ) ಈ ತಂತ್ರ ಅನುಸರಿಸಿ ವೈಫಲ್ಯ ಅನುಭವಿಸಿರುವುದು ಗೊತ್ತಿಲ್ಲವೇ… ಜೀವನ ತುಂಬ ಚಿಕ್ಕದು. ಎಲ್ಲವನ್ನೂ ಸ್ವಂತ ಅನುಭವದಿಂದ ಅರಿಯಲು ಆಯಸ್ಸು ಸಾಲದು. ಪರರ ಜೊತೆ ನಡೆದ ಘಟನೆ ನೋಡಿಯೇ ಅರಿಯುವುದನ್ನು ಕಲಿಯಬೇಕು ಎಂಬ ಚಾಣಕ್ಯ ನೀತಿಯನ್ನು ನರೇಂದ್ರ ಮೋದಿ ಅವರು ಇನ್ನೂ ಅರಿಯದಿರುವುದು ದುರದೃಷ್ಟಕರ.

Leave a Reply