ಸುದ್ದಿ ಜತೆ ಕಾಮೆಂಟ್ ಫ್ರೀ, ಇವತ್ತಿನ ಮುಖ್ಯಾಂಶ ಇಷ್ಟೇರಿ…

 

ಡಿಜಿಟಲ್ ಕನ್ನಡ ಟೀಮ್

  1. ಸಂಸತ್ ಕಲಾಪಕ್ಕೆ ಹೊಸ ಭವನದ ನಿರ್ಮಾಣವಾಗಬೇಕು ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕೇಂದ್ರದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಈಗಿರುವ ಕಲಾಪದ ಸ್ಥಳವು 88 ವರ್ಷಗಳಷ್ಟು ಹಳೆಯದಾಗಿದ್ದು, ಇಂದಿನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದಕ್ಕೆ ಸಹ ಪೂರಕವಾಗಿಲ್ಲ. ಅಲ್ಲದೇ ಸದಸ್ಯರಿಗೆ ಜಾಗದ ಸಮಸ್ಯೆಯೂ ಇದೆ ಎಂದು ಅವರು ವಿವರಿಸಿದ್ದಾರೆ.

ನಮ್ಮ ಕಾಮೆಂಟ್: ಕಲಾಪಕ್ಕೆ ಸೌಕರ್ಯಯುಕ್ತ- ಸುಸಜ್ಜಿತ ಕಟ್ಟಡ ಬೇಕು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕಲಾಪ ಆಗುತ್ತಿರುವುದಾದರೂ ಎಲ್ಲಿ? ಗದ್ದಲಗಳ ನಡುವೆ ಕಲಾಪ ನಡೆದರೂ ಅಲ್ಲಿ ಭಾಗವಹಿಸುವ ಸಂಸದರ ಸಂಖ್ಯೆಯಾದರೂ ಎಷ್ಟು? ಇತ್ತೀಚೆಗೆ ಕಲಾಪ ವೀಕ್ಷಿಸುತ್ತಿರುವವರಿಗೆ ಸ್ಪೀಕರ್ ಎದುರಿನ ತೆರೆದ ಜಾಗದಲ್ಲಿ ಮಾತ್ರ ನೂಕುನುಗ್ಗಲು ಕಾಣಿಸುತ್ತಿದೆ. ಅಂದರೆ, ಸಂಸದರಿಗೆ ಪ್ರತಿಭಟನೆಗೆ ಜಾಗ ಸಾಲುತ್ತಿಲ್ಲ ಎಂದರೆ ಸರಿ ಹೋದೀತೇನೋ?

ತಮಾಷೆ ಏನು ಗೊತ್ತಾ? ಸ್ಪೀಕರ್ ಅವರ ಈ ಪ್ರಸ್ತಾವಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಸಹಮತ ಸಿಕ್ಕಿಬಿಟ್ಟಿದೆ. ಜಿಎಸ್ಟಿ ಬಗ್ಗೆ ಚರ್ಚೆ ನಡೆಸೋಣ ಬನ್ನಿ ಅಂದರೆ ಒಬ್ಬರಿಗೆ ಅಸಹಿಷ್ಣುತೆ ಕಾಡುತ್ತೆ, ಇನ್ನೊಬ್ಬರಿಗೆ ರಾಜಕೀಯ ದ್ವೇಷದ ಉರಿ ಹತ್ತುತ್ತೆ. ಆದ್ರೆ ಸಂಸದರ ಸಂಬಳ- ಭತ್ಯೆ ಹೆಚ್ಚಿಸಿಕೊಳ್ಳಬೇಕು ಹಾಗೂ ಅವರಿಗಾಗಿ ಹೊಸ ಭವನದಂಥ ಸವಲತ್ತುಗಳು ಆಗಬೇಕು ಎಂದಾದಾಗ ಮಾತ್ರ ಸರ್ವಪಕ್ಷಗಳಲ್ಲಿ ಅದೆಂಥ ಪವಾಡಸದೃಶ ಸಮ್ಮತಿ ಮೂಡಿಬಿಡುತ್ತೆ ಅನ್ನೋದಕ್ಕೆ ಈ ಪ್ರಸಂಗವೇ ಉದಾಹರಣೆ!

ಚರ್ಚಿಸಿ ಕಾನೂನು ಮಾಡಬೇಕಾದವರು ನೀವು. ಒಳ್ಳೆ ಕಟ್ಟಡದಲ್ಲಿ ಆರಾಮಾಗಿರಿ, ತಕರಾರಿಲ್ಲ. ಆದರೆ ನಿಮ್ಮ ಕರ್ತವ್ಯ ಪೂರೈಸಿ ನಂತರ ಸವಲತ್ತು ಕೇಳಿದ್ದರೆ ಒಳ್ಳೆಯದಿತ್ತು ಅನ್ನೋದು ಶ್ರೀಸಾಮಾನ್ಯನಲ್ಲಿರಬಹುದಾದ ಅನಿಸಿಕೆ, ಅಲ್ವೇ?

