ಡಾ. ಪರಮೇಶ್ವರ್ ಸುಶಿಕ್ಷಿತರೆನಿಸಿಕೊಂಡರೆ ಸಾಲದು, ಅವರ ನಾಲಿಗೆಗೂ ಆ ಗುಣ ಇರಬೇಕು!

Minister Dr. G. Parameshwar with Congress leader’s floral tribute portrait of Mahatma Gandhi celebrating 130 years of “ Congress Foundation Day” at KPCC in Bengaluru on Monday.

ಡಿಜಿಟಲ್ ಕನ್ನಡ ಟೀಮ್

ನಾಲಿಗೆ ಆಯಾ ವ್ಯಕ್ತಿಯ ಸಂಸ್ಕಾರದ ಪ್ರತಿನಿಧಿ. ಅಂದರೆ ವ್ಯಕ್ತಿ ಆಡುವ ಮಾತುಗಳು ಆತನ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ ಅನ್ನುತ್ತಾರೆ. ಸಂಸ್ಕಾರಗುಣ ಸಂಪನ್ನ ಎಂದೇ ಬಿಂಬಿಸಿಕೊಂಡಿದ್ದ ಕರ್ನಾಟಕ ಗೃಹ ಸಚಿವ ಡಾ. ಜಿ. ಪರಮೇಶ್ವರ ಅದ್ಯಾಕೆ ಹೀಗೆ ಮಾತಾಡಿದರೋ ಗೊತ್ತಿಲ್ಲ.

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಆವೇಶಭರಿತರಾಗಿ ಮಾತಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಪರಮೇಶ್ವರ್, ‘ಈ ದೇಶವನ್ನು ಕಟ್ಟಿದ್ದು ಕಾಂಗ್ರೆಸ್, ನೀನೇನಿದ್ದರೂ (ನರೇಂದ್ರ ಮೋದಿ) ಮಾರ್ಕೆಂಟಿಂಗ್ ಮ್ಯಾನ್ ‘ ಎಂದು ಮೂದಲಿಸಿದ್ದಾರೆ. ಇವರ ಭಾವೋದ್ವೇಗಕ್ಕೆ ನಾಲಿಗೆ ಕೈಕೊಟ್ಟಿತೋ ಅಥವಾ ಇವರ ಆವೇಶಕ್ಕೆ ಬುದ್ಧಿ ಬಲಿಯಾಯಿತೋ ತಿಳಿದಿಲ್ಲ, ಆದರೆ, ದೇಶದ ಪ್ರಧಾನಿಯೊಬ್ಬರನ್ನು ಅವರ ಸ್ಥಾನಮಾನದ ಗೌರವ ಮರೆತು ಏಕವಚನದಲ್ಲಿ ಸಂಬೋಧಿಸುವ ಮೂಲಕ ತಮ್ಮ ಸ್ಥಾನಮಾನದ ಮರ್ಯಾದೆ ಹರಾಜು ಹಾಕಿಕೊಂಡಿದ್ದಾರೆ.

ಕಾಂಗ್ರೆಸ್ ಸಂಸ್ಥಾಪನೆ ದಿನಾಚರಣೆಯಲ್ಲಿ ಪರಮೇಶ್ವರ್ ಅವರು ತಮ್ಮ ಪಕ್ಷದ ನಾಯಕರನ್ನು ಹೊಗಳಬೇಕಾದ್ದು, ಅವರ ಭಜನೆ ಮಾಡಬೇಕಾದ್ದು ಸಹಜ ಧರ್ಮ. ಅದೇ ರೀತಿ ಅವರಿಗೆ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವ ಹಕ್ಕೂ ಇದೆ. ಆ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಆದರೆ ನಾಯಕರನ್ನು ಹೊಗಳಿ ಹೊನ್ನಶೂಲಕ್ಕೇರಿಸುವ ಭರದಲ್ಲಿ, ಪ್ರಧಾನಿ ಹುದ್ದೆಯ ಗೌರವ-ಘನತೆಯನ್ನು ತಮ್ಮ ಜಿಹ್ವಾಚಾಪಲ್ಯ ತೀರಿಸಿಕೊಳ್ಳಲು ಬಲಿ ಕೊಟ್ಟದ್ದು ಮಾತ್ರ ಟೀಕಾರ್ಹವಾಗಿದೆ.

