ಅಲ್ ಜಜೀರಾಗೆ ಜಾಡಿಸಿದ್ದು ಸರಿಯಾಗೇ ಇದೆ, ಆದ್ರೆ ಅಖಂಡ ಭಾರತದಲ್ಲಿ ಅತಿ ಕಡಿಮೆ ಸೀಟು ಬಿಜೆಪಿಗೆ ಅಂತ ಮಾಧವರಿಗೆ ಗೊತ್ತಿಲ್ವಾ?

ಪ್ರವೀಣ್ ಕುಮಾರ್

ಈ ಮೊದಲು ಆರೆಸ್ಸೆಸ್ ವಕ್ತಾರರಾಗಿದ್ದ, ಈಗ ಬಿಜೆಪಿಯಲ್ಲಿರುವ ರಾಮ್ ಮಾಧವ್ ಅವರು ಡಿಸೆಂಬರ್ 7 ರಂದು ಅಲ್ ಜಜೀರಾ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನ ಹಿಂದಿನ ವಾರಾಂತ್ಯದಲ್ಲಷ್ಟೇ ಪ್ರಸಾರವಾಯಿತು. ಆ ಸಂದರ್ಶನದ ಎರಡು ಅಂಶಗಳನ್ನು ‘ವಿವಾದಾತ್ಮಕ’ ಎಂದು ವ್ಯಾಖ್ಯಾನಿಸಿ, ನಮ್ಮ ದೇಶದ ಹೆಚ್ಚಿನ ಮಾಧ್ಯಮಗಳೆಲ್ಲ ಭಾನುವಾರ ಆ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸಿದವು.

‘ಅಯ್ಯಯ್ಯೋ, ರಾಮ್ ಮಾಧವ್ ನನ್ನನ್ನು ಐಸಿಸ್ ಉಗ್ರಗಾಮಿ ಸಂಘಟನೆಯವ ಅಂತ ಹೇಳಿಬಿಟ್ಟರು’ ಅಂತ ಮಾಧವ್ ಅವರನ್ನು ಸಂದರ್ಶಿಸಿದ ಪತ್ರಕರ್ತ ಮೆಹದಿ ಹಸನ್ ‘ಸಂತ್ರಸ್ತ ಸಿಂಡ್ರೋಮ್’ ಪ್ರದರ್ಶಿಸುತ್ತಿದ್ದಾರೆ. ನಿಜ, ಮಾತಿನ ಭರದಲ್ಲಿ ರಾಮ್ ಮಾಧವ್ ಅವರು ‘ನಿಮ್ಮ ಐಸಿಸ್ ಕಾಳಜಿ ನೀವು ನೋಡ್ಕೋಳಿ ಮೊದ್ಲು’ ಅಂದ್ರು. ಇದನ್ನಿಟ್ಟುಕೊಂಡು, ‘ನೋಡಿ, ಮುಸ್ಲಿಂ ಪತ್ರಕರ್ತನನ್ನು ರಾಮ್ ಮಾಧವ್ ಹೆಂಗೆ ನಡೆಸಿಕೊಂಡ್ರು… ಮಾಧ್ಯಮವನ್ನೇ ಐಸಿಸ್ ಅಂತ ದೂಷಿಸಿದ್ರು’ ಅಂತೆಲ್ಲ ವ್ಯಾಖ್ಯಾನಿಸುವ ಕೆಲಸ ಭರಪೂರವಾಗಿದೆ. ಇದಕ್ಕೆ ಪೂರಕವಾಗಿ ಮೆಹದಿ ಹಸನ್ ಸಹ ಟ್ವೀಟ್ ಗಳಲ್ಲಿ ‘ಅಯ್ಯೋ ನಾನು ಬಲಿಪಶು’ ಸಿಂಡ್ರೋಮ್ ಅನ್ನು ಚೆನ್ನಾಗಿಯೇ ದುಡಿಸಿಕೊಳ್ಳುತ್ತಿದ್ದಾರೆ.

