ಇದು ಸುದ್ದಿಸಂತೆಯ ಕ್ಯಾಪ್ಸೂಲ್, ತೆರೆದ್ರೆ ಈ ದಿನದ ನ್ಯೂಸ್ ಗಳೆಲ್ಲ ತಲೆಗಿಳಿಯುತ್ವೆ!

 

 

ಡಿಜಿಟಲ್ ಕನ್ನಡ ಟೀಮ್

ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ

ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಳ್ಳಲಿದೆ.

ಜನವರಿ 10ರಿಂದ ಆರಂಭಗೊಳ್ಳಲಿರುವ ಯೋಜನೆಯ ಮುಖ್ಯಾಂಶ ಹೀಗಿದೆ:

 •  ಹಾಲಿ ನಾಲ್ಕು ಪಥದ ರಸ್ತೆ ಆಗಲಿದೆ ಆರು ಪಥ. ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ.
 • ಮೈಸೂರು, ಹುಣಸೂರು, ಮಡಿಕೇರಿ, ಬಂಟ್ವಾಳದವರೆಗೆ ಎರಡು ಪಥದ ಬದಲು ನಾಲ್ಕು ಪಥ.
 • ಜನವರಿಯಿಂದಲೇ ಭೂ ಸ್ವಾಧೀನ. ಇದಕ್ಕಾಗಿ 2300 ಕೋಟಿ ರೂ. ಹಾಗೂ
 • ರಸ್ತೆ ನಿರ್ಮಾಣಕ್ಕೆ 3000 ಕೋಟಿ ರೂ.ನ್ನು ಕೇಂದ್ರ ಸರ್ಕಾರ ಒದಗಿಸಿದೆ.
 •  ಭೂ ಸ್ವಾಧೀನ ಆರಂಭವಾಗುವ ರಾಮನಗರದಲ್ಲಿ ಕಚೇರಿ.
 • ಅಭಿವೃದ್ಧಿ ಪಟ್ಟಣಗಳಾಗಿ ಪರಿವರ್ತನೆಗೊಂಡಿರುವ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಹಾಗೂ ಶ್ರೀರಂಗಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ.
 •  ಗ್ರಾಮಗಳ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಸುರಂಗ ಮಾರ್ಗಗಳು.

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

ಕೆಲವು ತಿಂಗಳುಗಳಿಂದ ವಿವಾದದಲ್ಲೇ ಮುಳುಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ, ಹೊಸ ಮುಖ್ಯಸ್ಥರನ್ನು ಪಡೆದುಕೊಂಡ ಮೇಲೆ ತನ್ನ ಮೊದಲ ಛಾಪು ತೋರಿಸಿದೆ. ಮಂಗಳವಾರ ರಾಜ್ಯದ ಹಲವು ಕಡೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಆಸ್ತಿಗಳನ್ನು ಪರಿಶೀಲನೆಗೆ ಒಳಪಡಿಸಿದೆ.

ದಾಳಿ ನಡೆದ ಸ್ಥಳಗಳು:

 • ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಬೆಂಗಳೂರು ಹಾಗೂ ಬಳ್ಳಾರಿಯ ನಿವಾಸ, ಗಣಿ ಕಂಪನಿ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಪತ್ರಗಳ ವಶ. 2007 ರಿಂದ 2011ರ ಅವಧಿಯಲ್ಲಿ 11 ಬೇನಾಮಿ ಕಂಪೆನಿಗಳನ್ನುಸೃಷ್ಟಿಸಿ ಅಕ್ರಮಗಣಿಗಾರಿಕೆ ನಡೆಸಿ 362.73 ಕೋಟಿ ರೂಪಾಯಿ ಹಣವನ್ನು ಗಳಿಸಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಈ ದಾಳಿ.
 •  ಬೀದರ್, ರಾಯಚೂರು, ವಿಜಯಾಪುರ, ಕಲಬುರಗಿ ಮತ್ತು ಕೋಲಾರದಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.
 • ವಿಜಯಪುರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಹನುಮಂತಪ್ಪ ಅವರ ಸಾರವಾಡ ಗ್ರಾಮದ ಮನೆ ಹಾಗೂ ಅವರ ಪಾಲುಗಾರಿಕೆಯ ಪ್ರಾರ್ಥನಾ ಶಾಲೆಯ ಮೇಲೆ ಲೋಕಾಯುಕ್ತ ಎಸ್‍ಪಿ ಪ್ರಭಾಕರ್ ನೇತೃತ್ವದಲ್ಲಿ ದಾಳಿ.
 • ರಾಯಚೂರು ಕೆಆರ್‍ಐಡಿಎಲ್ ಮುಖ್ಯ ಅಭಿಯಂತರ ಅಬ್ದುಲ್ ರಶೀದ್ ಅವರ ಸಿಂಧನೂರು ಕಚೇರಿ ಹಾಗೂ ನಿಜಲಿಂಗಪ್ಪ ಕಾಲೋನಿಯ ನಿವಾಸದ ಮೇಲೆ ದಾಳಿ, ಎಫ್‍ಐಆರ್ ದಾಖಲೆ.
 •  ಬೀದರಿನ ಗ್ರಾಮೀಣ ನೈರ್ಮಲ್ಯ, ನೀರು ಸರಬರಾಜು ಇಲಾಖೆಯ ಇಂಜಿನಿಯರ್ ರಾಜಶೇಖರ್ ಬ್ರಹ್ಮಾಪುರೆ ಅವರ ಚಿಟ್ಟೆ ಗ್ರಾಮದ ತೋಟದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ, ಬ್ಯಾಂಕ್ ಕಾಗದಪತ್ರಗಳ ವಶ.
 • ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಜ್ಘರ್ ಅವರ ಆಪ್ತ ಸಹಾಯಕ ಸುಬ್ಬುರಾವ್ ಸುಬೇದಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ. ಆದಾಯ ಮೀರಿ ಆಸ್ತಿಗಳಿಕೆ ಹಿನ್ನೆಲೆಯಲ್ಲಿ ದಾಖಲೆಗಳ ವಶ.
 • ಕೋಲಾರದ ಜಿಲ್ಲಾ ಪಂಚಾಯ್ತಿ ಜೂನಿಯರ್ ಇಂಜಿನಿಯರ್ ಪ್ರಸನ್ನಕುಮಾರ್ ಮನೆಯ ಮೇಲೆ ದಾಳಿ. ಬಂಗಾರಪೇಟೆ ಪಟ್ಟಣದ ನಿವಾಸ ಹಾಗೂ ಬೆಂಗಳೂರು ಆರ್.ಟಿ.ನಗರದ ನಿವಾಸಗಳಲ್ಲಿ ದಾಖಲೆ ಪರಿಶೀಲನೆ.

ಡಿಡಿಸಿಎ: ಕೇಜ್ರಿವಾಲ್ ಸೆಕ್ಸ್ ಆರೋಪ, ಸುಬ್ರಮಣಿಯನ್ ಪತ್ರದೊತ್ತಡ

ಡಿಡಿಸಿಎ ಅವ್ಯವಹಾರ ಆರೋಪದ ವಿದ್ಯಮಾನಕ್ಕೆ ಸಂಬಂಧಿಸಿ ಎರಡು ಬಿಸಿ ಚರ್ಚೆಗಳು ಮಂಗಳವಾರ ತೆರೆದುಕೊಂಡಿವೆ. ‘ನಾವು ಯಾರಿಗೂ ಕ್ಲೀನ್ ಚಿಟ್ ನೀಡಿಲ್ಲ.’ ಎಂದು ಪುನರುಚ್ಛರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಡಿಸಿಎ ಆಯ್ಕೆದಾರರು ಅವರ ಲೈಂಗಿಕ ತೃಷೆ ತೀರಿಸುವಂತೆ ಒತ್ತಡ ಹೇರಿರುವ ಆರೋಪವೂ ಇದೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ. ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದು: ‘ಪತ್ರಕರ್ತರೊಬ್ಬರ ಮಗ ಡಿಡಿಸಿಎನಿಂದ ಆಯ್ಕೆಯಾಗಿದ್ದ. ಆದರೆ ನಂತರ ಆತನ ಹೆಸರನ್ನು ಪಟ್ಟಿಯಿಂದ ಕೈಬಿಟ್ಟ ಆಯ್ಕೆದಾರರು, ಪತ್ರಕರ್ತನ ಹೆಂಡತಿ ರಾತ್ರಿ ವೇಳೆ ತಮ್ಮಲ್ಲಿಗೆ ಬಂದರೆ ಆತನ ಮಗನಿಗೆ ಅವಕಾಶ ಕೊಡುವುದಾಗಿ ಹೇಳಿದ್ದರು. ತನಿಖಾ ಆಯೋಗ ರಚನೆಯಾದಲ್ಲಿ ಇದನ್ನು ನಿರ್ಭೀತಿಯಿಂದ ದಾಖಲಿಸುವುದಾಗಿ ಆ ಪತ್ರಕರ್ತರು ನನ್ನಲ್ಲಿ ಹೇಳಿಕೊಂಡಿದ್ದಾರೆ’ ಎಂದಿರುವ ಕೇಜ್ರಿವಾಲ್, ಪ್ರಧಾನಿ ಮೋದಿಯವರನ್ನು ಸೈಕೋಪಾತ್ ಎಂದು ಜರೆದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಿಲ್ಲ ಅಂತಲೂ ಹೇಳಿದ್ದಾರೆ.