ಕಲಿತವರು, ಸುಶಿಕ್ಷಿತರು ಎಂದೆನಿಸಿರುವ ಪರಮೇಶ್ವರ್ ರಾಜಕೀಯ ವಲಯದಲ್ಲಿ ಮೊದಲಿಂದಲೂ ಸರಳ, ಸಜ್ಜನ, ಮಿತಭಾಷಿ, ಸಂಭಾವಿತ ಎಂದೇ ಗುರುತಿಸಿಕೊಂಡವರು. ಎಸ್.ಎಂ. ಕೃಷ್ಣ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ವಿಶ್ವವಿದ್ಯಾಲಯಗಳ ವಿಧೇಯಕ ಮಂಡಿಸಿ, ಅದರ ಉದ್ದೇಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಭಾಷಣಕ್ಕೆ ತಲೆದೂಗದವರೇ ಇಲ್ಲ. ಆ ವಾಗ್ಝರಿಯಲ್ಲಿ ಪಾಂಡಿತ್ಯವಿತ್ತು, ಅದನ್ನು ಮೀರಿದ ಪ್ರಬುದ್ಧತೆ ಇತ್ತು, ಕಳಕಳಿ ಇತ್ತು. ಅವರ ಮಾತಿನ ಓಘಕ್ಕೆ ಇಡೀ ಸದನವೇ ಮೆಚ್ಚಿ ವಾಹ್ ಎಂದಿತ್ತು. ಅದೊಂದೇ ಒಂದು ಭಾಷಣ ಪರಮೇಶ್ವರ್ ಅವರ ವ್ಯಕ್ತಿತ್ವವನ್ನು ಭಿನ್ನನೆಲೆಯಲ್ಲಿ ಉತ್ತುಂಗಕ್ಕೆ ಕೊಂಡೊಯ್ದಿತ್ತು. ಭವಿಷ್ಯದ ಮುಖ್ಯಮಂತ್ರಿ ಎಂಬ ಛಾಪನ್ನೂ ಲಗತ್ತಿಸಿತ್ತು. ಅಂತಹ ಪರಮೇಶ್ವರ್ ಅವರು ಪ್ರಧಾನ ಮಂತ್ರಿಯವರನ್ನು ಏಕವಚನದಲ್ಲಿ ಟೀಕೆ ಮಾಡಿದ್ದು ಯಾವ ಕೋನದಿಂದಲೂ ಸರಿ ಕಾಣುತ್ತಿಲ್ಲ. ಇದನ್ನು ಬಿಜೆಪಿಯವರಿರಲಿ, ಕಾಂಗ್ರೆಸ್ಸಿಗರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕೆಲ ದಿನಗಳ ಹಿಂದೆ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿ ಬಂದಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪ್ರಧಾನಿ ಮೋದಿ ಅವರ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆದದ್ದು ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಯಿತು. ಆದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದು ಸರಿ ಇಲ್ಲ. ಅದು ತಪ್ಪು. ಪ್ರತಿಭಟನೆಗೆ ಬೇರೆ ಮಾರ್ಗಗಳಿವೆ. ಅದನ್ನು ಬಿಟ್ಟು ಈ ರೀತಿ ಮಾಡಿದ್ದು ಯಾರಿಗೂ ಗೌರವ ತರುವುದಿಲ್ಲ’ ಎಂದು ವಿಷಾದದಿಂದ ಹೇಳಿದ್ದು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

Members of Youth Congress staging a protest against the Central Government on the issue of National Herald case held at Freedom Park in Bengaluru on Saturday.

ಇಂತಹ ನಿದರ್ಶನಗಳು ಕಣ್ಣ ಮುಂದಿರುವಾಗ ಪರಮೇಶ್ವರ್ ಅವರು ನಾಲಿಗೆ ಹರಿಯಬಿಡುವಾಗ ಕೊಂಚ ಜಾಗ್ರತೆ ವಹಿಸಬೇಕಿತ್ತು. ಕಾಂಗ್ರೆಸ್ ಸಂಸ್ಥಾಪನೆ ದಿನದಂದು ಪಕ್ಷದ ಮುಖವಾಣಿ ‘ಕಾಂಗ್ರೆಸ್ ದರ್ಶನ್’ದಲ್ಲಿ ನೆಹರೂ ಕ್ರಮ ಟೀಕಿಸಿ ಲೇಖನ ಪ್ರಕಟಿಸಿದ ಆರೋಪದ ಮೇರೆಗೆ ಸಂಪಾದಕ ಸುಧೀರ್ ಜೋಶಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ನರೇಂದ್ರ ಮೋದಿ ಅವರನ್ನು ಪರಮೇಶ್ವರ್ ಅವರಂತವರು ಹೇಗೆ ಬೇಕಾದರೂ ನಿಂದಿಸಬಹುದು. ಏಕೆಂದರೆ ನೆಹರೂ ಕಾಂಗ್ರೆಸ್ ಪಕ್ಷದವರು. ಆದರೆ ನರೇಂದ್ರ ಮೋದಿ ಅವರು…!

Leave a Reply