ಸಂದರ್ಶನವನ್ನು ಸಮಚಿತ್ತದಿಂದ ವೀಕ್ಷಿಸಿದ ಯಾರಿಗಾದರೂ ರಾಮ್ ಮಾಧವ್ ಯಾವ ಚೌಕಟ್ಟಿನಲ್ಲಿ ಆ ಮಾತುಗಳನ್ನಾಡಿದ್ದರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕಾಶ್ಮೀರ ಸಮಸ್ಯೆ- ಪಾಕಿಸ್ತಾನಗಳನ್ನು ನಮ್ಮಿಂದಾಗಿ (ಭಾರತೀಯರು) ಜಗತ್ತಿಗೆ ತಲೆದೋರಿರುವ ಬೇನೆ ಎಂದೇ ತಮ್ಮ ಪ್ರಶ್ನೆಗಳಲ್ಲಿ ಹಸನ್ ಚುಚ್ಚಿದ್ದರು. ‘ಭಾರತ- ಪಾಕಿಸ್ತಾನಗಳ ನಡುವೆ ಸಾವಿರ ಭಿನ್ನಾಭಿಪ್ರಾಯಗಳಿರಬಹುದು… ಅದನ್ನು ನಾವು ಬಗೆಹರಿಸಿಕೊಳ್ತೇವೆ. ನಮ್ಮ ನಡುವೆ ಅಣುಯುದ್ಧ ಆಗಿಬಿಡುತ್ತೆ ಅಂತ ನೀವು ಹೆದರೋ ಅಗತ್ಯ ಇಲ್ಲ. ನೀವು ಚಿಂತಿಸಬೇಕಿರೋದು ನಿಮ್ಮ ಐಸಿಸ್ ಬಗ್ಗೆ, ಈಜಿಪ್ತ್ ಇತ್ಯಾದಿಗಳನ್ನು ಆವರಿಸಿಕೊಳ್ಳಲು ಹೊರಟಿರುವ ಮತಾಂಧರ ಬಗ್ಗೆ’ ಅಂತ ರಾಮ್ ಮಾಧವ್ ಏರುಧ್ವನಿಯಲ್ಲೇ ಉತ್ತರಿಸಿದರು. ‘ಏನ್ರೀ, ನನ್ನ ಐಸಿಸ್’ ಅಂತೀರಾ ಅಂತ ಮೆಹದಿ ಹಸನ್ ಅಲ್ಲೇ ಕ್ಯಾತೆ ತೆಗೆದರು.

ಇಷ್ಟೆಲ್ಲ ನೈತಿಕ ಮೇಲ್ಮಟ್ಟ ತೋರ್ಪಡಿಸಿಕೊಳ್ಳುತ್ತಿರುವ ಅಲ್ ಜಜೀರಾ ವಾಹಿನಿ ಹಾಗೂ ಪತ್ರಕರ್ತ ಮೆಹದಿ ಹಸನ್ ಈ ಚರ್ಚೆಯನ್ನು ಯಾವ ಶೀರ್ಷಿಕೆ ಅಡಿ ನಡೆಸಿದರು ಗೊತ್ತಾ? ‘ಮೋದಿಯ ಭಾರತವು ಫ್ಯಾಸಿಸಂ ಜತೆ ಸಲ್ಲಾಪ ಮಾಡುತ್ತಿದೆಯೇ?’ ಅನ್ನೋದು ಚರ್ಚಾ ವಿಷಯ. ಒಬ್ಬ ಜನತಾಂತ್ರಿಕ ನಾಯಕನನ್ನು ಫ್ಯಾಸಿಸ್ಟ್ ಎಂದು ಸಮೀಕರಿಸಿ ಶಂಕೆ ವ್ಯಕ್ತಪಡಿಸುವುದಕ್ಕೆ ಅಲ್ ಜಜೀರಾ ವಾಹಿನಿಗೆ ಒಂಚೂರು ಮುಜುಗರ ಇಲ್ಲ ಅಂತಾದರೆ, ‘ನಿಮ್ಮ ಐಸಿಸ್’ ಎಂಬ ಶಬ್ದ ಮಾತ್ರ ಅವಹೇಳನವಾಗಿಬಿಡುತ್ತದೆಯೇ? ಅಲ್ ಜಜೀರಾದ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಸಿಕ್ಕಿದೆ ಅಷ್ಟೆ. ಭಾರತವು ಫ್ಯಾಸಿಸ್ಟ್ ಆಗಹೊರಟಿದೆ ಅಂತ ಅನುಮಾನ ವ್ಯಕ್ತಪಡಿಸಿ ಪ್ರಚೋದನೆ ನೀಡುವವರಿಗೆ, ನಿಮ್ಮ ನೆಲದ ಐಸಿಸ್ ಗೆ ನೀವು ಜವಾಬ್ದಾರರಾಗಿ ಎಂಬರ್ಥದ ಮಾತುಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಅಂತಾದರೆ ಇದ್ಯಾವ ಬಗೆಯ ಬೂಟಾಟಿಕೆ ಸ್ವಾಮಿ?

