ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪಕ್ಷದ ಫೌಂಡೇಷನ್ ಅಲ್ಲಾಡಿತೇ?

ಡಿಜಿಟಲ್ ಕನ್ನಡ ಟೀಮ್

(ಅಪ್ಡೇಟ್ ಟಿಪ್ಪಣಿ: ಕಾಂಗ್ರೆಸ್ ದರ್ಶನ ಪತ್ರಿಕೆಯ ಸಂಪಾದಕ ಸುಧೀರ್ ಜೋಶಿಯವರನ್ನು ಪಕ್ಷದ ಪ್ರಮುಖ ವ್ಯಕ್ತಿಗಳ ಮೇಲಿನ ಟೀಕೆಯ ಲೇಖನ ಪ್ರಕಟಿಸಿದ್ದಕ್ಕೆ ವಜಾ ಮಾಡಲಾಗಿದೆ.)

ಕಾಂಗ್ರೆಸ್ 131ನೇ ಸಂಸ್ಥಾಪನಾ ದಿನದಂದೇ ‘ಕಾಂಗ್ರೆಸ್ ದರ್ಶನ’ ಎಂಬ ಪಕ್ಷದ ಮುಖವಾಣಿಯಲ್ಲಿ ನೆಹರು ವಿರುದ್ಧ ಟೀಕೆ ವ್ಯಕ್ತಪಡಿಸಿ ಪ್ರಕಟವಾಗಿರುವ ಲೇಖನ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

‘ಸರ್ದಾರ್ ಪಟೇಲರಿಗೆ ಗೃಹ ಸಚಿವ ಹಾಗೂ ಉಪ ಪ್ರಧಾನಿ ಹುದ್ದೆ ಸಿಕ್ಕಿದ್ದರೂ ಅವರು ಮತ್ತು ನೆಹರು ನಡುವಣ ಸಂಬಂಧ ಅಷ್ಟರಲ್ಲೇ ಇತ್ತು. ಆಗಾಗ ಇಬ್ಬರೂ ಪರಸ್ಪರ ರಾಜೀನಾಮೆ ಬೆದರಿಕೆ ಒಡ್ಡುತ್ತಿದ್ದರು. ನೆಹರು ಅವರು ಪಟೇಲರ ಮಾತನ್ನು ಕೇಳಿದ್ದಿದ್ದರೇ ಕಾಶ್ಮೀರ, ಟಿಬೆಟ್, ನೇಪಾಳ, ಚೀನಾ – ಇವುಗಳ ಸಮಸ್ಯೆಯೇ ಇದ್ದಿರುತ್ತಿರಲಿಲ್ಲ. ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವುದು ಬೇಡ ಎಂದು ಪಟೇಲರು ಎಷ್ಟೆಲ್ಲ ವಿರೋಧಿಸಿದರೂ ನೆಹರು ಅದಕ್ಕೆ ಕಿವಿಗೊಡಲಿಲ್ಲ. ಇದರಿಂದಾಗಿಯೇ ದೇಶ ಈ ಸಮಸ್ಯೆಗಳಿಗೆ ಗುರಿ ಆಗಬೇಕಾಯಿತು’ ಎಂದೆಲ್ಲ ಆಕ್ಷೇಪಗಳನ್ನು ಹೊತ್ತಿರುವ ಲೇಖನ ‘ಕಾಂಗ್ರೆಸ್ ದರ್ಶನ’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ಮೇಲಿನ ಟೀಕೆಗಳೆಲ್ಲ ನೆಹರು ಕುರಿತು ಆರೆಸ್ಸೆಸ್ ಮೊದಲಿನಿಂದಲೂ ಮಾಡಿಕೊಂಡು ಬಂದಿರುವ ಆರೋಪಗಳಿಗೆ ಚೆನ್ನಾಗಿ ಹೋಲಿಕೆಯಾಗುತ್ತಿವೆ ಎಂಬುದು ಗಮನಾರ್ಹ.

ಹೋಗಲಿ ಅಂದರೆ, ‘ಕಾಂಗ್ರೆಸ್ ದರ್ಶನ’ವು ಹಳೆ ಅಡಿಪಾಯಗಳನ್ನು ಮಾತ್ರವೇ ಅಲ್ಲಾಡಿಸಿ ಸುಮ್ಮನಾಗಿಲ್ಲ. ಹೊಸ ಇಟ್ಟಿಗೆ ಅರ್ಥಾತ್ ಸೋನಿಯಾ ಗಾಂಧಿಯವರ ವಿಷಯವನ್ನೂ ಮುಜುಗರಕ್ಕೀಡುಮಾಡುವ ಧಾಟಿಯಲ್ಲೇ ಪ್ರಸ್ತಾಪಿಸಿದೆ. ‘ಸೋನಿಯಾ ಗಾಂಧಿಯವರಿಗೆ ಗಗನಸಖಿಯಾಗುವ ಆಕಾಂಕ್ಷೆ ಇತ್ತು. ಅವರ ತಂದೆ ಸ್ಟೆಫಾನೊ ಮೈನೊ, ಫ್ಯಾಸಿಸ್ಟ್ ಸಾಮ್ರಾಜ್ಯದ ಸೈನಿಕರಾಗಿದ್ದರು. 1997ರಲ್ಲಷ್ಟೇ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ಸೋನಿಯಾ, ಕೇವಲ 62 ದಿನಗಳಲ್ಲೇ ಅಧ್ಯಕ್ಷರಾದರು’ ಎಂದು ಬರೆಯಲಾಗಿದೆ.

ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದ ಪ್ರಯುಕ್ತ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಗೃಹ ಸಚಿವ ಡಾ. ಜಿ.  ಪರಮೇಶ್ವರ್ ಅವರು, ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ, ‘ಕಾಂಗ್ರೆಸ್ಸಿಗರೇ ದೇಶ ಕಟ್ಟಿದ್ದು, ನೀನೇನಿದ್ದರೂ ಮಾರ್ಕೆಟಿಂಗ್ ಮ್ಯಾನ್ ಅಷ್ಟೇ’ ಎಂದಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ದೇಶದ ಪ್ರಧಾನಿಯವರನ್ನು ಸ್ಥಾನಗೌರವ ಪಕ್ಕಕ್ಕಿಟ್ಟು ಏಕವಚನದಲ್ಲಿ ನಿಂದಿಸುವುದು ಯಾವ ಸಂಸ್ಕೃತಿ ಅಂತ ಬಿಜೆಪಿಗರು ಜೋರುಧ್ವನಿಯಲ್ಲಿ ಕೇಳುತ್ತಿದ್ದಾರೆ.

praksh tweet

ಫ್ರಿ ಕಮೆಂಟ್ : ಅದೇನೇ ಇದ್ರೂ ವಸಿ ನೀವೂ ಮಾರ್ಕೆಟಿಂಗ್ ಕಡೆ ಗಮನ ಹರಿಸೋದು ಒಳ್ಳೇದಪ್ಪಾ. ನಿಮ್ಮ ಪಕ್ಷದ ಮುಖವಾಣಿ ಪತ್ರಿಕೆಯೇ ನೆಹರು ಅವರನ್ನು ಮಾರ್ಕೆಟ್ ಮಾಡ್ದಿದ್ರೆ ಇನ್ಯಾರು ಮಾಡೋಕೆ ಸಾಧ್ಯ ಅಲ್ವಾ?

Leave a Reply