ಇನ್ನೊಂದೆಡೆ, ದೆಹಲಿ ಸರ್ಕಾರವು ಡಿಡಿಸಿಎ ಅವ್ಯವಹಾರ ತನಿಖೆಗೆ ನೇಮಿಸಿರುವ ತನಿಖಾ ತಂಡದ ನೇತೃತ್ವ ವಹಿಸಿರುವ ಗೋಪಾಲ್ ಸುಬ್ರಮಣಿಯನ್ ಅವರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರಿಗೆ ಪತ್ರ ಬರೆದು ‘ತನಿಖಾ ತಂಡದಲ್ಲಿ ಸಿಬಿಐ, ಗುಪ್ತಚರ ಸಂಸ್ಥೆ ಹಾಗೂ ದೆಹಲಿ ಪೊಲೀಸ್ ತಂಡಗಳಿಂದ ಪರಿಣತರು ಇರುವಂತೆ ಸಹಕರಿಸಿ’ ಎಂದಿದ್ದಾರೆ.

ನಮ್ಮ ಕಾಮೆಂಟ್: ತನಿಖಾ ತಂಡದಲ್ಲಿ ಯಾರಿರಬೇಕು, ಯಾರಿರಬಾರದು ಅಂತೆಲ್ಲ ನಿರ್ಧರಿಸುವುದು ರಾಷ್ಟ್ರೀಯ ಭದ್ರತಾ ಸಲಹೆಗಾರರ ವ್ಯಾಪ್ತಿಗೆ ಬರುವುದಿಲ್ಲ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರ್ಯಯೋಜನೆಗಳನ್ನು ಕೈಗೊಳ್ಳುವುದಕ್ಕೆ ಪ್ರಧಾನಿಗೆ ಸಲಹೆಗಳನ್ನು ನೀಡುವ ಭಿನ್ನ ವ್ಯಾಪ್ತಿ ಅವರದ್ದು. ದೊವಲ್ ಜನಪ್ರಿಯತೆ ಬಳಸಿಕೊಂಡು ಪ್ರಕರಣದ ಬಿಸಿ ಹೆಚ್ಚಿಸುವುದಷ್ಟೇ ಪತ್ರದ ಹಿಂದಿನ ಉದ್ದೇಶವೇ?

