ಡಿಜಿಟಲ್ ಕನ್ನಡ ಟೀಮ್
ಹೊಸದಾಗಿ ರಚನೆಯಾಗಿರುವ ಸೀಮಾಂಧ್ರವನ್ನು ಆರ್ಥಿಕ ಶಕ್ತಿಯಾಗಿ ಬೆಳೆಸಲು ಶ್ರಮಿಸುತ್ತಿರುವ ಚಂದ್ರಬಾಬು ನಾಯ್ಡು ಕೌತುಕ ಹುಟ್ಟಿಸುತ್ತಿದ್ದರೆ, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ಮಾತ್ರ ಎಲ್ಲವಕ್ಕೂ ಯಾಗದ ಮೂಲಕವೇ ಪರಿಹಾರ ಕಂಡುಕೊಳ್ಳುವ ಹುಮ್ಮಸ್ಸು.
7 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿ ಮೇದಕ್ ನಲ್ಲಿ ಭಾನುವಾರ ಚಂಡಿಹೋಮ ನಡೆಸಿದರು. ಬೇರೆ ಬೇರೆ ರಾಜ್ಯಗಳ ಸುಮಾರು 2 ಸಾವಿರ ಅರ್ಚಕರನ್ನು ಕರೆಸಿ ನೆರವೇರಿಸಿದ ಮಹಾಯಾಗಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಬೇಕಿತ್ತು. ಅವರು ವಾಯುಮಾರ್ಗದಲ್ಲಿದ್ದಾಗಲೇ ಇತ್ತ ಯಜ್ಞಕುಂಡದ ಪೆಂಡಾಲಿಗೆ ಬೆಂಕಿ ಹೊತ್ತಿಕೊಂಡಿತು. ಜನ ಚೆಲ್ಲಾಪಿಲ್ಲಿಯಾದರು. ಯಾವುದೇ ಪ್ರಾಣಹಾನಿ ಆಗದಿದ್ದರೂ ಗೊಂದಲ- ಭೀತಿಯ ವಾತಾವರಣ ನಿರ್ಮಾಣವಾಯಿತು. ರಾಷ್ಟ್ರಪತಿ ಆಗಮನ ರದ್ದಾಯಿತು.
ಆದರೆ ತೆಲಂಗಾಣ ಮುಖ್ಯಮಂತ್ರಿ ಮಾತ್ರ ಇದರಿಂದ ಕೊಂಚವೂ ವಿಚಲಿತರಾಗದೇ ಈಗ ಮತ್ತೊಂದು ಯಜ್ಞಕ್ಕೆ ಕೈ ಹಾಕಿದ್ದಾರೆ. ಬರಗಾಲ ಪರಿಹಾರವಾಗಲಿ ಅಂತ ಮತ್ತೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಯಾಗ ಮಾಡುತ್ತಾರಂತೆ. ಹಿಂದೆ ಮಾಡಿದ ಯಾಗಕ್ಕಾಗಲೀ, ಈಗ ಮಾಡಲುದ್ದೇಶಿಸಿರುವ ಯಾಗಕ್ಕಾಗಲಿ ಸರ್ಕಾರಿ ಬೊಕ್ಕಸದಿಂದ ಹಣ ಖರ್ಚು ಮಾಡ್ತಿಲ್ಲವಲ್ಲ ಎಂಬುದು ಟೀಕೆಗಳಿಗೆ ಪ್ರತಿಯಾಗಿ ಚಂದ್ರಶೇಖರ್ ರಾವ್ ನೀಡುತ್ತಿರುವ ಸಮರ್ಥನೆ.
ದುಡ್ಡು ಯಾರದ್ದಾದರೇನು? ತೆಲಂಗಾಣ ಅಭಿವೃದ್ಧಿಗೆ ಯಾಗವೇ ಪರಿಹಾರ ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಇವರು ಯಾವ ಯುಗದಲ್ಲಿದ್ದಾರೆ? ಅದೇ ಹಣವನ್ನು ರೈತರ ಕಷ್ಟಕ್ಕೆ ಸ್ಪಂದಿಸುವಲ್ಲಿ ಬಳಸಬಹುದಿತ್ತಲ್ಲವೇ ಅನ್ನೋದು ಪ್ರತಿಪಕ್ಷ, ಬರಪೀಡಿತ ರೈತರು, ಮಾಧ್ಯಮ ಕೇಳುತ್ತಿರುವ ಪ್ರಶ್ನೆ.