——

ಆದರೆ ರಾಮ್ ಮಾಧವ್ ಅವರ ಅಖಂಡ ಭಾರತ ಉವಾಚವನ್ನು ಮಾತ್ರ ಸದ್ಯದ ಫೇಸ್ ಬುಕ್- ಟ್ವಿಟರ್ ಯುವ ದೇಶಭಕ್ತರೂ ಅಷ್ಟಾಗಿ ಅರಗಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಒಂದೊಮ್ಮೆ ಏಕವಾಗಿದ್ದ ಭಾರತ-ಪಾಕಿಸ್ತಾನ-ಬಾಂಗ್ಲಾದೇಶಗಳು ಭವಿಷ್ಯದಲ್ಲೂ ಸಹಮತದಿಂದ ಒಂದಾಗುತ್ತವೆ ಎಂಬ ಆರೆಸ್ಸೆಸ್ ನಂಬಿಕೆಯನ್ನು ತಾವು ಪ್ರೋತ್ಸಾಹಿಸುವುದಾಗಿ ಹೇಳುತ್ತ, ಪೂರ್ವ ಜರ್ಮನಿ- ಪಶ್ಚಿಮ ಜರ್ಮನಿಗಳು ಒಂದಾಗಿರುವ ಇತಿಹಾಸ ಸಿಗುತ್ತಾದರೆ ನಮ್ಮ ರಾಷ್ಟ್ರಕ್ಕೆ ಅದು ಅನ್ವಯಿಸಬಾರದೇಕೆ ಎಂದೆಲ್ಲ ಭಾವನಾತ್ಮಕ ಮಾತುಗಳನ್ನು ಉದ್ವೇಗದಿಂದಲೇ ಹರಿಬಿಟ್ಟರು.

‘ಅಖಂಡ ಭಾರತ’ ರೋಮ್ಯಾಂಟಿಕ್ ಕಲ್ಪನೆಯ ಮಟ್ಟಕ್ಕೆ ಸರಿ. ಈಗೆರಡು ದಶಕಗಳ ಹಿಂದೆ ಅಖಂಡ ಭಾರತ ಎಂದು ಹೇಳಿದಾಗಲೆಲ್ಲ ಚಪ್ಪಾಳೆಗಳು ಸಿಗುತ್ತಿದ್ದವು. ಏಕೆಂದರೆ ಆಗ ಇವತ್ತಿನಷ್ಟು ಮಾಹಿತಿ ಸ್ಫೋಟ ಆಗಿರಲಿಲ್ಲ. ಈಗ ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ, ಕೇರಳ ಇಂಥ ರಾಜ್ಯಗಳೆಲ್ಲ ಹೊಂದಿರುವ ಭಿನ್ನ ರಾಜಕೀಯ ಆಲೋಚನಾ ಕ್ರಮಗಳು ಯುವಕರಿಗೆ ಅರ್ಥವಾಗುತ್ತಿವೆ, ಹೀಗಾಗಿ, ‘ನಾನು ರೈಟಿಸ್ಟು, ಬಿಜೆಪಿ ಬೆಂಬಲಿಗ’ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿಕೊಳ್ಳುತ್ತಿರುವವರಿಗೂ ಪಾಕಿಸ್ತಾನ- ಬಾಂಗ್ಲಾದೇಶಗಳೆಲ್ಲ ನಮ್ಮ ತೆಕ್ಕೆಗೆ ಬಂದುಬಿಟ್ಟರೆ ಹಿಂದುತ್ವಕ್ಕೆ, ಬಲಪಂಥೀಯ ಸಿದ್ಧಾಂತಕ್ಕೆ ಮೇಲುಗೈ ಆಗಿಬಿಡುತ್ತದೆ ಎಂದು ನಂಬಲು ಕಷ್ಟವಾಗುತ್ತಿದೆ. ‘ಅವರ ಪಾಡಿಗೆ ಅವರಿರಲಿ ಮಾರಾಯ, ನಮ್ಮ ದೇಶದ ಭಾಗವಾಗಿ ತಲೆನೋವು ಹೆಚ್ಚಾಗೋದು ಬೇಡ’ ಎಂಬ ಭಾವನೆಯೇ ಹೆಚ್ಚಿನ ಸಾಮಾನ್ಯರಲ್ಲಿದೆ. ಅಲ್ಲದೇ, ನಮ್ಮ ದೇಶದಲ್ಲೇ ಸುಧಾರಿಸಿಕೊಳ್ಳಬೇಕಿರುವುದು ಸಾಕಷ್ಟಿರುವಾಗ ಭೌಗೋಳಿಕ ವ್ಯಾಪ್ತಿ ಹೆಚ್ಚಿಸಿಕೊಂಡು ಭಾರತ ವಿಶ್ವಗುರು ಆಗುವುದು ಅಷ್ಟರಲ್ಲೇ ಇದೆ ಅಂತ ಬಹುತೇಕರ ಒಳಮನಸ್ಸು ಚೀರುತ್ತಿದೆ.