ತೀವ್ರವಾದಿಗಳಿಗೆ ಬಿಸಿ

ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆದಿದ್ದಲ್ಲದೇ ಅತ್ಯಾಚಾರ ಮತ್ತು ಕೊಲೆಯ ಬೆದರಿಕೆ ಒಡ್ಡಿದ್ದ ಭಜರಂಗದಳದ ಪುನೀತ್ ರಾಜ್ ಕೊಟಾರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶಾರುಖ್ ಅಸಹಿಷ್ಣುತೆ ಹೇಳಿಕೆ ಇಟ್ಟುಕೊಂಡು ಮಂಗಳೂರಿನ ಮಲ್ಟಿಫ್ಲೆಕ್ಸ್ ಗಳಲ್ಲಿ ‘ದಿಲ್ವಾಲೆ’ ಚಿತ್ರ ಪ್ರದರ್ಶನಕ್ಕೆ ಭಜರಂಗದಳ ಅಡ್ಡಿಪಡಿಸಿತ್ತು. ಇದನ್ನು ಪ್ರಶ್ನಿಸಿದ ವಿದ್ಯಾ ದಿನಕರ್, ಈ ದಾಂದಲೆಯನ್ನು ವಿರೋಧಿಸಿ ಪೊಲೀಸ್ ದೂರು ಕೊಟ್ಟಿದ್ದರು. ಅದರ ಬೆನ್ನಲ್ಲೇ ಅವರಿಗೆ ಸಾಮಾಜಿಕ ತಾಣದಲ್ಲಿ ಬೆದರಿಕೆ- ನಿಂದನೆಗಳು ಪ್ರಾರಂಭವಾದವು.

ಇನ್ನೊಂದೆಡೆ, ಜನವರಿ 3ರಂದು ಮಂಗಳೂರಿನ ಸಭೆಯೊಂದರಲ್ಲಿ ಭಾಷಣಕಾರ ಜಾಕಿರ್ ನೈಕ್ ಮಾತನಾಡಬೇಕಿತ್ತು. ಆದರೆ ಇಸ್ಲಾಂ ಪರ ಇವರ ಭಾಷಣಗಳು ಇನ್ನೊಂದು ಸಮುದಾಯವನ್ನು ಕೆರಳಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅವರ ನಗರ ಪ್ರವೇಶಕ್ಕೂ ಅನುಮತಿ ನಿರಾಕರಿಸಲಾಗಿದೆ.

ನಮ್ಮ ಕಾಮೆಂಟ್: ಹಿಂದು- ಮುಸ್ಲಿಂ ಎರಡೂ ಸಮುದಾಯಗಳ ಪ್ರಚೋದಕ ಗುಂಪು ಶಾಂತಿ ಕದಡದಂತೆ ಮಾಡುವಲ್ಲಿ ಸ್ಥಳೀಯ ಪೊಲೀಸರು ಮಾಡುತ್ತಿರುವ ಪ್ರಯತ್ನ ಇಲ್ಲಿ ಗೋಚರಿಸುತ್ತಿದೆ.

ಜಗದಗಲ ಚಿಮ್ಮಿದ ರಕ್ತ

ವಾಯುವ್ಯ ಪಾಕಿಸ್ತಾನ, ಈಶಾನ್ಯ ನೈಜಿರಿಯಾ, ಸಿರಿಯಾಗಳಲ್ಲಿ ಉಗ್ರವಾದದ ಅಟ್ಟಹಾಸವು 140ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದಕ್ಕೆ ಮಂಗಳವಾರ ಸಾಕ್ಷಿಯಾಯಿತು.

ವಾಯುವ್ಯ ಪಾಕಿಸ್ತಾನದ ಮರ್ಡನ್ ನಗರದ ಸರಕಾರಿ ಕಚೇರಿಯ ಗೇಟ್ ಬಳಿ ನಡೆದ ಮೋಟರ್ ಸೈಕಲ್ ಗೆ ಅಳವಡಿಸಿದ್ದ ಬಾಂಬ್ ಸ್ಫೋಟಿಸಿ 14ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಈಶಾನ್ಯ ನೈಜಿರಿಯಾದಲ್ಲಿ ಬೊಕೊ ಹರಮ್ ಇಸ್ಲಾಮಿಕ್ ತೀವ್ರವಾದಿಗಳ ಗ್ರೆನೈಡ್ ದಾಳಿಗೆ 80ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಿರಿಯಾದಲ್ಲಿ ಕಾರ್ ಬಾಂಬ್ ಹಾಗೂ ಆತ್ಮಹುತಿ ಬಾಂಬ್ ದಾಳಿಯಿಂದ 39 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 90ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಕೇರಳಕ್ಕೆ ‘ಕಿಕ್ ಇಲ್ಲ