  1. ದಾದ್ರಿಯಲ್ಲಿ ಹತ್ಯೆಗೀಡಾದ ಮೊಹಮ್ಮದ್ ಅಖ್ಲಾಖ್ ಮನೆಯಲ್ಲಿದ್ದದ್ದು ಗೋಮಾಂಸವಾಗಿರಲಿಲ್ಲ; ಕುರಿಮಾಂಸವಾಗಿತ್ತು ಅಂತ ಉತ್ತರ ಪ್ರದೇಶ ಸರ್ಕಾರ ವರದಿ ಸಲ್ಲಿಸಿದೆ.

ನಮ್ಮ ಕಾಮೆಂಟ್: ವರದಿ ಇಟ್ಟುಕೊಂಡು ಏನ್ಮಾಡೋಣ ಸ್ವಾಮಿ? ಒಂದೊಮ್ಮೆ ಅಲ್ಲಿದ್ದದ್ದು ಗೋಮಾಂಸವೇ ಆಗಿದ್ದರೆ ಅಖ್ಲಾಖ್ ರನ್ನು ಹೊಡೆದು ಕೊಂದಿದ್ದು ಸರಿ ಅಂತಾಗ್ತಿತ್ತಾ? ತನಿಖೆ ಚುರುಕಾಗಬೇಕಿರುವುದು ಕೊಂದವರನ್ನು ಹಿಡಿದು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವುದರಲ್ಲೇ ಹೊರತು, ಅಖ್ಲಾಖ್ ಮೆನಯಲ್ಲಿದ್ದದ್ದು ಗೋಮಾಂಸವೋ ಇನ್ಯಾವ ಮಾಂಸವೋ ಎಂಬ ಜಿಜ್ಞಾಸೆಯೇ ಅಪ್ರಸ್ತುತ.

  1. ವಾರ್ಷಿಕವಾಗಿ ಹತ್ತು ಲಕ್ಷ ರುಪಾಯಿಗಿಂತ ಹೆಚ್ಚು ಆದಾಯ ಇರುವವರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ದೊರೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ನಮ್ಮ ಕಾಮೆಂಟ್ : ಒಳ್ಳೆ ನಡೆ. ಇದರಿಂದ ನಿಜಕ್ಕೂ ಸಬ್ಸಿಡಿಯ ಅಗತ್ಯ ಇರುವವರನ್ನು ಹೆಚ್ಚು ತಲುಪಲು ಅನುವಾಗುತ್ತದೆ. ಪ್ರಧಾನಿಯವರ ಸಬ್ಸಿಡಿ ಬಿಡಿ ಅಭಿಯಾನಕ್ಕೆ ಓಗೊಟ್ಟು, 15 ಕೋಟಿ ಎಲ್ಪಿಜಿ ಬಳಕೆದಾರರ ಪೈಕಿ 57.5 ಲಕ್ಷ ಮಂದಿ ಸಬ್ಸಿಡಿ ತ್ಯಜಿಸಿದ್ದಾರೆ. ಕೇಂದ್ರದ ವಿತ್ತೀಯ ಕೊರತೆ ನಿಭಾಯಿಸುವಲ್ಲಿ ಈ ಕ್ರಮ ಬಹಳ ಅನುಕೂಲಕ್ಕೆ ಬರಲಿದೆ. 2014-15ಕ್ಕೆ ಎಲ್ಪಿಜಿ ಸಬ್ಸಿಡಿಗಾಗಿ ವ್ಯಯಿಸಿರುವ ಹಣ 40,551 ಕೋಟಿ ರುಪಾಯಿಗಳು. ಈ ಬಾರಿ ಕಚ್ಚಾತೈಲ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಇದರ ಅರ್ಧದಷ್ಟು ಹಣವನ್ನು ವ್ಯಯಿಸಿದರೆ ಸಾಕಾಗುತ್ತದೆ. ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ 8814 ಕೋಟಿ ರುಪಾಯಿಗಳನ್ನು ಎಲ್ಪಿಜಿ ಸಬ್ಸಿಡಿಗೆ ವ್ಯಯಿಸಲಾಗಿದೆ.

4.  ಡಿಡಿಸಿಎ ಪ್ರಕರಣದಲ್ಲಿ ಅರುಣ್ ಜೇಟ್ಲಿಯವರಿಗೆ ಕ್ಲೀನ್ ಚಿಟ್ ದೊರೆತಿದೆ ಎಂಬ ಮಾತೇ ಪೊಳ್ಳು ಅಂತ ನವದೆಹಲಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ಆಮ್ ಆದ್ಮಿ ಪಕ್ಷ ಕಿಡಿಕಾರಿದೆ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಣಕಾಸು ಅವ್ಯವಹಾರಗಳಾಗಿದ್ದವು, ಬೋಗಸ್ ಕಂಪನಿಗಳ ಹೆಸರು ಬಳಸಿಕೊಳ್ಳಲಾಗಿದೆ ಎಂಬಂಶ ತನಿಖಾ ವರದಿಯಲ್ಲಿ ಪ್ರಸ್ತಾಪವಾಗಿದೆ. ಹೀಗಿರುವಾಗ ಅರುಣ್ ಜೇಟ್ಲಿ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಅವರ ಜವಾಬ್ದಾರಿ ಹೇಗೆ ಇಲ್ಲವಾಗುತ್ತದೆ? ಅವರ ವಿರುದ್ಧ ಆರೋಪ ಮಾಡಿರುವುದಕ್ಕೆ ತಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಅಂತ ಆಪ್ ಹೇಳಿದೆ.

1 COMMENT

Leave a Reply