ಇನ್ನು, ದೇಶದ ವ್ಯಾಪ್ತಿ ಬಿಟ್ಟು ಅಖಂಡ ಭಾರತದಲ್ಲಿ ಬಿಜೆಪಿ ಸ್ಥಾನಮಾನ ಏನಿರಬಹುದು ಅಂತ ಲೆಕ್ಕಾಚಾರ ಹಾಕಿದರೆ ಅಲ್ಲೂ ದಿಗಿಲೇ. ಬಾಂಗ್ಲಾದೇಶದ ಗಡಿಗೆ ಅಂಟಿಕೊಂಡಿರುವ ರಾಜ್ಯಗಳಲ್ಲಿ ಬಿಜೆಪಿಗೆ ಇವತ್ತಿಗೂ ಗಟ್ಟಿಯಾಗಿ ಬೇರು ಮೂಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಬಲ ಹೆಚ್ಚಿರುವುದು ಹೌದಾದರೂ ಸೈದ್ಧಾಂತಿಕ ವಿರೋಧಿಗಳೊಂದಿಗೆ ಮೈತ್ರಿ ಅನಿವಾರ್ಯವೆಂಬ ಸ್ಥಿತಿ ಅಷ್ಟು ಸುಲಭಕ್ಕೆ ಬದಲಾಗುವಂತಿಲ್ಲ. ಹೀಗಿರುವಾಗ ಪಾಕಿಸ್ತಾನ- ಬಾಂಗ್ಲಾದೇಶಗಳು ಭಾರತದಲ್ಲಿ ಒಂದಾದರೆ ತುಷ್ಟೀಕರಣ ರಾಜಕಾರಣಕ್ಕೆ ಬಿಜೆಪಿಯೂ ಕಾಂಗ್ರೆಸ್ ಗೆ ಸರಿಸಮಾನಾಗಿ ಸ್ಪರ್ಧಿಸಬೇಕಾಗುತ್ತದೆಯಲ್ಲವೇ? ಮುಸ್ಲಿಂ ಲೀಗ್ ನಂಥ ಪಕ್ಷಗಳು ಸಹಜವಾಗಿಯೇ ಗಟ್ಟಿಗೊಳ್ಳುತ್ತವೆ. ಬಾಂಗ್ಲಾದೇಶಿ ಅಕ್ರಮ ವಲಸಿಗರು ಅಂತ ಭಾಷಣ ಹೊಡೆಯುವ ಆಯ್ಕೆಯನ್ನೂ ಬಿಜೆಪಿ ಕಳೆದುಕೊಂಡುಬಿಡುತ್ತದೆ. ಬಹುಶಃ ಅಖಂಡ ಭಾರತದಲ್ಲಿ ಅತಿ ಕಡಿಮೆ ಸ್ಥಾನಗಳು ಸಿಗೋದು ಬಿಜೆಪಿಗೇ ಎಂದೆನಿಸುತ್ತದೆ.

ನೆರೆಹೊರೆ ದೇಶಗಳೂ ಸೇರಿದಂತೆ ವಿದೇಶಗಳ ಮೇಲೆ ಸಾಂಸ್ಕೃತಿಕ ಪ್ರಭಾವ ಇಟ್ಟುಕೊಳ್ಳುವುದು, ಆರ್ಥಿಕ ಸಹಕಾರ ಸಾಧಿಸುವುದು ಇವನ್ನೆಲ್ಲ ಯೋಚಿಸುವುದು ಅನಿವಾರ್ಯ. ಆದರೆ ಆರೆಸ್ಸೆಸ್ ನ ಅಖಂಡ ಭಾರತ ಇಂದಿಗೆಷ್ಟು ಪ್ರಸ್ತುತ?

1 COMMENT

Leave a Reply