ಪಂಚತಾರ ಹೋಟಲ್ ಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಕೇರಳ ಸರ್ಕಾರದ ರೂಪಿಸಿದ್ದ ನಿಯಮವನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ವಿಕ್ರಂ ಸೇನ್ ಮತ್ತು ಶಿವ ಕೀರ್ತಿ ಸಿಂಗ್ ರವರನ್ನೊಳಗೊಂಡ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. 2014ರ ಆಗಸ್ಟ್ ನಲ್ಲಿ ಕೇರಳ ಸರ್ಕಾರ ಜಾರಿಗೊಳಿಸಿದ್ದ ಈ ನೀತಿಯಿಂದ ನೂರಾರು ಬಾರ್ ಗಳು ಮುಚ್ಚಿದ್ದವು. ಇದನ್ನು ಪ್ರಶ್ನಿಸಿ ಕೇರಳ ಬಾರ್ ಹೋಟೆಲ್ ಅಸೋಸಿಯೇಷನ್, ಸುಪ್ರೀಂ ಕೋರ್ಟ್ ಮೇಟ್ಟಿಲೇರಿತ್ತು.

ಬಿಹಾರದಲ್ಲೀಗ ಹತ್ಯೆಗಳ ಕಾಲ

ಬಿಹಾರದದಲ್ಲಿ ಎರಡು ದಿನಗಳ ಹಿಂದೆ ಇಬ್ಬರು ಇಂಜಿನಿಯರ್ ಗಳ ಹತ್ಯೆ ನಡೆದಿತ್ತು. ಮಂಗಳವಾರವೂ ಸಹ ಇಂಜಿನಿಯರ್ ಒಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ಚರಂಡಿಯಲ್ಲಿ ಪತ್ತೆಯಾದ ಮೃತ ದೇಹ ಮುಜಾಫರ್ ಪುರ್ ನ ನಿವಾಸಿ, ಜಿಲ್ಲೆಯಲ್ಲಿ ಓಎಫ್ ಸಿ ಕೇಬಲ್ ಅಳವಡಿಸುವ ಕಾಮಗಾರಿಯ ಖಾಸಗಿ ಇಂಜಿನಿಯರ್ ಆಗಿದ್ದರು. ಹಫ್ತಾ ನೀಡಲಿಲ್ಲ ಎಂಬ ವಿಚಾರಕ್ಕೆ ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ ಕೊಲೆಯೂ ಇದೇ ವಿಚಾರಕ್ಕೆ ಸಂಭಂದಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ವಿಚಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರಕಾರದ ವಿರುದ್ಧ ಪ್ರತಿಪಕ್ಷಗಳು ತಿರುಗಿ ಬೀಳುತ್ತಿವೆ.

ನಮ್ಮ ಕಾಮೆಂಟ್: ಲಾಲು ಜತೆಗಿನ ಮೈತ್ರಿಯಿಂದ ಮತ್ತೆ ಜಂಗಲ್ ರಾಜ್ ಬರಲಿದೆ ಎಂಬ ಶಂಕೆಗಳು ನಿಜವಾಗ್ತಿವೆಯಾ?

ಹನಿಟ್ರ್ಯಾಪ್ ಆಗಿದ್ದ ಐಎಸ್ ಐ ಬಾತ್ಮಿದಾರನ ಬಂಧನ

ಐಎಎಫ್ ನ ಮಾಜಿ ಅಧಿಕಾರಿ ಕೆಕೆ ರಂಜಿತ್ ಅವರನ್ನು ದೆಹಲಿ ಪೊಲೀಸರು ಗೂಢಚರ್ಯೆ ಆರೋಪದ ಮೇಲೆ ಬಂಧಿಸಿದ್ದಾರೆ.

ಭಾರತೀಯ ವಾಯುಸೇನೆಯ ಅಭ್ಯಾಸ, ಚಲನವಲನಗಳ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ನೀಡುತ್ತಿದ್ದ ಆರೋಪ ರಂಜಿತ್ ಮೇಲಿದೆ. ಮಹಿಳೆಯನ್ನು ಮುಂದಿಟ್ಟುಕೊಂಡು ಐಎಸ್ ಐ ಇವರನ್ನು ತನ್ನ ಬಲೆಗೆ ಬೀಳಿಸಿಕೊಂಡಿತ್ತು.

Leave a Reply